‘ನಕಲಿ’ ವೆಂಟಿಲೇಟರ್ ಉದ್ಘಾಟಿಸಿ ನಗೆಪಾಟಲಿಗೀಡಾದ ಗುಜರಾತ್ ಸಿಎಂ

Update: 2020-05-18 16:39 GMT

‘ಗುಜರಾತ್ ಮಾಡೆಲ್’ ಎನ್ನುತ್ತಾ ಅಭಿವೃದ್ಧಿ ಮಾಡಿದ್ದೇವೆ ಎನ್ನುತ್ತಿರುವ ವಿಜಯ್ ರೂಪಾನಿ ಸರಕಾರ ಮತ್ತೊಮ್ಮೆ ನಗೆಪಾಟಲಿಗೀಡಾಗಿದೆ. ಒಂದೆಡೆ ರೂಪಾನಿ ಸರಕಾರ ರಾಜ್ ಕೋಟ್ ಮೂಲಕ ಖಾಸಗಿ ವೆಂಟಿಲೇಟರ್ ಕಂಪೆನಿಗೆ ಪ್ರಚಾರ ನೀಡುತ್ತಿದ್ದರೆ, ಮತ್ತೊಂದೆಡೆ ಗುಜರಾತ್ ನ ಅತಿದೊಡ್ಡ ಕೋವಿಡ್ 19 ಆಸ್ಪತ್ರೆ ವೆಂಟಿಲೇಟರ್ ಗಳಿಗಾಗಿ ಕೇಂದ್ರಕ್ಕೆ ಬೇಡಿಕೆಯಿಟ್ಟಿದೆ.

ಅಹ್ಮದಾಬಾದ್ ಸಿವಿಲ್ ಆಸ್ಪತ್ರೆಯಲ್ಲಿ ಎಪ್ರಿಲ್ 4ರಂದು ಗುಜರಾತ್ ಸಿಎಂ ವಿಜಯ್ ರೂಪಾನಿ ಗುಜರಾತ್ ನಿರ್ಮಿತ ವೆಂಟಿಲೇಟರ್ ಗಳನ್ನು ಉದ್ಘಾಟಿಸಿದ್ದರು.  ಆದರೆ ಇದೀಗ ಗುಜರಾತ್ ಸರಕಾರ ತೀವ್ರ ಮುಖಭಂಗಕ್ಕೊಳಗಾಗುವ ಬೆಳವಣಿಗೆಯಲ್ಲಿ ವಿಜಯ್ ರೂಪಾನಿಯವರು ಉದ್ಘಾಟಿಸಿದ್ದ, ಅವರ ರಾಜ್ ಕೋಟ್ ನ ಸ್ನೇಹಿತ ದೇಣಿಗೆಯಾಗಿ ನೀಡಿದ್ದ ಮತ್ತು ಸರಕಾರಿ ಆಸ್ಪತ್ರೆಯಲ್ಲಿದ್ದ ವೆಂಟಿಲೇಟರ್ ಗಳು ನಿಜವಾದ ವೆಂಟಿಲೇಟರ್ ಗಳಲ್ಲ ಎನ್ನುವುದು ಬಹಿರಂಗಗೊಂಡಿದೆ. ರಾಜ್ಯದ ಹಲವು ಸರಕಾರಿ ಆಸ್ಪತ್ರೆಗಳಲ್ಲಿ ಈ ಮೆಷಿನ್ ಗಳನ್ನು ಸ್ಥಾಪಿಸಿದ 15 ದಿನಗಳ ನಂತರ ಈ ಪ್ರಮಾದ ಬೆಳಕಿಗೆ ಬಂದಿದೆ.

ಇದೊಂದು ಗಂಭೀರ ಪ್ರಕರಣ. ಗಾಳಿ ಚೀಲಗಳನ್ನು ಒಬ್ಬ ಮುಖ್ಯಮಂತ್ರಿ ವೆಂಟಿಲೇಟರ್ ಎನ್ನುವುದು ಕೇವಲ ಅಪರಾಧ ಮಾತ್ರವಲ್ಲ, ರೂಪಾನಿ ಆಡಳಿತದಲ್ಲಿ ಗುಜರಾತ್ ಹೇಗೆ ನಡೆಯುತ್ತಿದೆ ಎನ್ನುವುದಕ್ಕೆ ಉದಾಹರಣೆಯಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ahmedabadmirror ವರದಿ ಮಾಡಿದೆ.

ಈ ಬಗ್ಗೆ ahmedabadmirror ಮುಖ್ಯಮಂತ್ರಿಯ ಪ್ರತಿಕ್ರಿಯೆಗಾಗಿ ಸಂಪರ್ಕಿಸಿದ್ದು, ಅವರು ಲಭ್ಯರಿಲ್ಲ. ಆದರೆ ಅವರಿಗೆ ನಿಕಟವರ್ತಿಯಾದ ಅಧಿಕಾರಿಯೊಬ್ಬರು ಸಮಜಾಯಿಷಿ ನೀಡಿ ಮುಖ್ಯಮಂತ್ರಿ ಯಾವತ್ತೂ ಅವುಗಳನ್ನು ವೆಂಟಿಲೇಟರ್ ಗಳು ಎಂದಿಲ್ಲ ಎಂದಿದ್ದಾರೆ. ಈ ಬಗ್ಗೆ ahmedabadmirror ಪ್ರಶ್ನೆಗಳೆನ್ನೆತ್ತಿದಾಗ ಅಧಿಕಾರಿ ಕರೆ ಕಟ್ ಮಾಡಿದ್ದಾರೆ ಎಂದು ವರದಿಯಾಗಿದೆ.

ಆದರೆ ಈ ಬಗ್ಗೆ ರೂಪಾನಿ ಸರಕಾರದ ಮಾಹಿತಿ ಇಲಾಖೆಯ ದಾಖಲೆಗಳನ್ನು ಪರಿಶೀಲಿಸಿದಾಗ ವಿಜಯ್ ರೂಪಾನಿ ‘ಗಾಳಿ ಚೀಲ’ಗಳನ್ನು ವೆಂಟಿಲೇಟರ್ ಗಳು ಎಂದಿರುವುದು ಸ್ಪಷ್ಟವಾಗಿದೆ.

“ರಾಜ್ ಕೋಟ್ ಮೂಲದ ಜ್ಯೋತಿ ಸಿಎನ್ ಸಿ ಕೇವಲ 10 ದಿನಗಳಲ್ಲಿ ಧಮನ್ 1  ವೆಂಟಿಲೇಟರ್ ಗಳನ್ನು ಅಭಿವೃದ್ಧಿಪಡಿಸಿದೆ. ಇದರ ತಯಾರಿಕಾ ಬೆಲೆ 1 ಲಕ್ಷಕ್ಕೂ ಕಡಿಮೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಮೇಕ್ ಇನ್ ಇಂಡಿಯಾ ಕನಸಿಗೆ ಮತ್ತೊಂದು ರೆಕ್ಕೆ” ಎಂದು ಸರಕಾರಿ ಪ್ರಕಟನೆಯಲ್ಲಿ ಬರೆಯಲಾಗಿದೆ.

ಇಷ್ಟೇ ಅಲ್ಲದೆ ರೂಪಾನಿಯವರ ಸ್ನೇಹಿತ ಪರಾಕ್ರಮ್ ಸಿನ್ಹ ಜಡೇಜಾರನ್ನು ಹೊಗಳಲಾಗಿದೆ. “ಮೇಕ್ ಇನ್ ಇಂಡಿಯಾ , ಮೇಕ್ ಇನ್ ಗುಜರಾತ್ ಗೆ ರಾಜ್ ಕೋಟ್ ಮೂಲದ ಕೈಗಾರಿಕೋದ್ಯಮಿ ಪರಾಕ್ರಮ್ ಸಿನ್ಹ್ ಜಡೇಜ ಅದ್ಭುತ ಕೊಡುಗೆ ನೀಡಿದ್ದಾರೆ” ಎಂದೂ ಬರೆಯಲಾಗಿದೆ.

230 ಧಮನ್ 1 ವೆಂಟಿಲೇಟರ್ ಮೆಷಿನ್ ಗಳಿದ್ದರೂ ಅಹ್ಮದಾಬಾದ್ ಸಿವಿಲ್ ಆಸ್ಪತ್ರೆಯ ವೈದ್ಯರು ಹೆಚ್ಚಿನ ವೆಂಟಿಲೇಟರ್ ಗಳಿಗೆ ಬೇಡಿಕೆಯಿಟ್ಟ ನಂತರ ರೂಪಾನಿ ಉದ್ಘಾಟಿಸಿದ್ದ ವೆಂಟಿಲೇಟರ್ ಗಳ ಅಸಾಮರ್ಥ್ಯ ಕೂಡ ಬಯಲಾಗಿದೆ.

ಇದು ವೆಂಟಿಲೇಟರ್ ಗಳಲ್ಲ ಎಂದು ಸ್ವತಃ ರೂಪಾನಿಯವರ ಸ್ನೇಹಿತ ಪರಾಕ್ರಮ್ ಸಿನ್ಹ ಜಡೇಜ ಒಪ್ಪಿಕೊಂಡಿದ್ದಾರೆ. “ಇದು ಸಂಪೂರ್ಣವಾದ ವೆಂಟಿಲೇಟರ್ ಗಳಲ್ಲ. ಇದನ್ನು ನಾವು ಮೊದಲೇ ಸರಕಾರಕ್ಕೆ ತಿಳಿಸಿದ್ದೆವು. ಇದು ತುರ್ತು ಸಂದರ್ಭಗಳಲ್ಲಿ ಬಳಸುವ ಮೆಷಿನ್. ನಾವು ಧಮನ್ 3 ಎಂಬ ವೆಂಟಿಲೇಟರ್ ಅಭಿವೃದ್ಧಿಪಡಿಸುತ್ತಿದ್ದೇವೆ” ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News