ಸೇನಾಪಡೆಗಳ ಮುಖ್ಯಸ್ಥ ರಾವತ್ ಹೇಳಿಕೆಗೆ ತದ್ವಿರುದ್ಧ ಹೇಳಿಕೆ ನೀಡಿದ ವಾಯುಪಡೆ ಮುಖ್ಯಸ್ಥ

Update: 2020-05-19 04:34 GMT

ಹೊಸದಿಲ್ಲಿ, ಮೇ 19: ಹೊಸದಾಗಿ 114 ಯುದ್ಧ ವಿಮಾನಗಳನ್ನು ಖರೀದಿಸಲು ಜಾಗತಿಕ ಟೆಂಡರ್‌ಗೆ ಒತ್ತಾಯಿಸುವ ಬದಲು ತೇಜಸ್ ಲಘು ಯದ್ಧ ವಿಮಾನಗಳನ್ನು ಖರೀದಿಸಲು ವಾಯುಪಡೆ ಚಿಂತನೆ ನಡೆಸಿದೆ ಎಂದು ಸೇನಾಪಡೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿತ್ ರಾವತ್ ನಾಲ್ಕು ದಿನಗಳ ಹಿಂದೆ ನೀಡಿದ್ದ ಹೇಳಿಕೆಗೆ ಭಾರತದ ವಾಯಪಡೆ ಮುಖ್ಯಸ್ಥ ಮಾರ್ಷಲ್ ಆರ್.‌ಕೆ.ಎಸ್. ಭಡೂರಿಯಾ ತದ್ವಿರುದ್ಧ ಹೇಳಿಕೆ ನೀಡಿದ್ದಾರೆ.

ಭಾರತೀಯ ವಾಯುಪಡೆ ನಿಯೋಜಿಸಲು ಬಯಸಿರುವ ಯುದ್ಧ ವಿಮಾನಗಳಲ್ಲಿ 36 ರಫೇಲ್, 114 ಬಹು ಪಾತ್ರ ನಿರ್ವಹಿಸುವ ಯುದ್ಧ ವಿಮಾನಗಳು ಹಾಗೂ 100 ಅತ್ಯಾಧುನಿಕ ಮಧ್ಯಮ ಪ್ರಮಾಣದ ವಿಮಾನಗಳು ಹಾಗೂ 200 ತೇಜಸ್ ವಿಮಾನಗಳು ಸೇರಿವೆ ಎಂದು ಭಡೂರಿಯಾ ಸ್ಪಷ್ಟನೆ ನೀಡಿದ್ದಾರೆ.

ಕಳೆದವಾರ ಬ್ಲೂಮ್‌ಬರ್ಗ್‌ಗೆ ಹೇಳಿಕೆ ನೀಡಿದ್ದ ರಾವತ್, ಯುದ್ಧ ವಿಮಾನಗಳ ಜಾಗತಿಕ ಟೆಂಡರ್ ಬಗ್ಗೆ ಪ್ರಶ್ನಿಸಿದಾಗ, ಇದರ ಬದಲಾಗಿ ತೇಜಸ್ ವಿಮಾನಗಳನ್ನು ಖರೀದಿಸುತ್ತಿರುವುದಾಗಿ ಹೇಳಿದ್ದರು.

ಸುಮಾರು 15 ಶತಕೋಟಿ ಡಾಲರ್ ಮೌಲ್ಯದ 114 ಯುದ್ಧ ವಿಮಾನಗಳ ಜಾಗತಿಕ ಟೆಂಡರ್‌ಗೆ ಒತ್ತಡ ಹೇರುವುದಿಲ್ಲ ಎಂದು ಸಿಡಿಎಸ್ ಹೇಳಿಕೆ ನೀಡಿದ್ದು, ಗುತ್ತಿಗೆ ಪಡೆಯಲು ತುದಿಗಾಲಲ್ಲಿ ನಿಂತಿದ್ದ ಬೋಯಿಂಗ್, ಲಾಕ್‌ಹೀಡ್ ಮಾರ್ಟಿನ್ ಹಾಗೂ ಸಾಬ್‌ನಂಥ ಸಂಸ್ಥೆಗಳಿಗೆ ನಿರಾಸೆಯಾಗಿತ್ತು.

ಆದರೆ ಸೋಮವಾರ ಎಎನ್‌ಐ ಜತೆ ಮಾತನಾಡಿದ ಭಡೂರಿಯಾ, ಮಧ್ಯಮ ತೂಕದ ಮತ್ತು ರಫೇಲ್ ಕ್ಲಾಸ್ ವಿಮಾನಗಳನ್ನು ಮೇಕ್ ಇನ್ ಇಂಡಿಯಾ ವ್ಯಾಪ್ತಿಯಲ್ಲೇ ವಿದೇಶಿ ಹೂಡಿಕೆ ಹೆಚ್ಚಿಸಲು ಮತ್ತು ಖಾಸಗಿ ವಲಯವನ್ನು ಬೆಂಬಲಿಸಲು ಉತ್ಪಾದಿಸಲಿದ್ದೇವೆ. ಭವಿಷ್ಯದಲ್ಲಿ ವಿಮಾನಯಾನ ಕ್ಷೇತ್ರಕ್ಕೆ ಅಗತ್ಯ ತಂತ್ರಜ್ಞಾನ ಅಗತ್ಯ. ಸಾಮರ್ಥ್ಯ, ತಂತ್ರಜ್ಞಾನದ ಹಿನ್ನೆಲೆಯಲ್ಲಿ ಮತ್ತೊಂದು ಪೀಳೀಗೆಯ ವಿಮಾನ ಅಗತ್ಯವಾಗುತ್ತದೆ ಎಂದು ಪ್ರತಿಪಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News