ರಾಜ್ಯ ಸರಕಾರಗಳನ್ನು ಬ್ಲಾಕ್‌ಮೇಲ್ ಮಾಡಲಾಗುತ್ತಿದೆ: ಕೇಂದ್ರದ ವಿರುದ್ಧ ತೆಲಂಗಾಣ ಸಿಎಂ ಗರಂ

Update: 2020-05-19 05:37 GMT

 ಹೈದರಾಬಾದ್,ಮೇ 19: ಕೋವಿಡ್-19 ಕಾಯಿಲೆಯಿಂದ ಉಂಟಾಗಿರುವ ಆರ್ಥಿಕ ಬಿಕ್ಕಟ್ಟು ಕಡಿಮೆಗೊಳಿಸಲು ಕೇಂದ್ರ ಸರಕಾರ ಘೋಷಿಸಿರುವ ಆರ್ಥಿಕ ಪ್ಯಾಕೇಜ್‌ನ ಬಗ್ಗೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ಟೀಕಿಸಿದ್ದಾರೆ. ಇದು ರಾಜ್ಯ ಸರಕಾರಗಳಿಗೆ ಮಾಡುತ್ತಿರುವ ಬ್ಲಾಕ್‌ಮೇಲ್ ಹಾಗೂ ನಮ್ಮ ಕುತ್ತಿಗೆಗೆ ಇಡುತ್ತಿರುವ ಚೂರಿಯಾಗಿದೆ. ಇದು ಒಕ್ಕೂಟ ವ್ಯವಸ್ಥೆಯಲ್ಲ. ಪ್ರಧಾನಮಂತ್ರಿ ಉಲ್ಲೇಖಿಸಿರುವ ಸಹಕಾರ ಒಕ್ಕೂಟ ಬರೀ ಬೋಗಸ್ ಹಾಗೂ ಪ್ರಹಸನ ಎಂದು ರಾವ್ ಕಿಡಿಕಾರಿದರು.

ನಾವು ಕೂಡ ಸರಕಾರವನ್ನು ನಡೆಸುತ್ತಿದ್ದೇವೆ....ನಾವು ಕೇಂದ್ರಕ್ಕೆ ಅಧೀನರಲ್ಲ.ರಾಜ್ಯ ಸರಕಾರಗಳಿಗೆ ಕೇಂದ್ರಕ್ಕಿಂತ ಹೆಚ್ಚು ಜವಾಬ್ದಾರಿ ಹಾಗೂ ಕರ್ತವ್ಯ ಇರುತ್ತದೆ ಎಂದು ರಾವ್ ಹೇಳಿದರು.

 ರಾಜ್ಯಗಳ ಸಾಲಗಳ ಮಿತಿಯನ್ನು ಹೆಚ್ಚಿಸಲು ಕೇಂದ್ರವು ವಿಧಿಸಿರುವ ಷರತ್ತುಗಳನ್ನು ಅಪಹಾಸ್ಯ ಮಾಡಿದ ರಾವ್, "ಕೊರೋನ ವೈರಸ್‌ನ ಪರಿಹಾರ ಪ್ಯಾಕೇಜ್ ಎಂದು ಪ್ರಚಾರ ಮಾಡುತ್ತಿರುವ ಒನ್ ನೇಶನ್,ಒನ್ ರೇಶನ್‌ರಂತಹ ಸುಧಾರಣೆಗಳನ್ನು ರಾಜ್ಯ ಸರಕಾರ ಈಗಾಗಲೇ ಜಾರಿ ಮಾಡಿದೆ. ನೀವು ಇದನ್ನು ಮಾಡಿದರೆ 2,000 ಕೋ.ರೂ.ಭಿಕ್ಷೆಯನ್ನು ನಾವು ನೀಡುತ್ತೇವೆ ಎಂದು ಹೇಳುತ್ತಿರುವ ಕೇಂದ್ರ ಸರಕಾರ ನಮ್ಮ ಕುತ್ತಿಗೆಗೆ ಚೂರಿ ಇಟ್ಟಿದೆ. ನಾವು ಪುರಸಭೆಯ ತೆರಿಗೆಗಳನ್ನು ಹೆಚ್ಚಿಸುವುದನ್ನು ಕೇಂದ್ರ ಬಯಸುತ್ತಿದೆ. ನಮಗೆ 2,000 ಕೋ.ರೂ. ಬೇಕಾಗಿಲ್ಲ''ಎಂದರು.

"ನಾನು ಸುಧಾರಣೆಗಳ ವಿರೋಧಿಯಲ್ಲ. ಅವರು ಹೇರಿದ ಷರತ್ತುಗಳಿಗಿಂತ ಹೆಚ್ಚಿನ ಸುಧಾರಣೆಗಳನ್ನು ನಾವು ಮಾಡಿದ್ದೇವೆ.ಆದರೆ ಅವರು ಅಳವಡಿಸಿಕೊಂಡಿರುವ ವಿಧಾನಗಳು ಸಂಪೂರ್ಣ ತಪ್ಪು''ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News