ಲಾಕ್‍ಡೌನ್ ಸಂಕಷ್ಟ: ನೇಕಾರಿಕೆ ನಂಬಿದ್ದ ಲಕ್ಷಾಂತರ ಜನರ ಬದುಕು ಬೀದಿ ಪಾಲು !
ಬೆಂಗಳೂರು, ಮೇ 23: ಮದುವೆ ಸೀಸನ್ ಬರುತ್ತಿದ್ದಂತೆಯೇ ವಾಲಗದವರಿಂದ ಹಿಡಿದು ಶಾಮಿಯಾನ ಹಾಕುವವರೆಗೂ ಎಲ್ಲರೂ ಪುರುಸೊತ್ತು ಇಲ್ಲದೇ, ತಮ್ಮ ತಮ್ಮ ಕೆಲಸದಲ್ಲಿ ತೊಡಗಿರುತ್ತಾರೆ. ಆದರೆ, ಈ ಬಾರಿ ಲಾಕ್‍ಡೌನ್ ಜಾರಿಯಿಂದಾಗಿ ಯಾವುದೇ ಕೆಲಸವಿಲ್ಲದೆ ಎಲ್ಲ ವೃತ್ತಿಯವರೂ ಸುಮ್ಮನೆ ಕುಳಿತಿದ್ದಾರೆ. ಅದೇ ರೀತಿಯಾಗಿ ಮದುವೆ ಸೀಸನ್‍ನಲ್ಲಿ ಸೀರೆಗಳನ್ನು ಕೈ ಮಗ್ಗದಲ್ಲಿ ನೇಯ್ದ ಕೊಡುತ್ತಿದ್ದ ನೇಕಾರರೂ ಕೆಲಸವಿಲ್ಲದೇ ಹಾಗೇ ಕುಳಿತಿದ್ದು, ಇವರ ಕುಟುಂಬಗಳು ಈಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ.
ಇಲಕಲ್ ಸೀರೆ, ಮೈಸೂರು ಸಿಲ್ಕ್ ಸೀರೆ, ಗದಗ ಬೆಟಗೇರಿ ರೇಷ್ಮೆ ಸೀರೆ ಹೀಗೇ ನಾನಾ ಹೆಸರುಗಳಿಂದ ಕರೆಸಿಕೊಳ್ಳುವ ಸೀರೆಗಳನ್ನು ನೇಕಾರರೇ ಖುದ್ದು ನೇಯ್ದು ಹೆಸರನ್ನು ನೋಂದಾಯಿಸಿಕೊಂಡು ಮದುವೆ ಮನೆಯವರಿಗೆ ನೀಡುತ್ತಿದ್ದರು. ರೇಷ್ಮೆ ಸೀರೆಗಳನ್ನು ಕರ್ನಾಟಕದ ಬೆಂಗಳೂರು, ಬೆಳಗಾವಿ, ಧಾರವಾಡ, ಮೈಸೂರು ಹಾಗೂ ಬೇರೆ ರಾಜ್ಯಗಳಾದ ಮಹಾರಾಷ್ಟ್ರ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಮಧ್ಯಪ್ರದೇಶ ಸೇರಿ ಇನ್ನಿತರ ರಾಜ್ಯಗಳಿಗೆ ರಫ್ತು ಮಾಡಿ, ವರ್ಷಪೂರ್ತಿ ಕುಟುಂಬದ ನಿರ್ವಹಣೆ ಮಾಡುತ್ತಿದ್ದರು.
ಆದರೆ, ಲಾಕ್‍ಡೌನ್ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಪ್ರತಿನಿತ್ಯ ಕೇವಲ 3 ಗಂಟೆ ಮಾತ್ರ ನೇಯ್ಗೆಗೆ ಅವಕಾಶ ನೀಡಿದ್ದು, ಇದರಿಂದ, ನೇಕಾರರಿಗೆ ಎರಡು ದಿನಕ್ಕೆ ಒಂದು ಸೀರೆಯನ್ನು ನೇಯ್ಗೆ ಮಾಡಲು ಆಗುತ್ತಿಲ್ಲ. ಒಂದು ಸೀರೆ ನೇಯ್ದರೆ 150 ರಿಂದ 180 ರೂ. ದೊರೆಯುತ್ತದೆ. ದಿನದ ದುಡಿಮೆಯನ್ನೇ ನಂಬಿ ಬದುಕುತ್ತಿದ್ದ ಕುಟುಂಬಗಳು ಇಂದು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಸಾಲ ಮಾಡಿ ಊಟ ಮಾಡುವ ಪರಿಸ್ಥಿತಿಗೆ ತಲುಪಿವೆ.
ನೇಕಾರರ ಕುಟುಂಬಗಳು ಹೇಳುವಂತೆ, ರಾಜ್ಯದಲ್ಲಿ ನೇಕಾರಿಕೆಯನ್ನೆ ನಂಬಿ ಲಕ್ಷಾಂತರ ಜನರು ದುಡಿಯುತ್ತಿದ್ದಾರೆ. ಸರಕಾರಗಳು ನಮಗೆ ಸಹಾಯ ಮಾಡದಿದ್ದರೂ ಪರವಾಗಿಲ್ಲ. ಅದರ ಬದಲಿಗೆ ದುಡಿಮೆಗೆ ಅವಕಾಶ ನೀಡಿದರೆ ನಮ್ಮ ಜೀವನವನ್ನು ನಿರ್ವಹಣೆ ಮಾಡಿಕೊಳ್ಳುತ್ತೇವೆ ಎಂದು ಹೇಳುತ್ತಾರೆ.
ಲಾಕ್‍ಡೌನ್ ಹಿನ್ನೆಲೆಯಲ್ಲಿ ಕಚ್ಚಾವಸ್ತುಗಳ ಪೈರೈಕೆ ಈಗಾಗಲೇ ಸ್ಥಗಿತವಾಗಿದೆ. ಬೆಂಗಳೂರಿನಿಂದ ಬರುತ್ತಿದ್ದ ರೇಷ್ಮೆ, ವಿವಿಧ ರಾಜ್ಯಗಳಿಂದ ಬರುತ್ತಿದ್ದ ಕಚ್ಚಾ ನೂಲುಗಳ ಪೂರೈಕೆ ಕೂಡ ಸಂಪೂರ್ಣವಾಗಿ ನಿಂತು ಹೋಗಿದೆ. ಸದ್ಯ ನಾಲ್ಕೈದು ದಿನ ಕಳೆದರೆ ಬಾಕಿ ಇರುವ ರೇಷ್ಮೆ, ಕಚ್ಚಾ ನೂಲು ಎಲ್ಲವೂ ಮುಗಿಯಲಿವೆ. ನಂತರ ಇಡೀ ನೇಕಾರಿಕೆಯೇ ಸ್ತಬ್ಧವಾಗಲಿದೆ. ಈಗ ಬರುವ ನೂರು ಚಿಲ್ಲರೆ ಹಣ ದುಡಿಮೆ ಕೂಡ ಆಗ ಅಪರೂಪ ಎನ್ನುವಂತಾಗಲಿದೆ. ನಮ್ಮ ಬದುಕು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಹೀಗಾಗಿ, ಸರಕಾರ ಈ ಕೂಡಲೆ ನಮ್ಮ ನೆರವಿಗೆ ಧಾವಿಸಿಸಬೇಕೆಂದು ನೇಕಾರರು ಮನವಿ ಮಾಡಿಕೊಂಡಿದ್ದಾರೆ.