ಒಳಿತಿಗಾಗಿ ಪ್ರಾರ್ಥಿಸಲು ಸಮಯ ಕೂಡಿ ಬಂದಿದೆ: ರಚಿತಾ ರಾಮ್

Update: 2020-05-31 05:45 GMT

ಸದ್ಯಕ್ಕೆ ಕನ್ನಡದ ನಂಬರ್ ಒನ್ ನಟಿ ಯಾರು ಎನ್ನುವ ಮಾತು ಬಂದರೆ ಚರ್ಚೆಯೇ ಇಲ್ಲದೆ ಎಲ್ಲರೂ ಹೇಳುವ ಹೆಸರು ರಚಿತಾ ರಾಮ್ ಆಗಿರುತ್ತದೆ. ಇತ್ತೀಚೆಗಷ್ಟೇ ಚಲನಚಿತ್ರರಂಗದಲ್ಲಿ ಏಳು ವರ್ಷಗಳನ್ನು ಪೂರೈಸಿದ ರಚಿತಾ ಏನಿಲ್ಲವೆಂದರೂ ವರ್ಷಕ್ಕೆ ಒಂದಾದರೂ ದೊಡ್ಡ ಯಶಸ್ಸಿನ ಚಿತ್ರವನ್ನು ನೀಡುತ್ತಿರುವುದೇ ಅವರನ್ನು ನಂಬರ್ ಒನ್ ನಟಿಯಾಗಿ ಗುರುತಿಸಲು ಕಾರಣವಾಗಿದೆ. ಕಳೆದ ಎರಡು ತಿಂಗಳು ಲಾಕ್‌ಡೌನ್ ಸಮಸ್ಯೆಗಳನ್ನು ಎಲ್ಲರೂ ಅನುಭವಿಸಿದ್ದೇವೆ. ಆದರೆ ಸದಾ ಕಾರ್ಯನಿರತರಾಗಿದ್ದ ರಚಿತಾ ರಾಮ್ ಪಾಲಿಗಂತೂ ತುಸು ಹೆಚ್ಚೇ ಪ್ರಭಾವ ಮಾಡಿದೆ. ಈ ಸಂದರ್ಭದಲ್ಲಿ ಸಾಧ್ಯವಾದಷ್ಟು ಒಳ್ಳೆಯ ಕೆಲಸ ಮಾಡುವುದು ಮತ್ತು ನಿಷ್ಕಲ್ಮಶವಾಗಿ ಪ್ರಾರ್ಥಿಸುವುದು ಮಾತ್ರ ಮನುಷ್ಯನಿಂದ ಆಗುವ ಕೆಲಸ ಎನ್ನುವ ರಚಿತಾ, ಲಾಕ್‌ಡೌನ್ ದಿನಗಳನ್ನು ಹೇಗೆ ಕಳೆದರು ಎನ್ನುವ ಬಗ್ಗೆ ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ್ದಾರೆ.

► ಲಾಕ್‌ಡೌನ್ ದಿನಗಳಲ್ಲಿ ನೀವು ತುಂಬ ಮಿಸ್ ಮಾಡಿಕೊಂಡಿದ್ದೇನು?

ಕೆಲಸ. ನಾನು ನಟನೆಯನ್ನು ಎರಡು ರೀತಿಯಿಂದ ಇಷ್ಟಪಡುತ್ತೇನೆ. ಒಂದು ಉತ್ತಮವಾದ ಪಾತ್ರಗಳನ್ನು ಆಯ್ಕೆ ಮಾಡಿ, ಆ ಪಾತ್ರಗಳಾಗಿ ನಟಿಸುವಾಗ ಸಂತೃಪ್ತಿ ಇರುತ್ತದೆ. ಎರಡನೆಯದು ನಾನು ಸೆಟ್ ನಲ್ಲಿ ಎಲ್ಲರೊಂದಿಗೆ ಬೆರೆಯುತ್ತೇನೆ. ನಾಯಕಿ ಅಂದರೆ ಇಷ್ಟೇ ಮಾತನಾಡಬೇಕು ಎನ್ನುವ ನಿಯಮ ನನಗೆ ಇಲ್ಲ. ಒಂದು ಮನೆಯೊಳಗಿನ ವಾತಾವರಣದಲ್ಲಿ ಹೇಗಿರುತ್ತೇವೆ ಅಷ್ಟೇ ಮಜಾ ಮಾಡುತ್ತಿರುತ್ತೇನೆ. ಹಾಗಾಗಿ ಕೆಲಸದ ಜತೆಯಲ್ಲೇ ನಮ್ಮ ತಂತ್ರಜ್ಞರ ತಂಡ, ಎಲ್ಲವನ್ನು ಬಹಳ ಮಿಸ್ ಮಾಡ್ಕೋತಿದ್ದೀನಿ. ಮತ್ತೆ ದೇವಸ್ಥಾನಕ್ಕೆ ಹೋಗಲು ಸಾಧ್ಯವಾಗದೆ ತುಂಬ ಮಿಸ್ ಮಾಡಿಕೊಂಡಿದ್ದೇನೆ.

► ನೀವು ಯಾವ ದೇವಾಲಯಕ್ಕೆ ಹೋಗಬೇಕಿತ್ತು?

ನಾನು ಎಲ್ಲ ದೇವರನ್ನು ನಂಬುತ್ತೇನೆ. ದೇವರು ಬಯಸದೆ ಹುಲ್ಲು ಕಡ್ಡಿಯೂ ಅಲ್ಲಾಡದು ಎನ್ನುವುದನ್ನು ನಾನು ಖಂಡಿತವಾಗಿ ನಂಬುತ್ತೇನೆ. ಅದಕ್ಕೆ ನನ್ನ ಬದುಕೇ ದೊಡ್ಡ ಉದಾಹರಣೆ. ನಾನು ಯಾವತ್ತೂ ಈ ಹಂತಕ್ಕೆ ಬೆಳೆಯಬೇಕು ಎಂದು ಗುರಿ ಹಾಕಿಕೊಂಡವಳಲ್ಲ. ಆದರೆ ಸಿಕ್ಕ ಅವಕಾಶದಲ್ಲಿ ನನ್ನ ಪೂರ್ಣ ಪರಿಶ್ರಮ ಹಾಕಿ ನಟಿಸಿದ್ದೇನೆ. ಅದರ ಹೊರತು ಬದುಕಲ್ಲಿ ನಾನು ಯಾವತ್ತೂ ಯೋಜನೆ ಹಾಕಿದವಳಲ್ಲ. ಈ ಏಳು ವರ್ಷಗಳಲ್ಲಿ ನಾನು ಯಶಸ್ವಿ ನಾಯಕಿ ಎಂದು ಗುರುತಿಸಿಕೊಂಡಿರುವುದು ದೇವರ ಕರುಣೆಯಿಂದಲೇ ಎಂದು ನಂಬಿದ್ದೇನೆ. ದೇವಸ್ಥಾನಕ್ಕೆ ಹೋಗಲಾಗುತ್ತಿಲ್ಲ ಎನ್ನುವ ನಿರಾಶೆ ಈ ತಿಂಗಳಿಗೆ ಕೊನೆಯಾ ಗುತ್ತಿರುವುದರಿಂದ ನಿರಾಳವಾಗಿದ್ದೇನೆ. ಯಾಕೆಂದರೆ ಪ್ರತಿ ತಿಂಗಳು ಚಾಮುಂಡಿ ಬೆಟ್ಟಕ್ಕೆ ಹೋಗುವುದನ್ನು ಆಚರಿಸಿಕೊಂಡೇ ಬಂದಿದ್ದೀನಿ. ಇದೀಗ ಮೊದಲು ಚಾಮುಂಡಿ ಬೆಟ್ಟಕ್ಕೆ ಹೋಗಬೇಕಾಗಿದೆ.

► ಇಷ್ಟು ದಿನಗಳ ವಿರಾಮವನ್ನು ಹೇಗೆ ಕಳೆದಿರಿ?

ನನಗೆ ಕೇರಂ ಆಡುವುದು ಇಷ್ಟ. ಅದನ್ನು ಆಡುತ್ತಿದ್ದೆ. ಆದರೆ ನಮ್ಮ ತಂದೆ ಕೇರಂ ಕೂಡ ಬೇಡ ಅಂದರು. ಯಾಕೆಂದರೆ ನಾನಂತೂ ಸದಾ ಮನೆಯಲ್ಲಿರುತ್ತಿದ್ದೆ. ಮನೆಯಿಂದ ಹೊರಗೆ ಹೋಗಿ ಬಂದವರ ಜತೆ ಆಡುವುದರಿಂದ, ನಾವೆಲ್ಲರೂ ಒಂದೇ ಸ್ಟ್ರೈಕರ್ ಬಳಸುವ ಮೂಲಕ ನನಗೆ ಹರಡಬಾರದು ಎಂದು ಅವರ ಕಾಳಜಿಯಾಗಿತ್ತು. ಹಾಗಾಗಿ ತಂದೆಯ ಜತೆಗೆ ಹಳೆಯ ಬ್ಲ್ಯಾಕ್ ಆ್ಯಂಡ್ ವೈಟ್ ಸಿನೆಮಾಗಳನ್ನು ನೋಡುತ್ತಾ ಕಾಲ ಕಳೆದೆ. ಇದರ ಜತೆಗೆ ವಾರ್ತೆಗಳಲ್ಲಿ ಬರುತ್ತಿದ್ದ ದಿನಗೂಲಿ ಕಾರ್ಮಿಕರ ಕಷ್ಟ ಕಂಡು ಮನೆಯಲ್ಲಿ ಇರಲಿಕ್ಕಾಗದೆ ನಾನೇ ನಮ್ಮ ಟೀಮ್ ಜತೆ ಹೋಗಿ ಆಹಾರ ವಿತರಿಸಿದ್ದೀನಿ. ಆದರೆ ಮಾಸ್ಕ್ ಹಾಕಿಕೊಂಡ ಕಾರಣ ಯಾರೂ ನನ್ನನ್ನು ಗುರುತಿಸಿರಲಿಲ್ಲ. ನನಗೂ ಗುರುತಿಸಲಿ ಎನ್ನುವುದಕ್ಕಿಂತ ಅದನ್ನು ಅವರಿಗೆ ತಲುಪಿಸುವ ಸಂತೃಪ್ತಿ ಮುಖ್ಯವಾಗಿತ್ತು. ಕಷ್ಟ ಎಲ್ಲರಿಗೂ ಬಂದಿದೆ. ಆದರೆ ಆಗಲೇ ನಾನು ಹೇಳಿದಂತೆ ಆಗುವುದೆಲ್ಲ ಒಳ್ಳೆಯದಕ್ಕೆ ಎಂದು ನಂಬುವುದು ನನಗಿಷ್ಟ. ಎಲ್ಲವೂ ಯಾವುದೋ ಒಂದು ಕಾರಣಕ್ಕಾಗಿಯೇ ನಡೆಯುತ್ತಿದೆ ಎಂದು ನಾನು ನಂಬುತ್ತೇನೆ. ಏನೋ ಒಂದು ಬಲವಾದ ಕಾರಣವನ್ನು ದೇವರು ಖಂಡಿತವಾಗಿ ಇಟ್ಟಿರಬಹುದು. ನಾವು ಅದರೊಂದಿಗೆ ಹೊಂದಿಕೊಂಡು ಹೋಗುವುದಷ್ಟೇ ಉಳಿದುಕೊಂಡಿದೆ.

► ಕೊರೋನ ವಿರುದ್ಧ ನಡೆದ ಜಾಗೃತಿ ಅಭಿಯಾನದಲ್ಲೆಲ್ಲೂ ನೀವು ಕಾಣಿಸಲಿಲ್ಲವೇಕೆ?

ನಾನು ಸಾಮಾನ್ಯವಾಗಿ ನಟನೆಯಾಯಿತು, ಮನೆಯಾಯಿತು ಎನ್ನುವ ಸ್ವಭಾವದವಳು. ಚಿತ್ರರಂಗದ ಎಷ್ಟೇ ಆತ್ಮೀಯರಿದ್ದರೂ ಕೆಲಸಕ್ಕೆ ಸಂಬಂಧಿಸಿದಷ್ಟೇ ಮಾತುಕತೆ ನಡೆಸಿ ಅಭ್ಯಾಸ. ಹಾಗಾಗಿ ಮನೆಗೆ ಬಂದ ಮೇಲೆ ಅನಗತ್ಯವಾಗಿ ಮೊಬೈಲ್‌ನಲ್ಲಿ ಕಾಲ ಕಳೆಯುವ ಅಭ್ಯಾಸ ನನಗಿಲ್ಲ. ಈ ಎರಡು ತಿಂಗಳಲ್ಲಂತೂ ಮೊಬೈಲ್ ಸ್ವಿಚಾಫ್ ಆಗಿದ್ದಿದ್ದೇ ಹೆಚ್ಚು. ಹಾಗಾಗಿ ನನ್ನನ್ನು ಕೂಡ ಸಂಪರ್ಕಿಸಲು ಪ್ರಯತ್ನಿಸಿರಬಹುದೇನೋ. ಆದರೆ ಯಾರಿಗೂ ನನ್ನ ಸಂಪರ್ಕ ಸಿಕ್ಕಿರಲಿಕ್ಕಿಲ್ಲ. ಹಾಗಾಗಿ ಯಾವುದೇ ಸ್ಕಿಟ್ ಅಥವಾ ಹಾಡುಗಳಲ್ಲಿ ನಾನು ಕಾಣಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಒಮ್ಮೆ ಥಿಯೇಟರ್ ತೆರೆಯುವಂತಾದರೆ ರಮೇಶ್ ಅರವಿಂದ್ ಸರ್ ಅವರೊಂದಿಗೆ ನಾನು ನಟಿಸಿರುವ ‘100’ ಎನ್ನುವ ಚಿತ್ರದ ಪ್ರಮೋಶನ್ ಶುರುವಾಗಬಹುದು. ಜತೆಗೆ ಒಂದರ ಹಿಂದೊಂದಾಗಿ ಹೊಸ ಪ್ರಾಜೆಕ್ಟ್‌ಗಳು ಕೂಡ ತಯಾರಾಗಲಿವೆ. ಆಗ ನನಗಷ್ಟೇ ಅಲ್ಲ, ಎಲ್ಲ ಕಲಾವಿದರಿಗೂ ಮತ್ತೆ ಎಲ್ಲ ಕಡೆ ಕಾಣಿಸಿಕೊಳ್ಳುವ ಅವಕಾಶ ಬರಬಹುದು.

► ಈಗಾಗಲೇ ಮಾತುಕತೆ ನಡೆದಿರುವ ಹೊಸ ಚಿತ್ರಗಳು ಯಾವೆಲ್ಲ?

ನಾನು ನಟಿಸಿರುವ ‘ಎಪ್ರಿಲ್’ ಸಿನೆಮಾ ಬಿಡುಗಡೆಯಾಗಬೇಕಿದೆ. ‘ವೀರಂ’ ಎನ್ನುವ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಅವರೊಂದಿಗೆ ನಟಿಸಿದ್ದೇನೆ. ಇದರ ನಡುವೆ ‘ಸೂಪರ್ ಮಚ್ಚಿ’ ಎನ್ನುವ ತೆಲುಗು ಚಿತ್ರಕ್ಕೆ ಹತ್ತು ದಿನಗಳ ಚಿತ್ರೀಕರಣವಷ್ಟೇ ಉಳಿದುಕೊಂಡಿದೆ. ಅದರೊಂದಿಗೆ ‘ದಿಸ್ ಪ್ರಾಪರ್ಟಿ ಬಿಲಾಂಗ್ಸ್ ಟು ಮೀನಾಕ್ಷಿ’ ಎನ್ನುವ ಚಿತ್ರವೂ ಬಿಡುಗಡೆಯಾಗಬೇಕಿದೆ. ಹೀಗೆ ತೆರೆಕಾಣಲಿರುವ ಎರಡು ಕನ್ನಡ ಮತ್ತು ಎರಡು ತೆಲುಗು ಚಿತ್ರಗಳಲ್ಲದೆ ಎರಡು ಹೊಸ ಚಿತ್ರಗಳು ಸೆಟ್ಟೇರಲಿವೆ. ಅದು ಈ ಲಾಕ್‌ಡೌನ್ ಸಮಯದಲ್ಲಿ ಹಾಕಲಾದ ಯೋಜನೆಯ ಮೂಲಕ ನನ್ನ ಕಡೆಯಿಂದ ಆರಂಭವಾಗುತ್ತಿರುವ ಪ್ರಾಜೆಕ್ಟ್ಸ್. ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸದ್ಯದಲ್ಲೇ ನೀಡಲಿದ್ದೇನೆ.

Writer - ಸಂದರ್ಶನ: ಶಶಿಕರ ಪಾತೂರು

contributor

Editor - ಸಂದರ್ಶನ: ಶಶಿಕರ ಪಾತೂರು

contributor

Similar News