ಗ್ರಾಮೀಣ ಭಾರತಕ್ಕೆ ವ್ಯಾಪಕವಾಗಿ ಹಬ್ಬಿದ ಕೊರೋನ ಸೋಂಕು

Update: 2020-06-05 03:37 GMT

ಹೊಸದಿಲ್ಲಿ, ಜೂ.5: ಕೋವಿಡ್-19 ಸಾಂಕ್ರಾಮಿಕ ಇದೀಗ ಗ್ರಾಮೀಣ ಭಾರತದಲ್ಲಿ ವ್ಯಾಪಕವಾಗಿ ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಬಹುತೇಕ ನಗರಗಳು ಕೊರೋನದ ಕರಾಳ ಪರಿಣಾಮ ಎದುರಿಸುತ್ತಿದ್ದು, ಹಲವು ರಾಜ್ಯಗಳ ಗ್ರಾಮೀಣ ಪ್ರದೇಶಗಳಲ್ಲಿ ಕೂಡಾ ಇದೀಗ ಅಧಿಕ ಸಂಖ್ಯೆಯ ಪ್ರಕರಣಗಳು ವರದಿಯಾಗುತ್ತಿವೆ.

ವಲಸೆ ಕಾರ್ಮಿಕರು ಮನೆಗಳಿಗೆ ಆಗಮಿಸಿರುವುದು ಇದಕ್ಕೆ ಪ್ರಮುಖ ಕಾರಣ ಎಂದು ಆರೋಗ್ಯಾಧಿಕಾರಿಗಳು ಹೇಳುತ್ತಾರೆ. ವಲಸೆ ಕಾರ್ಮಿಕರ ಪುನರಾಗಮನದಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಪ್ರಕರಣಗಳು ಶೇಕಡ 30ರಿಂದ ಶೇಕಡ 80ರಷ್ಟು ಹೆಚ್ಚಿವೆ ಎಂದು ಅಧಿಕಾರಿಗಳು ಹೇಳುತ್ತಾರೆ.

ವಿವಿಧ ರಾಜ್ಯಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಮರಳಿದ ಬಳಿಕ ರಾಜಸ್ಥಾನದ ಗ್ರಾಮೀಣ ಪ್ರದೇಶಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ನಗರಗಳ ಒಟ್ಟು ಸೋಂಕಿತರ ಸಂಖ್ಯೆಯನ್ನು ಗ್ರಾಮೀಣ ಪ್ರದೇಶಗಳು ಮೀರಿಸಿವೆ. ರಾಜ್ಯದ ಒಟ್ಟು ಪ್ರಕರಣಗಳ ಪೈಕಿ ಶೇಕಡ 30ರಷ್ಟು ಪ್ರಕರಣಗಳು ಗ್ರಾಮೀಣ ಪ್ರದೇಶಗಳಿಂದ ವರದಿಯಾಗಿವೆ. ವಲಸೆ ಕಾರ್ಮಿಕರು ಅಧಿಕ ಇರುವ ಡುಂಗರಾಪುರ, ಜಾಲೋರ್, ಜೋಧಪುರ, ನಾಗೂರ್ ಮತ್ತು ಪಾಲಿ ಜಿಲ್ಲೆಗಳಲ್ಲಿ ಅಧಿಕ ಪ್ರಕರಣಗಳು ವರದಿಯಾಗುತ್ತಿವೆ.

ಇದು ರಾಜಸ್ಥಾನಕ್ಕೆ ಮಾತ್ರ ಸೀಮಿತವಾಗಿಲ್ಲ. ಆಂಧ್ರಪ್ರದೇಶದ ಉದಾಹರಣೆ ತೆಗೆದುಕೊಂಡರೆ, ಇದುವರೆಗೆ ಒಟ್ಟು ಪ್ರಕರಣಗಳ ಶೇಕಡ 90ರಷ್ಟು ಪ್ರಕರಣಗಳು ನಗರಗಳಿಂದ ವರದಿಯಾಗಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಿಂದ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವೆ ಜನಸಂಚಾರ ಹೆಚ್ಚಿರುವುದು ಇದಕ್ಕೆ ಕಾರಣ ಎಂದು ಅಧಿಕಾರಿಗಳು ಹೇಳುತ್ತಾರೆ. ಕಳೆದ ಮೂರು ವಾರಗಳಲ್ಲಿ ಆಂಧ್ರ ಪ್ರದೇಶದಲ್ಲಿ 1,500 ಪ್ರಕರಣಗಳು ಕಾಣಿಸಿಕೊಂಡಿದ್ದು, 500 ಪ್ರಕರಣಗಳು ಗ್ರಾಮೀಣ ಪ್ರದೇಶಗಲ್ಲಿ ದೃಢಪಟ್ಟಿವೆ.

ಒಡಿಶಾಗೆ ಒಟ್ಟು 4.5 ಲಕ್ಷ ವಲಸೆ ಕಾರ್ಮಿಕರು ವಾಪಸ್ಸಾಗಿದ್ದು, ಒಟ್ಟು ಪ್ರಕರಣಗಳ ಪೈಕಿ ಶೇಕಡ 80ರಷ್ಟು ಪ್ರಕರಣಗಳು ಗ್ರಾಮೀಣ ಪ್ರದೇಶಗಳಿಂದ ವರದಿಯಾಗಿವೆ ಎಂದು ಸರ್ಕಾರ ಪ್ರಕಟಿಸಿದೆ. ಮೇ 2ರವರೆಗೆ ಶೂನ್ಯ ಪ್ರಕರಣಗಳಿದ್ದ ಗಂಜಮ್ ಜಿಲ್ಲೆಯಲ್ಲಿ ಇದೀಗ 499 ಪ್ರಕರಣಗಳು ವರದಿಯಾಗಿದ್ದು, ಮೂರು ಮಂದಿ ಸಾವನ್ನಪ್ಪಿದ್ದಾರೆ. ಕೇರಳ ಹಾಗೂ ಪಶ್ಚಿಮ ಬಂಗಾಳದಲ್ಲೂ ಇದೇ ಪರಿಸ್ಥಿತಿ ಇದೆ.

ಬಿಹಾರದಲ್ಲಿ ಜೂನ್ 2ರವರೆಗೆ ಒಟ್ಟು 4,049 ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 2,905 ಮಂದಿ ವಲಸೆ ಕಾರ್ಮಿಕರು. ರಾಜ್ಯದಲ್ಲಿ ಪತ್ತೆಯಾಗಿರುವ ಶೇಕಡ 70ರಷ್ಟು ಪ್ರಕರಣಗಳು ವಲಸೆ ಕಾರ್ಮಿಕರು ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News