ಪಿಐಬಿ ಮಹಾ ನಿರ್ದೇಶಕರಿಗೆ ಕೋವಿಡ್-19 ಸೋಂಕು

Update: 2020-06-08 04:58 GMT

ಹೊಸದಿಲ್ಲಿ: ಪ್ರೆಸ್ ಇನ್ಫಾರ್ಮೇಷನ್ ಬ್ಯೂರೊದ ಪ್ರಧಾನ ಮಹಾನಿರ್ದೇಶಕ ಕೆ.ಎಸ್. ದತ್ತವಾಲಿಯಾ ಅವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಅವರನ್ನು ಇಲ್ಲಿನ ಅಖಿಲ ಭಾರತ ವೈದ್ಯಕೀಯ ಮಹಾವಿಜ್ಞಾನ ಸಂಸ್ಥೆ (ಎಐಐಎಂಎಸ್)ಗೆ ದಾಖಲಿಸಲಾಗಿದೆ.

ರವಿವಾರ ರಾತ್ರಿ ಅವರನ್ನು ಕೊರೋನ ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಬಗ್ಗೆ ಅಧಿಕೃತವಾಗಿ ಯಾವ ಮಾಹಿತಿಯೂ ಇಲ್ಲ.

ಅವರ ಕಚೇರಿ ಇರುವ ರಾಷ್ಟ್ರೀಯ ಮಾಧ್ಯಮ ಕೇಂದ್ರವನ್ನು ತಕ್ಷಣದಿಂದ ಮುಚ್ಚಲಾಗಿದ್ದು, ಸೋಮವಾರವೂ ಇಡೀ ಕಟ್ಟಡ ಮುಚ್ಚಿರುತ್ತದೆ. ಇಡೀ ಕಟ್ಟಡವನ್ನು ಸ್ಯಾನಿಟೈಸ್ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರಾಷ್ಟ್ರೀಯ ಮಾಧ್ಯಮ ಕೇಂದ್ರವನ್ನು ಮಂಗಳವಾರವೂ ಮುಚ್ಚಲಾಗುತ್ತದೆ. ನಿಗದಿತ ಶಿಷ್ಟಾಚಾರಕ್ಕೆ ಅನುಗುಣವಾಗಿ ಅವರ ಸಂಪರ್ಕವನ್ನು ಪತ್ತೆ ಮಾಡಲಾಗುತ್ತಿದೆ ಎಂದು ವಿವರಿಸಿದ್ದಾರೆ.

ಪತ್ರಿಕಾಗೋಷ್ಠಿ ಆಯೋಜನೆ ಸೇರಿದಂತೆ ಎಲ್ಲ ಪಿಐಬಿ ಚಟುವಟಿಕೆಗಳು ಶಾಸ್ತ್ರಿಭವನದಲ್ಲಿ ನಡೆಯಲಿವೆ ಎಂದು ಮೂಲಗಳು ಹೇಳಿವೆ. ದತ್ತವಾಲಿಯಾ ಅವರು ಬುಧವಾರ ಕೇಂದ್ರ ಸಚಿವ ನರೇಂದ್ರ ಸಿಂಗ್ ಥೋಮರ್ ಮತ್ತು ಪ್ರಕಾಶ್ ಜಾವ್ಡೇಕರ್ ಜತೆ ವೇದಿಕೆ ಹಂಚಿಕೊಂಡಿದ್ದರು. ಸಂಪುಟ ಸಭೆಯ ವಿವರಗಳನ್ನು ನೀಡಲು ಸಚಿವರು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ದತ್ತವಾಲಿಯಾ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News