ಸೈಫುದ್ದೀನ್ ಸೋಜ್ ಬಂಧನ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

Update: 2020-06-08 17:52 GMT

ಹೊಸದಿಲ್ಲಿ, ಜೂ.8: ಜಮ್ಮು ಮತ್ತು ಕಾಶ್ಮೀರದ ಹಿರಿಯ ರಾಜಕೀಯ ಮುಖಂಡ ಸೈಫುದ್ದೀನ್ ಸೋಜ್ ಅವರನ್ನು ಬಂಧನದಲ್ಲಿಟ್ಟಿರುವ ಕ್ರಮವನ್ನು ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆಯನ್ನು ಆರಂಭಿಸಿದ ಸುಪ್ರೀಂಕೋರ್ಟ್ ಈ ಸಂಬಂಧ ಕೇಂದ್ರ ಸರಕಾರ ಮತ್ತು ಕೇಂದ್ರಾಡಳಿತ ಪ್ರದೇಶದ ಆಡಳಿತಕ್ಕೆ ನೋಟಿಸ್ ನೀಡಿದೆ.

82 ವರ್ಷ ವಯಸ್ಸಿನ ಸೋಜ್ ಅವರಿಗೆ ಕಳೆದ ಆಗಸ್ಟ್‌ನಿಂದ ಅಂದರೆ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ರದ್ದುಪಡಿಸಿದ ಬಳಿಕ ಗೃಹಬಂಧನ ವಿಧಿಸಲಾಗಿದೆ. ಈ ಕ್ರಮವನ್ನು ಪ್ರಶ್ನಿಸಿ ಸೋಜ್ ಅವರ ಪತ್ನಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಹಿರಿಯ ಕಾಂಗ್ರೆಸ್ ಮುಖಂಡ ಅಭಿಷೇಕ್ ಮನು ಸಾಂಘ್ವಿ ಅರ್ಜಿದಾರರ ಪರವಾಗಿ ವಾದ ಮಂಡಿಸಿ, ಈ ಬಂಧನ ಅಕ್ರಮ ಹಾಗೂ ಯಾವ ಪುರಾವೆಯೂ ಇಲ್ಲದೇ ಬಂಧನದಲ್ಲಿ ಇಡಲಾಗಿದೆ ಎಂದು ಹೇಳಿದರು.

‘‘ಸೋಜ್ ಅವರು ಶಾಂತಿಪ್ರಿಯ, ಕಾನೂನಿಗೆ ತಲೆಬಾಗುವ ಭಾರತೀಯ ಪ್ರಜೆ. ಶಾಂತಿಗೆ ಭಂಗ ತರುವ ಯಾವ ಕೃತ್ಯವನ್ನೂ ಎಸಗಿಲ್ಲ. ದೀರ್ಘಕಾಲದಿಂದ ಬಂಧನದಲ್ಲಿಡುವ ಮೂಲಕ ಅವರ ಜೀವನದ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ ಉಲ್ಲಂಘಿಸಲಾಗಿದೆ ಎಂದು ಪ್ರತಿಪಾದಿಸಿದರು. ಈ ಬಂಧನದ ವಿರುದ್ಧ ಅಹವಾಲು ಸಲ್ಲಿಸುವ ಹಕ್ಕನ್ನೂ ಸೋಜ್ ಅವರಿಗೆ ನಿರಾಕರಿಸಲಾಗಿದೆ ಎಂದು ಪತ್ನಿ ಅರ್ಜಿಯಲ್ಲಿ ವಿವರಿಸಿದ್ದಾರೆ.

ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲಾ, ಉಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಸೇರಿದಂತೆ ಹಲವು ಮಂದಿಯನ್ನು ಕಳೆದ ಆಗಸ್ಟ್‌ನಲ್ಲಿ ಸಾರ್ವಜನಿಕ ಸುರಕ್ಷಾ ಕಾಯ್ದೆಯಡಿ ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News