ವಲಸೆ ಕಾರ್ಮಿಕರ ವಿರುದ್ಧದ ಲಾಕ್‌ಡೌನ್ ಉಲ್ಲಂಘನೆ ದೂರುಗಳನ್ನು ಹಿಂದೆಗೆದುಕೊಳ್ಳಲು ಸುಪ್ರೀಂ ಆದೇಶ

Update: 2020-06-09 17:53 GMT

ಹೊಸದಿಲ್ಲಿ,ಜೂ.9: ತಮ್ಮ ಕೆಲಸದ ಸ್ಥಳಗಳಿಂದ ಮನೆಗಳಿಗೆ ಮರಳುವ ಪ್ರಯತ್ನದಲ್ಲಿ ಲಾಕ್‌ಡೌನ್ ನಿಯಮಗಳ ಉಲ್ಲಂಘನೆಗಾಗಿ ವಲಸೆ ಕಾರ್ಮಿಕರ ವಿರುದ್ಧ ದಾಖಲಾಗಿರುವ ಎಲ್ಲ ಪೊಲೀಸ್ ದೂರುಗಳನ್ನು ಹಿಂದೆಗೆದುಕೊಳ್ಳುವಂತೆ ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಆದೇಶಿಸಿದೆ.

ಕೆಲಸದ ಸ್ಥಳಗಳಿಂದ ಮನೆಗಳಿಗೆ ಮರಳಲು ಬಯಸಿರುವ ವಲಸೆ ಕಾರ್ಮಿಕರನ್ನು ಗುರುತಿಸುವಂತೆ ಮತ್ತು 15 ದಿನಗಳಲ್ಲಿ ಅವರನ್ನು ತಮ್ಮ ಊರುಗಳಿಗೆ ಕಳುಹಿಸುವಂತೆ ನ್ಯಾಯಮೂರ್ತಿಗಳಾದ ಅಶೋಕ ಭೂಷಣ,ಎಂ.ಆರ್.ಶಾ ಮತ್ತು ವಿ.ರಾಮಸುಬ್ರಮಣಿಯನ್ ಅವರ ಪೀಠವು ಕೇಂದ್ರ/ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿತು.

 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮನವಿ ಮಾಡಿಕೊಂಡ 24 ಗಂಟೆಗಳಲ್ಲಿ ಅವುಗಳಿಗೆ ಶ್ರಮಿಕ್ ರೈಲುಗಳನ್ನು ಒದಗಿಸುವಂತೆಯೂ ಪೀಠವು ಕೇಂದ್ರ ಮತ್ತು ರೈಲ್ವೆ ಇಲಾಖೆಗೆ ನಿರ್ದೇಶ ನೀಡಿತು. ತಮ್ಮ ಕೆಲಸದ ಸ್ಥಳಗಳಲ್ಲಿ ಬಾಕಿಯಾಗಿರುವ ಕಾರ್ಮಿಕರನ್ನು ಅವರ ತವರು ರಾಜ್ಯಗಳಿಗೆ ರವಾನಿಸಲು ಕೇಂದ್ರಗಳು ಕೇವಲ 171 ರೈಲುಗಳಿಗಾಗಿ ಬೇಡಿಕೆಯಿಟ್ಟಿವೆ ಎಂದು ಕೇಂದ್ರವು ನ್ಯಾಯಾಲಯಕ್ಕೆ ತಿಳಿಸಿತು.

ವಲಸೆ ಕಾರ್ಮಿಕರಿಗೆ ಆಹಾರ,ಪ್ರಾಥಮಿಕ ಅಗತ್ಯಗಳು ಮತ್ತು ಉದ್ಯೋಗಗಳನ್ನು ಒದಗಿಸಲು ಸಮಾಜ ಕಲ್ಯಾಣ ಯೋಜನೆಗಳ ವಿವರಗಳನ್ನು ಸಲ್ಲಿಸುವಂತೆಯೂ ನ್ಯಾಯಾಲಯವು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಸೂಚಿಸಿತು.

ತಾವು ಕೆಲಸ ಮಾಡುತ್ತಿದ್ದ ಸ್ಥಳಗಳಿಗೆ ಮರಳಲು ಬಯಸಿರುವ ವಲಸೆ ಕಾರ್ಮಿಕರ ಪಟ್ಟಿಯನ್ನು ಸಿದ್ಧಗೊಳಿಸುವಂತೆ ಮತ್ತು ಅವರು ಕೆಲಸಕ್ಕೆ ಪುನಃ ಸೇರುವ ಮುನ್ನ ಸೂಕ್ತ ಸಮಾಲೋಚನೆಯನ್ನು ಅವರಿಗೆ ಒದಗಿಸುವಂತೆ ಸರ್ವೋಚ್ಚ ನ್ಯಾಯಾಲಯವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News