ಗುಲಾಬಿ ಬಣ್ಣಕ್ಕೆ ತಿರುಗಿದ ಮಹಾರಾಷ್ಟ್ರದ ಲೋನಾರ್ ಸರೋವರ

Update: 2020-06-11 12:33 GMT
Photo: Twitter (@amarprasadreddy)

ಔರಂಗಾಬಾದ್, ಜೂ.11: ಮಹಾರಾಷ್ಟ್ರದ ಲೋನಾರ್ ಸರೋವರದ ಬಣ್ಣವು ರಾತೋರಾತ್ರಿ ಗುಲಾಬಿ ಬಣ್ಣಕ್ಕೆ ತಿರುಗಿದ್ದು, ನೀರಿನಲ್ಲಿ ಪಾಚಿಗಳ ಲವಣಾಂಶ ಇರುವುದು ಇದಕ್ಕೆ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

 ಮುಂಬೈನಿಂದ 500 ಕಿ.ಮೀ.ದೂರದಲ್ಲಿರುವ ಬುಲ್ದಾನ ಜಿಲ್ಲೆಯಲ್ಲಿರುವ ಲೋನಾರ್ ಸರೋವರ ಒಂದು ಜನಪ್ರಿಯ ಪ್ರವಾಸಿತಾಣವಾಗಿದೆ. ವಿಶ್ವದೆಲ್ಲೆಡೆಯ ವಿಜ್ಞಾನಿಗಳನ್ನು ಈ ಸರೋವರ ತನ್ನತ್ತ ಸೆಳೆಯುತ್ತಿದೆ.

 1.2 ಕಿ.ಮೀ.ಸರಾಸರಿ ವ್ಯಾಸ ಹೊಂದಿರುವ ಸರೋವರದ ನೀರಿನ ಬಣ್ಣ ಬದಲಾಗಿರುವುದು ಸ್ಥಳೀಯರನ್ನು ಮಾತ್ರವಲ್ಲ ಪ್ರಕೃತಿ ಉತ್ಸಾಹಿಗಳು ಹಾಗೂ ವಿಜ್ಞಾನಿಗಳನ್ನೂ ಅಚ್ಚರಿಗೊಳಿಸಿದೆ.

  ಬಣ್ಣ ಬದಲಾವಣೆ ಸಂಭವಿಸಿದ್ದು ಇದೇ ಮೊದಲಲ್ಲ ಎಂದು ಹೇಳಿರುವ ತಜ್ಞರು ಆದರೆ ಈ ಬಾರಿ ಇದು ಹೆಚ್ಚು ಪ್ರಕಾಶಮಾನವಾಗಿದೆ ಎಂದಿದ್ದಾರೆ.

 "ನೀರಿನಲ್ಲಿ ಪಾಚಿಗಳಿವೆ. ಲವಣಾಂಶ ಹಾಗೂ ಪಾಚಿಗಳು ಈ ಬದಲಾವಣೆಗೆ ಕಾರಣವಾಗಬಹುದು. ಸರೋವರದ ನೀರಿನ ಮೇಲ್ಮೈಯ ಒಂದು ಮೀಟರ್‌ಗಿಂತ ಕಡಿಮೆ ಆಮ್ಲಜನಕವಿಲ್ಲ. ಇರಾನ್‌ನ ಸರೋವರದ ಉದಾಹರಣೆ ನಮ್ಮ ಮುಂದಿದೆ. ಅಲ್ಲಿ ಲವಣಾಂಶದ ಹೆಚ್ಚಳದಿಂದಾಗಿ ನೀರು ಕೆಂಪಾಗುತ್ತದೆ'' ಎಂದು ಲೋನಾರ್ ಕೆರೆ ಸಂರಕ್ಷಣೆ ಹಾಗೂ ಅಭಿವೃದ್ಧಿ ಸಮಿತಿಯ ಸದಸ್ಯ ಗಜಾನನ್ ಖರತ್ ಪಿಟಿಐಗೆ ತಿಳಿಸಿದ್ದಾರೆ.

"ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ಲೋನಾರ್ ಸರೋವರದ ನೀರಿನ ಮಟ್ಟವು ಪ್ರಸ್ತುತ ಕಡಿಮೆಯಾಗಿದೆ ಹಾಗೂ ಇದರಲ್ಲಿ ಶುದ್ಧ ನೀರನ್ನು ಸುರಿಯಲು ಮಳೆ ಇಲ್ಲ. ಕಡಿಮೆ ಮಟ್ಟದ ನೀರು,ವಾತಾವರಣದ ಬದಲಾವಣೆಗಳಿಂದಾಗಿ ಲವಣಾಂಶ ಹೆಚ್ಚಾಗಲು ಹಾಗೂ ಪಾಚಿಗಳು ಹೆಚ್ಚಾಗಲು ಕಾರಣವಾಗಹುದು. ಇದು ಬಣ್ಣ ಬದಲಾವಣೆಗೆ ಕಾರಣವಾಗಹುದು. ನೀರಿನ ಬಣ್ಣ ಬದಲಾಗುವುದು ಇದು ಮೊದಲ ಬಾರಿ ಅಲ್ಲ"ಎಂದು  ಗಜಾನನ್ ಹೇಳಿದ್ದಾರೆ.

"ಈ ಪ್ರಮಾಣದ ಬಣ್ಣ ಬದಲಾವಣೆ ನೋಡಲಾಗುತ್ತಿದೆ. ಇದು ಮಾನವ ಹಸ್ತಕ್ಷೇಪವಲ್ಲ.ನೈಸರ್ಗಿಕ ವಿದ್ಯಮಾನ ಸಂದರ್ಭದಲ್ಲಿ ಶೀಲಿಂಧ್ರಗಳು ಹೆಚ್ಚಿನ ಸಂದರ್ಭದಲ್ಲಿ ಹಸಿರು ಬಣ್ಣ ವನ್ನು ನೀಡುತ್ತವೆ. ಪ್ರಸ್ತುತ ಬಣ್ಣ ಬದಲಾವಣೆ ಲೋನಾರ್ ಕುಳಿಯಲ್ಲಿ ಜೈವಿಕ ಬದಲಾವಣೆಯಾಗಿ ಕಂಡುಬರುತ್ತಿದೆ''ಎಂದು ಔರಂಗಾಬಾದ್‌ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಮರಾಠವಾಡ ವಿವಿಯ ಭೌಗೋಳಿಕ ವಿಭಾಗದ ಮುಖ್ಯಸ್ಥ ಡಾ. ಮದನ್ ಸೂರ್ಯವಂಶಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News