ರಾಜಸ್ತಾನದಲ್ಲೂ ಶಾಸಕರ ಕುದುರೆ ವ್ಯಾಪಾರದ ಭೀತಿ; ಕಾಂಗ್ರೆಸ್ ಶಾಸಕರು ರೆಸಾರ್ಟ್‌ಗೆ ಸ್ಥಳಾಂತರ

Update: 2020-06-11 14:48 GMT

ಜೈಪುರ, ಜೂ.11: ಗುಜರಾತ್‌ನಲ್ಲಿ ಮತ್ತು ರಾಜ್ಯದಲ್ಲಿ ಖರೀದಿ ಮತ್ತು ಮಾರಾಟ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಏಕೈಕ ಉದ್ದೇಶದಿಂದ ಬಿಜೆಪಿಯು ರಾಜ್ಯಸಭಾ ಚುನಾವಣೆಯನ್ನು ಎರಡು ತಿಂಗಳು ಮುಂದೂಡಿದೆ ಎಂದು ರಾಜಸ್ತಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆ.

ರಾಜಸ್ತಾನದಿಂದ ರಾಜ್ಯಸಭೆಗೆ 3 ಸ್ಥಾನಗಳಿಗೆ ನಡೆಯುವ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯು ಶಾಸಕರ ಕುದುರೆ ವ್ಯಾಪಾರದಲ್ಲಿ ತೊಡಗಿದೆ ಎಂದು ಗೆಹ್ಲೋಟ್ ಆರೋಪಿಸಿದ್ದು ಈ ಕಾರಣದಿಂದ ಪಕ್ಷದ ಶಾಸಕರನ್ನು ಜೈಪುರದ ರೆಸಾರ್ಟ್‌ಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ. ಪಕ್ಷಾಂತರ ಮಾಡಲು ಕಾಂಗ್ರೆಸ್‌ನ ಕೆಲವು ಶಾಸಕರಿಗೆ 25 ಕೋಟಿ ರೂ., (ಇದರಲ್ಲಿ 10 ಕೋಟಿ ರೂ. ಮುಂಗಡ) ಆಮಿಷ ಒಡ್ಡಲಾಗಿದೆ.

ಮಧ್ಯಪ್ರದೇಶದಲ್ಲಿ ಇದೇ ರೀತಿಯ ಯೋಜನೆಯಿಂದ ಕಮಲನಾಥ್ ಸರಕಾರವನ್ನು ಬಿಜೆಪಿ ಉರುಳಿಸಿದೆ ಎಂದ ಗೆಹ್ಲೋಟ್, ಕುದುರೆ ವ್ಯಾಪಾರದ ಮೂಲಕ ಎಷ್ಟು ಸಮಯ ರಾಜಕೀಯ ಮಾಡಲು ಸಾಧ್ಯ. ಜನತೆಗೆ ಎಲ್ಲವೂ ತಿಳಿದಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಬಿಜೆಪಿಗೆ ಆಘಾತ ನೀಡಿದರೆ ಅಚ್ಚರಿಯೇನಿಲ್ಲ ಎಂದರು.

ಬಿಜೆಪಿಯ ಆಮಿಷಕ್ಕೆ ಸಿಲುಕಿ ಬಿಜೆಪಿಗೆ ಸೇರ್ಪಡೆಗೊಳ್ಳುವ ಕಾಂಗ್ರೆಸಿಗರ ರಾಜಕೀಯ ಭವಿಷ್ಯ ಅಲ್ಲಿಗೇ ಮಸುಕಾಗುತ್ತದೆ. ಆದ್ದರಿಂದ ಕಾಂಗ್ರೆಸ್‌ನ ಎಲ್ಲಾ ಶಾಸಕರು ಎಚ್ಚರಿಕೆಯಿಂದ ಮತ್ತು ಒಗ್ಗಟ್ಟಿನಿಂದ ಇರಬೇಕು ಎಂದು ಸಲಹೆ ನೀಡಿದರು. ಬುಧವಾರ ಜೈಪುರದಲ್ಲಿ ನಡೆದ ಕಾಂಗ್ರೆಸ್ ಶಾಸಕರ ಹಾಗೂ ಪಕ್ಷೇತರ ಶಾಸಕರ ಸಭೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ, ಜನಾದೇಶಕ್ಕೆ ಸತತ ದ್ರೋಹ ಬಗೆಯುವುದು ಬಿಜೆಪಿಯ ಅಜೆಂಡಾವಾಗಿದೆ ಎಂದು ಟೀಕಿಸಿದರು.

ರಾಜಸ್ತಾನದಲ್ಲಿ ಕಾಂಗ್ರೆಸ್ ಸರಕಾರಕ್ಕೆ ಬೆಂಬಲ ಘೋಷಿಸಿರುವ ಪಕ್ಷೇತರ ಶಾಸಕರಿಗೆ ಭಾರೀ ಆಮಿಷ ಒಡ್ಡಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಮಹೇಶ್ ಜೋಷಿ ಕಳವಳ ವ್ಯಕ್ತಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್ ಪೂನಿಯಾ, ಕಾಂಗ್ರೆಸ್‌ಗೆ ಅಭದ್ರತೆಯ ಭಾವನೆ ಕಾಡುತ್ತಿದೆ. ತಮ್ಮ ಶಾಸಕರ ಮೇಲೂ ಅವರಿಗೆ ವಿಶ್ವಾಸವಿಲ್ಲ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News