ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ಚ್ಯುತಿ: ಅಮೆರಿಕ ರಾಜತಾಂತ್ರಿಕರ ಕಳವಳ

Update: 2020-06-11 18:09 GMT
ಸಾಂದರ್ಭಿಕ ಚಿತ್ರ

ವಾಶಿಂಗ್ಟನ್,ಜೂ. 11: ಐತಿಹಾಸಿಕವಾಗಿ ಸಹಿಷ್ಣು ಹಾಗೂ ಎಲ್ಲಾ ಧರ್ಮಗಳನ್ನು ಗೌರವಿಸುವ ದೇಶವಾದ ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಈಗಿನ ವಿದ್ಯಮಾನಗಳ ಬಗ್ಗೆ ಅಮೆರಿಕವು ಆತಂಕಗೊಂಡಿದೆಯೆಂದು ಟ್ರಂಪ್ ಆಡಳಿತದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 2019ರ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ವರದಿ ಬಿಡುಗಡೆಯಾದ ಕೆಲವು ತಾಸುಗಳ ಬಳಿಕ, ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರಕ್ಕಾಗಿನ ರಾಯಭಾರಿ ಸ್ಯಾಮುಯೆಲ್ ಬ್ರೌನ್‌ಬ್ಯಾಕ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಮೆರಿಕ ಕಾಂಗ್ರೆಸ್‌ಗೆ ಸಲ್ಲಿಸಲಾದ ಈ ವರದಿಯು ಜಗತ್ತಿನಾದ್ಯಂತ ಧಾರ್ಮಿಕ ಸ್ವಾತಂತ್ರದ ಉಲ್ಲಂಘನೆಗೆ ಸಂಬಂಧಿಸಿದ ಪ್ರಮುಖ ವಿದ್ಯಮಾನಗಳನ್ನು ಪಟ್ಟಿ ಮಾಡಿದೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ವರದಿಯನ್ನು ಬಿಡುಗಡೆ ಮಾಡಿದರು.

ಅಮೆರಿಕವು ಈ ಹಿಂದೆ ಪ್ರಕಟಿಸಿದ್ದ ಧಾರ್ಮಿಕ ಸ್ವಾತಂತ್ರ್ಯದ ಕುರಿತ ವರದಿಯನ್ನು ಭಾರತವು ತಿರಸ್ಕರಿಸಿತ್ತು. ವಿದೇಶಿ ಸರಕಾರವೊಂದು, ತನ್ನ ದೇಶದ ಪ್ರಜೆಗಳ ಸಾಂವಿಧಾನಿಕವಾಗಿ ರಕ್ಷಿಸಲ್ಪಟ್ಟ ಹಕ್ಕುಗಳ ಪರಿಸ್ಥಿತಿಯ ಬಗ್ಗೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅಧಿಕಾರವಿಲ್ಲವೆಂದು ಹೇಳಿದೆ.

ಬ್ರೌನ್‌ಬ್ಯಾಕ್ ಅವರು ಬುಧವಾರ ವಿದೇಶಿ ಪತ್ರಕರ್ತರ ಜೊತೆ ದೂರ ವಾಣಿಯಲ್ಲಿ ಮಾತಾನಾಡುತ್ತಾ, ‘‘ ಭಾರತದಲ್ಲಿ ಏನು ನಡೆಯುತ್ತಿದೆಯೆಂಬುದರ ಬಗ್ಗೆ ನಮಗೆ ಆತಂಕವಿದೆ. ಭಾರತವು ಐತಿಹಾಸಿಕವಾಗಿ ಅಪಾರ ಸಹಿಷ್ಣುತೆಯ, ಎಲ್ಲಾ ರ್ಮಗಳನ್ನು ಗೌರವಿಸುವ ದೇಶವಾಗಿದೆ’’ ಎಂದು ಹೇಳಿದರು.

ವಿವಿಧ ಧರ್ಮಗಳಿಂದ ಕೂಡಿದ ಭಾರತ ಉಪಖಂಡವು ಇತ್ತೀಚಿನ ವರ್ಷಗಳಲ್ಲಿ ಬಹಳಷ್ಟು ಕೋಮು ಹಿಂಸಾಚಾರವನ್ನು ಕಾಣುತ್ತಿದೆ. ಈ ಪ್ರವೃತ್ತಿಯು ಆತಂಕಕಾರಿಯಾಗಿದೆ ಎಂದು ಬ್ರೌನ್‌ಬ್ಯಾಕ್ ಹೇಳಿದರು. ಭಾರತವು ಉನ್ನತ ಮಟ್ಟದಲ್ಲಿ ಅಂತರ್‌ಧರ್ಮೀಯ ಮಾತುಕತೆಯನ್ನು ಆರಂಭಿಸಬೇಕು ಹಾಗೂ ನಾವು ಗುರುತಿಸಿರುವಂತಹ ನಿರ್ದಿಷ್ಟ ಸಮಸ್ಯೆಗಳನ್ನು ಬಗೆಹರಿಸಬೇಕಾಗಿದೆ’’ ಎಂದು ಬ್ರೌನ್‌ಬ್ಯಾಕ್ ಹೇಳಿದರು.

 ‘‘ಅಂತರ್‌ಧರ್ಮಿಯ ಸಂವಾದಗಳನ್ನು ನಡೆಸುವ ಪ್ರಯತ್ನವನ್ನು ಮುನ್ನಡೆಸದೆ ಇದ್ದಲ್ಲಿ, ದೇಶದಲ್ಲಿ ಹಿಂಸಾಚಾರ ಉಲ್ಬಣಿಸುವುದನ್ನು ಹಾಗೂ ಸಾಮಾಜಿಕ ಸಂಕಷ್ಟಗಳು ಹೆಚ್ಚುವುದನ್ನು ನೀವು ಕಾಣಲಿದ್ದೀರಿ’’ ಎಂದು ಅವರು ಹೇಳಿದರು.

ಕೋವಿಡ್-19 ಸೋಂಕಿನ ಹರಡುವಿಕೆಗೆ ಅಲ್ಪಸಂಖ್ಯಾತ ಸಮುದಾಯಗಳನ್ನು ದೂಷಿಸಬಾರದ ಹಾಗೂ ಅವರಿಗೆ ಆರೋಗ್ಯಪಾಲನಾ ಸೌಕರ್ಯಗಳು ಲಭ್ಯವಾಗುವಂತೆ ನೋಡಿಕೊಳ್ಳಬೇಕೆಂದು ಬ್ರೌನ್‌ಬ್ಯಾಕ್ ಹೇಳಿದ್ದಾರೆ.

ಕಳೆದ ವರ್ಷದ ಜೂನ್‌ನಲ್ಲಿಯೂ ಧಾರ್ಮಿಕ ಸ್ವಾತಂತ್ರ ಕುರಿತ ಅಮೆರಿಕದ ವರದಿಯನ್ನು ಭಾರತ ತಳ್ಳಿಹಾಕಿತ್ತು ‘‘ ಭಾರತದ ಸಂವಿಧಾನವು ಅಲ್ಪಸಂಖ್ಯಾತ ಸಮುದಾಯ ಸೇರಿದಂತೆ ತನ್ನ ಎಲ್ಲಾ ಪೌರರಿಗೂ ಮೂಲಭೂತ ಹಕ್ಕುಗಳನ್ನು ಖಾತರಿಪಡಿಸುತ್ತದೆ. ನಮ್ಮ ನಾಗರಿಕರ ಸಂವಿಧಾನಾತ್ಮಕವಾಗಿ ರಕ್ಷಿಸಲ್ಪಟ್ಟ ಹಕ್ಕುಗಳ ಸ್ಥಿತಿಗತಿ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ಯಾವುದೇ ವಿದೇಶಿ ಸಂಸ್ಥೆ ಅಥವಾ ಸರಕಾರಕ್ಕೆ ಅಧಿಕಾರವಿಲ್ಲ’’ ಎಂದು ಭಾರತದ ವಿದೇಶಾಂಗ ಇಲಾಖೆಯು ಪ್ರತಿಕ್ರಿಯಿಸಿತ್ತು.

ಆದಾಗ್ಯೂ ಕಳೆದ ವರ್ಷ ಕೇಂದ್ರ ಗೃಹ ಸಚಿವಾಯ ಪ್ರಕಟಿಸಿರುವ ಅಂಕಿಅಂಶಗಳ ಪ್ರಕಾರ, 2008 ಹಾಗೂ 2017ರ ನಡುವೆ ದೇಶಾದ್ಯಂತ ಒಟ್ಟು 7484 ಕೋಮುಹಿಂಸಾಚಾರದ ಘಟನೆಗಳು ನಡೆದಿದ್ದು, ಅದರಲ್ಲಿ 1100ಕ್ಕೂ ಅಧಿಕ ಮಂದಿ ಸಾವನ್ನಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News