ಕೊರೋನ: ಮೂರು ಲಕ್ಷದ ಗಡಿ ದಾಟಿದ ಭಾರತ

Update: 2020-06-13 03:40 GMT

ಹೊಸದಿಲ್ಲಿ, ಜೂ.13: ದೇಶದ ಕೋವಿಡ್-19 ಪ್ರಕರಣಗಳು ಶುಕ್ರವಾರ 11,775ರಷ್ಟು ಹೆಚ್ಚಿವೆ. ಕೊರೋನ ಸೋಂಕು ಭಾರತದಲ್ಲಿ ಕಾಣಿಸಿಕೊಂಡ ಬಳಿಕ ಒಂದೇ ದಿನ ಗರಿಷ್ಠ ಪ್ರಕರಣಗಳು ದೃಢಪಟ್ಟು ಹೊಸ ದಾಖಲೆ ನಿರ್ಮಾಣವಾಗಿದೆ. ಇದರೊಂದಿಗೆ ದೇಶದ ಒಟ್ಟು ಪ್ರಕರಣಗಳ ಸಂಖ್ಯೆ ಮೂರು ಲಕ್ಷದ ಗಡಿ ದಾಟಿದೆ.

ಅಂತೆಯೇ ಈ ಮಾರಕ ಸೋಂಕಿನಿಂದ ಶುಕ್ರವಾರ 389 ಮಂದಿ ಮೃತಪಟ್ಟಿದ್ದು, ಒಟ್ಟು ಮೃತರ ಸಂಖ್ಯೆ 8,886ಕ್ಕೇರಿದೆ. ಮಹಾರಾಷ್ಟ್ರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1 ಲಕ್ಷವನ್ನು ದಾಟಿದ್ದು, ದೇಶದ ಒಟ್ಟು ಪ್ರಕರಣಗಳ ಪೈಕಿ ಮೂರನೇ ಒಂದರಷ್ಟು ಇದೇ ರಾಜ್ಯದಲ್ಲಿ ಪತ್ತೆಯಾಗಿವೆ. ಅಂತೆಯೇ ಸೋಂಕಿನಿಂದ ಮೃತಪಟ್ಟವರಲ್ಲಿ ಶೇಕಡ 42ರಷ್ಟು ಮಂದಿ ಮಹಾರಾಷ್ಟ್ರದವರು.

ಶುಕ್ರವಾರ ಸತತ ಎರಡನೇ ದಿನ 11 ಸಾವಿರಕ್ಕಿಂತ ಅಧಿಕ ಪ್ರಕರಣಗಳು ಪತ್ತೆಯಾಗಿವೆ. ದೈನಿಕ ಪ್ರಕರಣಗಳ ಸಂಖ್ಯೆಯಲ್ಲಿ ಇದೀಗ ಭಾರತ ಬ್ರೆಝಿಲ್ ಹಾಗೂ ಅಮೆರಿಕವನ್ನು ಹೊರತುಪಡಿಸಿದರೆ ಮೂರನೇ ಸ್ಥಾನದಲ್ಲಿದೆ. ಗುರುವಾರ ದೇಶದಲ್ಲಿ 11,442 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದವು.

ವಿವಿಧ ರಾಜ್ಯಗಳಿಂದ ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,09,360. ಒಟ್ಟು ಪ್ರಕರಣಗಳ ಸಂಖ್ಯೆ ಜೂನ್ 2ರಂದು ಎರಡು ಲಕ್ಷ ಇದ್ದುದು ಹೆಚ್ಚುವರಿ ಒಂದು ಲಕ್ಷ ಪ್ರಕರಣಗಳು ದಾಖಲಾಗಲು ಕೇವಲ 10 ದಿನಗಳು ಸಾಕಾಗಿವೆ. ಆದಾಗ್ಯೂ ಈ ಅವಧಿಯಲ್ಲಿ ಹೆಚ್ಚಳ ದರ ಶೇಕಡ 4.5ರಿಂದ ಶೇಕಡ 4ಕ್ಕೆ ಇಳಿದಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.

ಮಹಾರಾಷ್ಟ್ರದಲ್ಲಿ ಒಂದೇ ದಿನ 3,493 ಪ್ರಕರಣಗಳು ಪತ್ತೆಯಗಿದ್ದು, ದಿಲ್ಲಿಯಲ್ಲಿ ಮೊಟ್ಟಮೊದಲ ಬಾರಿಗೆ ಒಂದೇ ದಿನ 2 ಸಾವಿರಕ್ಕಿಂತ ಅಧಿಕ ಪ್ರಕರಣಗಳು ಕಾಣಿಸಿಕೊಂಡಿದ್ದು, ಆತಂಕಕ್ಕೆ ಕಾರಣವಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಶುಕ್ರವಾರ ಪತ್ತೆಯಾದ ಪ್ರಕರಣಗಳು 2,137.

ಇದರ ಜತೆಗೆ ದಿಲ್ಲಿಯಲ್ಲಿ ಶುಕ್ರವಾರ 129 ಮಂದಿ ಸೋಂಕಿತರು ಮೃತಪಟ್ಟಿದ್ದು, ಇದು ಮಹಾರಾಷ್ಟ್ರದಲ್ಲಿ ವರದಿಯಾದ ಸಾವಿನ ಪ್ರಕರಣ (127)ಕ್ಕಿಂತ ಅಧಿಕ. ದಿಲ್ಲಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,6824ಕ್ಕೇರಿದೆ. ಕೋವಿಡ್-19 ಸೋಂಕಿನಿಂತ ಮೃತಪಟ್ಟವರ ಸಂಖ್ಯೆ 1,214ಕ್ಕೇರಿದ್ದು, ಮಹಾರಾಷ್ಟ್ರ (3,717) ಮತ್ತು ಗುಜರಾತ್ (1,416) ಬಳಿಕ ಮೂರನೇ ಸ್ಥಾನದಲ್ಲಿದೆ.

ರಾಜಧಾನಿಯ ಮತ್ತೊಂದು ಆಘಾತಕಾರಿ ಅಂಶವೆಂದರೆ ಇಲ್ಲಿ ಸಂಭವಿಸಿದ ಒಟ್ಟು ಸಾವಿನ ಪೈಕಿ ಶೇಕಡ 61ರಷ್ಟು ಸಾವು ಕಳೆದ 12 ದಿನಗಳಲ್ಲಿ ಸಂಭವಿಸಿವೆ. ಎಪ್ರಿಲ್‌ನಲ್ಲಿ ರಾಜ್ಯದಲ್ಲಿ ಒಟ್ಟು 257 ಹಾಗೂ ಮೇ ತಿಂಗಳಲ್ಲಿ 414 ಮಂದಿ ಕೊರೋನ ಸೋಂಕಿತರು ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News