ಜನಕನ ಊರಿನಿಂದ ಮಗಳು ಜಾನಕಿ..!

Update: 2020-06-14 06:32 GMT

‘ಮಗಳು ಜಾನಕಿ’ ಎನ್ನುವ ಧಾರಾವಾಹಿಯ ಮೂಲಕ ನಿರ್ದೇಶಕ ಟಿ.ಎನ್.ಸೀತಾರಾಮ್ ಅವರು ತಾವು ಎಲ್ಲಕಾಲದಲ್ಲಿ ಕೂಡ ಸಲ್ಲುವವರು ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಧಾರಾವಾಹಿ ಅರ್ಧಕ್ಕೆ ನಿಲ್ಲಿಸಬಾರದು ಎಂದು ಸಾಮಾಜಿಕ ಜಾಲತಾಣದಲ್ಲಿ ಈ ಹಿಂದೆಂದೂ ನಡೆದಿರದ ಅಭಿಯಾನ ಸೃಷ್ಟಿಯಾಗಿದ್ದೇ ಅದಕ್ಕೆ ಉದಾಹರಣೆ. ಅಂತಹ ಧಾರಾವಾಹಿಯ ಕೇಂದ್ರ ಪಾತ್ರವಾದ ಜಾನಕಿಯಾಗಿ ನಟಿಸಿದ ಗಾನವಿ ಲಕ್ಷ್ಮಣ್ ‘ವಾರ್ತಾಭಾರತಿ’ ಜತೆಗೆ ಮಾತನಾಡಿದ್ದಾರೆ. ಲಾಕ್‌ಡೌನ್ ಕಾರಣದಿಂದ ತಮ್ಮ ಊರು ಸೇರಿಕೊಂಡಿರುವ ಗಾನವಿ ನಮ್ಮ ಪ್ರಶ್ನೆಗಳಿಗೆ ಅಲ್ಲಿಂದಲೇ ನೀಡಿರುವ ಉತ್ತರಗಳು ಇಲ್ಲಿವೆ.


 ಧಾರಾವಾಹಿ ಅರ್ಧದಲ್ಲೇ ಮುಗಿಸಿದ್ದು ಕಂಡಾಗ ನಿಮಗೆ ಹೇಗನಿಸಿತು?
ಸಹಜವಾಗಿ ಬೇಸರವಾಯಿತು. ಆದರೆ ಪ್ರೇಕ್ಷಕರ ‘ಬೇಕು’ ಎನ್ನುವ ಒತ್ತಾಯದ ನಡುವೆಯೇ ಮುಗಿಯಿತೆನ್ನುವುದಕ್ಕೆ ಹೆಮ್ಮೆ ಇದೆ. ಜನ ನೋಡದೆ ನಿಂತು ಹೋಗಿದ್ದರೆ ಬೇಸರ ಪಡಬೇಕಿತ್ತು. ಆದರೆ ಕೊರೋನ ಕಾಲದ ದುರಂತಗಳಿಗೆ ಹೋಲಿಸಿದರೆ ಇದು ದೊಡ್ಡ ವಿಚಾರವಲ್ಲ ಬಿಡಿ!

ಇಂತಹದೊಂದು ಸಂದರ್ಭ ಬಂದೀತೆನ್ನುವ ನಿರೀಕ್ಷೆ ಇತ್ತೇ?
 ಬೇರೆ ದೇಶಗಳಲ್ಲಿ ನಡೆಯುತ್ತಿದ್ದ ಕೊರೋನ ದುರಂತದ ಬಗ್ಗೆ ನಮ್ಮಂತಹ ಸಾಮಾನ್ಯರಿಗೇನೇ ವಾಟ್ಸ್‌ಆ್ಯಪ್ ಮೂಲಕ ಅರಿವಾಗಿತ್ತು. ಮೊದಲೇ ಗೊತ್ತಿದ್ದ ಕಾರಣ ಭಾರತ ಎಚ್ಚರಿಕೆ ವಹಿಸಲಿದ್ದು ಇದು ಲಾಕ್‌ಡೌನ್ ಮಟ್ಟಕ್ಕೆ ಮಿತಿಮೀರುವ ನಿರೀಕ್ಷೆ ಇರಲಿಲ್ಲ. ಸರಕಾರ ಕೂಡ ತಕ್ಷಣ ಎಚ್ಚೆತ್ತುಕೊಂಡು ಹೊರಗಿನ ಸಂಪರ್ಕವನ್ನು ಮೊದಲೇ ಕಡಿತಗೊಳಿಸಿದ್ದರೆ ಈ ಮಟ್ಟಕ್ಕೆ ಸೋಂಕು ಹರಡುವ ಸಂದರ್ಭ ಇರುತ್ತಿರಲಿಲ್ಲ. ಹರಡಲು ತೊಡಗಿದ ಮೇಲೆ ಕೂಡ ತಡವಾಗಿ ಲಾಕ್‌ಡೌನ್ ಮಾಡಿದ್ದಾರೆ. ಅದನ್ನು ಕೂಡ ಏಕಾಏಕಿ ಘೋಷಣೆ ಮಾಡಿ, ಬಳಿಕ ಮಕ್ಕಳಿಗೆ ಚಾಕಲೇಟ್ ಆಸೆ ತೋರಿಸುವಂತೆ ಇಷ್ಟಿಷ್ಟೇ ದಿನ ಮುಂದೆ ಹಾಕುತ್ತಾ ಬಂದಿದ್ದಾರೆ! ಒಂದು ಸರಿಯಾದ ಪ್ಲ್ಯಾನ್ ಹಾಕಿಕೊಂಡಿದ್ದರೆ ಈ ಪರಿಸ್ಥಿತಿಯ ನಿರೀಕ್ಷೆ ಅಷ್ಟೇ ಅಲ್ಲ ಎದುರಿಸಬೇಕಾದ ಸಂದರ್ಭ ಕೂಡ ಇರುತ್ತಿರಲಿಲ್ಲ.

 ನೀವು ಈ ದಿನಗಳನ್ನು ಹೇಗೆ ಕಳೆಯುತ್ತಿದ್ದೀರಿ?
ವರ್ಷಗಳ ಬಳಿಕ ನನ್ನ ತವರಾದ ಚಿಕ್ಕಮಗಳೂರಿಗೆ ಬಂದಿದ್ದೇನೆ. ಎಷ್ಟೋ ಸಮಯಗಳ ಬಳಿಕ ತಂದೆ ತಾಯಿ ಜತೆಗೆ ಸಮಯ ಕಳೆಯುತ್ತಿದ್ದೇನೆ. ಅದನ್ನು ನಾನು ಎಂಜಾಯ್ ಮಾಡುತ್ತಿದ್ದೇನೆ. ಆದರೆ ನಮ್ಮದು ರೈತ ಕುಟುಂಬ. ಹಾಗಾಗಿ ತಡವಾಗಿ ಏಳುವಂತಹ ಅವಕಾಶಗಳು ಇಲ್ಲಿಲ್ಲ! ಕೆಲಸಗಾರರು ತಮ್ಮ ಕೆಲಸ ಶುರು ಮಾಡುತ್ತಾರೆ. ಹಾಗಾಗಿ ನಾನು ಕೂಡ ಬೆಳಗ್ಗೆ ಸುಮಾರು ಐದೂಮುಕ್ಕಾಲರ ಹೊತ್ತಿಗೆ ಏಳುತ್ತೇನೆ. ಸೂರ್ಯ ನಮಸ್ಕಾರ ಮಾಡುತ್ತೇನೆ. ಸಾಯಂಕಾಲ ಸೇರಿದಂತೆ ವರ್ಕೌಟ್ ಮಾಡುವುದಕ್ಕೇನೇ ಸುಮಾರು ಎರಡು ಗಂಟೆ ಮೀಸಲಿಡುತ್ತೇನೆ. ಬೆಳಗ್ಗೆ ಅಮ್ಮನಿಗೆ ಅಡುಗೆ ಕೆಲಸದಲ್ಲಿ ಸಹಾಯ ಮಾಡುತ್ತೇನೆ. ಕೊರೋನದ ಕುರಿತಾದ ವಿಶೇಷ ಎಚ್ಚರಿಕೆ ವಹಿಸುವುದು, ಕ್ಲೀನಿಂಗು ಇವುಗಳಲ್ಲೇ ಸಮಯ ಕಳೆಯುತ್ತದೆ.

ಯಾವಾಗ ಬೆಂಗಳೂರಿಗೆ ಮರಳುತ್ತೀರಿ?

ಹೊಸ ಪ್ರಾಜೆಕ್ಟ್ ಸಿಗಬೇಕು. ಅದು ನನಗೆ ಒಪ್ಪಿಗೆಯಾಗಬೇಕು. ಈಗಾಗಲೇ ಒಂದಷ್ಟು ಸೀರಿಯಲ್ ಆಫರ್ ಬಂದಿವೆ. ಆದರೆ ನನಗೆ ಧಾರಾವಾಹಿ ಬಗ್ಗೆ ಆಸಕ್ತಿ ಇಲ್ಲ. ಈಗಾಗಲೇ ‘ಮಗಳು ಜಾನಕಿ’ಯಲ್ಲಿ ಎರಡು ಶೇಡ್ ಪಾತ್ರ ದೊರಕಿದೆ. ಹಾಗಾಗಿ ಅದನ್ನು ಮೀರಿಸುವ ಒಂದು ಸಿನೆಮಾ ಅವಕಾಶ ನಿರೀಕ್ಷಿಸುತ್ತಿದ್ದೇನೆ. ಲಾಕ್‌ಡೌನ್‌ಗಿಂತ ಮೊದಲೇ ವಿನು ಬಳಂಜ ಅವರು ತಮ್ಮ ನಿರ್ದೇಶನದ ‘ನಾಥೂರಾಮ್’ ಚಿತ್ರದಲ್ಲಿ ರಿಷಬ್‌ಗೆ ಜೋಡಿಯಾಗಿ ಆಯ್ಕೆ ಮಾಡಿದ್ದಾರೆ. ಅದು ಅಥವಾ ಬೇರೆ ಯಾವುದಾದರೂ ಹೊಸ ಪ್ರಾಜೆಕ್ಟ್ ಆರಂಭಗೊಂಡರೆ ಮಾತ್ರ ಬೆಂಗಳೂರಿಗೆ ಬರಲಿದ್ದೇನೆ.

 ನಿಮ್ಮ ನಿರೀಕ್ಷೆಯ ಪಾತ್ರ ಯಾವುದು?
ನಾನು ‘ಇಂತಹದೇ ಪಾತ್ರ ಮಾಡಬೇಕು’ ಎನ್ನುವ ಯಾವ ನಿರೀಕ್ಷೆ ಕೂಡ ಇರಿಸಿಕೊಂಡಿಲ್ಲ. ಆದರೆ ಎಂತಹ ಪಾತ್ರವನ್ನು ಕೂಡ ನಿಭಾಯಿಸಬಲ್ಲಳು ಎನ್ನುವಂತಾಗಬೇಕಿದೆ. ಉದಾಹರಣೆಗೆ ನನ್ನನ್ನು ಅಮಲಾ ಪೌಲ್, ಪ್ರಿಯಾಂಕ ಚೋಪ್ರಾ ಮೊದಲಾದವರಿಗೆ ಹೋಲಿಸುತ್ತಾರೆ. ಹೋಲಿಕೆ ಇದ್ದಾಕ್ಷಣ ನಾನು ಅವರಾಗಲು ಸಾಧ್ಯವಿಲ್ಲ. ನಾನು ಕೂಡ ನನ್ನದೇ ರೀತಿಯಲ್ಲಿ ಏನಾದರೂ ಸಾಧನೆ ಮಾಡಬೇಕಾಗಿದೆ. ಅವರು ಎಲ್ಲಾ ವಿಧದ ಪಾತ್ರಗಳಲ್ಲಿ ಸೈ ಎನಿಸಿಕೊಂಡವರು. ನಮ್ಮಲ್ಲಿ (ಸೌತ್ ಇಂಡಿಯಾ) ನಾಯಕಿಗೆ ಒಂದು ಇಮೇಜ್ ನೀಡುವುದು ಹೆಚ್ಚು. ಆದರೆ ಇಮೇಜ್‌ನಾಚೆಗೆ ಚಿಂತಿಸುವ, ವಿಭಿನ್ನ ಪಾತ್ರಗಳಿಗೆ ಆಯ್ಕೆ ಮಾಡುವಂತಹ ನಿರ್ದೇಶಕರು, ಚೆನ್ನಾಗಿ ತೋರಿಸಬಲ್ಲ ಛಾಯಾಗ್ರಾಹಕರು ಹೀಗೆ ಒಟ್ಟು ತಂಡವೇ ಚೆನ್ನಾಗಿದ್ದಾಗ ನನಗೂ ತೃಪ್ತಿ ಸಿಗಬಹುದು.

ಮಗಳು ಜಾನಕಿಯ ಜಾನಕಿ ಪಾತ್ರದ ಬಗ್ಗೆ ನೀವು ಹೇಳುವುದೇನು?
ನಮ್ಮ ಪೇರೆಂಟ್ಸ್ ಯಾವಾಗಲೂ ಹೇಳ್ತಾ ಇದ್ದರು, ಜಾನಕಿಯ ಪಾತ್ರದಲ್ಲಿ ನಿನ್ನದೇ ಛಲ, ಪರಿಶ್ರಮ ಕಂಡಂತಾಗುತ್ತೆ ಎಂದು. ಯಾಕೆಂದರೆ ನಾನು ಕೂಡ ಮನೆ ಬಿಟ್ಟು ಬೆಂಗಳೂರಿಗೆ ಬಂದು, ಏನೋ ಸಾಧಿಸಬೇಕೆಂದು ಪ್ರಯತ್ನಿಸಿದ್ದೆ. ಆದುದರಿಂದ ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳುವುದು ಎಷ್ಟು ಮುಖ್ಯವಾಗುತ್ತದೆ ಎನ್ನುವುದಕ್ಕೆ ನಾನು ಕೂಡ ಉದಾಹರಣೆ. ಮೇಲೇರಬೇಕೆಂಬ ಹತ್ತು ವರ್ಷಗಳ ಪ್ರಯತ್ನಕ್ಕೆ ಸಿಕ್ಕಂತಹ ಪ್ರಥಮ ಮೆಟ್ಟಿಲು ಇದು. ಇನ್ನಷ್ಟು ಬೆಳೆಯುತ್ತೇನೆ ಎನ್ನುವ ಆತ್ಮವಿಶ್ವಾಸ ಬಂದಿದೆ. ಇಂಡಸ್ಟ್ರಿ ಎಂದರೇನೆ ಆತಂಕ ಪಡುತ್ತಿದ್ದೆ. ಇಂಡಸ್ಟ್ರಿ ನಮ್ಮಿಳಗೆ ಬೆಳೆಸಬೇಕು. ಅಂದರೆ ನಾವು ನಮ್ಮಿಳಗೆ ರೂಲ್ಸ್ ಇರಿಸಿಕೊಂಡು ಮುಂದೆ ನಡೆದರೆ ಒಂದಲ್ಲ ಒಂದು ದಿನ ನಮ್ಮ ಇಷ್ಟದ ಗುರಿ ತಲುಪುತ್ತೇವೆ. ಇದು ನಾನೂ ಹೌದು. ಜಾನಕಿಯ ಪಾತ್ರವೂ ಹೌದು.

ನಿರ್ದೇಶಕ ಟಿ.ಎನ್ .ಸೀತಾರಾಮ್ ಅವರನ್ನು ಹೇಗೆ ನೆನಪಿಸಿಕೊಳ್ಳುತ್ತೀರಿ?
ಅವರನ್ನು ಮರೆತರೆ ತಾನೇ ನೆನಪಿಸಿಕೊಳ್ಳುವ ಪ್ರಮೇಯ ಬರುವುದು? ಸೀತಾರಾಮ್ ಸರ್ ಬಗ್ಗೆ ಏನೇ ಹೇಳಿದರೂ ಅದು ಕಡಿಮೆಯೇ ಆಗುತ್ತದೆ. ಅವರು ಹೃದಯದಿಂದ ತುಂಬ ಒಳ್ಳೆಯ ವ್ಯಕ್ತಿ. ನಾನು ನೂರು ಪರ್ಸೆಂಟ್ ಮನಸ್ಸಿಟ್ಟು ಕೆಲಸ ಮಾಡಿದ್ದೇನೆ. ಅವರಿಗೆ ಅದು ತೃಪ್ತಿ ಕೊಟ್ಟಿದೆ ಎಂದುಕೊಂಡಿದ್ದೇನೆ. ಈ ಬಗ್ಗೆ ನೀವು ಅವರಲ್ಲಿ ಕೇಳಿ ನೋಡಿ! ಅವರು ಒಬ್ಬ ನಿರ್ದೇಶಕರಾಗಿ, ಸ್ಕ್ರಿಪ್ಟ್ ರೈಟರಾಗಿ ಪದಗಳನ್ನು ಹೇಗೆ ಬಳಸಬೇಕು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಯಾವಾಗಲೂ ನನ್ನ ಹೃದಯದಲ್ಲಿ ಅವರಿಗೊಂದು ಒಳ್ಳೆಯ ಸ್ಥಾನ ಇದ್ದೇ ಇರುತ್ತದೆ.

Writer - ಸಂದರ್ಶನ: ಶಶಿಕರ ಪಾತೂರು

contributor

Editor - ಸಂದರ್ಶನ: ಶಶಿಕರ ಪಾತೂರು

contributor

Similar News