​ಕೋವಿಡ್-19 ಹಿನ್ನೆಲೆ: ತಾಯಿ- ಮಗು ಸಾವಿನ ಪ್ರಮಾಣ ಹೆಚ್ಚಳ

Update: 2020-06-16 04:34 GMT

ಹೊಸದಿಲ್ಲಿ, ಜೂ.16: ಮಧ್ಯಪ್ರದೇಶದ ರೇವಾ ಜಿಲ್ಲೆಯ ಅನ್ಸಾರಾ ಎಂಬ ಗ್ರಾಮದ ಒಂದು ಕೊಠಡಿಯ ಗುಡಿಸಲಲ್ಲಿ ಪ್ರಿಯಾಂಶಿ ಕೋಲ್ ಎಂಬ ಮಗು ಮೇ 21ರಂದು ಜನಿಸಿತು. 100 ಕಿಲೋಮೀಟರ್ ದೂರದ ಸಂಜಯ್ ಗಾಂಧಿ ವೈದ್ಯಕೀಯ ಆಸ್ಪತ್ರೆಗೆ ತೆರಳಲು ಆ್ಯಂಬುಲೆನ್ಸ್ ಸಿಕ್ಕದ ಕಾರಣದಿಂದ  ಶಿವಜಾನಕಿ (26) ಗುಡಿಸಲಲ್ಲೇ ಮಗುವಿಗೆ ಜನ್ಮ ನೀಡಬೇಕಾಯಿತು.

ಪ್ರಸವ ಸಂಬಂಧಿ ಸಂಕೀರ್ಣತೆಯಿಂದಾಗಿ 23 ದಿನಗಳ ಮಗು ಜೂನ್ 13ರಂದು ಕೊನೆಯುಸಿರೆಳೆಯಿತು. ಆರೋಗ್ಯವಂತ ಮಕ್ಕಳು 2.5 ಕೆ.ಜಿ. ಅಥವಾ ಹೆಚ್ಚು ದೇಹ ತೂಕ ಹೊಂದಿರುತ್ತಾರೆ. ಆದರೆ ಈ ಶಿಶು ಹುಟ್ಟುವಾಗ ಕೇವಲ 2 ಕೆಜಿ ತೂಕವಿತ್ತು.

''ಆ್ಯಂಬುಲೆನ್ಸ್ ಬಾರದಿದ್ದಾಗ ಮಹಿಳೆಯರೆಲ್ಲ ಸೇರಿ ಮನೆಯಲ್ಲೇ ಹೆರಿಗೆ ಮಾಡಿಸಿದರು. ಕೆಲ ದಿನಗಲ್ಲೇ ಹೊಕ್ಕುಳಬಳ್ಳಿಯಲ್ಲಿ ಸ್ರಾವ ಆರಂಭವಾಯಿತು. ಆ್ಯಂಬುಲೆನ್ಸ್‌ಗೆ ಕರೆ ಮಾಡಿದರೂ ಬರಲಿಲ್ಲ. ಮೇ 27ರಂದು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲು ನಾಲ್ಕು ಸಾವಿರ ರೂ. ವೆಚ್ಚ ಮಾಡಿದೆವು. ಆದರೆ ವೈದ್ಯರು ಕೊರೋನ ರೋಗಿಗಳ ಚಿಕಿತ್ಸೆಯಲ್ಲಿ ನಿರತರಾಗಿದ್ದರಿಂದ ನಮ್ಮತ್ತ ಗಮನಹರಿಸಲು ಸಮಯ ಇರಲಿಲ್ಲ. ಆದ್ದರಿಂದ ಮನೆಗೆ ವಾಪಸ್ ಕರೆತಂದೆವು'' ಎಂದು ದಿನಗೂಲಿಯಾಗಿರುವ ತಂದೆ ಮಿಥಿಲೇಶ್ ಕೋರ್ ವಿವರಿಸುತ್ತಾರೆ.

ಮಗುವಿಗೆ ಜ್ವರ ತೀವ್ರವಾಗಿ ಆ್ಯಂಬುಲೆನ್ಸ್‌ಗೆ ಕರೆ ಮಾಡಿದರೂ, ಮೂರು ವಾರದಲ್ಲಿ ಮೂರನೇ ಬಾರಿಯೂ ಬರಲಿಲ್ಲ. ಮತ್ತೆ ಸಂಜಯ ಗಾಂಧಿ ಸ್ಮಾರಕ ಆಸ್ಪತ್ರೆಗೆ ಮಗುವನ್ನು ಕರೆದೊಯ್ದರು. ಅಲ್ಲಿ ಮಗು ಮೃತಪಟ್ಟಿತು. ನನ್ನ ಮಗ ಪಿಯೂಶ್ ಆಸ್ಪತ್ರೆಯಲ್ಲಿ ಹುಟ್ಟಿದ. ಆತ ಸುರಕ್ಷಿತ. ಆಕೆಗೂ ಚಿಕಿತ್ಸೆ ಸಿಕ್ಕಿದ್ದರೆ ಮಗು ಉಳಿಯುತ್ತಿತ್ತು ಎಂದು ಶಿವಜಾನಕಿ ವ್ಯಥೆಪಟ್ಟರು.

ಜಿಲ್ಲೆಯಲ್ಲಿ ಶೇಕಡ 75ರಷ್ಟಿದ್ದ ಸಾಂಸ್ಥಿಕ ಹೆರಿಗೆ ಪ್ರಮಾಣ ಇದೀಗ ಶೇಕಡ 25ಕ್ಕೆ ಕುಸಿದಿದೆ. ಸಮಗ್ರ ಶಿಶು ಅಭಿವೃದ್ಧಿ ಸೇವೆಯನ್ನು ಮಾರ್ಚ್ 15ರಿಂಧ ಸ್ಥಗಿತಗೊಳಿಸಿದ ಬಳಿಕ ಪೌಷ್ಟಿಕಾಂಶ ಮತ್ತು ಲಸಿಕೆ ಸೇವೆಗಳಿಗೆ ಧಕ್ಕೆಯಾಗಿದೆ. ಕೋವಿಡ್ ಸಂಬಂಧಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸಮುದಾಯ ಆರೋಗ್ಯ ಕಾರ್ಯಕರ್ತರು ಲಸಿಕೆ ಹಾಕಲು ಮನೆಗಳಿಗೆ ಭೇಟಿ ನೀಡುವುದು ನಿಂತಿದೆ. ಜಿಲ್ಲಾಮಟ್ಟದ ಸಮೀಕ್ಷೆಯಿಂದ ತಿಳಿದು ಬರುವಂತೆ ಶೇಕಡ 50ರಷ್ಟು ಮಕ್ಕಳು ಹಾಗೂ ಶೇಕಡ 75ರಷ್ಟು ಗರ್ಭಿಣಿಯರಿಗೆ ಅಗತ್ಯ ಪೌಷ್ಟಿಕಾಂಶ ಸಿಗುತ್ತಿಲ್ಲ ಎಂದು ವಿಕಾಸ ಸಂಸದ್ ಸಮಿತಿ ಎಂಬ ಎನ್‌ಜಿಓ ರಾಜ್ಯ ಸಂಯೋಜಕ ಸಚಿನ್ ಜೈನ್ ವಿವರಿಸುತ್ತಾರೆ.

ಇಡೀ ಆರೋಗ್ಯ ವ್ಯವಸ್ಥೆ ಕೋವಿಡ್-19 ಚಿಕಿತ್ಸೆಗೆ ಗಮನ ನೀಡಿರುವ ಕಾರಣದಿಂದ ತಡೆಗಟ್ಟಬಹುದಾದ ಮತ್ತು ಚಿಕಿತ್ಸೆ ಲಭ್ಯವಿರುವ ರೋಗಗಳಿಂದ ಸಾಯುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ತಜ್ಞರು ಹೇಳುತ್ತಾರೆ. ಆದರೆ ಕೋವಿಡ್ ಕಾರಣದಿಂದ ಅಂಕಿ ಅಂಶ ಸಿಗುತ್ತಿಲ್ಲ ಎಂದು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News