ಹಝ್ರತ್ ಖ್ವಾಜಾ ಗರೀಬ್ ನವಾಝ್ ರ ನಿಂದನೆ: ಭಾರೀ ಆಕ್ರೋಶದ ನಂತರ ಕ್ಷಮೆಯಾಚಿಸಿದ ಪತ್ರಕರ್ತ ಅಮೀಷ್ ದೇವಗನ್

Update: 2020-06-17 07:48 GMT

ಹೊಸದಿಲ್ಲಿ: ಟಿವಿ ಕಾರ್ಯಕ್ರಮದಲ್ಲಿ ಪ್ರಸಿದ್ಧ ಸೂಫಿ ಸಂತ ಅಜ್ಮೀರ್ ಶರೀಫ್‍ ನ ಹಝ್ರತ್ ಖ್ವಾಜ ಗರೀಬ್ ನವಾಝ್ ಅವರನ್ನು ಅವಮಾನಿಸಿದ ನ್ಯೂಸ್ 18 ಇಂಡಿಯಾ ವಾಹಿನಿಯ ಆ್ಯಂಕರ್ ಅಮೀಷ್ ದೇವಗನ್ ಭಾರೀ ಆಕ್ರೋಶ ವ್ಯಕ್ತವಾದ ನಂತರ ಕ್ಷಮೆ ಯಾಚಿಸಿದ್ದಾರೆ.

ಅಮೀಷ್ ದೇವಗನ್ ರನ್ನು ಬಂಧಿಸಬೇಕು ಎಂಬ ಕೂಗು ಹೆಚ್ಚಾದಂತೆ ಹಾಗೂ ಟ್ವಿಟರ್‍ ನಲ್ಲಿ #ArrestAmishDevgan ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗುತ್ತಿದ್ದಂತೆಯೇ ಪತ್ರಕರ್ತ ಅನಿವಾರ್ಯವಾಗಿ ಕ್ಷಮೆಯಾಚಿಸಿದ್ದಾರೆ.

ನಕಲಿ ಸುದ್ದಿಗಳನ್ನು ವೈಭವೀಕರಿಸುವುದಕ್ಕಾಗಿ ಸಾಕಷ್ಟು ಟೀಕೆಗಳನ್ನು ಈಗಾಗಲೇ ಎದುರಿಸುತ್ತಿರುವ ಅಮೀಷ್ ದೇವಗನ್ ತಮ್ಮ ಒಂದು ಟಿವಿ ಚರ್ಚಾ ಕಾರ್ಯಕ್ರಮದಲ್ಲಿ ಹಝ್ರತ್ ಖ್ವಾಜಾ ಗರೀಬ್ ನವಾಝ್ ಎಂದೇ ಹೆಚ್ಚಾಗಿ ಕರೆಯಲ್ಪಡುವ 12ನೇ ಶತಮಾನದ ಮುಸ್ಲಿಂ ಸೂಫಿ ಸಂತ ಮೊಯಿನುದ್ದೀನ್ ಚಿಷ್ತಿ ಅವರನ್ನು ‘ಆಕ್ರಮಣಕಾರ' ಹಾಗೂ `ಕಳ್ಳ' ಎಂದಿದ್ದರು.

“ಆಕ್ರಮಣಕಾರಿ ಚಿಷ್ತಿ ಬಂದ, ದಾಳಿಕೋರ ಚಿಷ್ತಿ ಬಂದ, ಕಳ್ಳ ಚಿಷ್ತಿ ಬಂದ ಹಾಗೂ ಸಂಭಾಷಣೆ ಆರಂಭಗೊಂಡಿತು'' ಎಂದು ಟಿವಿ ಶೋ ಒಂದರಲ್ಲಿ ಅವರು ಕೂಗಾಡಿದ್ದರು.

ಈ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ಮೂಡಿಸಿತ್ತು. ನಂತರ #ArrestAmishDevgan ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿತ್ತು. ಮುಂಬೈ ಶಾಸಕ ಜೀಶನ್ ಸಿದ್ದೀಕ್ ಕೂಡ ಟ್ವೀಟ್ ಮಾಡಿ  ದೇವಗನ್ ಅವರನ್ನು ಬಂಧಿಸುವಂತೆ  ಮುಂಬೈ ಪೊಲೀಸರನ್ನು ಟ್ಯಾಗ್ ಮಾಡಿ ಮನವಿ ಮಾಡಿದ್ದರು. ಈ ಎಲ್ಲಾ ಬೆಳವಣಿಗೆಗಳ ನಂತರ ಟ್ವೀಟ್ ಮಾಡಿರುವ ಅಮಿಷ್ ದೇವಗನ್, “ನನ್ನ ಒಂದು ಚರ್ಚಾ ಕಾರ್ಯಕ್ರಮದಲ್ಲಿ , ನಾನು ಖಿಲ್ಜಿ ಬದಲಿ ‘ಚಿಷ್ತಿ’ ಎಂದು ಹೇಳಿದ್ದೆ. ಈ ದೊಡ್ಡ ತಪ್ಪಿಗಾಗಿ ಮತ್ತು ಸೂಫಿ ಸಂತ ಮೊಯಿನುದ್ದೀನ್ ಚಿಷ್ತಿ ಅವರ ಅನುಯಾಯಿಗಳಿಗೆ ದುಃಖವಾಗಿದ್ದರೆ ನಾನು ಕ್ಷಮೆ ಯಾಚಿಸುತ್ತೇನೆ. ನಾನು ಅವರನ್ನು ಗೌರವಿಸುತ್ತೇನೆ. ಈ ಹಿಂದೆ ಅವರ ದರ್ಗಾದಿಂದ ನಾನು ಆಶೀರ್ವಾದವನ್ನೂ ಪಡೆದಿದ್ದೆ. ಈ ತಪ್ಪಿಗಾಗಿ ನಾನು ವಿಷಾದಿಸುತ್ತೇನೆ” ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News