ಭಾರತದ ಆರ್ಥಿಕ ಬೆಳವಣಿಗೆ ದರ ಋಣಾತ್ಮಕ: ಅಮೆರಿಕದ ಫಿಚ್ ರೇಟಿಂಗ್ಸ್‌

Update: 2020-06-18 15:07 GMT

ಹೊಸದಿಲ್ಲಿ, ಜೂ.18: ಭಾರತದ ಆರ್ಥಿಕ ಬೆಳವಣಿಗೆಯ ದರವನ್ನು ಪರಿಷ್ಕರಿಸಿರುವ ಅಮೆರಿಕದ ಫಿಚ್ ರೇಟಿಂಗ್ಸ್, ಕೊರೋನ ವೈರಸ್ ಹಾವಳಿ ಆರ್ಥಿಕ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿರುವುದರಿಂದ ಆರ್ಥಿಕ ಬೆಳವಣಿಗೆಯ ದರ ಋಣಾತ್ಮಕವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಭಾರತದ ಆರ್ಥಿಕ ಬೆಳವಣಿಗೆಯ ದರ ಸ್ಥಿರವಾಗಿರಲಿದೆ ಎಂದು ಈ ಹಿಂದೆ ಅಂದಾಜು ಮಾಡಲಾಗಿತ್ತು. 2020ರ ಮಾರ್ಚ್ 25ರಿಂದ ಜಾರಿಯಲ್ಲಿರುವ ಕಠಿಣ ಲಾಕ್‌ಡೌನ್ ಕ್ರಮಗಳಿಂದಾಗಿ 2021ರ ಮಾರ್ಚ್‌ಗೆ ಅಂತ್ಯವಾಗುವ ವಿತ್ತ ವರ್ಷದಲ್ಲಿ ದೇಶದ ಆರ್ಥಿಕ ಚಟುವಟಿಕೆ 5%ದಷ್ಟು ಕುಗ್ಗಲಿದೆ . ಆದರೆ 2022ರ ವಿತ್ತೀಯ ವರ್ಷದಲ್ಲಿ 9.5% ಕ್ಕೆ ಪುಟಿದೇಳಲಿದೆ ಎಂದು ಫಿಚ್ ರೇಟಿಂಗ್‌ನ ಮುನ್ನೋಟ ತಿಳಿಸಿದೆ.

ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಗೊಳಿಸಿದ ಬಳಿಕ ಕೊರೋನವೈರಸ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಮುನ್ಸೂಚನೆ ಬದಲಾಗುವ ಸಾಧ್ಯತೆಯಿದೆ . ವಿಶೇಷವಾಗಿ ಆರ್ಥಿಕ ಕ್ಷೇತ್ರದಲ್ಲಿ ಕೊರೋನ ವೈರಸ್‌ನ ಶಾಶ್ವತ ಪರಿಣಾಮವನ್ನು ಅವಲಂಬಿಸಿ, ಈ ಹಿಂದೆ ಅಂದಾಜಿಸಿದಂತೆ ಭಾರತ 6%ದಿಂದ 7%ದ ಸುಸ್ಥಿರ ಬೆಳವಣಿಗೆ ದರಕ್ಕೆ ಮರಳಬಹುದೇ ಎಂಬುದನ್ನು ಕಾದು ನೋಡಬೇಕಾಗಿದೆ ಎಂದು ಫಿಚ್ ರೇಟಿಂಗ್ಸ್ ತಿಳಿಸಿದೆ.

ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಜಾಗತಿಕ ಆರ್ಥಿಕ ಚಟುವಟಿಕೆಗಳಿಗೆ ಲಾಕ್‌ಡೌನ್ ಸಂಬಂಧಿತ ಆಘಾತ ಎರಗಿದ ಪರಿಣಾಮ, ಈ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕತೆ 5% ಕುಸಿಯಲಿದೆ ಎಂದು ಮೇ 26ರಂದು ಫಿಚ್ ರೇಟಿಂಗ್ಸ್ ಭವಿಷ್ಯ ನುಡಿದಿತ್ತು. ಬೆಳವಣಿಗೆಯ ದರ 2% ಹೆಚ್ಚಲಿದೆ ಎಂದು ಎಪ್ರಿಲ್ ಆರಂಭದಲ್ಲಿ ಅಂದಾಜಿಸಲಾಗಿದ್ದರೆ, ಬೆಳವಣಿಗೆ ದರ 0.8% ರಷ್ಟು ಹೆಚ್ಚಲಿದೆ ಎಂದು ಎಪ್ರಿಲ್ ಅಂತ್ಯದಲ್ಲಿ ಅಂದಾಜಿಸಲಾಗಿತ್ತು. ಆದರೆ ಮೇ 26ರ ವೇಳೆಗೆ ಬೆಳವಣಿಗೆಯ ದರದಲ್ಲಿ ತೀವ್ರ ಕುಸಿತ ಕಂಡುಬಂದಿದೆ.

ಈ ಮಧ್ಯೆ, ಕೊರೋನ ಸೋಂಕಿನ ಕಾರಣದಿಂದ ಈ ವಿತ್ತ ವರ್ಷ ಭಾರತದ ಆರ್ಥಿಕತೆ 4% ಕುಸಿತವಾಗಲಿದೆ ಎಂದು ಏಶ್ಯನ್ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಅಂದಾಜಿಸಿದೆ. ಅಲ್ಲದೆ ಕೊರೋನ ಸೋಂಕು ನಿಯಂತ್ರಿಸಲು ಕೈಗೊಂಡಿರುವ ನಿರ್ಬಂಧಕ ಕ್ರಮಗಳಿಂದ ಆರ್ಥಿಕ ಚಟುವಟಿಕೆಗಳ ಮೇಲೆ ಹೊಡೆತ ಬಿದ್ದಿದ್ದು ಬಾಹ್ಯ ಬೇಡಿಕೆ ದುರ್ಬಲವಾಗಿರುವುದರಿಂದ ‘ಡೆವಲಪಿಂಗ್ ಏಶ್ಯಾ’ದ ಬೆಳವಣಿಗೆ ಬಹುತೇಕ ಸ್ಥಗಿತವಾಗಲಿದೆ ಎಂದು ಎಡಿಬಿ ಹೇಳಿದೆ.

ಬ್ಯಾಂಕ್‌ನ ಸದಸ್ಯರಾಗಿರುವ 40ಕ್ಕೂ ಹೆಚ್ಚು ರಾಷ್ಟ್ರಗಳ ಗುಂಪಿಗೆ ‘ಡೆವಲಪಿಂಗ್ ಏಶ್ಯಾ’ ಎಂಬ ಹೆಸರಿದೆ. ಲಾಕ್‌ಡೌನ್ ನಿಧಾನಕ್ಕೆ ಸಡಿಲಗೊಂಡು ಆಯ್ದ ಆರ್ಥಿಕ ಚಟುವಟಿಕೆಗಳಿಗೆ ಚಾಲನೆ ದೊರಕಿದ್ದರೂ, ಈ ವರ್ಷ ಏಶ್ಯಾ ಮತ್ತು ಪೆಸಿಫಿಕ್ ವಲಯದಲ್ಲಿ ಕೊರೋನ ಸೋಂಕಿನ ಮಾರಕ ಪ್ರಹಾರದ ಪ್ರಭಾವ ಮುಂದುವರಿಯಲಿದೆ ಎಂದು ಎಡಿಬಿಯ ಮುಖ್ಯ ಅರ್ಥಶಾಸ್ತ್ರಜ್ಞ ಯಸುಯುಕಿ ಸವಾದ ಹೇಳಿದ್ದಾರೆ.

ಕೊರೋನ ಸೋಂಕಿನ ಋಣಾತ್ಮಕ ಪರಿಣಾಮಗಳನ್ನು ಮೊಟಕುಗೊಳಿಸುವ ಕಾರ್ಯನೀತಿಗಳನ್ನು ಸರಕಾರಗಳು ಕೈಗೊಳ್ಳಬೇಕು ಮತ್ತು ಕೊರೋನ ಸೋಂಕಿನ ಸ್ಫೋಟದಿಂದ ಇನ್ನಷ್ಟು ಆಘಾತವಾಗದಂತೆ ಖಾತರಿಪಡಿಸಬೇಕು ಎಂದವರು ಹೇಳಿದ್ದಾರೆ.

ಲಾಕ್‌ಡೌನ್‌ನಿಂದ ಆರ್ಥಿಕ ಬೆಳವಣಿಗೆಗೆ ಪೆಟ್ಟು ಹಲವು ಏಜೆನ್ಸಿಗಳು ಈ ವಿತ್ತ ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯ ದರವನ್ನು ತಗ್ಗಿಸಿವೆ. ಕೊರೋನ ವೈರಸ್ ನಿಯಂತ್ರಣಕ್ಕೆ ಜಾರಿಗೊಳಿಸಿದ ಲಾಕ್‌ಡೌನ್‌ನಿಂದಾಗಿ 2020-21ರ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆ 3.2%ದಷ್ಟು ಕುಂಠಿತವಾಗಲಿದೆ ಎಂದು ಜೂನ್ 8ರಂದು ವಿಶ್ವಬ್ಯಾಂಕ್ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News