ರಥಯಾತ್ರೆಗೆ ಅವಕಾಶ ನೀಡಿದರೆ ಜಗನ್ನಾಥ ದೇವರು ನಮ್ಮನ್ನು ಕ್ಷಮಿಸುವುದಿಲ್ಲ: ಸುಪ್ರೀಂ ಕೋರ್ಟ್

Update: 2020-06-18 15:09 GMT

 ಹೊಸದಿಲ್ಲಿ, ಜೂ.18: ಒಡಿಶಾದ ಪುರಿಯಲ್ಲಿರುವ ಜಗನ್ನಾಥ ದೇವಸ್ಥಾನದ ರಥಯಾತ್ರೆಗೆ ಅವಕಾಶ ನೀಡಬೇಕೆಂದು ಕೋರಿ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸಿರುವ ಸುಪ್ರೀಂಕೋರ್ಟ್, ನಾವು ಅವಕಾಶ ನೀಡಿದರೆ ಜಗನ್ನಾಥ ದೇವರು ನಮ್ಮನ್ನು ಕ್ಷಮಿಸಲಿಕ್ಕಿಲ್ಲ ಎಂದು ಹೇಳಿದೆ.

ಕೊರೋನ ಸೋಂಕಿನ ಕಾರಣದಿಂದ ಈ ಬಾರಿಯ ರಥೋತ್ಸವಕ್ಕೆ ಅವಕಾಶ ನೀಡಲಾಗದು ಎಂದು ಭಾರತದ ಮುಖ್ಯ ನ್ಯಾಯಾಧೀಶ ಎಸ್‌ಎ ಹೇಳಿದರು. ರಥಯಾತ್ರೆ ಜೂನ್ 23ರಂದು ಆರಂಭವಾಗಬೇಕಿತ್ತು. ಕೊರೋನ ಸೋಂಕಿನ ಸಮಸ್ಯೆ ತಾರಕಕ್ಕೆ ಏರಿರುವ ಈ ಸಂದರ್ಭದಲ್ಲಿ ರಥಯಾತ್ರೆಯ ಕಾರಣ ಭಾರೀ ಜನಸಂದಣಿ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಬಹುದು. ಆದ್ದರಿಂದ ಜನರ ಆರೋಗ್ಯ ಮತ್ತು ನಾಗರಿಕರ ಸುರಕ್ಷತೆಯ ದೃಷ್ಟಿಯಿಂದ ರಥಯಾತ್ರೆಗೆ ಅನುಮತಿ ನೀಡದಿರಲು ನಿರ್ಧರಿಸಲಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.

ಜನಸಂದಣಿಯ ಪ್ರದೇಶಗಳಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಕಷ್ಟವಾಗಿರುವುದರಿಂದ ಮತ್ತು ಇಂತಹ ಪ್ರದೇಶಗಳಲ್ಲಿ ಕೊರೋನ ಸೋಂಕು ಶೀಘ್ರ ಹರಡುವ ಸಾಧ್ಯತೆಯಿರುವುದರಿಂದ ರಥಯಾತ್ರೆಗೆ ಅವಕಾಶ ನೀಡಬಾರದು ಎಂದು ಆರೋಗ್ಯ ವೃತ್ತಿಪರರು ಸಲಹೆ ನೀಡಿದ್ದರು. ಒಡಿಶಾದ ಕರಾವಳಿ ಜಿಲ್ಲೆಯಲ್ಲಿ ನಡೆಯುವ ವಾರ್ಷಿಕ ರಥಯಾತ್ರೆಯಲ್ಲಿ ಸುಮಾರು 10 ಲಕ್ಷ ಜನ ಸೇರುತ್ತಾರೆ ಮತ್ತು ರಥಯಾತ್ರೆ 10ರಿಂದ 12 ದಿನ ನಡೆಯುತ್ತದೆ ಎಂದು ಒಡಿಶಾ ವಿಕಾಸ ಪರಿಷದ್ ಎಂಬ ಸ್ವಯಂ ಸೇವಾ ಸಂಘಟನೆ ನ್ಯಾಯಾಲಯಕ್ಕೆ ತಿಳಿಸಿತು. ಇದು ಖಂಡಿತಾ ಗಂಭೀರ ವಿಷಯ. ಸಮಾರಂಭದಲ್ಲಿ 10 ಸಾವಿರ ಜನ ಸೇರಿದರೂ ಈಗಿನ ಪರಿಸ್ಥಿತಿಯಲ್ಲಿ ಗಂಭೀರ ವಿಷಯವಾಗಿದೆ ಎಂದು ಮುಖ್ಯ ನ್ಯಾಯಾಧೀಶರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News