ರಾಜ್ಯಸಭೆ : ಬಿಜೆಪಿಗೆ 11 ಸ್ಥಾನ

Update: 2020-06-20 04:28 GMT

ಹೊಸದಿಲ್ಲಿ : ರಾಜ್ಯಸಭೆಯ 19 ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ 8 ಸ್ಥಾನಗಳನ್ನು ಗೆದ್ದಿದೆ. ಇದಕ್ಕೂ ಮುನ್ನ ಬಿಜೆಪಿಯ ಮೂವರು ಅವಿರೋಧವಾಗಿ ಆಯ್ಕೆಯಾಗಿದ್ದರು.

ಮಾಜಿ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ, ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್ ಮತ್ತು ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಶಿಬು ಸೊರೆನ್ ಶುಕ್ರವಾರ ಜಯಶಾಲಿಗಳಾದ ಪ್ರಮುಖರು. ಗುಜರಾತ್ ಹಾಗೂ ಮಣಿಪುರದಲ್ಲಿ ಚುನಾವಣಾ ಅಕ್ರಮಗಳ ಆರೋಪ, ನಾಟಕೀಯ ಬೆಳವಣಿಗೆಗಳ ಬಳಿಕ ತಡರಾತ್ರಿ ಎಣಿಕೆ ಆರಂಭವಾಗಿದೆ.

ಇದುವರೆಗೆ ರಾಜ್ಯಸಭೆಯಲ್ಲಿ 90 ಸದಸ್ಯರನ್ನು ಹೊಂದಿದ್ದ ಎನ್‌ಡಿಎ ಮೈತ್ರಿಕೂಟದ ಸದಸ್ಯ ಬಲ ಇದೀಗ 101ಕ್ಕೇರಿದಂತಾಗಿದೆ. 245 ಸದಸ್ಯ ಬಲದ ಸದನದಲ್ಲಿ ಬಹುಮತ ಸಾಧಿಸಲು ಇನ್ನೂ 22 ಸ್ಥಾನಗಳ ಕೊರತೆ ಇದೆ. ರಾಜ್ಯಸಭೆಯಲ್ಲಿ ಎನ್‌ಡಿಎ ಸಂಖ್ಯಾಬಲ 100ರ ಗಡಿ ದಾಟಿರುವುದು ಇದೇ ಮೊದಲು. ಬಿಜೆಪಿ ಏಕಾಂಗಿಯಾಗಿ 86 ಸ್ಥಾನಗಳನ್ನು ಹೊಂದಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ 65 ಸ್ಥಾನಗಳನ್ನು ಹೊಂದಿದೆ.

ಬಿಜು ಜನತಾದಳ, ಎಐಎಡಿಎಂಕೆ, ವೈಎಸ್‌ಆರ್ ಕಾಂಗ್ರೆಸ್ ಪಕ್ಷಗಳು ಎನ್‌ಡಿಎ ಬೆಂಬಲಕ್ಕೆ ನಿಂತರೆ ಎನ್‌ಡಿಎಗೆ ಬಹುಮತ ಸಾಧ್ಯವಾಗಲಿದ್ದು, ಮಸೂದೆಗಳು ಸುಲಲಿತವಾಗಿ ಆಂಗೀಕಾರವಾಗಲಿವೆ. ಲೋಕಸಭೆಯಲ್ಲಿ ಈಗಾಗಲೇ ಆಡಳಿತಾರೂಢ ಪಕ್ಷಕ್ಕೆ ಭರ್ಜರಿ ಬಹುಮತವಿದೆ.

ಒಟ್ಟು 10 ರಾಜ್ಯಗಳ 24 ಸ್ಥಾನಗಳಿಗೆ ಮಾರ್ಚ್ 26ಕ್ಕೆ ನಡೆಯಬೇಕಿದ್ದ ಚುನಾವಣೆಯನ್ನು ಲಾಕ್‌ಡೌನ್ ಕಾರಣದಿಂದ ಜೂನ್ 19ಕ್ಕೆ ಮುಂದೂಡಲಾಗಿತ್ತು. ಕರ್ನಾಟಕದ ನಾಲ್ಕು ಹಾಗೂ ಅರುಣಾಚಲ ಪ್ರದೇಶದ ಒಂದು ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿತ್ತು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕರ್ನಾಟಕದಿಂದ ಅವಿರೋಧವಾಗಿ ಆಯ್ಕೆಯಾಗಿದ್ದರು.

ಗುಜರಾತ್‌ನಲ್ಲಿ ಆಡಳಿತಾರೂಢ ಬಿಜೆಪಿ ಮೂರು ಸ್ಥಾನಗಳನ್ನು ಗೆದ್ದರೆ ಕಾಂಗ್ರೆಸ್ ಒಂದು ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಮಾರ್ಚ್‌ನಿಂದೀಚೆಗೆ ಎಂಟು ಮಂದಿ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದರಿಂದ ಎರಡನೇ ಸ್ಥಾನ ಗೆಲ್ಲುವ ಕಾಂಗ್ರೆಸ್ ಕನಸು ಭಗ್ನಗೊಂಡಿತ್ತು. ವಿಭಿನ್ನ ಕಾರಣಕ್ಕಾಗಿ ಎರಡು ಬಿಜೆಪಿ ಮತಗಳನ್ನು ಅಸಿಂಧು ಎಂದು ಘೋಷಿಸುವಂತೆ ಕಾಂಗ್ರೆಸ್ ಆಗ್ರಹಿಸಿದ ಹಿನ್ನೆಲೆಯಲ್ಲಿ ಫಲಿತಾಂಶ ಘೋಷಣೆ ವಿಳಂಬವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News