'ಭಾರತದ ಗಡಿಯೊಳಕ್ಕೆ ಯಾರೂ ಪ್ರವೇಶಿಸಿಲ್ಲ' ಎಂಬ ಪ್ರಧಾನಿ ಹೇಳಿಕೆ ಬಗ್ಗೆ ಸರಕಾರದಿಂದ ಸ್ಪಷ್ಟೀಕರಣ

Update: 2020-06-20 15:16 GMT

ಹೊಸದಿಲ್ಲಿ,ಜೂ.20: ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಿ ಸೈನಿಕರ ನಡುವಿನ ಹಿಂಸಾತ್ಮಕ ಘರ್ಷಣೆಗಳ ಹಿನ್ನೆಲೆಯಲ್ಲಿ ಗುರುವಾರ ನಡೆದಿದ್ದ ಸರ್ವಪಕ್ಷ ಸಭೆಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗಳಿಗೆ ಕುಚೇಷ್ಟೆಯ ವ್ಯಾಖ್ಯಾನವನ್ನು ನೀಡುವ ಪ್ರಯತ್ನಗಳು ನಡೆಯುತ್ತಿವೆ ಎಂದು ಸರಕಾರವು ಶನಿವಾರ ಹೇಳಿದೆ.

ವಾಸ್ತವ ಗಡಿ ರೇಖೆ (ಎಲ್‌ಎಸಿ) ಉಲ್ಲಂಘನೆಗೆ ಸಂಬಂಧಿಸಿದಂತೆ,ಚೀನಿ ಪಡೆಗಳು ಎಲ್‌ಎಸಿಯ ಆಚೆಗೆ ಅದಕ್ಕೆ  ಸಮೀಪವೇ ಕೆಲ ನಿರ್ಮಾಣ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು ಮತ್ತು ಅದನ್ನು ನಿಲ್ಲಿಸಲು ನಿರಾಕರಿಸಿದ್ದವು. ಇದು ಜೂ.15ರಂದು ಗಲ್ವಾನ್ ಕಣಿವೆಯಲ್ಲಿ ಹಿಂಸಾಚಾರಕ್ಕೆ ಕಾರಣವಾಗಿತ್ತು ಎಂದು ಸ್ಪಷ್ಟವಾಗಿ ಹೇಳಲಾಗಿದೆ ಎಂದು ಪ್ರಧಾನ ಮಂತ್ರಿಗಳ ಕಚೇರಿ (ಪಿಎಂಒ) ಹೇಳಿಕೆಯಲ್ಲಿ ತಿಳಿಸಿದೆ.

 20 ಭಾರತೀಯ ಯೋಧರ ಬಲಿದಾನಕ್ಕೆ ಕಾರಣವಾಗಿದ್ದ ಹಿಂಸಾತ್ಮಕ ಘರ್ಷಣೆಗಳಿಗೆ ಕಾರಣವಾಗಿದ್ದ ಎಲ್‌ಎಸಿಯಲ್ಲಿನ ಸ್ಥಿತಿಯ ಬಗ್ಗೆ ಸರಕಾರವು ಪೂರ್ಣ ವಿವರಗಳನ್ನು ನೀಡಿಲ್ಲ ಎಂದು ಪ್ರತಿಪಕ್ಷಗಳ ದಾಳಿಗಳ ನಡುವೆಯೇ ಪ್ರಧಾನಿ ಹೇಳಿಕೆ ಕುರಿತು ಸರಕಾರದ ಈ ಸಮಜಾಯಿಷಿ ಹೊರಬಿದ್ದಿದೆ.

‘ಪ್ರಧಾನಿಯವರು ಭಾರತದ ಭೂಪ್ರದೇಶವನ್ನು ಚೀನಿ ಆಕ್ರಮಣಕ್ಕೆ ಒಪ್ಪಿಸಿದ್ದಾರೆ. ಚೀನಿಯರು ಭಾರತದ ಭೂಪ್ರದೇಶದಲ್ಲಿ ಪ್ರವೇಶಿಸಿರಲಿಲ್ಲ ಎಂದಾದರೆ ನಮ್ಮ ಯೋಧರೇಕೆ ಕೊಲ್ಲಲ್ಪಟ್ಟರು ಮತ್ತು ಅವರನ್ನು ಎಲ್ಲಿ ಕೊಲ್ಲಲಾಯಿತು?’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶನಿವಾರ ಬೆಳಿಗ್ಗೆ ಟ್ವೀಟಿಸಿದ್ದರು.

ಎಲ್‌ಎಸಿಯಲ್ಲಿನ ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಿಸಲು ಚೀನಾದ ಪ್ರಯತ್ನ ಹಿಂಸಾತ್ಮಕ ಘರ್ಷಣೆಗಳಿಗೆ ಕಾರಣವಾಗಿತ್ತು ಎಂದು ಗಲ್ವಾನ್ ಘಟನೆ ನಡೆದ ಮರುದಿನ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೇಳಿತ್ತು.

ಚೀನಿ ಸೈನಿಕರು ಭಾರತದ ಭೂಪ್ರದೇಶವನ್ನು ಪ್ರವೇಶಿಸಿರಲಿಲ್ಲ ಎಂದಾದರೆ ಯಥಾಸ್ಥಿತಿಯಲ್ಲಿ ಬದಲಾವಣೆ ಎಂದರೆ ಏನು ಎನ್ನುವುದನ್ನು ಪ್ರಧಾನಿ ಮೋದಿ ಪೂರ್ಣವಾಗಿ ವಿವರಿಸಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.

‘ಪರಿಸ್ಥಿತಿಗೆ ಸಂಬಂಧಿಸಿದಂತೆ ಪ್ರಧಾನಿಯವರ ಹೇಳಿಕೆ ಸರಿಯಾಗಿಯೇ ಇದೆ. ನಮ್ಮ ಸಶಸ್ತ್ರ ಪಡೆಗಳ ಶೌರ್ಯದಿಂದಾಗಿ ಚೀನಿ ಸೈನಿಕರು ಎಲ್‌ಎಸಿಯನ್ನು ದಾಟಿರಲಿಲ್ಲ ಎನ್ನುವುದು ಪ್ರಧಾನಿಯವರ ಅಭಿಪ್ರಾಯವಾಗಿತ್ತು. 16 ಬಿಹಾರ ರೆಜಿಮೆಂಟ್‌ನ ಯೋಧರ ತ್ಯಾಗಗಳು ಎಲ್‌ಎಸಿಯಲ್ಲಿ ನೆಲೆಗಳನ್ನು ನಿರ್ಮಿಸುವ ಮತ್ತು ಎಲ್‌ಎಸಿಯನ್ನು ಉಲ್ಲಂಘಿಸುವ ಚೀನಾದ ಪ್ರಯತ್ನಗಳನ್ನು ವಿಫಲಗೊಳಿಸಿದ್ದವು’ ಎಂದು ಸರಕಾರವು ಹೇಳಿಕೆಯಲ್ಲಿ ತಿಳಿಸಿದೆ.

   ಭಾರತೀಯ ಭೂಪ್ರದೇಶ ಯಾವುದು ಎನ್ನುವುದು ಭಾರತದ ಭೂಪಟದಲ್ಲಿ ಸ್ಪಷ್ಟವಾಗಿದೆ ಮತ್ತು ಈ ಸರಕಾರವು ಅದಕ್ಕೆ ದೃಢವಾದ ಬದ್ಧತೆಯನ್ನು ಹೊಂದಿದೆ. ಕಳೆದ 60 ವರ್ಷಗಳಲ್ಲಿ ಭಾರತದ 43,000 ಚ.ಕಿ.ಮೀ.ಗಿಂತ ಹೆಚ್ಚಿನ ಪ್ರದೇಶವು ಹೇಗೆ ಚೀನಿಯರ ಪಾಲಾಗಿದೆ ಎನ್ನುವುದನ್ನು ಸರ್ವಪಕ್ಷ ಸಭೆಯಲ್ಲಿ ವಿವರಿಸಲಾಗಿದೆ. ಎಲ್‌ಎಸಿಯಲ್ಲಿ ಯಾವುದೇ ಏಕಪಕ್ಷೀಯ ಬದಲಾವಣೆಗೆ ಈ ಸರಕಾರವು ಅವಕಾಶ ನೀಡುವುದಿಲ್ಲ ಎನ್ನುವುದನ್ನೂ ಸ್ಪಷ್ಟಪಡಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ

‘ನಮ್ಮ ವೀರಯೋಧರು ನಮ್ಮ ಗಡಿಗಳನ್ನು ರಕ್ಷಿಸುತ್ತಿರುವಾಗ ಅವರ ನೈತಿಕ ಸ್ಥೈರ್ಯವನ್ನು ಉಡುಗಿಸಲು ಅನಗತ್ಯ ವಿವಾದವನ್ನು ಸೃಷ್ಟಿಸುತ್ತಿರುವುದು ದುರದೃಷ್ಟಕರವಾಗಿದೆ. ಆದಾಗ್ಯೂ ರಾಷ್ಟ್ರೀಯ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಸರ್ವಪಕ್ಷ ಸಭೆಯಲ್ಲಿ ಸರಕಾರ ಮತ್ತು ಸಶಸ್ತ್ರ ಪಡೆಗಳಿಗೆ ಸ್ಪಷ್ಟ ಬೆಂಬಲ ವ್ಯಕ್ತವಾಗಿದೆ. ದುರುದ್ದೇಶಪೂರಿತ ಪ್ರಚಾರವು ಭಾರತೀಯರ ಏಕತೆಗೆ ಯಾವುದೇ ಚ್ಯುತಿಯನ್ನುಂಟು ಮಾಡುವುದಿಲ್ಲ ಎಂಬ ವಿಶ್ವಾಸ ನಮಗಿದೆ’ ಎಂದು ಸರಕಾರವು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News