ಮೂರು ವರ್ಷಗಳಾದರೂ ವಿಜಯ ಮಲ್ಯ ಅರ್ಜಿಯನ್ನೇಕೆ ವಿಚಾರಣೆಗಿಟ್ಟಿರಲಿಲ್ಲ?

Update: 2020-06-20 14:45 GMT

ಹೊಸದಿಲ್ಲಿ,ಜೂ.20: ತನ್ನ ಮಕ್ಕಳಿಗೆ 40 ಮಿಲಿಯನ್ ಡಾಲರ್‌ಗಳನ್ನು ವರ್ಗಾಯಿಸಿದ್ದಕ್ಕಾಗಿ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ತನ್ನನ್ನು ತಪ್ಪಿತಸ್ಥನೆಂದು ಎತ್ತಿಹಿಡಿದಿರುವ ಆದೇಶದ ಮರುಪರಿಶೀಲನೆ ಕೋರಿ ಉದ್ಯಮಿ ವಿಜಯ ಮಲ್ಯ ಸಲ್ಲಿಸಿದ್ದ ಅರ್ಜಿಯನ್ನು ಕಳೆದ ಮೂರು ವರ್ಷಗಳಿಂದ ಸಂಬಂಧಿತ ನ್ಯಾಯಾಲಯದ ಮುಂದೆ ವಿಚಾರಣೆಗಾಗಿ ಏಕೆ ಇಟ್ಟಿರಲಿಲ್ಲ ಎನ್ನುವುದಕ್ಕೆ ವಿವರಣೆ ಸಲ್ಲಿಸುವಂತೆ ಸರ್ವೋಚ್ಚ ನ್ಯಾಯಾಲಯವು ತನ್ನ ರಿಜಿಸ್ಟ್ರಿಗೆ ನಿರ್ದೇಶ ನೀಡಿದೆ. ಸರ್ವೋಚ್ಚ ನ್ಯಾಯಾಲಯವು 2017,ಮೇ 17ರಂದು ಸದ್ರಿ ಆದೇಶವನ್ನು ಹೊರಡಿಸಿತ್ತು.

ಜೂ.16ರಂದು ತಮ್ಮ ಚೇಂಬರ್‌ನಲ್ಲಿ ಮಲ್ಯರ ಮರುಪರಿಶೀಲನೆ ಅರ್ಜಿಯನ್ನು ಕೈಗೆತ್ತಿಕೊಂಡಿದ್ದ ನ್ಯಾಯಮೂರ್ತಿಗಳಾದ ಯು.ಯು.ಲಲಿತ್ ಮತ್ತು ಅಶೋಕ್ ಭೂಷಣ್ ಅವರ ಪೀಠವು,ಕಳೆದ ಮೂರು ವರ್ಷಗಳಿಂದ ಮರುಪರಿಶೀಲನೆ ಅರ್ಜಿಗೆ ಸಂಬಂಧಿಸಿದ ಕಡತವನ್ನು ನಿರ್ವಹಿಸಿದ್ದ ಅಧಿಕಾರಿಗಳ ಹೆಸರುಗಳು ಸೇರಿದಂತೆ ಎಲ್ಲ ವಿವರಗಳನ್ನು ತನಗೆ ಒದಗಿಸುವಂತೆ ಸರ್ವೋಚ್ಚ ನ್ಯಾಯಾಲಯದ ರಿಜಿಸ್ಟ್ರಿಗೆ ಆದೇಶಿಸಿದೆ.

ಮರುಪರಿಶೀಲನೆ ಅರ್ಜಿಯನ್ನು ವಿಚಾರಣೆಗಿಡುವಲ್ಲಿ ಅನಗತ್ಯ ವಿಳಂಬವನ್ನು ಗಂಭೀರವಾಗಿ ಪರಿಗಣಿಸಿರುವ ಪೀಠವು,ಎರಡು ವಾರಗಳಲ್ಲಿ ವಿವರಗಳನ್ನು ಸಲ್ಲಿಸುವಂತೆ ರಿಜಿಸ್ಟ್ರಿಗೆ ತಿಳಿಸಿದೆ.

  ಬ್ಯಾಂಕುಗಳಿಗೆ 9,000 ಕೋ.ರೂ.ಗೂ ಅಧಿಕ ಮೊತ್ತವನ್ನು ವಂಚಿಸಿರುವ ಆರೋಪವನ್ನು ಎದುರಿಸುತ್ತಿರುವ ಮಲ್ಯ ವಿವಿಧ ನ್ಯಾಯಾಂಗ ಆದೇಶಗಳನ್ನು ಉಲ್ಲಂಘಿಸಿ ಬ್ರಿಟಿಷ್ ಕಂಪನಿ ಡಿಯಾಜಿಯೊದಿಂದ ತಾನು ಸ್ವೀಕರಿಸಿದ್ದ 40 ಮಿ.ಡಾ.ಹಣವನ್ನು ತನ್ನ ಮಕ್ಕಳಿಗೆ ವರ್ಗಾಯಿಸಿದ್ದಾರೆ ಎಂದು ದೂರಿ ಎಸ್‌ಬಿಐ ನೇತೃತ್ವದ ಬ್ಯಾಂಕುಗಳ ಕೂಟವು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಮಲ್ಯ ವಿರುದ್ಧ ಆದೇಶವನ್ನು ಹೊರಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News