ಕೋವಿಡ್-19 ವಿರುದ್ಧ ಹೋರಾಡಲು ಯೋಗ ನೆರವಾಗುತ್ತದೆ: ಪ್ರಧಾನಿ ಮೋದಿ

Update: 2020-06-21 05:07 GMT

   ಹೊಸದಿಲ್ಲಿ, ಜೂ.21: ಅಂತರ್‌ರಾಷ್ಟ್ರೀಯ ಯೋಗ ದಿನದಂದು ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಯೋಗದ ಲಾಭವನ್ನು ಒತ್ತಿ ಹೇಳಿದರು. ಕೊರೋನ ವೈರಸ್ ಸಾಂಕ್ರಾಮಿಕ ರೋಗದ ವಿರುದ್ದ ಹೋರಾಡಲು ವಿಶ್ವಕ್ಕೆ ಇದು ಹೇಗೆ ನೆರವಾಗುತ್ತಿದೆ ಎಂದು ವಿವರಿಸಿದ್ದಾರೆ.

"ಯೋಗ ನಮಗೆ ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ನೆರವಾಗುತ್ತಿದೆ. ಪ್ರಾಣಾಯಾಮವು ರೋಗ ನಿರೋಧಕ ಶಕ್ತಿಯನ್ನು ಸುಧಾರಿಸಲು ನೆರವಾಗುತ್ತದೆೆ ಹಾಗೂ ಉಸಿರಾಟದ ಸಮಸ್ಯೆಯನ್ನು ನಿವಾರಿಸುತ್ತದೆ'' ಎಂದು ಮೋದಿ ಹೇಳಿದ್ದಾರೆ.

ದೇಶದ ಜನತೆ ತಮ್ಮ ದೈನಂದಿನ ಜೀವನದ ಭಾಗವಾಗಿ ಯೋಗವನ್ನು ಮಾಡಬೇಕೆಂದು ವಿನಂತಿಸಿದ ಮೋದಿ, "ನಾವೆಲ್ಲರೂ ಕುಟುಂಬ ಸದಸ್ಯರೊಂದಿಗೆ ಮನೆಯಲ್ಲಿ ಯೋಗ ಮಾಡಬೇಕು. ಅಂತರ್‌ರಾಷ್ಟ್ರೀಯ ಯೋಗ ದಿನ ಸಾರ್ವತ್ರಿಕ ಭ್ರಾತೃತ್ವ ಸಂದೇಶವನ್ನು ನೀಡುತ್ತದೆ. ಯೋಗ ಮಾನಸಿಕ ಶಾಂತಿ ನೀಡುತ್ತದೆ. ಆರೋಗ್ಯಕರ ವಾತಾವರಣವನ್ನು ಸೃಷ್ಟಿಸಲಿದೆ. ಇದು ಏಕತೆಯ ಶಕ್ತಿಯಾಗಿ ಹೊರಹೊಮ್ಮಿದೆ ಹಾಗೂ ಮಾನವೀಯ ಬಂಧವನ್ನು ಮತ್ತಷ್ಟು ಗಾಢವಾಗಿಸುತ್ತದೆ. ಜನಾಂಗ,ಬಣ್ಣ, ಲಿಂಗ ,ನಂಬಿಕೆ ಹಾಗೂ ದೇಶವನ್ನು ಮೀರಿರುವ ಯೋಗವನ್ನು ಯಾರೂ ಕೂಡ ಮಾಡಬಹುದು'' ಎಂದು ಮೋದಿ ಹೇಳಿದ್ದಾರೆ.

"ಕೊರೋನ ವೈರಸ್‌ನಿಂದಾಗಿ ಯೋಗ ಈಗ ಅತ್ಯಂತ ಅಗತ್ಯ ಎಂದು ವಿಶ್ವ ಮನಗಂಡಿದೆ. ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದ್ದರೆ, ಈ ಕಾಯಿಲೆಯನ್ನು ಸೋಲಿಸಬಹುದು. ಯೋಗದ ಹಲವು ಪದ್ಧತಿಗಳು ಹಾಗೂ ಹಲವು ವಿಧದ ಆಸನಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ'' ಎಂದು ಮೋದಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News