‘ಅವರು ಬ್ಯಾಟ್‌ಗಳಲ್ಲ, ಬ್ಯಾಟ್‌ಮನ್‌ಗಳು: ಬಿಹಾರ ರೆಜಿಮೆಂಟ್‌ ಕೊಂಡಾಡಿದ ಸೇನೆ

Update: 2020-06-21 17:53 GMT

 ಹೊಸದಿಲ್ಲಿ,ಜೂ.21: ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಚೀನಿ ಸೈನಿಕರೊಂದಿಗೆ ಕೆಚ್ಚೆದೆಯ ಕಾದಾಟ ನಡೆಸಿದ್ದ ಬಿಹಾರ ರೆಜಿಮೆಂಟ್‌ನ ಯೋಧರ ಧೈರ್ಯ ಮತ್ತು ಶೌರ್ಯವನ್ನು ಗೌರವಿಸಿ ವೀಡಿಯೊವೊಂದನ್ನು ಟ್ವೀಟಿಸಿರುವ ಭಾರತೀಯ ಸೇನೆಯು,21 ವರ್ಷಗಳ ಹಿಂದಿನ ಕಾರ್ಗಿಲ್ ಯುದ್ಧದಲ್ಲಿ ಅವರ ಕೊಡುಗೆಯನ್ನು ಸ್ಮರಿಸಿದೆ.

ಧ್ರುವ ವಾರಿಯರ್ಸ್ ಮತ್ತು ಬಿಹಾರ ರೆಜಿಮೆಂಟ್ ಹ್ಯಾಷ್‌ಟ್ಯಾಗ್‌ಗಳನ್ನು ಬಳಸಿ ಟ್ವೀಟಿಸಿರುವ ಸೇನೆಯ ನಾರ್ದರ್ನ್ ಕಮಾಂಡ್,‘‘ಬಿಹಾರ ರೆಜಿಮೆಂಟ್‌ನ ಈ ಸಿಂಹಗಳು ಹೋರಾಡಲೆಂದೇ ಹುಟ್ಟಿದ್ದಾರೆ. ಅವರು ಬ್ಯಾಟ್ (ಬಾವಲಿ)ಗಳಲ್ಲ,ಅವರು ಬ್ಯಾಟ್‌ಮನ್‌ಗಳಾಗಿದ್ದಾರೆ ’ಎಂದು ಕೊಂಡಾಡಿದೆ.

‘ಪ್ರತಿ ಸೋಮವಾರದ ಬಳಿಕ ಮಂಗಳವಾರ ಬಂದೇ ಬರುತ್ತದೆ. ಬಜರಂಗ ಬಲಿ ಕೀ ಜೈ’ಎಂದೂ ಅದು ಟ್ವೀಟಿಸಿದೆ. ‘ಜೈ ಬಜರಂಗ ಬಲಿ’ ಬಿಹಾರ ರೆಜಿಮೆಂಟ್‌ನ ಯೋಧರು ವೈರಿಯನ್ನು ಎದುರಿಸಲು ಯುದ್ಧರಂಗಕ್ಕೆ ತೆರಳಿದಾಗ ಹೊರಡಿಸುವ ರಣಕೇಕೆಯಾಗಿದೆ.

1 ನಿಮಿಷ 57 ಸೆಕೆಂಡ್‌ಗಳ ಈ ವೀಡಿಯೊ 1857ರಿಂದ 1999ರಲ್ಲಿ ರೆಜಿಮೆಂಟ್‌ನ ಮೊದಲ ಬೆಟಾಲಿಯನ್ ಕಾರ್ಗಿಲ್‌ನ ವ್ಯೂಹಾತ್ಮಕ ಪ್ರದೇಶವನ್ನು ಪಾಕಿಸ್ತಾನಿ ಸೇನೆಯಿಂದ ವಶಪಡಿಸಿಕೊಂಡ ಸಾಧನೆಯವರೆಗೆ ಬಿಹಾರ ರೆಜಿಮೆಂಟ್‌ನ ಕೆಲವು ಅತ್ಯಂತ ಸಾಹಸಮಯ ಅಭಿಯಾನಗಳನ್ನು ನೆನಪಿಸಿದೆ.

‘21 ವರ್ಷಗಳ ಹಿಂದೆ ಇದೇ ತಿಂಗಳಲ್ಲಿ ಬಿಹಾರ ರೆಜಿಮೆಂಟ್ ಕಾರ್ಗಿಲ್ ಅತಿಕ್ರಮಣಕೋರರ ರಕ್ತದ ಓಕುಳಿಯಾಡಿತ್ತು. ಅತಿಕ್ರಮಣಕೋರರು ಎತ್ತರದ ಪ್ರದೇಶದಲ್ಲಿದ್ದರು ಮತ್ತು ಸಂಪೂರ್ಣ ಸಜ್ಜಾಗಿದ್ದರು. ನಮ್ಮ ಯೋಧರು ಕೆಚ್ಚೆದೆಯಿಂದ ಅಲ್ಲಿಗೆ ತೆರಳಿದ್ದರು ಮತ್ತು ವಿಜಯದೊಂದಿಗೆ ಮರಳಿದ್ದರು ಎಂದು ’ವೀಡಿಯೊದ ನಿರೂಪಕ ಮೇಜರ್ ಅಖಿಲ ಪ್ರತಾಪ್ ಹೇಳಿದ್ದಾರೆ.

ಗಲ್ವಾನ್ ಕಣಿವೆಯಲ್ಲಿ ಚೀನಿ ಸೈನಿಕರೊಂದಿಗೆ ಹಿಂಸಾತ್ಮಕ ಘರ್ಷಣೆಗಳಲ್ಲಿ ಹುತಾತ್ಮರಾದ 16 ಬಿಹಾರ ರೆಜಿಮೆಂಟ್‌ನ ಕಮಾಂಡಿಂಗ್ ಅಧಿಕಾರಿ ಸಂತೋಷ ಬಾಬು ಅವರಿಗೂ ಸೇನೆಯು ಶ್ರದ್ಧಾಂಜಲಿಯನ್ನು ಸಲ್ಲಿಸಿದೆ.

ಸ್ವಾತಂತ್ರ್ಯಾನಂತರ ಭಾರತವು ಹೋರಾಡಿದ ಎಲ್ಲ ಯುದ್ಧಗಳಲ್ಲಿಯೂ ಬಿಹಾರ ರೆಜಿಮೆಂಟ್ ಭಾಗವಾಗಿದೆ. ಸೋಮಾಲಿಯಾ ಮತ್ತು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿಯೂ ಅದು ಪಾಲ್ಗೊಂಡಿತ್ತು.

                   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News