ರಥಯಾತ್ರೆಗೆ ಮುನ್ನ ಪುರಿ ಜಗನ್ನಾಥ ದೇವಸ್ಥಾನದ ಪರಿಚಾರಕನಲ್ಲಿ ಕೋವಿಡ್-19 ಸೋಂಕು ದೃಢ

Update: 2020-06-23 16:10 GMT

 ಪುರಿ (ಒಡಿಶಾ),ಜೂ.23: ವಾರ್ಷಿಕ ರಥಯಾತ್ರೆಗೆ ಮುನ್ನ ಪುರಿ ಜಗನ್ನಾಥ ದೇವಸ್ಥಾನದ ಸಾಂಪ್ರದಾಯಿಕ ಪರಿಚಾರಕರಲ್ಲೋರ್ವರು ಕೋವಿಡ್-19 ಸೋಂಕಿಗೆ ತುತ್ತಾಗಿರುವುದು ದೃಢಪಟ್ಟಿದ್ದು,ಅವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಅವರ ಸಂಪರ್ಕಗಳನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಪುರಿ ಜಿಲ್ಲಾಡಳಿತವು ತಿಳಿಸಿದೆ.

ರಥಯಾತ್ರೆಗೆ ಸೋಮವಾರ ಅನುಮತಿ ನೀಡಿದ್ದ ಸರ್ವೋಚ್ಚ ನ್ಯಾಯಾಲಯವು ಉತ್ಸವಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿತ್ತು ಮತ್ತು ಕೋವಿಡ್-19 ಪರೀಕ್ಷಾ ವರದಿ ನೆಗೆಟಿವ್ ಆಗಿರುವವರು ಮಾತ್ರ ರಥವನ್ನು ಎಳೆಯಲು ಮತ್ತು ಧಾರ್ಮಿಕ ವಿಧಿಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬೇಕು ಎಂದು ಆದೇಶಿಸಿತ್ತು.

ಸೋಮವಾರ ದೇವಸ್ಥಾನದ 1,143 ಪರಿಚಾರಕರ ಸ್ಯಾಂಪಲ್‌ಗಳನ್ನು ಪರೀಕ್ಷಿಸಲಾಗಿದ್ದು,ಒಂದನ್ನು ಹೊರತುಪಡಿಸಿ ಉಳಿದವೆಲ್ಲ ನೆಗೆಟಿವ್ ಆಗಿವೆ ಎಂದು ಜಿಲ್ಲಾಡಳಿತವು ತಿಳಿಸಿದೆ.

ಸಾಮಾನ್ಯವಾಗಿ ಲಕ್ಷಾಂತರ ಜನರು ಸೇರುತ್ತಿದ್ದ ರಥಯಾತ್ರೆ ಮಂಗಳವಾರ ಆರಂಭಗೊಂಡಿತಾದರೂ ಮೆರವಣಿಗೆಯ ಗಾತ್ರ ಗಣನೀಯವಾಗಿ ಕುಸಿದಿತ್ತು. ಕೇಂದ್ರದೊಂದಿಗೆ ಸಮಾಲೋಚನೆಯೊಂದಿಗೆ ಉತ್ಸವವನ್ನು ಸುರಕ್ಷಿತವಾಗಿ ನಡೆಸುವುದು ದೇವಸ್ಥಾನದ ಆಡಳಿತ ಮಂಡಳಿ ಮತ್ತು ಒಡಿಶಾ ಸರಕಾರದ ಹೊಣೆಗಾರಿಕೆಯಾಗಿರುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯವು ತನ್ನ ಅನುಮತಿ ಆದೇಶದಲ್ಲಿ ತಿಳಿಸಿತ್ತು.

ಆದರೆ ಮಂಗಳವಾರದ ರಥಯಾತ್ರೆಯ ವೀಡಿಯೊಗಳು ಮತ್ತು ಚಿತ್ರಗಳು ರಥದಲ್ಲಿ ಜಗನ್ನಾಥ ವಿಗ್ರಹವನ್ನು ಸಾಗಿಸುವಾಗ ಅರ್ಚಕರು ಸುರಕ್ಷಿತ ಅಂತರ ನಿಯಮವನ್ನು ಉಲ್ಲಂಘಿಸಿ ಒತ್ತಟ್ಟಿಗೆ ನಿಂತುಕೊಂಡಿದ್ದನ್ನು ತೋರಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News