ಸುಗ್ರೀವಾಜ್ಞೆ ಮೂಲಕ ಸಹಕಾರಿ ಬ್ಯಾಂಕ್‍ಗಳನ್ನು ಆರ್‌ಬಿಐ ಸುಪರ್ದಿಗೆ ತರಲು ನಿರ್ಧರಿಸಿದ ಕೇಂದ್ರ

Update: 2020-06-24 13:44 GMT

ಹೊಸದಿಲ್ಲಿ: ಸುಗ್ರೀವಾಜ್ಞೆಯ ಮೂಲಕ ಎಲ್ಲಾ ಸಹಕಾರಿ ಬ್ಯಾಂಕ್‍ಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಅಧೀನದಲ್ಲಿ ತರಲು  ಕೇಂದ್ರ ಸಚಿವ ಸಂಪುಟ ಇಂದು ನಿರ್ಧರಿಸಿದೆ ಎಂದು  ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವ್ಡೇಕರ್ ತಿಳಿಸಿದ್ದಾರೆ.

“ದೇಶದಲ್ಲಿರುವ 1,482 ಅರ್ಬನ್ ಸಹಕಾರಿ ಬ್ಯಾಂಕ್‍ಗಳು ಹಾಗೂ 58 ಬಹು-ರಾಜ್ಯ ಸಹಕಾರಿ ಬ್ಯಾಂಕ್‍ಗಳ ಸಹಿತ ಸರಕಾರಿ ಬ್ಯಾಂಕ್‍ಗಳು ಈಗ ಭಾರತೀಯ ರಿಸರ್ವ್ ಬ್ಯಾಂಕ್‍ನ ಮೇಲ್ವಿಚಾರಣೆಯಲ್ಲಿ ಬರಲಿದೆ. ರಾಷ್ಟ್ರಪತಿಗಳ ಅಂಕಿತ ದೊರೆತ ಕೂಡಲೇ ಈ ಸುಗ್ರೀವಾಜ್ಞೆ ಜಾರಿಗೆ ಬರಲಿದೆ,'' ಎಂದು ಸಚಿವರು ತಿಳಿಸಿದರು.

ಕಳೆದ ವರ್ಷ ಪಂಜಾಬ್ ಮತ್ತು ಮಹಾರಾಷ್ಟ್ರ ಕೊ-ಆಪರೇಟಿವ್ ಬ್ಯಾಂಕ್ ಹಗರಣದ ನಂತರ ಸಹಕಾರಿ ಬ್ಯಾಂಕ್‍ಗಳ ಬಲವರ್ಧನೆಗೆ ಕೇಂದ್ರ ಸರಕಾರ ಫೆಬ್ರವರಿಯಲ್ಲಿ ಬ್ಯಾಂಕಿಂಗ್ ನಿಯಂತ್ರಣ ಕಾಯಿದೆಗೆ ತಿದ್ದುಪಡಿ ತಂದಿತ್ತು. ತಮ್ಮ 2020 ಬಜೆಟ್ ಭಾಷಣದಲ್ಲಿಯೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಹಕಾರಿ ಬ್ಯಾಂಕ್‍ಗಳು ರಿಸರ್ವ್ ಬ್ಯಾಂಕ್ ಸುಪರ್ದಿಯಲ್ಲಿ ಬರಲಿದೆ ಎಂದು ತಿಳಿಸಿದ್ದರು.

“ದೇಶಾದ್ಯಂತ 1,500ಕ್ಕೂ ಅಧಿಕ ಸಹಕಾರಿ ಬ್ಯಾಂಕ್‍ಗಳಲ್ಲಿ 8.6 ಕೋಟಿಗೂ ಅಧಿಕ ಠೇವಣಿದಾರರಿದ್ದು ಠೇವಣಿ ಹಣವಾದ ರೂ. 4.8 ಲಕ್ಷ ಕೋಟಿ ಸುರಕ್ಷಿತವಾಗಿರಲಿದೆ,'' ಎಂದು ಸಚಿವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News