ಗಲ್ವಾನ್ ಕಣಿವೆಯಲ್ಲಿ ಚೀನಿ ನಿರ್ಮಾಣಗಳು, ಸೈನಿಕರನ್ನು ತೋರಿಸುತ್ತಿರುವ ಹೊಸ ಉಪಗ್ರಹ ಚಿತ್ರಗಳು

Update: 2020-06-24 16:36 GMT
ಫೋಟೊ ಕೃಪೆ :ndtv

ಹೊಸದಿಲ್ಲಿ,ಜೂ.24: ಲಡಾಖ್‌ನಲ್ಲಿ ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ)ಯಿಂದ ತಮ್ಮ ಸೇನಾಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆಯನ್ನು ಆರಂಭಿಸಲು ಭಾರತ ಮತ್ತು ಚೀನಾ ಸೋಮವಾರ ಒಪ್ಪಿಕೊಂಡಿವೆ. ಇದರ ಬೆನ್ನಿಗೇ ಹೈ ರೆಸೊಲ್ಯೂಷನ್ ಉಪಗ್ರಹ ಚಿತ್ರಗಳು ಎಲ್‌ಎಸಿಯ ಉಭಯ ಪಾರ್ಶ್ವಗಳಲ್ಲಿ ಚೀನಿ ನಿರ್ಮಾಣಗಳಿರುವುದನ್ನು ತೋರಿಸಿವೆ. ಇದೇ ಸ್ಥಳದಲ್ಲಿ ಜೂ.15ರಂದು ರಾತ್ರಿ ನಡೆದಿದ್ದ ಹಿಂಸಾತ್ಮಕ ಘರ್ಷಣೆಗಳಲ್ಲಿ 20 ಭಾರತೀಯ ಯೋಧರು ಕೊಲ್ಲಲ್ಪಟ್ಟಿದ್ದರು. ಓರ್ವ ಕರ್ನಲ್ ಸೇರಿದಂತೆ ಸುಮಾರು 45 ಚೀನಿ ಸೈನಿಕರೂ ಈ ಘರ್ಷಣೆಗಳಲ್ಲಿ ಕೊಲ್ಲಲ್ಪಟ್ಟಿದ್ದಾರೆ ಎಂದು ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳು ಅಭಿಪ್ರಾಯಿಸಿದ್ದಾರೆ.

ಇಲ್ಲಿ ತೋರಿಸಲಾಗಿರುವ ಚಿತ್ರವು ಗಸ್ತು ಕೇಂದ್ರ 14ರ ಸಮೀಪದ ಪ್ರದೇಶದ್ದಾಗಿದ್ದು,ಇದೇ ಸ್ಥಳದಲ್ಲಿ ಜೂ.15ರಂದು ಉಭಯ ದೇಶಗಳ ಸೈನಿಕರ ನಡುವೆ ಘರ್ಷಣೆ ನಡೆದಿತ್ತು. ಈ ಹಿಂದೆ ಮೇ 22 ರಂದು ತೆಗೆಯಲಾಗಿದ್ದ ಉಪಗ್ರಹ ಚಿತ್ರವು ಈ ಜಾಗದಲ್ಲಿ ಒಂದೇ ಟೆಂಟ್ ಇದ್ದಿದ್ದನ್ನು ತೋರಿಸಿತ್ತು. ಹೊಸ ಚಿತ್ರಗಳು ಈ ಸ್ಥಳದಲ್ಲಿ ಸಂಭಾವ್ಯ ಚೀನಿ ರಕ್ಷಣಾ ಸ್ಥಾನಗಳನ್ನು ತೋರಿಸುತ್ತಿರುವಂತೆ ಕಂಡು ಬಂದಿದೆ. ಎಲ್‌ಎಸಿಯಲ್ಲಿ ಬಂಡೆಗಲ್ಲಿನುದ್ದಕ್ಕೂ ಆಶ್ರಯತಾಣಗಳು ಅಥವಾ ವಸತಿ ಸೌಲಭ್ಯಗಳ ಅಸ್ತಿತ್ವವನ್ನೂ ಹೊಸಚಿತ್ರಗಳು ತೋರಿಸುತ್ತಿವೆ. ಹಿಂದಿನ ಚಿತ್ರಗಳಲ್ಲಿ ಈ ರಚನೆಗಳಿರಲಿಲ್ಲ.

ಗಸ್ತು ಕೇಂದ್ರ 14ರ ಸುತ್ತಮುತ್ತ ಅತಿಕ್ರಮಣದ ಸ್ಪಷ್ಟವಾದ ಸಂಕೇತಗಳು ಕಂಡು ಬರುತ್ತಿವೆ,ಇವು ಎಲ್‌ಸಿಯ ನಮ್ಮ ಭಾಗದಲ್ಲಿ ಚೀನಿಯರು ನಿರ್ಮಿಸಿಕೊಂಡಿರುವ ರಕ್ಷಣಾ ನೆಲೆಗಳಂತೆ ಕಂಡು ಬರುತ್ತಿವೆ ಎಂದು ಭಾರತದ ಹೆಚ್ಚುವರಿ ಸರ್ವೆಯರ್ ಜನರಲ್ ಆಗಿ ನಿವೃತ್ತರಾಗಿರುವ ದೇಶದ ಅಗ್ರ ಭೂಪಟ ರಚನೆಕಾರರಲ್ಲೊಬ್ಬರಾಗಿರುವ ಮೇ.ಜ.(ನಿವೃತ್ತ) ರಮೇಶ ಪಾಧಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚಿತ್ರಗಳು ಘನ ವಾಹನಗಳ ಚಲನವಲನಗಳನ್ನು ಸ್ಪಷ್ಟವಾಗಿ ತೋರಿಸುತ್ತಿದ್ದು,ಇದು ಆ ಪ್ರದೇಶದಿಂದ ಹಿಂದೆ ಸರಿಯದಿರುವ ಚೀನಿಯರ ಉದ್ದೇಶವನ್ನು ಸೂಚಿಸುತ್ತಿದೆ ಎಂದೂ ಅವರು ಹೇಳಿದ್ದಾರೆ.

ಅಮೆರಿಕದ ಕೊಲರಾಡೊದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಉಪಗ್ರಹ ಉತ್ಪನ್ನಗಳು ಮತ್ತು ಸಂಬಂಧಿತ ಸೇವೆಗಳನ್ನೊದಗಿಸುವ ಸಂಸ್ಥೆ ಮ್ಯಾಕ್ಸರ್‌ನಿಂದ ಈ ಚಿತ್ರಗಳು ಆಂಗ್ಲ ಸುದ್ದಿವಾಹಿನಿ ಎನ್‌ಡಿಟವಿಗೆ ಲಭ್ಯವಾಗಿವೆ. ಚಿತ್ರಗಳ ಕುರಿತು ಪ್ರತಿಕ್ರಿಯೆಗಾಗಿ ವಾಹಿನಿಯು ಸೇನೆ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯವನ್ನು ಸಂಪರ್ಕಿಸಿತ್ತಾದರೂ ಅವು ಉತ್ತರಿಸಿಲ್ಲ. ಆದರೆ,ಆ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಕೆಲವು ಸರಕಾರಿ ಮೂಲಗಳು ತಿಳಿಸಿವೆ.

ಈ ಚಿತ್ರಗಳು ಲಡಾಖ್‌ನಲ್ಲಿಯ ಸ್ಥಿತಿಯ ಈವರೆಗಿನ ಅತ್ಯಧಿಕ ರೆಸೊಲ್ಯೂಷನ್‌ನ ಚಿತ್ರಗಳಾಗಿದ್ದು, ಇದೇ ಮೊದಲ ಬಾರಿಗೆ ಗಲ್ವಾನ್ ನದಿಗೆ ಮೋರಿಗಳನ್ನು ನಿರ್ಮಿಸಿರುವುದನ್ನು ತೋರಿಸಿವೆ. ಎಲ್‌ಎಸಿಯಿಂದ ಒಂದು ಕಿ.ಮೀ.ಗೂ ಕಡಿಮೆ ದೂರದಲ್ಲಿ ಇವುಗಳನ್ನು ನಿರ್ಮಿಸಲಾಗಿದ್ದು,ಚೀನಿ ರಸ್ತೆಗೆ ಭಾಗಶಃ ಡಾಮಾರು ಹಾಕಿರುವಂತೆ ಕಂಡು ಬರುತ್ತಿದೆ.

ಜೂ.16ರಂದು ತೆಗೆಯಲಾಗಿದ್ದ ಉಪಗ್ರಹ ಚಿತ್ರವು ತೋರಿಸಿದ್ದ,ಬುಲ್‌ಡೋಜರ್‌ಗಳು ಗಲ್ವಾನ್ ನದಿಯಿಂದ ನೀರಿನ ಹರಿವನ್ನು ಸ್ಥಗಿತಗೊಳಿಸಿದ್ದ ಜಾಗದ ಬಳಿ ಈ ಮೋರಿಗಳು ನಿರ್ಮಾಣವಾಗಿರುವಂತಿದೆ. ಜೂ.22ರಂದು ತೆಗೆಯಲಾದ ಹೊಸ ಚಿತ್ರಗಳು ಹೊಸದಾಗಿ ನಿರ್ಮಾಣಗೊಂಡಿರುವ ಮೋರಿಯ ಕೆಳಗಿನಿಂದ ಗಲ್ವಾನ್ ನದಿ ನೀರಿನ ಹರಿವು ಪುನರಾರಂಭಗೊಂಡಿರುವುದನ್ನು ತೋರಿಸಿವೆ.

 ಎಲ್‌ಎಸಿಯವರೆಗೆ ಸಾಗುವ ರಸ್ತೆಯನ್ನೂ ಭಾರೀ ಯಂತ್ರೋಪಕರಣಗಳನ್ನು ಬಳಸಿ ಸಾಕಷ್ಟು ಅಗಲಗೊಳಿಸಿರುವುದು ನದಿಯ ದಂಡೆಗಳುದ್ದಕ್ಕೂ ಸ್ಪಷ್ಟವಾಗಿ ಗೋಚರವಾಗಿದೆ. ಇದಕ್ಕೆ ಹೋಲಿಸಬಹುದಾದ ಯಾವುದೇ ಭಾರತೀಯ ರಸ್ತೆ ನಿರ್ಮಾಣ ಚಟುವಟಿಕೆಗಳು ಗಲ್ವಾನ್‌ನಲ್ಲಿ ಚೀನಿ ನೆಲೆಗಳ ಎದುರು ಕಂಡುಬರುತ್ತಿಲ್ಲ. ಆದರೆ ಸುಮಾರು ಆರು ಕಿ.ಮೀ.ದೂರದಲ್ಲಿ ಭಾರತವು ಪ್ರಮುಖ ಹೆದ್ದಾರಿ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಿದ್ದು,ಇದು ದಕ್ಷಿಣದ ಡರ್ಬಕ್‌ನ್ನು ಉತ್ತರದ ದೌಲತ್ ಬೇಗ್ ಓಲ್ಡಿಯೊಂದಿಗೆ ಸಂಪರ್ಕಿಸುತ್ತದೆ. ಭಾರತವು ಪ್ರದೇಶದಲ್ಲಿ ತನ್ನ ಸೇನಾಬಲವನ್ನು ಮತ್ತು ಪೂರೈಕೆಯನ್ನು ಹೆಚ್ಚಿಸುವುದನ್ನು ಸಾಧ್ಯವಾಗಿಸಿರುವ ಈ ರಸ್ತೆಯು ಚೀನಿ ಪಡೆಗಳಿಗೆ ಕಳವಳದ ವಿಷಯವಾಗಿದೆ ಎನ್ನಲಾಗಿದೆ.

ಸೋಮವಾರ ಚುಷುಲ್ ಬಳಿಯ ಚೀನಿ ನೆಲೆ ಮೊಲ್ಡೋದಲ್ಲಿ ಉಭಯ ಸೇನೆಗಳ ಲೆಫ್ಟಿನೆಂಟ್ ಜನರಲ್ ದರ್ಜೆಯ ಅಧಿಕಾರಿಗಳ ನಡುವೆ ಉನ್ನತ ಮಟ್ಟದ ಮಾತುಕತೆಗಳು ಸೌಹಾರ್ದ ವಾತಾವರಣದಲ್ಲಿ ನಡೆದು ಉಭಯ ದೇಶಗಳ ನಡುವೆ ಭಿನ್ನಾಭಿಪ್ರಾಯಗಳಿರುವ ಎಲ್‌ಎಸಿಯ ಎಲ್ಲ ಸ್ಥಳಗಳಿಂದ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಲು ಒಪ್ಪಿಕೊಳ್ಳಲಾಗಿದೆಯಾದರೂ ಈ ಪ್ರಕ್ರಿಯೆಯಿನ್ನೂ ಆರಂಭಗೊಂಡಿಲ್ಲ.

ಲಡಾಖ್‌ನಾದ್ಯಂತ ಪ್ರಾದೇಶಿಕ ಭಿನ್ನಾಭಿಪ್ರಾಯಗಳ ತೀವ್ರತೆಯನ್ನು ಪರಿಗಣಿಸಿದರೆ ಯಾವುದೇ ತಕ್ಷಣದ ಪರಿಹಾರ ಸಾಧ್ಯವಿಲ್ಲ ಎಂಬ ಭಾವನೆ ದಟ್ಟವಾಗಿದ್ದರೂ ಮಾತುಕತೆ ಪ್ರಕ್ರಿಯೆಯ ಬಗ್ಗೆ ಭಾರತೀಯ ಸೇನೆಯ ಉನ್ನತ ನಾಯಕತ್ವವು ಆಶಾವಾದವನ್ನು ಹೊಂದಿದೆಯಾದರೂ ಅಷ್ಟೇ ಎಚ್ಚರಿಕೆಯನ್ನೂ ವಹಿಸಿದೆ.

‘ಚೀನಿ ಸೈನಿಕರು ನಮ್ಮ ಭೂಪ್ರದೇಶವನ್ನು ಪ್ರವೇಶಿಸಿಲ್ಲ ಅಥವಾ ನಮ್ಮ ಯಾವುದೇ ಮುಂಚೂಣಿ ನೆಲೆಗಳನ್ನು ವಶಪಡಿಸಿಕೊಂಡಿಲ್ಲ ’ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚಿಗೆ ಸರ್ವಪಕ್ಷ ಸಭೆಯಲ್ಲಿ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News