ಮಣಿಪುರ ರಾಜಕೀಯ ಬಿಕ್ಕಟ್ಟು: ದಿಲ್ಲಿಗೆ ಧಾವಿಸಿದ 4 ಎನ್‌ಪಿಪಿ ಶಾಸಕರು

Update: 2020-06-25 07:02 GMT

ಇಂಫಾಲ, ಜೂ.24: ಮಣಿಪುರದಲ್ಲಿ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರಕಾರಕ್ಕೆ ಬೆಂಬಲ ಹಿಂಪಡೆದಿರುವ ನ್ಯಾಷನಲ್ ಪೀಪಲ್ಸ್ ಪಾರ್ಟಿ(ಎನ್‌ಪಿಪಿ)ಯ 4 ಶಾಸಕರು ವಿಶೇಷ ವಿಮಾನದ ಮೂಲಕ ದಿಲ್ಲಿಗೆ ದೌಡಾಯಿಸಿದ್ದು ಅಲ್ಲಿ ಬಿಜೆಪಿ ಮುಖಂಡರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಬಿಜೆಪಿಯ ಮೂಲಗಳು ತಿಳಿಸಿವೆ. ಮಣಿಪುರದಲ್ಲಿ ತಲೆದೋರಿರುವ ರಾಜಕೀಯ ಬಿಕ್ಕಟ್ಟು ನಿವಾರಿಸಲು ಹಾಗೂ ಪರಿಸ್ಥಿತಿಯ ಲಾಭ ಪಡೆದು ಕಾಂಗ್ರೆಸ್ ನೇತೃತ್ವದ ಸರಕಾರ ರಚಿಸಲು ನಡೆಯುತ್ತಿರುವ ಕಸರತ್ತಿನ ಹಿನ್ನೆಲೆಯಲ್ಲಿ ಶಾಸಕರ ದಿಲ್ಲಿ ಭೇಟಿ ಮಹತ್ವ ಪಡೆದಿದೆ.

ಶಾಸಕರೊಂದಿಗೆ ಮೇಘಾಲಯದ ಮುಖ್ಯಮಂತ್ರಿ ಮತ್ತು ಎನ್‌ಪಿಪಿ ರಾಷ್ಟ್ರೀಯ ಅಧ್ಯಕ್ಷ ಕೊನ್ರಾಡ್ ಕೆ ಸಂಗ್ಮ ಹಾಗೂ ಅಸ್ಸಾಂನ ಸಚಿವ ಹಿಮಂತ ಬಿಸ್ವ ಶರ್ಮ ಅವರೂ ದಿಲ್ಲಿಗೆ ಪ್ರಯಾಣಿಸಿದ್ದಾರೆ. ಇವರಿಬ್ಬರಿಗೆ ಮಣಿಪುರದ ಬಿಜೆಪಿ ಸರಕಾರವನ್ನು ಉಳಿಸಿಕೊಳ್ಳುವ ಹೊಣೆ ವಹಿಸಲಾಗಿದೆ ಎಂದು ತಿಳಿದು ಬಂದಿದೆ. ಜೂನ್ 17ರಂದು ಎನ್‌ಪಿಪಿಯ 4, ಬಿಜೆಪಿಯ 3, ಟಿಎಂಸಿಯ 1 ಮತ್ತು ಪಕ್ಷೇತರ ಶಾಸಕರೊಬ್ಬರು ಎನ್ ಬಿರೇನ್ ಸಿಂಗ್ ನೇತೃತ್ವದ ಸರಕಾರಕ್ಕೆ ನೀಡಿದ್ದ ಬೆಂಬಲ ವಾಪಸು ಪಡೆದ ಕಾರಣ ಸರಕಾರ ಅಲ್ಪಮತಕ್ಕೆ ಕುಸಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News