ಚೀನೀ ಉತ್ಪನ್ನಗಳ ನಿಷೇಧ ಅಸಾಧ್ಯ: ಭಾರತೀಯ ರಫ್ತು ಸಂಘಟನೆ ಒಕ್ಕೂಟದ ಅಧ್ಯಕ್ಷ

Update: 2020-06-25 15:12 GMT

ಹೊಸದಿಲ್ಲಿ, ಜೂ.25: ಪ್ರಸಕ್ತ ಸಂದರ್ಭದಲ್ಲಿ ಭಾರತವು ಚೀನಾದ ಉತ್ಪನ್ನಗಳ ಮೇಲೆ ಹೆಚ್ಚಾಗಿ ಅವಲಂಬಿತವಾಗಿರುವುದರಿಂದ ಚೀನೀ ಉತ್ಪನ್ನಗಳ ನಿಷೇಧ ಕಾರ್ಯಸಾಧ್ಯವಲ್ಲ . ಚೀನಾ ಕೂಡಾ ಪ್ರತೀಕಾರ ಕ್ರಮ ಕೈಗೊಂಡರೆ ಭಾರತಕ್ಕೇ ಹೆಚ್ಚು ನಷ್ಟ ಎಂದು ಭಾರತೀಯ ರಫ್ತು ಸಂಘಟನೆಯ ಒಕ್ಕೂಟ(ಎಫ್‌ಐಇಒ) ದ ಅಧ್ಯಕ್ಷ ಶರದ್ ಕೆ ಸರಾಫ್ ಹೇಳಿದ್ದಾರೆ.

ಲಡಾಖ್‌ನಲ್ಲಿ ಚೀನಾ-ಭಾರತ ಯೋಧರ ನಡುವೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಭಾರತದ 20 ಯೋಧರು ಹುತಾತ್ಮರಾದ ಬಳಿಕ, ಭಾರತದಲ್ಲಿ ಚೀನಾ ಉತ್ಪನ್ನಗಳನ್ನು ನಿಷೇಧಿಸಬೇಕೆಂಬ ಆಗ್ರಹ ಕೇಳಿಬರುತ್ತಿದೆ. ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ(ಸಿಎಐಟಿ) ಈ ಆಗ್ರಹವನ್ನು ಬೆಂಬಲಿಸಿದರೆ ಇತರ ಕೆಲವು ಸಂಘಟನೆಗಳು ವ್ಯತಿರಿಕ್ತ ಅಭಿಪ್ರಾಯ ವ್ಯಕ್ತಪಡಿಸಿವೆ.

ಭಾರತದ ಮಾರುಕಟ್ಟೆಯಲ್ಲಿ ಈಗ ಚೀನಾದ ಉತ್ಪನ್ನಗಳಿಗೆ ಬದಲಿ ಅಥವಾ ಪರ್ಯಾಯ ವಸ್ತುಗಳಿಲ್ಲ. ಅಲ್ಲದೆ ಚೀನೀ ಉತ್ಪನ್ನಗಳ ಬೆಲೆ ಕಡಿಮೆ ಇರುವುದರಿಂದ ಮಾರುಕಟ್ಟೆಯ ಪೈಪೋಟಿ ನಿಯಂತ್ರಣಕ್ಕೆ ನೆರವಾಗುತ್ತದೆ ಎಂದು ಈ ಸಂಘಟನೆಗಳು ಹೇಳಿವೆ. ಚೀನಾ ವಸ್ತುಗಳ ಮೇಲೆ ಸಂಪೂರ್ಣ ನಿಷೇಧ ವಿಧಿಸುವುದಕ್ಕೆ ನಮ್ಮ ಸಹಮತವಿಲ್ಲ. ಭಾವಾವೇಶದಿಂದ ಚೀನಾದ ಉತ್ಪನ್ನಗಳನ್ನು ಒಡೆದು ಹಾಕುವುದು ಸರಿಯಲ್ಲ. ಹಿಂದೆ ಮುಂದೆ ಯೋಚಿಸದೆ ಪ್ರತಿಕ್ರಿಯಿಸುವುದು ಸರಿಯಲ್ಲ. ಇಂತಹ ಉಪಕ್ರಮಗಳಿಂದ ನಮ್ಮ ಅರ್ಥವ್ಯವಸ್ಥೆಯ ಮೇಲೆಯೇ ಹಾನಿಯಾಗುತ್ತದೆ ಎಂದು ಎಫ್‌ಐಇಒ ಪ್ರಧಾನ ನಿರ್ದೇಶಕ ಅಜಯ್ ಸಹಾಯ್ ಹೇಳಿದ್ದಾರೆ.

ಈ ವಿಷಯದ ಬಗ್ಗೆ ನಾವು ಯೋಚಿಸಿ ನಿರ್ಣಯವನ್ನು ಕೈಗೊಳ್ಳಬೇಕು ಎಂದು ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯ(ಡಿಜಿಎಫ್‌ಟಿ)ಗೆ ಮನವಿ ಮಾಡಿಕೊಂಡಿದ್ದೇವೆ. ಅಲ್ಲದೆ ಭಾರತದಿಂದ ಚೀನಾಕ್ಕೆ ರಫ್ತಾಗುವ ಕಚ್ಛಾ ವಸ್ತುಗಳ ಬಗ್ಗೆಯೂ ಗಮನ ಹರಿಸಬೇಕು. ಕಚ್ಛಾ ವಸ್ತುಗಳ ರಫ್ತನ್ನು ನಿಯಂತ್ರಿಸುವ ಅಗತ್ಯವಿದೆ ಎಂದು ಸಹಾಯ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News