ಚೀನಾದ ಗಣೇಶ ವಿಗ್ರಹಗಳಿಗೂ ಭಾರತದಲ್ಲಿ ಬೇಡಿಕೆ: ನಿರ್ಮಲಾ ಅಚ್ಚರಿ

Update: 2020-06-25 17:01 GMT

ಚೆನ್ನೈ,ಜೂ.25: ವಿದೇಶದಿಂದ ಅವಶ್ಯಕ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಭಾರತೀಯರು ಚೀನಾದಿಂದ ಗಣೇಶನ ವಿಗ್ರಹಗಳನ್ನು ಭಾರೀ ಸಂಖ್ಯೆಯಲ್ಲಿ ಖರೀದಿಸುತ್ತಿರುವುದು ತನಗೆ ಅಚ್ಚರಿ ಮೂಡಿಸಿದೆಯೆಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಹೇಳಿದ್ದಾರೆ.

   ‘‘ ದೇಶದಲ್ಲಿ ಲಭ್ಯವಿಲ್ಲದ ಹಾಗೂ ನಮ್ಮ ಕೈಗಾರಿಕೆಗಳಿಗೆ ಬೇಕಾದ ಕಚ್ಚಾ ಸಾಮಾಗ್ರಿಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಆದಾಗ್ಯೂ, ದೇಶದಲ್ಲಿ ಉದ್ಯೋಗಾವಕಾಶ ಹಾಗೂ ಅಭಿವೃದ್ಧಿಗೆ ಪೂರಕವಾಗುವಂತಹ ಸವಲತ್ತುಗಳನ್ನು ತಂದುಕೊಡದಂತಹ ಆಮದುಗಳು ದೇಶದ ಸ್ವಾವಲಂಬನೆ ಹಾಗೂ ಆರ್ಥಿಕತೆಗೆ ಪ್ರಯೋಜನಕಾರಿಯಾಗಲಾರದು’’ ಎಂದು ಅವರು ಹೇಳಿದ್ದಾರೆ.

 ವಿಡಿಯೋ ಕಾನ್ಫರೆನ್ಸ್ ಮೂಲಕ ಗುರುವಾರ ತಮಿಳುನಾಡಿನ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ನಿರ್ಮಲಾ ಅವರು, “ಸಾಂಪ್ರದಾಯಿಕವಾಗಿ ವರ್ಷಾವಧಿಗೆ ನಡೆಯುವ ಗಣೇಶೋತ್ಸವ ಕಾರ್ಯಕ್ರಮಗಳಲ್ಲಿ ಪೂಜಿಸಲ್ಪಡುವ ಗಣೇಶ ವಿಗ್ರಹಗಳನ್ನು ಸ್ಥಳೀಯ ಕುಂಬಾರರಿಂದ ಖರೀದಿಸಲಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಗಣೇಶನ ವಿಗ್ರಹಗಳನ್ನು ಕೂಡಾ ಚೀನಾದಿಂದ ತರಿಸಿಕೊಳ್ಳಲಾಗುತ್ತಿದೆ. ನಮಗೆ ಗಣೇಶನ ವಿಗ್ರಹವನ್ನು ಆವೆ ಮಣ್ಣಿನಿಂದ ಮಾಡಲು ಸಾಧ್ಯವಿಲ್ಲವೇ?, ಇದೆಂಥಾ ಪರಿಸ್ಥಿತಿ” ಎಂದು ನಿರ್ಮಲಾ ಪ್ರಶ್ನಿಸಿದ್ದಾರೆ.

 ಮನೆಗಳಲ್ಲಿ ದಿನನಿತ್ಯ ಬಳಸಲ್ಪಡುವ ಸೋಪು ಪೆಟ್ಟಿಗೆ, ಪ್ಲಾಸ್ಟಿಕ್ ಸಾಮಾಗ್ರಿಗಳು,ಅಗರಬತ್ತಿಯಂತಹ ಉತ್ಪನ್ನಗಳನ್ನು ಕೂಡಾ ಆಮದು ಮಾಡಿಕೊಳ್ಳುವ ಬದಲಿಗೆ ಅವುಗಳನ್ನು ಭಾರತೀಯ ಕಂಪೆನಿಗಳು ಉತ್ಪಾದಿಸಿದಲ್ಲಿ ದೇಶದ ಸ್ವಾವಲಂಬನೆಗೆ ಬಲ ದೊರೆಯಲಿದೆ ಎಂದರು.

 ಸ್ವಾವಲಂಬನೆಯ ಸಿದ್ಧಾಂತವನ್ನು ಭಾರತವು ಬಹಳ ಸಮಯದಿಂದ ಆಚರಿಸಿಕೊಂಡು ಬರುತ್ತಲೇ ಇತ್ತು. ಆದರೆ ತರುವಾಯ ಅದು ಕಳೆಗುಂದಿತು. ಇದೀಗ ‘ಆತ್ಮನಿರ್ಭರ ಭಾರತ ಅಭಿಯಾನ’ವು ಸ್ಥಳೀಯ ಉತ್ಪಾದನೆಗಳಿಗೆ ಉತ್ತೇಜನ ನೀಡುತ್ತದೆ ಎಂದು ಅವರು ಹೇಳಿದರು.

 ತನ್ನ ಭಾಷಣದಲ್ಲಿ ಪ್ರಧಾನಿ ಮೋದಿಯವರನ್ನು ‘ಆಯ್ಯ ಸರ್’ ಎಂದೇ ಕರೆದ ವಿತ್ತ ಸಚಿವೆ, ಕಳೆದ ಒಂದು ವರ್ಷದಲ್ಲಿ ತನ್ನ ಸರಕಾರದ ಸಾಧನೆಗಳನ್ನು ಪಟ್ಟಿ ಮಾಡಿದರು.

 ಜೂನ್ 15ರಂದು ಗಲ್ವಾನ್ ಕಣಿವೆಯಲ್ಲಿ ಚೀನಿ ಸೈನಿಕರೊಂದಿಗೆ ನಡೆದ ಘರ್ಷಣೆಯಲ್ಲಿ ಹುತಾತ್ಮರಾದ ತಮಿಳುನಾಡಿನ ಯೋಧ ಹವಿಲ್ದಾರ್ ಪಳನಿಸ್ವಾಮಿಯವರ ಶೌರ್ಯವನ್ನು ಅವರು ಶ್ಲಾಘಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News