ನಿರ್ದೇಶಕನಾಗಲಿದ್ದಾರೆ ನಿರೂಪ್ ಭಂಡಾರಿ

Update: 2020-06-27 19:30 GMT

ನಟ ನಿರೂಪ್ ಭಂಡಾರಿ ಕೂಡ ಅಣ್ಣನಂತೆ ತಮ್ಮ ಬಹುಮುಖ ಪ್ರತಿಭೆಯನ್ನು ತೋರುವ ತಯಾರಿಯಲ್ಲಿದ್ದಾರೆ. ಈಗಾಗಲೇ ನಾಯಕನಾಗಿ ಗುರುತಿಸಿಕೊಂಡಿರುವ ಅವರು, ಖುದ್ದಾಗಿ ಸ್ಕ್ರಿಪ್ಟ್ ಒಂದನ್ನು ತಯಾರು ಮಾಡಿಕೊಂಡಿದ್ದಾರೆ. ಅದರಲ್ಲಿ ತಾವು ನಟಿಸುವುದು ಮಾತ್ರವಲ್ಲ, ಅದರ ನಿರ್ದೇಶನವನ್ನು ಕೂಡ ಸ್ವತಃ ಮಾಡಬೇಕೆನ್ನುವ ಆಸೆ ಅವರಲ್ಲಿದೆ. ಅಲ್ಲಿಗೆ ಅವರು ತಮ್ಮ ನೆಚ್ಚಿನ ನಟ, ನಿರ್ದೇಶಕರಾದ ರವಿಚಂದ್ರನ್ ಅವರಂತೆ ನಟ, ನಿರ್ದೇಶಕರಾಗಿ ಬೆಳೆಯುವ ಸೂಚನೆ ದೊರಕಿದೆ. ಅಂದಹಾಗೆ ಇದನ್ನು ಸಾಧ್ಯ ಮಾಡಿಕೊಟ್ಟಿರುವುದು ಈ ಲಾಕ್‌ಡೌನ್ ಬಿಡುವು. ಹಾಗಂತ ನಿರ್ದೇಶನವೇ ತನ್ನ ಪರಮ ಗುರಿ ಎಂದು ಅವರು ಕುಳಿತವರಲ್ಲ. ಅದಕ್ಕೂ ಮೊದಲು ಬಿಡುಗಡೆಯಾಗಲಿರುವ, ನಟಿಸಲಿರುವ ಚಿತ್ರಗಳಿವೆ. ಇವೆಲ್ಲದರ ಬಗ್ಗೆ ಅವರು ‘ವಾರ್ತಾಭಾರತಿ’ ಜತೆಗೆ ಮಾತನಾಡಿದ್ದಾರೆ.


ನಿರ್ದೇಶಕನಾಗುವ ಕನಸು ಬಂದಿದ್ದೇಕೆ?
 ಇದು ಹೊಸ ಕನಸೇನೂ ಅಲ್ಲ. ನಾನು ಬಾಲ್ಯದಿಂದಲೇ ನಿರ್ದೇಶನದ ಕನಸು ಕಂಡಿದ್ದೆ. ನಾನು ಮೊದಲು ಕೆಲಸ ಮಾಡುತ್ತಿದ್ದ ಕಚೇರಿಗೆ ಕಾರ್ಪೊರೇಟ್ ವೀಡಿಯೊ ಮಾಡಿ ಕೊಟ್ಟಿದ್ದೆ. ಮಾತ್ರವಲ್ಲ, ಇದುವರೆಗಿನ ಅಣ್ಣನ ಸಿನೆಮಾಗಳಲ್ಲಿ ನಾನು ನಟನಾಗಿ ಮಾತ್ರ ಭಾಗಿಯಾಗಿದವನಲ್ಲ. ನಿರ್ದೇಶನ ವಿಭಾಗದಲ್ಲಿ ಕೂಡ ತೊಡಗಿಸಿಕೊಳ್ಳುತ್ತಿದ್ದೆ. ಆದುದರಿಂದ ನಿರ್ದೇಶನ ಎನ್ನುವುದು ನನಗೆ ಹೊಸ ಕ್ಷೇತ್ರಕ್ಕೆ ಪ್ರವೇಶಿಸಿದಂತೇನೂ ಆಗದು ಎಂದು ನಂಬಿದ್ದೇನೆ. ಈಗ ಸ್ಕ್ರಿಪ್ಟ್ ಫಸ್ಟ್ ಕಾಪಿ ಕಂಪ್ಲೀಟ್ ಮಾಡಿದ್ದೇನೆ. ಇದು ನನ್ನದೇ ಕತೆ. ಸಾಮಾನ್ಯವಾಗಿ ನಾನು ಕತೆಯ ಬಗ್ಗೆ ಅಣ್ಣನಲ್ಲಿ ಚರ್ಚಿಸಿದರೂ ಅದನ್ನು ಕಾಗದದಲ್ಲಿ ಬರಹವಾಗಿಸಿ ಅಂತಿಮಗೊಳಿಸುವುದು ಅಣ್ಣನೇ. ಆದರೆ ಈ ಬಾರಿ ನಾನೊಬ್ಬನೇ ಯೋಚಿಸಿ, ಅದನ್ನು ನಾನೇ ಬರೆದು ರೆಡಿ ಮಾಡಿದ್ದೇನೆ. ಹಾಗಾಗಿ ನಾನೇ ಡೈರೆಕ್ಟ್ ಮಾಡುವುದು ಬೆಟರ್ ಎನ್ನುವುದು ಅಣ್ಣನ ಅಭಿಮತ. ಹಾಗಂತ ನಟನೆ ಬಿಟ್ಟು ನಿರ್ದೇಶಕನಾಗುವುದಿಲ್ಲ. ಮೊದಲ ಆದ್ಯತೆ ಏನಿದ್ದರೂ ಕಲಾವಿದನಾಗಿ ಮುಂದುವರಿಯುವುದರಲ್ಲೇ ಇರುತ್ತದೆ.


‘ಫ್ಯಾಂಟಮ್’ ಚಿತ್ರೀಕರಣಕ್ಕೆ ನೀವು ಹೈದರಾಬಾದ್‌ಗೆ ಹೋಗುತ್ತೀರ?
ಇಲ್ಲ. ಮೊದಲ ಶೆಡ್ಯೂಲ್ ಚಿತ್ರೀಕರಣದ ವೇಳೆ ನಾನು ಭಾಗಿಯಾಗಿದ್ದೆ. ಈ ಬಾರಿ ನಾನು ಹೈದರಾಬಾದ್ ಗೆ ಹೋಗುತ್ತಿಲ್ಲ. ಜುಲೈ ತಿಂಗಳಿನಿಂದ ಚಿತ್ರೀಕರಣ ಎಂದು ಯೋಜನೆ ಹಾಕಲಾಗಿದೆ. ಅಲ್ಲಿ ಸ್ಟುಡಿಯೊ ಒಳಗೇನೇ ಚಿತ್ರೀಕರಣ ಎಂದು ಮೊದಲೇ ಪ್ಲ್ಯಾನ್ ಮಾಡಲಾಗಿತ್ತು. ಹಾಗಾಗಿ ಸೆಟ್ ಕೆಲಸ ನಡೆದಿತ್ತು. ಅದು ಇನ್ನೂ ಕೂಡ ಕಂಪ್ಲೀಟ್ ಆಗಿಲ್ಲ. ಈಗಂತೂ ಅಲ್ಲಿ ಚಿತ್ರೀಕರಣಕ್ಕೆ ತುಂಬ ರೂಲ್ಸ್ ಇವೆ. ಒಂದು ವಾರ ಮೊದಲೇ ಅಲ್ಲಿಗೆ ಹೋಗಿ ಕ್ವಾರಂಟೈನಲ್ಲಿದ್ದು ಆಮೇಲೆ ಡ್ಯೂಟಿ ಮಾಡುವ ಯೋಜನೆ ಹಾಕಿದ್ದಾರೆ ಎಂದು ಕೇಳಿದ್ದೇನೆ. ಅದರ ಬಗ್ಗೆ ಹೆಚ್ಚಿನ ವಿವರ ನಿರ್ಮಾಪಕ ಜಾಕ್ ಮಂಜು ಅವರಿಗೆ ಗೊತ್ತು. ಒಟ್ಟಿನಲ್ಲಿ ಎಷ್ಟು ಕಡಿಮೆ ಜನರನ್ನು ಬಳಸಿ ಶೂಟ್ ಮಾಡಲಾಗುವುದೋ ತಂಡದಿಂದ ಅಷ್ಟು ಮಂದಿಯನ್ನು ಕಡಿಮೆಯಾಗಿಸುವ ಪ್ರಯತ್ನ ನಡೆದಿದೆ. ಹಾಗಾಗಿ ನಾನಂತೂ ಹೋಗುತ್ತಿಲ್ಲ.


ನೀವು ಲಾಕ್‌ಡೌನ್ ದಿನಗಳನ್ನು ಹೇಗೆ ಕಳೆದಿರಿ?
ನಾನು ಮೈಸೂರಲ್ಲಿದ್ದೆ. ನನ್ನ ಮತ್ತು ನನ್ನ ಪತ್ನಿಯ ತಂದೆ ತಾಯಿ ಇರುವುದು ಮೈಸೂರಲ್ಲಿ. ನನ್ನ ಪತ್ನಿ ಧನ್ಯಾ ನ್ಯೂಯಾರ್ಕ ನಲ್ಲಿ ಕೆಲಸದಲ್ಲಿ ದ್ದವಳು ಫೆಬ್ರವರಿ ಆರಂಭದಲ್ಲೇ ಮನೆಗೆ ಬಂದಿದ್ದಳು. ಮಾಸ್ಕ್ ಧರಿಸಿಕೊಂಡೇ ಬಂದಿದ್ದ ಆಕೆ, ಆ ದಿನಗಳಲ್ಲಿ ಕೊರೋನದ ಗಂಭೀರತೆಯ ಬಗ್ಗೆ ಹೇಳುವಾಗ ನಾನು ಅಷ್ಟಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ನಾನು ಮೈಸೂರಲ್ಲಿದ್ದಾಗ ದೇಶವೇ ಲಾಕ್‌ಡೌನ್ ಆಗಿಬಿಟ್ಟಿತ್ತು. ಮುಖ್ಯವಾಗಿ ನಾನು ಜಿಮ್ ಮಾಡಲೆಂದು ಹೊರಗೆ ಹೋಗುತ್ತಿದ್ದೆ. ನನ್ನ ಪತ್ನಿಗೆ ಒಂದಷ್ಟು ಯೋಗ ಗೊತ್ತು. ಹಾಗಾಗಿ ಯೋಗದ ಮೂಲಕ ಸ್ಟಿಫ್ ಆಗಿದ್ದ ಮಸಲ್ಸ್ ಗೆ ಫ್ಲೆಕ್ಸಿಬಿಲಿಟಿ ದೊರಕಿದಂತಾಯಿತು. ಉಳಿದಂತೆ ನನಗೆ ಅನಗತ್ಯವಾಗಿ ಮನೆಯಿಂದ ಹೊರಗಡೆ ತಿರುಗಾಡುವ ಅಭ್ಯಾಸ ಇರಲಿಲ್ಲ. ನನ್ನದೊಂದು ಗ್ರೂಪ್ ಸ್ನೇಹಿತರಿದ್ದಾರೆ. ಅದರಲ್ಲಿ ಸಂಗೀತಗಾರರು, ಓದಿನ ಆಸಕ್ತಿ ಹೊಂದಿದವರು ಎಲ್ಲ ಇದ್ದಾರೆ. ಅವರಲ್ಲೊಬ್ಬ ರೂಮಿಯ ಫ್ಯಾನ್ ಕೂಡ ಇದ್ದಾನೆ. ನನ್ನ ಪತ್ನಿಗೂ ಓದು ಇಷ್ಟ. ಜವಾಹರಲಾಲ್ ನೆಹರೂ ಅವರು ಬರೆದ ಲೆಟರ್ಸಟು ಇಂದಿರಾ’ ಪುಸ್ತಕ ಸೇರಿದಂತೆ ಹಿಸ್ಟರಿ, ಫಿಲಾಸಫಿ ಮೊದಲಾದ ಪುಸ್ತಕಗಳನ್ನು ಓದಿ ಚರ್ಚಿಸಿ ಮನೆಯಲ್ಲೇ ದಿನದೂಡುವುದು ಕಷ್ಟವಾಗಲಿಲ್ಲ.


ಬೆಂಗಳೂರಲ್ಲಿ ಕೊರೋನ ಹೆಚ್ಚುತ್ತಿರುವುದು ಕಂಡಾಗ ಏನು ಅನಿಸುತ್ತಿದೆ?
 ಲಾಕ್‌ಡೌನ್ ಮುಗಿದ ಬಳಿಕ ಬೆಂಗಳೂರಿಗೆ ಬಂದಿದ್ದ ನಾನು, ಎರಡು ದಿನದ ಹಿಂದೆಯಷ್ಟೇ ನಾನು ಮೈಸೂರಿಗೆ ವಾಪಸಾಗಿದ್ದೇನೆ. ಬೆಂಗಳೂರಲ್ಲಿ ಕೊರೋನ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದು ಕೂಡ ಅದಕ್ಕೆ ಕಾರಣ. ಬೆಂಗಳೂರಲ್ಲೇ ಇದ್ದರೂ, ಅಣ್ಣನ ಮನೆಗೆ ಕೂಡ ಹೋಗಲು ಅಂಜಿಕೆಯಾಗಿತ್ತು. ಯಾಕೆಂದರೆ ಆತನ ಮನೆಯಲ್ಲಿ ಪುಟ್ಟ ಮಗುವಿದೆ. ನಾನು ಎಷ್ಟೇ ಜಾಗರೂಕತೆಯಲ್ಲಿದ್ದರೂ, ನನಗೂ ಸೋಂಕು ತಗಲಿ ನನ್ನಿಂದ ಮಗುವಿಗೂ ಹರಡಬಾರದು ಎನ್ನುವುದು ನನ್ನ ಕಾಳಜಿಯಾಗಿತ್ತು. ಹೊರಗಡೆ ದುಡಿಯಲೇ ಬೇಕಾದವರು, ದಿನಗೂಲಿ ಕಾರ್ಮಿಕರು ಎಚ್ಚರಿಕೆ ವಹಿಸುವುದು ತುಂಬ ಮುಖ್ಯ. ನಾನು ಎಲ್ಲೋ ಓದಿದ ಹಾಗೆ, ಇದು ್ಙ‘ಆರು ತಿಂಗಳ ಸೈಕಲ್’ ಅಂತೆ. ಆರು ತಿಂಗಳ ಒಳಗೆ ಎರಡು ಬಾರಿ ಬಂದು ಆಮೇಲೆ ಕಡಿಮೆಯಾಗುತ್ತದಂತೆ. ಎಲ್ಲರಂತೆ ಎಲ್ಲ ವರ್ಗದ ಜನಜೀವನ, ಚಿತ್ರರಂಗ ಸುಧಾರಿಸಲು ಪ್ರಾರ್ಥಿಸುತ್ತಿದ್ದೇನೆ.


ಬಿಡುಗಡೆಯಾಗಲಿರುವ ನಿಮ್ಮ ‘ವಿಂಡೋ ಸೀಟ್’ ಚಿತ್ರದ ಬಗ್ಗೆ ಹೇಳಿ
   ‘ವಿಂಡೋ ಸೀಟ್’ ಶೀತಲ್ ಶೆಟ್ಟಿಯವರ ನಿರ್ದೇಶನದ ಚಿತ್ರ. ನನಗೆ ಸ್ಕ್ರಿಪ್ಟ್ ಕೇಳಿದಾಗಲೇ ಇಷ್ಟವಾಗಿತ್ತು. ಜತೆಗೆ ಅವರು ಈಗಾಗಲೇ ನಿರ್ದೇಶಿಸಿದ ‘ಕಾರು’ ಎನ್ನುವ ಕಿರುಚಿತ್ರ ನೋಡಿದ ಮೇಲೆ ಅವರ ನಿರ್ದೇಶನದ ಬಗ್ಗೆಯೂ ಭರವಸೆ ಮೂಡಿತ್ತು. ಅದನ್ನು ನಿಜವಾಗಿಸುವಂತೆ ಅವರ ಪ್ರಥಮ ಚಿತ್ರವಾದರೂ ಕೂಡ ತುಂಬ ಚೆನ್ನಾಗಿ ಮಾಡಿದ್ದಾರೆ. ಛಾಯಾಗ್ರಾಹಕ ವಿಘ್ನೇಶ್ ಸೇರಿದಂತೆ ಒಂದು ಹಾರ್ಡ ವರ್ಕಿಂಗ್ ಟೀಮ್ ಇದೆ. ಎಲ್ಲರಿಗೂ ಏನಾದರೂ ಹೊಸದು ಮಾಡಬೇಕು ಎನ್ನುವ ಆಸೆ ಇದೆ. ತುಂಬ ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ‘ವಿಂಡೋ ಸೀಟ್’ನಲ್ಲಿ ನಾನು ಒಬ್ಬ ಮ್ಯೂಶಿಯನ್ ಪಾತ್ರ ಮಾಡಿದ್ದೇನೆ. ಪಾತ್ರದ ಗ್ರಾಫ್ ಅದ್ಭುತವಾಗಿದೆ. ಉಳಿದಿರುವುದನ್ನು ಚಿತ್ರ ತೆರೆಕಂಡ ಮೇಲೆ ಪ್ರೇಕ್ಷಕರೇ ನೋಡಿ ಹೇಳಬೇಕು.

Writer - ಸಂದರ್ಶನ: ಶಶಿಕರ ಪಾತೂರು

contributor

Editor - ಸಂದರ್ಶನ: ಶಶಿಕರ ಪಾತೂರು

contributor

Similar News