ಪ್ರಧಾನಿಯ ಲೇಹ್ ಆಸ್ಪತ್ರೆ ಭೇಟಿ ಕುರಿತು ಅನುಮಾನ ವ್ಯಕ್ತಪಡಿಸುವುದು ‘ದುರದೃಷ್ಟಕರ’: ಸೇನೆ

Update: 2020-07-04 16:35 GMT

ಹೊಸದಿಲ್ಲಿ, ಜು.5: ಕಳೆದ ತಿಂಗಳು ಗಲ್ವಾನ್ ಕಣಿವೆಯಲ್ಲಿ ಚೀನಿ ಸೈನಿಕರೊಂದಿಗೆ ನಡೆದ ಭೀಕರ ಘರ್ಷಣೆಯಲ್ಲಿ ಗಾಯಗೊಂಡ ಭಾರತೀಯ ಯೋಧರು ಚಿಕಿತ್ಸೆ ಪಡೆಯುತ್ತಿರುವ ಲೇಹ್‌ನ ಸೇನಾಸ್ಪತ್ರೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯು, ಒಂದು ಕಪಟ ‘ಪ್ರದರ್ಶನ’ ವಾಗಿತ್ತು ಎಂಬ ಆರೋಪಗಳನ್ನು ಭಾರತೀಯ ಸೇನೆಯು ತಳ್ಳಿಹಾಕಿದೆ.

  ‘‘ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿರುವ ಲೇಹ್‌ನಲ್ಲಿರುವ ಸೇನಾ ಜನರಲ್ ಆಸ್ಪತ್ರೆಯಲ್ಲಿನ ಚಿಕಿತ್ಸಾ ಸೌಲಭ್ಯಗಳ ಬಗ್ಗೆ ಕೆಲವು ವಲಯಗಳಲ್ಲಿ ಮಾಡಲಾಗುತ್ತಿರುವ ಆರೋಪಗಳು ದುರುದ್ದೇಶಪೂರಿತ ಹಾಗೂ ಆಧಾರರಹಿತವಾದುದು’’ ಎಂದು ಸೇನೆಯು ಹೇಳಿಕೆಯೊಂದರಲ್ಲಿ ತಿಳಿಸಿದೆ. ‘‘ ನಮ್ಮ ಪರಾಕ್ರಮಶಾಲಿ ಸಶಸ್ತ್ರಪಡೆಗಳ ಯೋಧರಿಗೆ ನೀಡಲಾಗುತ್ತಿರುವ ಶುಶ್ರೂಷೆಗಳ ಬಗ್ಗೆ ಕಳಂಕ ಹಚ್ಚುತ್ತಿರುವುದು ದುರದೃಷ್ಟಕರವಾಗಿದೆ. ಸಶಸ್ತ್ರ ಪಡೆಗಳು ತಮ್ಮ ಸಿಬ್ಬಂದಿಗೆ ಸಾಧ್ಯವಿರುವ ಎಲ್ಲಾ ಅತ್ಯುತ್ತಮ ಚಿಕಿತ್ಸೆಗಳನ್ನು ನೀಡುತ್ತಿವೆ’’ ಎಂದು ಅದು ಹೇಳಿದೆ.

   ಮೋದಿ ಶುಕ್ರವಾರ ಲೇಹ್‌ನಲ್ಲಿ ಗಾಯಾಳು ಯೋಧರನ್ನು ಭೇಟಿ ಮಾಡಿದಂತಹ ಮಿಲಿಟರಿ ಘಟಕವು ಆಸ್ಪತ್ರೆಯಂತೆ ಕಾಣುವುದಿಲ್ಲವೆಂದು ಕೆಲವು ರಾಜಕೀಯ ನಾಯಕರು ಹಾಗೂ ಜನರು ಸಾಮಾಜಿಕ ಜಾಲತಾಣಗಳಲ್ಲಿ ಗಮನಸೆಳೆದಿದ್ದರು. ವೈದ್ಯರು ಇರಬೇಕಾದ ಸ್ಥಳದಲ್ಲಿ ಛಾಯಾಗ್ರಾಹಕರಿದ್ದರು ಹಾಗೂ ಯಾವುದೇ ಡ್ರಿಪ್ ವ್ಯವಸ್ಥೆ ಇರಲಿಲ್ಲ, ಔಷಧಿಗಳು ಹಾಗೂ ನೀರಿನ ಬಾಟಲಿಗಳು ಕಾಣಿಸುತ್ತಿರಲಿಲ್ಲ’’ ಎಂದು ಕಾಂಗ್ರೆಸ್ ನಾಯಕ ಅಭಿಷೇಕ್ ದತ್ತ್ ಟ್ವೀಟ್ ಮಾಡಿದ್ದರು.

  ಗಾಯಾಳು ಯೋಧರ ಜೊತೆ ಮೋದಿ ಅವರ ಭೇಟಿಯು ತೋರಿಕೆಯ ಪ್ರದರ್ಶನವೆಂದು ಕಾಂಗ್ರೆಸ್ ಪಕ್ಷದ ನಾಯಕ ಸಲ್ಮಾನ್ ನಿಝಾಮಿ ಕಟಕಿಯಾಡಿದ್ದಾರೆ. “ಮೋದಿ ಒಬ್ಬ ಅಪ್ಪಟ ಸುಳ್ಳುಗಾರ, ಮೊದಲು ಅವರು ಯಾರೂ ನಮ್ಮ ಭೂಪ್ರದೇಶವನ್ನು ಪ್ರವೇಶಿಸಿರಲಿಲ್ಲವೆಂದು ಹೇಳಿದ್ದರು. ಈಗ ಅವರು ಚೀನಿ ಆಕ್ರಮಣದಿಂದ ಗಾಯಗೊಂಡ ಯೋಧರ ಜೊತೆ ಕಪಟ ಫೋಟೋ ಸೆಶನ್ ನಡೆಸಿದ್ದಾರೆ” ಎಂದವರು ಟೀಕಿಸಿದರು.

   ಈ ಬಗ್ಗೆ ಸೇನೆ ಇಂದು ಸ್ಪಷ್ಟನೆ ನೀಡಿ, ಗಾಯಾಳು ಯೋಧರಿಗೆ ಚಿಕಿತ್ಸೆಗಾಗಿ ವಿಶಾಲವಾದ ಹಾಲ್ ಅನ್ನು ವಾರ್ಡ್ ಆಗಿ ಪರಿವರ್ತಿಸಲಾಗಿತ್ತು ಎಂದು ತಿಳಿಸಿದೆ. ‘ಕೋವಿಡ್-19 ಹಾವಳಿಯ ಹಿನ್ನೆಲೆಯಲ್ಲಿ ಸೇನಾ ಜನರಲ್ ಆಸ್ಪತ್ರೆಯ ಕೆಲವು ವಾರ್ಡ್‌ಗಳನ್ನು ಐಸೋಲೇಶನ್ ಘಟಕಗಳಾಗಿ ಪರಿವರ್ತಿಸಲಾಗಿದೆ. ಕೋವಿಡ್-19 ಹಾವಳಿಯಿಂದ ಯೋಧರನ್ನು ಸುರಕ್ಷಿತವಾಗಿರಿಸಲು ಗಲ್ವಾನ್‌ನಿಂದ ಆಗಮಿಸಿದ ದಿನದಿಂದಲೇ ಅವರನ್ನು ಈ ಘಟಕದಲ್ಲಿರಿಸಲಾಗಿದೆ ಎಂದು ಸೇನಾ ಹೇಳಿಕೆ ತಿಳಿಸಿದೆ. ಸೇನಾ ಸಿಬ್ಬಂದಿ ವರಿಷ್ಠ ಜನರಲ್ ಎಂ.ಎಂ. ನರವಾಣೆ ಹಾಗೂ ಸೇನಾ ಕಮಾಂಡರ್ ಕೂಡಾ ಇದೇ ಸ್ಥಳದಲ್ಲಿ ಗಾಯಾಳು ಯೋಧರನ್ನು ಭೇಟಿಯಾಗಿದ್ದರು ಎಂದು ಸೇನಾ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News