ಟಿಕ್ ಟಾಕ್ ಗೆ ಪರ್ಯಾಯ: ‘ಇನ್ ಸ್ಟಾಗ್ರಾಂ’ ಪರಿಚಯಿಸುತ್ತಿದೆ ‘ರೀಲ್ಸ್’
ಹೊಸದಿಲ್ಲಿ: ತನ್ನ ಹೊಸ ಕಿರು ವೀಡಿಯೋ ಶೇರಿಂಗ್ ಫೀಚರ್ `ರೀಲ್ಸ್' ಟೆಸ್ಟಿಂಗ್ ಭಾರತದಲ್ಲಿ ನಡೆಯುತ್ತಿದೆ ಎಂದು ಇನ್ ಸ್ಟಾಗ್ರಾಂ ಮಾಹಿತಿ ನೀಡಿದೆ. ಈ ಹೊಸ ಫೀಚರ್ ಭಾರತದ ಬಳಕೆದಾರರಿಗೆ ಇಂದು ಸಂಜೆ 7:30ರಿಂದ ದೊರೆಯಲಿದ್ದು, ರಾಧಿಕಾ ಬಂಗಿಯಾ, ಜಾಹ್ನವಿ ದಾಸೆಟ್ಟಿ ಅಕಾ ಮಹತಳ್ಳಿ, ಇಂದ್ರಾಣಿ ಬಿಸ್ವಾಸ್ , ಎಮ್ಮಿ ವಿರ್ಕ್ ಮುಂತಾದವರು ರಚಿಸಿರುವ ಮನರಂಜನಾತ್ಮಕ ವೀಡಿಯೋಗಳನ್ನು ಬಳಕೆದಾರರು ವೀಕ್ಷಿಸಬಹುದಾಗಿದೆ.
ಭಾರತ ಸರಕಾರ ಚೀನೀ ಮೂಲದ ಟಿಕ್ ಟಾಕ್ ಆ್ಯಪ್ ನಿಷೇಧಿಸಿದ ಒಂದು ವಾರದಲ್ಲಿ `ರೀಲ್ಸ್' ಅನ್ನು ಇನ್‍ಸ್ಟಾಗ್ರಾಂ ಭಾರತದಲ್ಲಿ ಪರಿಚಯಿಸುತ್ತಿದೆ.
‘ರೀಲ್ಸ್' ನಲ್ಲಿ ಜನಪ್ರಿಯ ಕಂಟೆಂಟ್ ಸೃಷ್ಟಿಸುವ ನಿಟ್ಟಿನಲ್ಲಿ ಟಿಕ್ ಟಾಕ್ ಹಾಗೂ ಯುಟ್ಯೂಬ್ ಕಂಟೆಂಟ್ ಸೃಷ್ಟಿಕರ್ತರ ಜತೆ ತಾನು ಸಂಪರ್ಕ ಸಾಧಿಸುತ್ತಿರುವುದಾಗಿ ಇನ್ ಸ್ಟಾಗ್ರಾಂ ಹೇಳಿಕೊಂಡಿದೆ. ಬ್ರೆಝಿಲ್, ಫ್ರಾನ್ಸ್, ಜರ್ಮನಿ ನಂತರ `ರೀಲ್ಸ್' ಫೀಚರ್ ಟೆಸ್ಟಿಂಗ್ ಗೆ ಒಳಗಾಗುತ್ತಿರುವ ನಾಲ್ಕನೇ ದೇಶ ಭಾರತವಾಗಿದೆ.
ಈ `ರೀಲ್ಸ್' ಫೀಚರ್ ಇನ್ ಸ್ಟಾಗ್ರಾಂ ಆ್ಯಪ್ ನಲ್ಲಿಯೇ ಇದ್ದು, `ರೀಲ್ಸ್' ಸೃಷ್ಟಿಸಲು ಬಳಕೆದಾರರು ಆ್ಯಪ್‍ನಲ್ಲಿನ ಕ್ಯಾಮರಾ ಆಪ್ಶನ್ ಗೆ ಕ್ಲಿಕ್ ಮಾಡಬೇಕಿದೆ. ಬಳಕೆದಾರ ಸ್ನೇಹಿ ತಂತ್ರಾಂಶಗಳ ಮೂಲಕ 15 ಸೆಕೆಂಡ್‍ಗಳ ವೀಡಿಯೋ ರೆಕಾರ್ಡ್ ಮಾಡಿ ಎಡಿಟ್ ಮಾಡಬಹುದಾಗಿದೆ.
ಬಳಕೆದಾರರು ಇನ್-ಆ್ಯಪ್ ಮ್ಯೂಸಿಕ್ ಟ್ರ್ಯಾಕ್ ಅಥವಾ ತಮಗೆ ಬೇಕಿದ್ದ ಧ್ವನಿ ಬಳಸಬಹುದಾಗಿದೆ. `ರೀಲ್ಸ್'ನಲ್ಲಿ ಹಲವಾರು ರಿಯಾಲಿಟಿ ಎಫೆಕ್ಟ್ ಗಳೂ ಇದ್ದು ತಮಾಷೆಯ ವೀಡಿಯೋಗಳನ್ನು ಮಾಡಬಹುದಾಗಿದೆ.