10ನೆ ತರಗತಿ ಪರೀಕ್ಷೆ: ಶೇ.100 ಅಂಕ ಗಳಿಸಿದ ವಿದ್ಯಾರ್ಥಿನಿ
ಹೊಸದಿಲ್ಲಿ: ಹಿಸಾರ್ ಜಿಲ್ಲೆಯ ನರ್ನೌಂದ್ ಎಂಬಲ್ಲಿರುವ ಠಾಗೋರ್ ಸೀನಿಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿ ರಿಶಿತಾ ಹರ್ಯಾಣ 10ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಟಾಪ್ ಐದು ವಿಷಯಗಳಲ್ಲಿ ಶೇ 100 ಅಂಕ ಗಳಿಸಿ ರಾಜ್ಯಕ್ಕೆ ಟಾಪರ್ ಆಗಿದ್ದಾಳೆ.
ಒಟ್ಟು ಆರು ವಿಷಯಗಳ ಪೈಕಿ ಐದರಲ್ಲಿ- ಇಂಗ್ಲಿಷ್, ಗಣಿತ. ವಿಜ್ಞಾನ, ಸಮಾಜವಿಜ್ಞಾನ ಹಾಗೂ ಎಂಎಚ್‍ವಿಯಲ್ಲಿ ಆಕೆ ನೂರು ಪ್ರತಿಶತ ಅಂಕ ಗಳಿಸಿದ್ದಾಳೆ.
ಅದೇ ಶಾಲೆಯ ಮೂರು ಇತರ ವಿದ್ಯಾರ್ಥಿಗಳಾದ ಉಮಾ, ಸ್ನೇಹ್ ಹಾಗೂ ಕಲ್ಪನಾ ಶೇ 99.8ರಷ್ಟು ಅಂಕಗಳೊಂದಿಗೆ ಎರಡನೇ ಸ್ಥಾನ ಗಳಿಸಿದ್ದಾರೆ.
ಜಿಎನ್‍ಜೆಎನ್ ಗೋಯೆಂಕ ಬಾಲಕಿಯರ ಹೈಸ್ಕೂಲಿನ ನಿಕಿತಾ ಮಾರುತಿ ಸಾವಂತ್ ಹಾಗೂ ಖಂಡ ಖೇರಿ ಎಂಬಲ್ಲಿನ ಡಿಎನ್ ಹೈಸ್ಕೂಲಿನ ಅಂಕಿತಾ ಕೂಡ ಶೇ 99.8 ಅಂಕ ಗಳಿಸಿದ್ದಾರೆ. ನವಯುಗ ಹೈಸ್ಕೂಲಿನ ಚಾಹಕ್ ಶೇ 99.6 ಅಂಕ ಗಳಿಸಿದ್ದಾರೆ.
ಈ ಬಾರಿ ಹತ್ತನೇ ತರಗತಿ ಪರೀಕ್ಷೆಗೆ ಒಟ್ಟು 3,37,691 ವಿದ್ಯಾರ್ಥಿಗಳು ಹಾಜರಾಗಿದ್ದು ಅವರಲ್ಲಿ ಶೇ 64.59 ಮಂದಿ ತೇರ್ಗಡೆ ಹೊಂದಿದ್ದಾರೆ. ಬಾಲಕಿಯರ ತೇರ್ಗಡೆ ಪ್ರಮಾಣ ಶೇ 69.86 ಆಗಿದ್ದರೆ ಬಾಲಕರ ತೇರ್ಗಡೆ ಪ್ರಮಾಣ ಶೇ 60.27 ಆಗಿದೆ.