ವಿಕಾಸ್ ದುಬೆ: ಒಂದು ಕತೆ; ಮೂರು ಚಿತ್ರಕತೆ!
ಮುಂಬೈಯಲ್ಲಿ ನಮ್ಮ ಮಹಾನಾಯಕರೂ, ಗ್ಯಾಂಗ್‌ಸ್ಟರ್ ಭಾಯಿಗಳೂ ಆರಾಮಾಗಿ ಪರಸ್ಪರ ಸಹಕಾರದಿಂದ ಕೆಲಸ ಮಾಡಿಕೊಂಡು ಹೋಗುತ್ತಿರುವುದನ್ನು ಕಂಡವರು, ‘‘ಈ ಕಾನ್ಪುರ್ ಸ್ಟೋರೀಲಿ ಮಸಾಲೆಯೇನೋ ಸಾಕಷ್ಟಿದೆ; ಆದರೆ ಸ್ಕ್ರಿಪ್ಟ್ ಒಂಚೂರು ತಿದ್ದಿ ಬರೀಬೇಕು!’’ ಅನ್ನಬಹುದು! ಯಾಕೆಂದರೆ ಈಗ ಸ್ಕ್ರಿಪ್ಟ್ ಎಷ್ಟು ತೋಪಾಗಿದೆ ಅಂದರೆ, ಬಾಲಿವುಡ್ ಸಿನೆಮಾ ಫ್ಯಾಕ್ಟರಿಯವರೂ ಈ ಪೊಲೀಸ್-ಪಾಲಿಟೀಷಿಯನ್ ಅಲಿಯಾಸ್ ‘ಪೋ-ಪಾ’ ಸ್ಕ್ರಿಪ್ಟ್ ನೋಡಿ ನಗ್ತಾ ಇದ್ದಾರೆ! ಆದರೂ ಸ್ಟೋರಿ ಲೈನ್ ತೀರಾ ದೋಖಾ ಇಲ್ಲ ಅಲ್ವ?
ಗ್ಯಾಂಗ್‌ಸ್ಟರ್ ವಿಕಾಸ್ ದುಬೆಯ ‘ಸ್ಟೇಜ್ ಮ್ಯಾನೇಜ್ಡ್ ಎನ್ ಕೌಂಟರ್’ ಬಗ್ಗೆ ಟಿವಿ ರಿಪೋರ್ಟರುಗಳು ಕ್ಷಣಕ್ಷಣಕ್ಕೂ ತಯಾರಿಸಿ ಉಡಾಯಿಸುತ್ತಿದ್ದ ಸ್ಕ್ರಿಪ್ಟುಗಳನ್ನು ನೋಡಿ ಕಂಗಾಲಾದ ಖ್ಯಾತ ಲೇಖಕಿ ಶೋಭಾ ಡೇ ಅವರಿಗೆ ‘‘ಇದೇನು! ಈ ದುಬೆ ಕೊಲೆ ಮಾಡಲು ಪೊಲೀಸ್-ಪಾಲಿಟೀಷಿಯನ್ಸ್ ಬರೆದ ತರಾತುರಿ ಸ್ಕ್ರಿಪ್ಟು ಇಷ್ಟು ತೆಳುವಾಗಿದೆಯಲ್ಲ!’ ಎನ್ನಿಸಿ ಪೆಚ್ಚೆನ್ನಿಸಿತು.
ಹೀಗೆ ಪೆಚ್ಚಾದ ಶೋಭಾ ಡೇ ‘ದ ವೈರ್’ ವೆಬ್ ಸೈಟಿನಲ್ಲಿ ಬರೆದ ಸಿನೆಮಾ ಟಿಪ್ಪಣಿಗಳನ್ನು ಮೊದಲು ನೋಡೋಣ:
ಮುಂಬೈಯ ನಿತ್ಯ ಜೀವನದಲ್ಲಿ ರೀಲ್ ಲೈಫಿನ ತುಣುಕುಗಳು ಸದಾ ಕಾಣಿಸಿಕೊಳ್ಳುವುದನ್ನು ಬಲ್ಲ ನಮಗೆಲ್ಲ ‘ಅಯ್ಯೋ! ಈ ಉತ್ತರಪ್ರದೇಶದ ಕಡೆಯವರು ಒಳ್ಳೆ ಸ್ಕ್ರಿಪ್ಟ್ ರೈಟರ್ರನ್ನು ಕೂಡ ಬಾಡಿಗೆ ತಗೊಂಡಿಲ್ಲವಲ್ಲ!’ ಎಂದು ಅಚ್ಚರಿಯಾಯಿತು. ‘ಥತ್! ಇದು ಎಪ್ಪತ್ತರ ದಶಕದ ಸಿ-ಗ್ರೇಡ್ ಕ್ರೈಂ ಥ್ರಿಲ್ಲರುಗಳಿಗಿಂತ ಹೋಪ್‌ಲೆಸ್ಸಾಗಿದೆಯಲ್ಲ! ಇಂಥ ಸ್ಕ್ರಿಪ್ಟಿನ ಸಿನೆಮಾಕ್ಕೆ ಯಾವ ಪ್ರೇಕ್ಷಕನೂ ಒಂದು ನಯಾ ಪೈಸಾ ಕೂಡ ಕೊಡಲು ಮುಂದೆ ಬರಲಾರ! ‘ಜೀವನವು ಕಲೆಯನ್ನು ಅನುಕರಣೆ ಮಾಡಬೇಕು’ ಅಂತ ನೀವು ಹೊರಟಿದ್ರೆ, ಅದನ್ನು ಒಂಚೂರು ಚೆನ್ನಾಗಿ ಮಾಡಬೇಕಲ್ಲವೇ, ಗುರೂ!
ಇಡೀ ಪೊಲೀಸ್ ಸ್ಕ್ರಿಪ್ಟಿನಲ್ಲಿ ನನ್ನ ಫೇವರಿಟ್ ಸಿನಿಮೀಯ ಪಾಯಿಂಟ್ ಯಾವುದು ಗೊತ್ತಾ! ಉಜ್ಜೈನಿಯ ಮಹಾಕಾಲ ದೇವಸ್ಥಾನದ ಹೊರಗೆ ಅರೆಸ್ಟ್ ಆಗುವ ಮೊದಲು ‘ನಾನು ವಿಕಾಸ್ ದುಬೆ! ಕಾನ್ಪುರ್ ವಾಲಾ!’ ಅಂತ ದುಬೆ ಹೆಮ್ಮೆಯಿಂದ ಹೇಳಿದ ತಕ್ಷಣ, ಅವನ ಹಿಂದುಗಡೆಯಿಂದ ಕರೆಕ್ಟಾಗಿ ರಿಹರ್ಸಲ್ ಮಾಡಿಕೊಂಡು ಬಂದಿದ್ದ ಕಾನ್‌ಸ್ಟೇಬಲ್ ವಿಕ್ರಮ್ ರಾಥೋಡ್ ಆ ಗ್ಯಾಂಗ್‌ಸ್ಟರ್ ತಲೆಗೆ ಹೊಡೆದಿದ್ದು! ಅದರಲ್ಲೂ ಈ ರಾಥೋಡ್ ಮೊನ್ನೆ ಕೋವಿಡ್ ಬಂದು ಚೇತರಿಸಿಕೊಂಡವನು ಅನ್ನುವುದು ಗೊತ್ತಾದ ಮೇಲಂತೂ ಇದು...ಇದು ನೋಡಿ ರಾಜಾ ಸೀನ್! ಈ ದೃಶ್ಯದ ಜೊತೆಗೆ ಮಹಾಕಾಲ ದೇವಸ್ಥಾನದಲ್ಲಿ ಇನ್ನೇನು ಅರೆಸ್ಟ್ ಆಗಲಿರುವ ವಿಕಾಸ್ ದುಬೆ ದೇವರಿಗೆ ಆರತಿ ಮಾಡಿಸುತ್ತಾ ತೆಗೆದುಕೊಂಡಿರುವ ಸೆಲ್ಫೀ ವೀಡಿಯೊ ಇಟ್ಟು ನೋಡಿ: ಥೇಟರಿನಲ್ಲಿ ಪ್ರೇಕ್ಷಕರ ಚಪ್ಪಾಳೆ ಹೇಗೆ ಬೀಳುತ್ತೆ ಅನ್ನೋದನ್ನು ಆರಾಮಾಗಿ ಊಹಿಸಿಕೊಳ್ಳಬಹುದು! ಕಾನ್‌ಸ್ಟೇಬಲ್ ಪಾತ್ರಕ್ಕೆ ಬೇರೆ ಇನ್ಯಾರು! ಈ ರಕ್ತಸಿಕ್ತ ಕತೆ ಬೇಕೇಬೇಕು ಎಂದು ಅಕ್ಷಯ್ ಕುಮಾರ್ ಈಗಾಗಲೇ ಉತ್ತರ ಪ್ರದೇಶದ ಕಡೆಗೆ ಫಾಸ್ಟಾಗಿ ಡ್ರೈವ್ ಮಾಡ್ತಾ ಇರಬಹುದು! ಇನ್ನೇನು ಟೈಟಲ್ ಅನೌನ್ಸ್ ಆಗಬಹುದು. ನಾನಂತೂ ‘ಕಾನ್ಪುರ್ ವಾಲಾ’ ಟೈಟಲ್ಲೇ ಸರಿ ಅಂತೀನಿ! ಕೇಳಿದೋರೆಲ್ಲ ‘ಸಕತ್ತಾಗಿದೆ’ ಅಂತಿದಾರೆ!
ಮುಂಬೈಯಲ್ಲಿ ನಮ್ಮ ಮಹಾನಾಯಕರೂ, ಗ್ಯಾಂಗ್‌ಸ್ಟರ್ ಭಾಯಿಗಳೂ ಆರಾಮಾಗಿ ಪರಸ್ಪರ ಸಹಕಾರದಿಂದ ಕೆಲಸ ಮಾಡಿಕೊಂಡು ಹೋಗುತ್ತಿರುವುದನ್ನು ಕಂಡವರು, ‘‘ಈ ಕಾನ್ಪುರ್ ಸ್ಟೋರೀಲಿ ಮಸಾಲೆಯೇನೋ ಸಾಕಷ್ಟಿದೆ; ಆದರೆ ಸ್ಕ್ರಿಪ್ಟ್ ಒಂಚೂರು ತಿದ್ದಿ ಬರೀಬೇಕು!’’ ಅನ್ನಬಹುದು! ಯಾಕೆಂದರೆ ಈಗ ಸ್ಕ್ರಿಪ್ಟ್ ಎಷ್ಟು ತೋಪಾಗಿದೆ ಅಂದರೆ, ಬಾಲಿವುಡ್ ಸಿನೆಮಾ ಫ್ಯಾಕ್ಟರಿಯವರೂ ಈ ಪೊಲೀಸ್-ಪಾಲಿಟೀಷಿಯನ್ ಅಲಿಯಾಸ್ ‘ಪೋ-ಪಾ’ ಸ್ಕ್ರಿಪ್ಟ್ ನೋಡಿ ನಗ್ತಾ ಇದ್ದಾರೆ! ಆದರೂ ಸ್ಟೋರಿ ಲೈನ್ ತೀರಾ ದೋಖಾ ಇಲ್ಲ ಅಲ್ವ?
ಕ್ವಿಕ್ಕಾಗಿ ಸ್ಟೋರಿ ಲೈನ್ ನೋಡಿ: ವಿಕಾಸ್ ದುಬೆ ಎಂಬ ವ್ಯಕ್ತಿ ಗಣ್ಯಾತಿಗಣ್ಯ ವ್ಯಕ್ತಿಗಳ ಜೊತೇಲೇ ಇದ್ದಾನೆ. ಅವನ ಜೊತೇಲಿರೋಕೆ, ಮುಗುಳ್ನಗುತ್ತಾ ಫೋಟೊಗೆ ಪೋಸ್ ಕೊಡೋಕೆ ಯಾರಿಗೂ ಮುಜುಗರವಿಲ್ಲ. ಈ ಫೋಟೊಗಳು ಅಲ್ಲಿ ಇಲ್ಲಿ ಎಲ್ಲ ಕಡೆ ಕಾಣ್ತಾನೇ ಇವೆ. ‘ಯಾವ ಮೆಕ್ಸಿಕೋ ಪಾಲಿಟಿಕ್ಸ್-ಟೆರರಿಸಂ ಪಿಚ್ಚರ್ ಹೇಳ್ತೀರ ಸ್ವಾಮಿ! ನಮ್ಮ ಉತ್ತರ ಪ್ರದೇಶದ ಎದುರು ಮೆಕ್ಸಿಕೋ ನಾಚ್ಕೋಬೇಕು! ಎಂತೆಂಥ ಡೆಡ್ಲಿ ಕ್ಯಾರಕ್ಟರುಗಳು ಅಲ್ಲಿ ಸೃಷ್ಟಿಯಾಗಿದ್ದಾವೆ-ಎಷ್ಟೋ ಕ್ಯಾರಕ್ಟರುಗಳು ಸರಕಾರದಲ್ಲೂ ಇದ್ದಾವೆ! ವಿಕಾಸ್ ದುಬೆ ಥರದವರು ಅರಳಲು ಸರಿಯಾದ ಸೆಟ್ಟಿಂಗು! ...ಎಷ್ಟೋ ವರ್ಷಗಳಿಂದ ದುಬೆ ಡ್ಯೂಟಿ ಮಾಡ್ತಾನೇ ಇದ್ದಾನೆ. ಅವನು ಎಲ್ಲಿದ್ದಾನೆ ಅನ್ನೋದು ಓಪನ್ ಸೀಕ್ರೆಟ್! ಗೊತ್ತಿದ್ದರೂ ಯಾರೂ ಏನೂ ಮಾಡೋಕಾಗಲಿಲ್ಲ! ಅಷ್ಟೇ ಅಲ್ಲ, ಅವನು ಎಲ್ಲಿದ್ದಾನೆ ಅಂತ ಯಾರಿಗೂ ಗೊತ್ತೂ ಆಗಲಿಲ್ಲ. ಅವನು ಎಲ್ಲರ ಕಣ್ಣ ಮುಂದೇ ಇದ್ದರೂ ಯಾರೂ ಅವನ ಕ್ರಿಮಿನಲ್ ಚಟುವಟಿಕೆ ಬಗ್ಗೆ ಏನೂ ಮಾಡಲಿಲ್ಲ. ಕಾರಣ: ಅವನು ಎಲ್ಲಿದ್ದಾನೆ ಅಂತ ಯಾರಿಗೂ ಗೊತ್ತಿರಲಿಲ್ಲ!
ಹೋದ ವಾರದ ತನಕ ಯಾರೋ ಮಹಾನ್ ನಾಯಕರೋ, ಅಧಿಕಾರಿಯೋ ‘ಅವನನ್ನು ತಲಾಷ್ಮಾಡಿ’ ಅಂತ ಫರ್ಮಾನ್ ಕೊಡೋ ತನಕ ಅವನು ಎಲ್ಲಿದ್ದಾನೆ ಅಂತ ಯಾರಿಗೂ ಗೊತ್ತಿರಲಿಲ್ಲವಲ್ಲ! ಸರಿ! ಸತ್ತವರು ಯಾರು? ‘ಸರ್ದಾರ್! ಕಿತನೇ ಆದ್ಮಿ ಥೇ?’ ಆ ಕತೆಯೆಲ್ಲ ತಮಗೆ ಗೊತ್ತೇ ಇದೆ! ಎಂಟು ಜನ ಪೊಲೀಸರು ಸತ್ತ ಮೇಲೆ ಪೊಲೀಸರು ಮೇಲೆದ್ದರು. ‘ನಡೀರಿ! ಆ ಬದ್ಮಾಶ್ ದುಬೆ ಬಿಲ್ಡಿಂಗ್ ಉಡಾಯ್ಸನ! ಬುಲ್ಡೋಜರ್ ತಗೊಂಬನ್ನಿ! ದುಬಾರಿ ಬೆಲೆಯ ಠ್ಠ ಗಳನ್ನು ಹೊಡೆದಾಕಿ ಮಜಾ ನೋಡೋಣ! ಟೀವಿ ಮೇಲೆ ಸಕತ್ತಾಗಿ ಕಾಣುತ್ತೆ! ಈ ಪ್ರಚಾರ ನೋಡಿ ಫಿಲ್ಮ್ ಮೇಕರ್ ರೋಹಿತ್ ಶೆಟ್ಟಿಗೂ ಒಂಚೂರು ಸ್ಫೂರ್ತಿ ಬರಬಹುದು!’ ಅನ್ನುತ್ತಾ ಪೊಲೀಸರು ಹೊರಟೇಬಿಟ್ಟರು!
ಆಯ್ತು! ಆ ಸಾಹಸವೂ ಆಯಿತು. ಅಪರಾಧಿ ಮಾತ್ರ ಓಡ್ತಾನೇ ಇದ್ದ. ಒಂದಲ್ಲ, ಎರಡಲ್ಲ, ನಾಕು ರಾಜ್ಯ ದಾಟಿದ! ಯಾರೂ ತಡೆಯೋರಿಲ್ಲ. ಸಾಧ್ಯ ಇಲ್ಲ ಅಂತೀರಾ? ಯಾಕಾಗಲ್ಲ! ಆಗುತ್ತೆ! ಕ್ಲೈಮ್ಯಾಕ್ಸ್ ಫಿಕ್ಸ್ ಆಗಿರೋದು ಬೇರೆ ರಾಜ್ಯದಲ್ಲಿ! ‘ಪ್ರೈಂ ಟೈಂ ಬ್ರೇಕಿಂಗ್ ಐಟಮ್ಮಿಗೆ ಹೇಳಿ ಮಾಡಿಸಿದಂಥ ಪ್ರಾಚೀನ ದೇವಾಲಯದಲ್ಲಿ ಅವನ ‘ಅರೆಸ್ಟು’! ಇದಕ್ಕಿಂತ ಇನ್ನೇನು ಬೇಕು! ಪ್ರಾಪ್ಸ್ ರೆಡಿ- ಆರತಿ ತಟ್ಟೆ, ಪ್ರಸಾದ, ಸುದ್ದಿ ಕೊಡೋ ವ್ಯಕ್ತಿ, ಸನ್ನದ್ಧರಾಗಿ ಹೆಜ್ಜೆ ಹಾಕ್ತಾ ಇರೋ ವೀರ ಪೊಲೀಸರು! ಅರೆ ಯಾರ್! ಜಲ್ದಿ ಡೈಲಾಗ್ ರೈಟರ್ ಕರೀ! ಕ್ವಿಕ್!
ವಿಕಾಸ್ ದುಬೆಯ ಪುಟ್ಟ ಆಸೆ ಇಷ್ಟೆ: ಕಾನ್ಪುರ ಅನ್ನೋದು ಇಡೀ ಲೋಕಕ್ಕೇ ಗೊತ್ತಾಗಬೇಕು. ಅವನ ಆಸೆ ಪೂರೈಸಿತು. ಕಾನ್ಪುರದ ಹೆಸರನ್ನು ಸಾರಿ ಹೇಳಿ ಪೊಲೀಸ್ ವ್ಯಾನ್ ಒಳಕ್ಕೆ ಕೂತ ತಕ್ಷಣ ಮುಂದೆ ಯಾವ ಯಾವ ಸೀನ್ ಬರುತ್ತೆ ಅನ್ನೋದೂ ಅವನಿಗೆ ಗೊತ್ತಿತ್ತು. ಆ ಪ್ರಕಾರವೇ ಅವನು ಕೂತಿರೋ ವ್ಯಾನ್ ಓಡ್ತಾ ಇದೆ! ಅರೆ! ಮೀಡಿಯಾದವರನ್ನು ವ್ಯಾನ್ ಹಿಂದೆ ಹೋಗಬೇಡಿ ಅಂತ ಹೆದ್ದಾರಿ ಪೊಲೀಸ್ನೋರು ತಡೀತಿದಾರಲ್ಲ! ಥತ್! ಸ್ಕ್ರಿಪ್ಟ್ ಬಿದ್ದೋಯ್ತು! ಯಾವನ್ರೀ ಅವನು ಸ್ಟಂಟ್ ಡೈರೆಕ್ಟರು! ಮೊದಲು ಅವನ್ನ ಒದ್ದು ಹೊರಕ್ಕಾಕಿ! ಹಾಂ! ಈಗ ಕರಕ್ಟಾಗಿ... ‘ಕರಕ್ಟ್’ ಆಗಿ ವ್ಯಾನ್ ಉರುಳಿಸಿ! ದುಬೆ ಓಡ್ತಾ ಇದಾನೆ... ಯೆಸ್! ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಪ್ಲೀಸ್! ನೆಕ್ಸ್ಟ್? ಇನ್ನೇನು.. ಈ ಸುದ್ದಿ ‘ಕೇಳಿ’ ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ದಿಗ್ಭ್ರಾಂತರಾಗಿ ಕೂತಿರೋ ಫ್ರೀಝ್ ಶಾಟ್ ಬರಬೇಕಲ್ಲ...ಛೇ! ಬರಲೇ ಇಲ್ಲ! ರೀ-ಟೇಕ್ ಪ್ಲೀಸ್!
ಇನ್ನು ಸಿನೆಮಾ...!
* * *
ಶೋಭಾ ಡೇ ಬರೆದ ಲಘು-ಗಂಭೀರ ಬರಹ ನೋಡಿದ ಸುಪ್ರಸಿದ್ಧ ಸಿನೆಮಾ ನಿರ್ದೇಶಕ ನಾಮ್ ಗೋಪಾಲ್ ಶರ್ಮಾ ಸುಮ್ಮನೆ ಕೈಕಟ್ಟಿ ಕೂರುವಂತಿರಲಿಲ್ಲ. ಉತ್ತರಪ್ರದೇಶದ ‘ಪಾ-ಪೋ’ ಸ್ಕ್ರಿಪ್ಟ್ ದುರ್ಬಲವಾಗಿದ್ದರೇನಂತೆ! ಶರ್ಮಾ ಬಳಿ ಉತ್ತರಗಳು ರೆಡಿಯಿದ್ದವು. ಅಂಥಾ ವೀರಪ್ಪನ್ ಕತೆಯನ್ನೇ ಸಿನೆಮಾ ಮಾಡಿದ್ದ ಅವರ ಕಣ್ಣೆದುರು ಇದೀಗ ಟಿವಿಯ ಮೇಲೆ ಕೌಸ್ವಾಮಿ ಕಿರುಚಿದ ತಕ್ಷಣ ಸಿನೆಮಾದ ಓಪನಿಂಗ್ ಶಾಟ್‌ನಿಂದ ಹಿಡಿದು ಕ್ಲೈಮ್ಯಾಕ್ಸಿನವರೆಗೆ ಸಕಲ ದೃಶ್ಯಗಳೂ ಮೂಡಿಬಿಟ್ಟವು! ಶರ್ಮಾ ಈ ಹಿಂದೆ ಕೊರೋನ ಪೀಡೆಗೆ ಮೊದಲು ಶೂಟ್ ಮಾಡಿದ ಗ್ಯಾಂಗ್‌ಸ್ಟರ್ ಸೀನುಗಳು, ಗ್ಯಾಂಗ್‌ವಾರ್ ಶಾಟುಗಳು ಅವರ ಆಫೀಸ್ ಕಂಪ್ಯೂಟರಿನಲ್ಲೂ, ಲ್ಯಾಪ್‌ಟಾಪಿನಲ್ಲೂ ದಂಡಿಯಾಗಿ ಬಿದ್ದಿದ್ದವು. ತಮ್ಮ ಎದುರಿಗಿದ್ದ ಲ್ಯಾಪ್‌ಟಾಪಿನಲ್ಲಿ ಚಕಚಕ ಸರ್ಚ್ ಮಾಡಿದರೆ ಅಡ್ಡಪಟ್ಟೆಯ ಟೀ-ಶರ್ಟಿನ ಒಂದು ಕ್ಯಾರಕ್ಟರ್ ಸುಮ್ಮನೆ ಓಡುತ್ತಿರುವ ನೂರಾರು ಶಾಟ್ಸ್ ಕಂಡವು. ಇನ್ನೇನು ಬೇಕು! ಎರಡು ಸಾಂಗು. ಐದು ಫೈಟು. ಮೂರು ಬುಲ್ಡೋಜರ್ ಸೀನು.
ಎರಡು ಲಾಂಗ್ ಕಾರ್ ಚೇಸ್, ಒಂದು ಪ್ರಾಚೀನ ದೇವಾಲಯ. ಎಂದಿನಂತೆ ಕೊನೆಗೆ ಪೊಲೀಸ್ ಎಂಟ್ರಿ, ಜೊತೆಗೆ ಮೀಡಿಯಾ ವ್ಯಾನುಗಳು... ಎಲ್ಲವನ್ನೂ ಸ್ಟುಡಿಯೋದಲ್ಲೇ ಶೂಟ್ ಮಾಡಬಹುದು. ಡಾನ್ ಲವರ್ ರೋಲಿಗೆ ಯಾರು? ಹಿಂದಿನಿಂದ ಬಂದು ಡಾನ್ ತಲೆಗೆ ಹೊಡೆಯುವ ‘ಧೀರ’ ಪೊಲೀಸ್ ಪಾತ್ರಕ್ಕೆ ಯಾರು? ಈ ಎಲ್ಲ ಚಿತ್ರಗಳೂ ಶರ್ಮಾರ ಕಣ್ಣೆದುರು ಮೂಡಿದ್ದವು. ಬರುವ ಆಗಸ್ಟ್ ಹದಿನೈದರ ಹೊತ್ತಿಗೆ ಸಿನೆಮಾ ರಿಲೀಸ್ ಮಾಡಿದರೆ.. ಈಗಾಗಲೇ ಟೀವಿಯ ಮೇಲೆ ಕೊರೋನ ಕತೆ ಕೈಬಿಟ್ಟು ದುಬೆ ಕತೆ ನೋಡ್ತಾ ಇರೋ ಜನ ಮುಖಕ್ಕೆ ಮಾಸ್ಕ್ ಸಮೇತ ಕುರಿಗಳ ಥರ ಸಿನೆಮಾ ಥೇಟರಿಗೆ ನುಗ್ಗಿಯೇ ನುಗ್ಗುತ್ತಾರೆ ಎನ್ನುವುದು ಪಕ್ಕಾ ಗ್ಯಾರಂಟಿಯಾಗಿ ನಾಮ್ ಗೋಪಾಲ್ ಶರ್ಮಾ ಗಹಗಹಿಸಿ ನಕ್ಕರು! ಶೋಭಾ ಡೇ ಬರಹ ಓದಿ ‘ಕಾನ್ಪುರ್ ವಾಲಾ’ ಟೈಟಲ್ಲನ್ನು ಇಷ್ಟೊತ್ತಿಗೆ ಯಾರಾದರೂ ರಿಜಿಸ್ಟರ್ ಮಾಡಿಯೇ ಇರುತ್ತಾರೆ ಎನ್ನುವುದು ಅವರ ಪಾಕಡಾ ತಲೆಗೆ ತಕ್ಷಣ ಹೊಳೆದು, ‘ಕಾನ್ಪುರ್ ಕಾ ಶೇರ್ ಮೇರೆ ಯಾರ್’ ಎಂದು ಟೈಟಲ್ ರಿಜಿಸ್ಟರ್ ಮಾಡಲು ಹುಡುಗನನ್ನು ಕಳಿಸಿದರು; ತಮ್ಮ ಆಫೀಸಿನಲ್ಲಿ ಸಂಜೆ ಆರು ಗಂಟೆಗೆ ಸರಿಯಾಗಿ ಆರಡಿ ಅಂತರದ ಪ್ರೆಸ್ ಮೀಟಿನಲ್ಲಿ ಹೊಚ್ಚ ಹೊಸ ಸಿನೆಮಾ ರಿಲೀಸ್ ಕುರಿತ ಸುದ್ದಿಯಿದೆ ಎಂದು ಸಿನೆಮಾ ರಿಪೋರ್ಟರುಗಳಿಗೆ ಫೋನ್ ಮಾಡಲು ಸೆಕ್ರೆಟರಿಯನ್ನು ಕೂಗಿದರು. ಈ ಸಿನೆಮಾ ತಮ್ಮ ಎಲ್ಲ ಸಿನೆಮಾಗಳಂತೆ ‘ನಿಜ ಜೀವನದ ಕತೆಯನ್ನು ಆಧರಿಸಿದೆ’ ಎಂದು ಹಳೆಯ ಪ್ರೆಸ್‌ನೋಟೊಂದನ್ನು ಕಾಪಿ ಪೇಸ್ಟ್ ಮಾಡತೊಡಗಿದರು.