ಕೊರೋನ ಪರೀಕ್ಷೆಗೆ ವಿದೇಶ ಪ್ರಯಾಣದ ವಿಮಾನ ಟಿಕೆಟ್‌ನ ಪ್ರತಿ ಬೇಕಂತೆ....!!

Update: 2020-07-18 14:30 GMT

ಶಾರ್ಜಾದಲ್ಲಿ ಉದ್ಯೋಗಿಯಾಗಿರುವ ದೇರಳಕಟ್ಟೆಯ ವ್ಯಕ್ತಿಯೊಬ್ಬರು ಮಾರ್ಚ್ ಮೂರನೇ ದಿನಾಂಕದಂದು ಊರಿಗೆ ಮರಳಿದ್ದರು. ಇತ್ತೀಚೆಗೆ ಅವರು ದುಡಿಯುತ್ತಿದ್ದ ಕಂಪೆನಿ ಜುಲೈ ಇಪ್ಪತ್ತೊಂದನೇ ದಿನಾಂಕದಂದು ಕೆಲಸಕ್ಕೆ ಹಾಜರಾಗಬೇಕೆಂದು ಅವರಿಗೆ ತಿಳಿಸಿತ್ತು. ಅದರಂತೆಯೇ ಅವರು ಮಂಗಳೂರಿನಿಂದ ಶಾರ್ಜಾಗೆ ಪ್ರಯಾಣಿಸಲು ದೇರಳಕಟ್ಟೆಯ ಟ್ರಾವೆಲ್ ಏಜೆಂಟರೊಬ್ಬರ ಬಳಿ ವಿಮಾನ ಟಿಕೆಟ್ ಮಾಡಿಸಲೆಂದು ಹೋದರು. ಟ್ರಾವೆಲ್ ಏಜೆಂಟ್ ಸಹಜವಾಗಿಯೇ "ನೀವು ಮೊದಲು ಕೋವಿಡ್ ಪರೀಕ್ಷೆ ಮಾಡಿಸಿ ಬನ್ನಿ. ಈಗ ಸ್ಪೆಶಲ್ ಫ್ಲೈಟ್‌ಗಳು ಮಾತ್ರ ಹಾರಾಡುವುದರಿಂದ ಸುಮಾರು ಮೂವತ್ತು ಸಾವಿರ ರೂಪಾಯಿಗಳವರೆಗೆ ಟಿಕೆಟ್ ದರವಿದೆ. ಒಂದು ವೇಳೆ ನಿಮಗೇನಾದರೂ ಕೋವಿಡ್ ಪಾಸಿಟಿವ್ ಬಂದರೆ ನಿಮಗೆ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ ಮತ್ತು ನಿಮ್ಮ ದುಡ್ಡು ರೀಫಂಡ್ ಆಗುವುದಿಲ್ಲ" ಎಂದಿದ್ದಾರೆ.

ಅದರಂತೆಯೇ ಶಾರ್ಜಾಗೆ ಪ್ರಯಾಣಿಸಬೇಕಾಗಿದ್ದ ವ್ಯಕ್ತಿ ಖಾಸಗಿ ಆಸ್ಪತ್ರೆಯೊಂದಕ್ಕೆ ತೆರಳಿ ಕೋವಿಡ್ ಪರೀಕ್ಷೆ ಮಾಡಲು ಅಪೇಕ್ಷಿಸಿದರು. ಅವರನ್ನು ವಿಚಾರಿಸಿದ ಆಸ್ಪತ್ರೆಯವರು "ನೀವು ವಿದೇಶಕ್ಕೆ ಪ್ರಯಾಣಿಸುವ ಸಲುವಾಗಿ ಪರೀಕ್ಷೆ ಮಾಡುತ್ತಿರುವಿರಾದರೆ, ನಿಮ್ಮ ವಿದೇಶ ಪ್ರಯಾಣದ ಟಿಕೆಟ್ ಪ್ರತಿ ತೋರಿಸಿ ಎಂದಿದ್ದಾರೆ. ಅಷ್ಟೇನೂ ವಿದ್ಯಾವಂತನಲ್ಲದ ಅವರು ಮತ್ತೆ ದೇರಳಕಟ್ಟೆಯ ಟ್ರಾವೆಲ್ ಏಜೆಂಟರ ಬಳಿಗೆ ಹೋಗಿ ಜುಲೈ 20ನೇ ತಾರೀಕಿನಂದು ಶಾರ್ಜಾಕ್ಕೆ ಪ್ರಯಾಣಿಸಲು "ಮಂಗಳೂರಿನಿಂದ ಶಾರ್ಜಾಗೆ ಟಿಕೆಟ್ ಮಾಡಿಸಿದ್ದಾರೆ. ಟ್ರಾವೆಲ್ ಏಜೆಂಟ್ ಆಗಲೂ ಕೂಡಾ" ನಿಮಗೇನಾದರೂ ಅಪ್ಪಿ ತಪ್ಪಿ ಕೊರೋನ ಪಾಸಿಟಿವ್ ಬಂದರೆ ವಿದೇಶ ಪ್ರಯಾಣ ಮಾಡಲು ಸಾಧ್ಯವಿಲ್ಲ ಮತ್ತು ನಿಮ್ಮ ಟಿಕೆಟ್ ದುಡ್ಡು ರಿಫಂಡ್ ಆಗುವುದಿಲ್ಲ" ಎಂದು ಮತ್ತೊಮ್ಮೆ ಎಚ್ಚರಿಸಿದ್ದಾರೆ.

ಆದರೆ ಕೋವಿಡ್ ಪರೀಕ್ಷೆ ಮಾಡಲು ಆಸ್ಪತ್ರೆಯವರು ಟಿಕೆಟ್ ಪ್ರತಿ ತೋರಿಸಬೇಕೆಂಬ ಷರತ್ತು ಹಾಕಿರುವುದರಿಂದ ಅನ್ಯ ದಾರಿಯಿಲ್ಲದೇ ಟಿಕೆಟ್ ಮಾಡಿಸಿಕೊಂಡು ಆಸ್ಪತ್ರೆಗೆ ಹೋಗಿದ್ದಾರೆ. ಅದೂ ಸಾಲ ಸೋಲ ಮಾಡಿ ಸುಮಾರು ಮೂವತ್ತು ಸಾವಿರದಷ್ಟು ದುಡ್ಡು ಪಾವತಿಸಿ ಟಿಕೆಟ್ ಪಡೆದಿದ್ದಾರೆ. ಆ ಬಳಿಕ ಟಿಕೆಟ್ ಪ್ರತಿಯೊಂದಿಗೆ ಖಾಸಗಿ ಆಸ್ಪತ್ರೆಗೆ ತೆರಳಿ ನಾಲ್ಕು ಸಾವಿರ ರೂಪಾಯಿಗಳನ್ನು ಪಾವತಿಸಿ ಕೋವಿಡ್ ಪರೀಕ್ಷೆ ಮಾಡಿಸಿದ್ದಾರೆ. ಫಲಿತಾಂಶ ಬಂದಾಗ ಕೋವಿಡ್ ಪಾಸಿಟಿವ್ ಇತ್ತು. ಒಂದೆಡೆ ಕೋವಿಡ್ ಪಾಸಿಟಿವ್ , ಇನ್ನೊಂದೆಡೆ ಟಿಕೆಟ್ ದುಡ್ಡೂ ನಷ್ಟ. ಕೋವಿಡ್ ಪರೀಕ್ಷೆ ಮಾಡಿಸಲು ವಿದೇಶ ಪ್ರಯಾಣದ ಟಿಕೆಟ್ ಪ್ರತಿ ನೀಡಬೇಕೆಂಬ ನಿಯಮವೇನಾದರೂ ಸರಕಾರ ವಿಧಿಸಿದೆಯೇ..?
ಅಂತಹ ನಿಯಮವಿದ್ದರೆ ಸಂಬಂಧಪಟ್ಟ ಇಲಾಖೆಯಾಗಲೀ, ಆಸ್ಪತ್ರೆಯಾಗಲೀ ಮೊದಲೇ ಉದ್ಯೋಗವಿಲ್ಲದೇ ಆರ್ಥಿಕವಾಗಿ ಜರ್ಜರಿತನಾಗಿರುವ ಆ ವ್ಯಕ್ತಿಯ ಟಿಕೆಟ್ ದುಡ್ಡನ್ನು ನೀಡುತ್ತದೆಯೇ...?
ಸಂಬಂಧಪಟ್ಟವರು ಉತ್ತರಿಸಬೇಕು ಮತ್ತು ನಷ್ಟ ಅನುಭವಿಸಿದ ವ್ಯಕ್ತಿಗೆ ನಷ್ಟ ಪರಿಹಾರವನ್ನು ನೀಡಬೇಕಾಗಿದೆ..

Writer - ಇಸ್ಮತ್ ಪಜೀರ್

contributor

Editor - ಇಸ್ಮತ್ ಪಜೀರ್

contributor

Similar News