ಮಾಸ್ಕ್ ಧರಿಸದ ಜಡೇಜ: ಮಹಿಳಾ ಪೊಲೀಸ್ ಜೊತೆ ವಾಗ್ವಾದ

Update: 2020-08-12 06:14 GMT

ರಾಜ್‌ಕೋಟ್: ಮಾಸ್ಕ್ ಧರಿಸದಿರುವುದನ್ನು ಪ್ರಶ್ನಿಸಿದ ಕಾರಣಕ್ಕಾಗಿ ಟೀಮ್ ಇಂಡಿಯಾದ ಆಲ್‌ರೌಂಡರ್ ರವೀಂದ್ರ ಜಡೇಜ ಅವರು ಮಹಿಳಾ ಹೆಡ್ ಕಾನ್‌ಸ್ಟೇಬಲ್ ಜೊತೆ ವಾಗ್ವಾದ ನಡೆಸಿದ ಘಟನೆ ರಾಜ್‌ಕೋಟ್‌ನಲ್ಲಿ ನಡೆದಿದೆ. ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ಜಡೇಜ ತನ್ನ ಪತ್ನಿಯೊಂದಿಗೆ ಕಾರ್‌ನಲ್ಲಿ ತೆರಳುತ್ತಿದ್ದಾಗ ಅವರನ್ನು ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಸೋನಾಲ್ ಗೋಸಾಯಿ ತಡೆದರೆನ್ನಲಾಗಿದೆ. ಜಡೇಜ ಮಾಸ್ಕ್ ಧರಿಸದೆ ವಾಹನ ಚಲಾಯಿಸುತ್ತಿದ್ದರು ಎನ್ನಲಾಗಿದೆ. ತನ್ನಲ್ಲಿ ಮಹಿಳಾ ಹೆಚ್‌ಪಿಸಿ ಅಸಭ್ಯವಾಗಿ ವರ್ತಿಸಿದರು ಎಂದು ಜಡೇಜ ಪೊಲೀಸರಿಗೆ ಮಾಹಿತಿ ನೀಡಿದರು. ಯಾವುದೇ ಪ್ರಕರಣ ದಾಖಲಾಗಿಲ್ಲವಾದರೂ ಗೋಸಾಯಿ ಮಾನಸಿಕ ಒತ್ತಡಕ್ಕೊಳಗಾದ ಕಾರಣ ನೀಡಿ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.

ಜಡೇಜ ಅವರ ಪತ್ನಿ ರಿವಾಬಾ ಕಳೆದ ವರ್ಷ ಆಡಳಿತಾರೂಢ ಬಿಜೆಪಿ ಸೇರಿದ್ದರು.

 ಐಪಿಎಲ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸದಸ್ಯರಾಗಿರುವ ಜಡೇಜ ಸೆಪ್ಟ್ಟಂಬರ್ 19ರಿಂದ ಯುಎಇಯಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆಡಲು ಶೀಘ್ರದಲ್ಲೇ ಯುಎಇಗೆ ತೆರಳಲಿದ್ದಾರೆ.

       ಕಳೆದ ವರ್ಷವಷ್ಟೇ 44 ಟೆಸ್ಟ್‌ಗಳಲ್ಲಿ 200 ವಿಕೆಟ್‌ಗಳನ್ನು ಗಳಿಸಿದ ಸಾಧನೆ ಮಾಡಿದ್ದ ಜಡೇಜ ವೇಗವಾಗಿ ಈ ಸಾಧನೆ ಮಾಡಿದ ಭಾರತದ ಎರಡನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆರ್.ಅಶ್ವಿನ್ 37 ಟೆಸ್ಟ್ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು. ಜಡೇಜ ಆಡಿದ 49 ಟೆಸ್ಟ್ ಪಂದ್ಯಗಳಲ್ಲಿ 1 ಶತಕ ಮತ್ತು 14 ಅರ್ಧ ಶತಕಗಳನ್ನು ಒಳಗೊಂಡಂತೆ 1,869 ರನ್ ಗಳಿಸಿದ್ದಾರೆ. ಅವರ ಏಕೈಕ ಶತಕ ವೆಸ್ಟ್ ಇಂಡೀಸ್ ವಿರುದ್ಧ 2018 ರಲ್ಲಿ ರಾಜ್‌ಕೋಟ್‌ನಲ್ಲಿ ದಾಖಲಾಗಿತ್ತು. 213 ವಿಕೆಟ್‌ಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ. ಅವರು ಟೆಸ್ಟ್‌ನಲ್ಲಿ ಒಂಭತ್ತು ಬಾರಿ ಐದು ವಿಕೆಟ್ ಮತ್ತು ಒಂದು ಬಾರಿ 10 ವಿಕೆಟ್ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News