ಜೂಜು ಮುಕ್ತ ಕರ್ನಾಟಕಕ್ಕೆ ಆನ್‍ಲೈನ್‍ನಲ್ಲಿ ಅಭಿಯಾನ; ಆನ್‍ಲೈನ್ ಜೂಜು ನಿಷೇಧಕ್ಕೆ ಒತ್ತಾಯ
ಚಿಕ್ಕಮಗಳೂರು, ಆ.24: ಸಾಮಾಜಿಕ ಜಾಲತಾಣಗಳ ಮೂಲಕವೇ ಆನ್‍ಲೈನ್ ಕ್ಷೇತ್ರದಲ್ಲಿ ಸದ್ದಿಲ್ಲದೇ ಯುವಪೀಳಿಗೆಯನ್ನು ಜೂಜುಕೋರರನ್ನಾಗಿಸುತ್ತಿರುವ ಆನ್‍ಲೈನ್ ಕಾರ್ಪೋರೆಟ್ ಕಂಪೆನಿಗಳ ಆನ್‍ಲೈನ್ ಗ್ಯಾಂಬ್ಲಿಂಗ್ ದಂಧೆಯ ವಿರುದ್ಧ ಪ್ರಜ್ಞಾವಂತ ಯುವಕರು ಅಸಮಾಧಾನ ವ್ಯಕ್ತಪಡಿಸಿದ್ದು, ಆನ್‍ಲೈನ್‍ನಲ್ಲೇ ಜಾಗೃತಿ ಮೂಡಿಸುವ ಮತ್ತು ಗ್ಯಾಂಬ್ಲಿಂಗ್ ನಿಷೇಧ ಮಾಡಬೇಕೆಂದು ಸರಕಾರವನ್ನು ಆಗ್ರಹಿಸುವ ಪ್ರಯತ್ನವನ್ನು ನಡೆಸುತ್ತಿದ್ದಾರೆ.
ಸಮಾಜದ ಸ್ವಾಸ್ಥ್ಯ ಹಾಳುಗೆಡುವುತ್ತಿರುವ ಆನ್‍ಲೈನ್ ಗೇಮ್‍ಗಳ ವಿರುದ್ಧ ಆನ್‍ಲೈನ್‍ನಲ್ಲೇ ನಡೆಯುತ್ತಿರುವ ಈ ಅಭಿಯಾನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ, ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯಾದ್ಯಂತ ಯುವಜನರು ಈ ಅಭಿಯಾನಕ್ಕೆ ಸಾಥ್ ನೀಡಿದ್ದು, ಸಾವಿರಾರು ಮಂದಿ ಅಭಿಯಾನದ ಪೋಸ್ಟ್ ಗಳನ್ನು ಶೇರ್ ಮಾಡುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿರುವ ಪ್ರಜ್ಞಾವಂತ ಯುವಜನಾಂಗ ರವಿವಾರ #BanOnlineGambling ಎಂಬ ಹ್ಯಾಶ್ ಟ್ಯಾಗ್‍ನೊಂದಿಗೆ ಫೇಸ್‍ಬುಕ್‍ನಲ್ಲಿ ಪೋಸ್ಟರ್ ಗಳನ್ನು ಪೋಸ್ಟ್ ಮಾಡಿ ಆನ್‍ಲೈನ್ ಗ್ಯಾಂಬ್ಲಿಂಗ್ ಬ್ಯಾನ್ ಮಾಡಬೇಕೆಂಬ ಅಭಿಯಾನಕ್ಕೆ ಕರೆ ನೀಡಿದ್ದಾರೆ. ಇದಕ್ಕೆ ರಾಜ್ಯಾದ್ಯಂತ ಲಕ್ಷಾಂತರ ಮಂದಿ ಬೆಂಬಲ ಸೂಚಿಸಿ ಪೋಸ್ಟರ್ ಗಳನ್ನು ಶೇರ್ ಮಾಡುತ್ತಾ ಆನ್‍ಲೈನ್ ಗ್ಯಾಂಬ್ಲಿಂಗ್ ನಿಷೇಧಕ್ಕೆ ಸರಕಾರವನ್ನು ಆಗ್ರಹಿಸಿದ್ದಾರೆ.
ರವಿವಾರ ಮಧ್ಯಾಹ್ನ ಈ ಅಭಿಯಾನದ ರೂವಾರಿಗಳಲ್ಲೊಬ್ಬರಾದ ಚಿಂತಕ ವಸಂತ್ ಗಿಳಿಯಾರ್ ಫೇಸ್‍ಬುಕ್ ಲೈವ್‍ನಲ್ಲಿ ಮಾತನಾಡಿ, ಆನ್‍ಲೈನ್ ಗ್ಯಾಂಬ್ಲಿಂಗ್ ಸಮಾಜದಲ್ಲಿ ಉಂಟು ಮಾಡುತ್ತಿರುವ ಕೆಟ್ಟ ಪರಿಣಾಮ, ಆನ್‍ಲೈನ್ ಗ್ಯಾಂಬ್ಲಿಂಗ್ ಮೂಲಕ ಕೋಟ್ಯಾಂತರ ರೂ. ಕೊಳ್ಳೆ ಹೊಡೆಯುತ್ತಿರುವ ಕಂಪೆನಿಗಳು, ಈ ಗ್ಯಾಂಬ್ಲಿಂಗ್ ಆಡಲು ಪ್ರೇರೇಪಿಸುವ ಜಾಹೀರಾತು, ಜಾಹೀರಾತುಗಳಲ್ಲಿನ ಸೆಲೆಬ್ರಿಟಿ ನಟರು, ಕ್ರಿಕೆಟ್ ಆಟಗಾರರ ಮಾಹಿತಿ ನೀಡಿದ್ದು, ಜಾಹೀರಾತುಗಳ ಮೂಲಕ ಈ ಆನ್‍ಲೈನ್ ಗ್ಯಾಂಬ್ಲಿಂಗ್‍ಗೆ ಪ್ರೇರೇಪಿಸುತ್ತಿರುವ ನಟರು, ಕ್ರೀಡಾಪಟುಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆನ್‍ಲೈನ್ ಗ್ಯಾಂಬ್ಲಿಂಗ್ ರದ್ದಾಗುವವರೆಗೂ ಈ ಅಭಿಯಾನ ನಿರಂತರವಾಗಿ ನಡೆಯಲಿದೆ ಎಂಬದನ್ನೂ ಅವರು ಒತ್ತಿ ಹೇಳಿದ್ದಾರೆ. ನಾಡಿನ ಮೂಲೆ ಮೂಲೆಯಿಂದಲೂ ಈ ಆನ್‍ಲೈನ್ ಜೂಜಾಟದ ವಿರುದ್ಧ ಇದೀಗ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಸರಕಾರದ ಗಮನವನ್ನೂ ಸೆಳೆಯುತ್ತಿದೆ.
ಸಮಾಜದಲ್ಲಿ ಜೂಜಾಟದಿಂದಾಗಿ ಹಲವು ದುಷ್ಪರಿಣಾಮಗಳು ಉಂಟಾಗುತ್ತವೆ. ಈ ಜೂಜಾಟದ ಹುಚ್ಚಿಗೆ ಬಿದ್ದು ಅದೆಷ್ಟೋ ಮಂದಿ ಹಣ, ಮನೆ ಮಠ ಮಾರಿ ಕೊಂಡು ದಿವಾಳಿ, ಬೀದಿಪಾಲಾಗಿದ್ದಾರೆ. ಜೂಜಾಟದಿಂದ ಎಲ್ಲವನ್ನೂ ಕಳೆದುಕೊಂಡು ಆತ್ಮಹತ್ಯೆಗೂ ಶರಣಾಗಿರುವ ಉದಾಹರಣೆಗಳು ಕಣ್ಮುಂದೆಯೇ ಇವೆ. ಸರಕಾರ ಹಣ ಕಟ್ಟಿ ಇಸ್ಪೀಟ್‍ನಂತಹ ಜೂಜಾಟವನ್ನು ಸಾರ್ವಜನಿಕವಾಗಿ ಆಡುವುದನ್ನು ನಿಷೇಧಿಸಿದೆ. ಆದರೂ ಎಲ್ಲೆಡೆ ಕದ್ದುಮುಚ್ಚಿ ಜೂಟಾಟ ಆಡುವಂತಹ ಘಟನೆಗಳು ಪ್ರತಿದಿನ ವರದಿಯಾಗುತ್ತಿವೆ. ಹೀಗೆ ಜೂಜಾಟದ ಕೇಂದ್ರಗಳಿಗೆ ದಾಳಿ ನಡೆಸಿ ಜೂಜುಕೋರರನ್ನು ಬಂಧಿಸುವ ಕೆಲಸವೂ ಪ್ರತೀ ಪೊಲೀಸ್ ಠಾಣೆಗಳಲ್ಲಿ ವರದಿಯಾಗುತ್ತಿವೆ. ಇಂತಹ ಸಾರ್ವಜನಿಕ ಜೂಜಾಟಕ್ಕೆ ನಿಷೇಧ ಇದ್ದಾಗ್ಯೂ ಕೆಲ ಆನ್‍ಲೈನ್ ಕಂಪೆನಿಗಳು ಆನ್‍ಲೈನ್ ಗೇಮ್‍ಗಳ ಹೆಸರಿನಲ್ಲಿ ಇಸ್ಪೀಟು ಆಟಗಳನ್ನು ಪರಿಚಯಿಸಿವೆ.
ಸಾಮಾಜಿಕ ಜಾಲತಾಣಗಳಲ್ಲಿನ ಈ ಆನ್‍ಲೈನ್ ಜೂಜಾಟಕ್ಕೆ ಯುವ ಜನಾಂಗ ಅಡಿಕ್ಟ್ ಆಗುತ್ತಿದ್ದಂತೆ, ಈ ಗೇಮ್‍ಗಳ ಮೂಲಕವೇ ಕಂಪೆನಿಗಳ ಹಣ ಮಾಡುವ ದಂಧೆಗಿಳಿದಿದ್ದು, ಸದ್ಯ ಆನ್‍ಲೈನ್ ಗೇಮ್‍ಗಳ ಪೈಕಿ ಭಾರೀ ಖ್ಯಾತಿಗಳಿಸಿರುವ ರಮ್ಮಿ, ಜಂಗಲ್ ರಮ್ಮಿಯಂತಹ ಜೂಜಾಟಗಳನ್ನು ಪರಿಚಯಿಸಿರುವ ಕಂಪೆನಿಗಳು ಭಾರೀ ಹಣ ಮಾಡಬಹುದೆಂದು ಜಾಹೀರಾತುಗಳ ಮೂಲಕ ಪ್ರಚಾರ ನೀಡಿ ಯುವಜನರನ್ನು ಜೂಜಾಟಕ್ಕೆ ಸಿಲುಕಿಸುತ್ತಿವೆ. ಶೀಘ್ರ ಹಣ ಮಾಡುವ ಅತಿಯಾಸೆಗೆ ಬಿದ್ದ ಯುವಜನಾಂಗ ಈ ರಮ್ಮಿ ಆಟದ ಮೂಲ ಲಕ್ಷಾಂತರ ರೂ. ಹಣ ಕಳೆದುಕೊಂಡು ಬೀದಿಪಾಲಾಗುತ್ತಿದ್ದಾರೆ. ಆನ್‍ಲೈನ್ ಗೇಮ್‍ಗಳ ಹೆಸರಿನಲ್ಲಿ ಯುವ ಜನಾಂಗವನ್ನು ದಿಕ್ಕುತಪ್ಪಿಸುತ್ತಿರುವ ಈ ಆನ್‍ಲೈನ್ ಕಂಪೆನಿಗಳ ವಿರುದ್ಧ ಇದೀಗ ಪ್ರಜ್ಞಾವಂತರು ಫೇಸ್‍ಬುಕ್, ವಾಟ್ಸಾಪ್, ಟ್ವಿಟ್ಟರ್ ನಂತಹ ಸಾಮಾಜಿಕ ಜಾಲತಾಣಗಳಲ್ಲೇ ಹೋರಾಟ ರೂಪಿಸಿದ್ದು, ಯುವಜನರನ್ನು ಸುಲಿಗೆ ಮಾಡುತ್ತಿರುವ ಆನ್‍ಲೈನ್ ಗ್ಯಾಂಬ್ಲಿಂಗ್‍ಅನ್ನು ಸರಕಾರಗಳು ಬ್ಯಾನ್ ಮಾಡುವವರೆಗೂ ಅಭಿಯಾನ ಮುಂದುವರಿಸುವ ಪಣತೊಟ್ಟಿದ್ದಾರೆ.
ಈ ಅಭಿಯಾನದ ರೂವಾರಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿರುವವರಾಗಿದ್ದು, ಅಹೋರಾತ್ರಿ ಎಂಬ ಹೆಸರಿನ ಫೇಸ್‍ಬುಕ್ ಖಾತೆಯ ವ್ಯಕ್ತಿಯೊಬ್ಬರು ಮೊದಲು ಈ ಆನ್‍ಲೈನ್ ಗ್ಯಾಂಬ್ಲಿಂಗ್ ಬಗ್ಗೆ ಪೋಸ್ಟ್ ಹಾಕಿ ಧ್ವನಿ ಎತ್ತಿದ್ದರು. ಬಳಿಕ ವಸಂತ್ ಗಿಳಿಯಾರ್, ಶಾರದಾ ಡೈಮಂಡ್ ಮತ್ತಿತರರು ಬ್ಯಾನ್ ಆನ್‍ಲೈನ್ ಗ್ಯಾಂಬ್ಲಿಂಗ್ ಅಭಿಯಾನಕ್ಕೆ ಹೆಚ್ಚು ಆಸ್ಥೆ ವಹಿಸಿ ಇದೀಗ ಅಭಿಯಾನ ವ್ಯಾಪಕ ಜನಬೆಂಬಲ ಪಡೆಯುಂತೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿನ ಈ ಅಭಿಯಾನ ಸರಕಾರದ ಗಮನವನ್ನೂ ಸೆಳೆಯುವಷ್ಟರ ಮಟ್ಟಿಗೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.
ಲಕ್ಷಾಂತರ ಮಂದಿಯಿಂದ ಬೆಂಬಲ ಪಡೆದಿರುವ ಈ ಅಭಿಯಾನಕ್ಕೆ ಚಲನಚಿತ್ರ ನಟರು, ಕ್ರೀಡಾಪಟುಗಳು, ಕನ್ನಡ, ರೈತ, ದಲಿತ, ಕಾರ್ಮಿಕ ಸಂಘಟನೆಗಳೂ ಸೇರಿದಂತೆ ಸಾವಿರಾರು ಸಂಘ ಸಂಸ್ಥೆಗಳೂ ಬೆಂಬಲ ನೀಡಿ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ಆನ್‍ಲೈನ್ ಗ್ಯಾಂಬ್ಲಿಂಗ್ ಬಲೆಗೆ ಬಿದ್ದು ಹಣ ಕಳೆದುಕೊಂಡವರು ರಮ್ಮಿ ಆಟದ ಹೆಸರಿನಲ್ಲಿ ಕಂಪೆನಿಗಳು ಹೇಗೆ ಮೋಸ ಮಾಡಿ ಹಣ ಕೊಳ್ಳೆ ಹೊಡೆಯುತ್ತಿವೆ ಎಂಬ ಆರೋಪಗಳಿರುವ ಸಂದೇಶಗಳನ್ನು ಹಾಕುತ್ತಾ ಯುವಜನಾಂಗದವರಲ್ಲಿ ಜಾಗೃತಿ ಮೂಡಿಸುತ್ತಿದ್ದರೆ, ಆನ್‍ಲೈನ್ ಕಂಪೆನಿಗಳ ಮೋಸದ ಬಗ್ಗೆ ಚರ್ಚೆಗಳು ಈ ಅಭಿಯಾನದಲ್ಲಿ ವ್ಯಾಪಕವಾಗಿ ನಡೆಯುತ್ತಿದೆ.
ಆನ್‍ಲೈನ್ ಗ್ಯಾಂಬ್ಲಿಂಗ್ ಸದ್ಯ ವಿಶ್ಯಾದ್ಯಂತ ಪ್ರಖ್ಯಾತಿ ಪಡೆದಿದೆ. ಆನ್‍ಲೈನ್ ಗ್ಯಾಂಬ್ಲಿಂಗ್‍ನಲ್ಲಿ ಕ್ಯಾಸಿನೋ, ಪೋಕರ್ ನಂತಹ ನೂರಾರು ಆನ್‍ಲೈನ್ ಗ್ಯಾಂಬ್ಲಿಂಗ್‍ಗಳು ಸಾಮಾಜಿಕ ಜಾಲತಾಣಗಳಲ್ಲಿ ಚಾಲ್ತಿಯಲ್ಲಿವೆ. ಭಾರತದಲ್ಲಿ ರಮ್ಮಿ ಎಂಬ ಆನ್‍ಲೈನ್ ಗ್ಯಾಂಬ್ಲಿಂಗ್ ಹೆಚ್ಚು ಜನಪ್ರಿಯ ಜೂಜಾಟವಾಗಿದೆ. ಲಾಕ್‍ಡೌನ್ ಅವಧಿಯಲ್ಲಿ ಕೆಲಸವಿಲ್ಲದೇ ಮನೆಯಲ್ಲೇ ಇದ್ದ ಯುವಜನಾಂಗ ದಾಖಲೆ ಪ್ರಮಾಣದಲ್ಲಿ ಈ ರಮ್ಮಿ ಎಂಬ ಆನ್‍ಲೈನ್ ಗ್ಯಾಂಬ್ಲಿಂಗ್‍ನಲ್ಲಿ ತೊಡಗಿದ್ದು, ಕೋಟ್ಯಂತರ ರೂ. ವಹಿವಾಟು ನಡೆದಿದೆ. ಲಕ್ಷಾಂತರ ಮಂದಿ ಈ ಜೂಜಾಟದ ಬಲೆಗೆ ಸಿಲುಕಿ ಹಣ ಕಳೆದುಕೊಂಡಿದ್ದಾರೆ. ಆ ಜೂಜಾಟದ ಜನಪ್ರಿಯತೆಯಿಂದ ಆನ್‍ಲೈನ್ ಕಂಪೆನಿಗಳಿಗೆ ಕೋಟ್ಯಾಂತರ ರೂ. ಲಾಭಗಳಿಸುತ್ತಿದ್ದು, ಐಪಿಎಲ್ ಪಂದ್ಯಾವಳಿಗಳಿಗೂ ಈ ರಮ್ಮಿ ಪ್ರಯೋಜಕತ್ವದ ಹಕ್ಕು ಪಡೆದಿದೆ ಎಂದರೆ ಈ ಆನ್‍ಲೈನ್ ಗ್ಯಾಂಬ್ಲಿಂಗ್ ಅದೆಷ್ಟು ಪ್ರಮಾಣದಲ್ಲಿ ಹಣ ಸುಲಿಗೆ ಮಾಡುತ್ತಿದೆ ಎಂಬುದನ್ನು ಊಹಿಸಬಹುದು.
ಆನ್‍ಲೈನ್ ಗ್ಯಾಂಬ್ಲಿಂಗ್ ಇತ್ತೀಚೆಗೆ ಭಾರೀ ಜನಪ್ರಿಯವಾಗುತ್ತಿದೆ. ಜೊತೆಗೆ ಖ್ಯಾತ ನಟ-ನಟಿಯರು, ಕ್ರಿಕೆಟ್ ಆಟಗಾರರು ರಮ್ಮಿ ಗ್ಯಾಂಬ್ಲಿಂಗ್ ಪ್ರಚಾರದ ಜಾಹೀರಾತುಗಳ ಮೂಲಕ ಯುವ ಜನಾಂಗದವರನ್ನು ಸೆಳೆಯುತ್ತಿದ್ದಾರೆ. ಈ ನಟರು, ಕ್ರೀಡಾಪಟುಗಳು ವಿವಿಧ ಜಾಹೀರಾತುಗಳ ಮೂಲಕ ಆನ್‍ಲೈನ್ ರಮ್ಮಿ ಆಡಲು ಯುವಜನಾಂಗದವರನ್ನು ಪ್ರೇರೇಪಿಸುತ್ತಿದ್ದಾರೆ. ರಾಪ್ ಸಿಂಗರೊಬ್ಬರು ಕೂಡ ತನ್ನ ಸಾಧನೆಗೆ ರಮ್ಮಿಯೇ ಕಾರಣ ಎಂದು ಫೇಸ್‍ಬುಕ್‍ನಲ್ಲಿ ಬರೆದುಕೊಳ್ಳುವ ಮೂಲಕ ಯುವಜನಾಂಗದವರು ಆನ್‍ಲೈನ್ ಗ್ಯಾಂಬ್ಲಿಂಗ್‍ನಲ್ಲಿ ತೊಡಗಿಕೊಳ್ಳುವಂತೆ ಮಾಡಿದ್ದಾರೆ. #BanOnlineGambling ಅಭಿಯಾನದ ಸದಸ್ಯರು ರಮ್ಮಿ ಜಾಹೀರಾತುಗಳಲ್ಲಿನ ನಟ, ನಟಿಯರು, ಕ್ರಿಕೆಟ್ ಆಟಗಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಜನರಿಂದ ಸೆಲೆಬ್ರಿಟಿಗಳಾದ ಇವರು ರಮ್ಮಿಯಿಂದ ಖ್ಯಾತಿಗಳಿಸಿದೆ ಎನ್ನುವ ಮೂಲಕ ಜನರನ್ನು ವಂಚಿಸುತ್ತಿದ್ದಾರೆ. ಗ್ಯಾಂಬ್ಲಿಂಗ್ ಆಡಲು ಪ್ರೇರೇಪಿಸಿ ಯುವ ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆನ್‍ಲೈನ್ ಗ್ಯಾಂಬ್ಲಿಂಗ್ ಎಂಬುದು ಸದ್ಯ ನಮ್ಮ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದೆ. ಯುವಜನರು ಕಷ್ಟಪಟ್ಟು ದುಡಿದು ಗಳಿಸಿದ್ದನ್ನು ಆನ್‍ಲೈನ್ ಗ್ಯಾಂಬ್ಲಿಂಗ್‍ನಲ್ಲಿ ಕಳೆಯುತ್ತಿದ್ದಾರೆ. ಈ ಗ್ಯಾಂಬ್ಲಿಂಗ್ ಹುಚ್ಚಿಗೆ ಕಾಲೇಜು ಯುವಕರೂ ಸೇರಿದಂತೆ ಇಡೀ ಯುವಜನಾಂಗವೇ ಬಲಿಯಾಗುತ್ತಿದ್ದು, ಯುವಜನಾಂಗವನ್ನು ಜೋಜುಕೋರರನ್ನಾಗಿಸಲಾಗುತ್ತಿದೆ. ಸರಕಾರ ಆನ್‍ಲೈನ್ ಗ್ಯಾಂಬ್ಲಿಂಗ್‍ಗೆ ಕಡಿವಾಣ ಹಾಕಲೇಬೇಕು. ನಮ್ಮ ಅಭಿಯಾನ ಸರಕಾರದ ಕಣ್ತೆರೆಸಲಿದೆ ಎಂಬ ನಂಬಿಕೆ ಇದೆ. ಆನ್ ಗ್ಯಾಂಬ್ಲಿಂಗ್ ಬ್ಯಾನ್ ಆಗಲೇಬೇಕು. ಆನ್ ಲೈನ್ ಗ್ಯಾಂಬ್ಲಿಂಗ್ ವಿರುದ್ಧ ಆನ್‍ಲೈನ್‍ನಲ್ಲೇ ಅಭಿಯಾನ ಆರಂಭವಾಗಿದ್ದು, ಭಾರೀ ಬೆಂಬಲ ವ್ಯಕ್ತವಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಜೂಜು ಮುಕ್ತ ಕರ್ನಾಟಕಕ್ಕೆ ಎಲ್ಲರ ಸಹಕಾರ ಅತ್ಯಗತ್ಯವಾಗಿದೆ.
- ವಸಂತ್ ಗಿಳಿಯಾರ್, ಅಭಿಯಾನದ ಸಂಚಾಲಕ
ಆನ್‍ಲೈನ್ ಗ್ಯಾಂಬ್ಲಿಂಗ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕೆಲದಿನಗಳಿಂದ ನಡೆಯುತ್ತಿರುವ ಅಭಿಯಾನದ ಬಗ್ಗೆ ಸಚಿವ ಈಶ್ವರಪ್ಪ ಟ್ವೀಟ್ ಮಾಡಿದ್ದಾರೆ. ಆನ್‍ಲೈನ್ ಗ್ಯಾಂಬ್ಲಿಂಗ್ ಗಳ ಬಗ್ಗೆ ಸಮಗ್ರವಾಗಿ ಮುಂದಿನ ಕ್ರಮದ ಕುರಿತು ಚಿಂತಿಸಲಾಗುವುದು ಎಂದು ರವಿವಾರ ಟ್ವೀಟ್ ಮಾಡುವ ಮೂಲಕ ಈ ಅಭಿಯಾನದ ಬಿಸಿ ಸರಕಾರಕ್ಕೂ ಮುಟ್ಟಿರುವುದನ್ನು ಸ್ಪಷ್ಟಪಡಿಸಿದ್ದಾರೆ.