ಒಳ್ಳೆಯ ನಟನಿಗಿಂತ ಒಳ್ಳೆಯ ಮನುಷ್ಯನಾಗಿರಲು ಆದ್ಯತೆ ನೀಡುತ್ತೇನೆ: ಪ್ರಕಾಶ್ ರಾಜ್

Update: 2020-09-12 19:30 GMT

ಪ್ರಕಾಶ್ ರಾಜ್ ಎಂದರೆ ಹಾಗೆಯೇ. ಆರಡಿ ಎತ್ತರ, ಗಂಭೀರ ಕಂಠ, ತೀಕ್ಷ್ಣ ನೋಟ, ಭಾವಗಳಿಗೆ ಜೀವ ತುಂಬುವ ಮುಖ.. ಬಹುಶಃ ಕಲಾವಿದನಾಗಿ ಇವಿಷ್ಟು ಕೂಡ ಇವರ ಪ್ಲಸ್ ಪಾಯಿಂಟ್. ಆದರೆ ಮನುಷ್ಯನಾಗಿ ಅವರಿಗೊಂದು ಭಾವಜೀವಿಯ ಹೃದಯ ಇದೆಯಲ್ಲ? ಅದನ್ನು ಎಲ್ಲ ಕಾಲದ ಜಗತ್ತು ಕೂಡ ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಆ ಸಂಘರ್ಷ ಇಂದಿಗೂ ಪ್ರಕಾಶ್ ರಾಜ್‌ರವರ ಚಿಂತನೆಗಳನ್ನು ಎದುರಿಸುವವರಲ್ಲಿ ಇದೆ.
ಈ ಸಂದರ್ಶನದಲ್ಲಿ ಪ್ರಕಾಶ್‌ರಾಜ್‌ರವರು ‘ವಾರ್ತಾಭಾರತಿ’ಯ ಕೆಲವು ಪ್ರಶ್ನೆಗಳಿಗೆ ತನ್ನ ನಿಲುವೇನೆಂಬುದನ್ನು ಬಿಚ್ಚಿಟ್ಟಿದ್ದಾರೆ.


ಪ್ರ: ಲಾಕ್‌ಡೌನ್ ಸಮಯದಲ್ಲಿ ತಾವು ಸಾಕಷ್ಟು ಸಮಾಜ ಸೇವೆ ಮಾಡಿದ್ದಾಗಿ ಸುದ್ದಿಯಾಗಿದೆ?
ಪ್ರಕಾಶ್ ರಾಜ್: ಸೇವೆ ಅಂತ ಅಲ್ಲ. ನನ್ನ ಕರ್ತವ್ಯ ಎಂದುಕೊಂಡು ಮಾಡಿದ್ದೇನೆ. ಊರಿಗೆ ಹೋಗಲು ಕಾಸಿಲ್ಲದೆ ಬೀದಿಗೆ ಬಂದಿದ್ದ ಪರರಾಜ್ಯದ ಸುಮಾರು 33 ಮಂದಿ ದಿನಗೂಲಿ ಕಾರ್ಮಿಕರನ್ನು 44 ದಿನಗಳ ಕಾಲ ನನ್ನ ತೋಟದ ಮನೆಯಲ್ಲಿರಿಸಲು ಸಾಧ್ಯವಾಗಿದ್ದಕ್ಕೆ ತೃಪ್ತಿ ಇದೆ. ನಿಮಗೆಲ್ಲ ತಿಳಿದಿರುವಂತೆ ತುಂಬ ಮಂದಿ ಕಾಲ್ನಡಿಗೆಯಲ್ಲೇ ಊರಿಗೆ ಹೊರಟಿದ್ದರು. ಅದರಲ್ಲಿ ಬೆಂಗಳೂರಿನಿಂದ ಹೊರಟು ಹೈದರಾಬಾದ್ ದಾರಿಯಲ್ಲಿದ್ದವರು ಕೂಡ ಇದ್ದರು. ಅವರು ತಮ್ಮ ಊರಿಗೆ ತಲುಪುವುದನ್ನೇ ಗುರಿಯಾಗಿಸಿದ್ದ ಕಾರಣ ಎಲ್ಲಿಯೂ ತಂಗಲು ತಯಾರಿರಲಿಲ್ಲ. ದುಡ್ಡು ಕೈಯಲ್ಲಿದ್ದರೂ ಉಪಯೋಗವಿಲ್ಲ ಎಂದು ಗೊತ್ತಿರುವ ಕಾರಣ ಸಹಾಯ ಮಾಡುವುದಾದರೆ ಒಂದಷ್ಟು ಹಿಟ್ಟು ಕೊಡಿ; ನಮ್ಮ ಪಯಣದ ನಡುವೆ ರೊಟ್ಟಿ ಮಾಡಿ ತಿಂದುಕೊಂಡು ನಡೆಯುತ್ತೇವೆ ಎಂದಿದ್ದರು. ನಾನು ಆ ರಸ್ತೆಯಲ್ಲಿ ಸಾಗುವ ಐನೂರು ಜನರಿಗೆ ದಿನವೂ ಊಟ ಕೊಡಲು ತಯಾರಿ ಮಾಡಿದೆ.

ಇದು ಸುದ್ದಿಗಾಗಿ ಮಾಡಿದ ಸೇವೆಯಲ್ಲ. ಇಂತಹ ಸಂದರ್ಭದಲ್ಲಿ ನೀನೇನು ಸಹಾಯ ಮಾಡಿದ್ದೀಯ? ಎನ್ನುವ ಮನಸ್ಸಾಕ್ಷಿಯ ಪ್ರಶ್ನೆಗೆ ಕೊಟ್ಟುಕೊಂಡಂತಹ ಉತ್ತರ. ಇದರಿಂದ ನನಗೆ ಜನಪ್ರಿಯತೆ ಬೇಕಾಗಿಲ್ಲ. ಅದನ್ನು ನನಗೆ ನಟನೆ ತಂದುಕೊಟ್ಟಿದೆ. ಆದರೆ ಕಷ್ಟದಲ್ಲಿರುವವರಿಗೆ ನೈಜವಾಗಿ ಸ್ಪಂದಿಸುವ ಮೂಲಕ ಒಳ್ಳೆಯ ಮನುಷ್ಯನಾದೆನೆಂಬ ಆತ್ಮತೃಪ್ತಿ ಸಿಗುತ್ತದೆ.

ಪ್ರ: ‘ಕೆಜಿಎಫ್-2’ ನಲ್ಲಿ ನೀವು ಅನಂತನಾಗ್ ಪಾತ್ರದ ಜಾಗಕ್ಕೆ ಆಗಮಿಸಿದ್ದೀರೆಂದು ಸುದ್ದಿಯಾಗಿತ್ತಲ್ಲ?
ಪ್ರಕಾಶ್ ರಾಜ್: ನನ್ನದು ಬೇರೆಯೇ ಪಾತ್ರ. ನಾನು ಬೇರೆಯವರ ಪಾತ್ರವನ್ನೇಕೆ ಮಾಡಲಿ? ಚಿತ್ರ ನೋಡುವ ಮೊದಲು ಈ ರೀತಿಯ ಊಹಾಪೋಹಗಳೆಲ್ಲ ಸಹಜ. ಆದರೆ ಅದೇ ನಿಜವಲ್ಲ. ಆದರೆ ಅದೇ ನಿಜ ಎಂದು ಸಾಧಿಸುವ ಪ್ರಯತ್ನ ಕೆಲವರು ಮಾಡುತ್ತಾರೆ. ಸಂಬಂಧಪಟ್ಟವರು ಏನು ಹೇಳುತ್ತಾರೆ ಅದು ಸುದ್ದಿಯಾಗುವುದಿಲ್ಲ. ಒಬ್ಬ ನಿರ್ದೇಶಕನಿಗೆ ತನಗೆ ಬೇಕಾದ ಹಾಗೆ ಕತೆ ಹೇಳುವ ಸ್ವಾತಂತ್ರ್ಯ ಇರದಿದ್ದರೆ ಹೇಗೆ? ಅವರು ಕತೆಗೆ ತಕ್ಕಂತೆ ನನಗೆ ಒಂದು ಪಾತ್ರ ನೀಡಿದ್ದಾರೆ. ನಿಮಗೆ ತಿಳಿದಿರುವ ಹಾಗೆ ಅದು ಒಂದು ದೊಡ್ಡ ಪ್ರಾಜೆಕ್ಟ್. ಚಿತ್ರದ ನಿರ್ದೇಶಕರು, ನಾಯಕ ಸೇರಿದಂತೆ ಎಲ್ಲ ಕಲಾವಿದರು ಕೂಡ ಸ್ಪಷ್ಟವಾಗಿದ್ದಾರೆ. ಹೊರಗಿನಿಂದ ಸುಮ್ಮನೆ ಗೊಂದಲ ಮೂಡಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ.

ಪ್ರ: ನಿಮ್ಮ ಮೊನ್ನೆಯ ಟ್ವೀಟ್‌ಗಳು ನಟಿ ಕಂಗನಾರ ಹೇಳಿಕೆಗಳನ್ನು ವಿಮರ್ಶಿಸಿವೆ ಎನ್ನಬಹುದೇ?
ಪ್ರಕಾಶ್ ರಾಜ್: ನಾವು ಪ್ರಜೆಗಳಾಗಿ ರಿಯಾ ಆಗಲೀ, ಕಂಗನಾ ಆಗಲೀ ಹೇಗೆ ಪೊಲಿಟಿಕಲಿ ಮೋಟಿವೇಟೆಡ್ ಆಗಿದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ. ಅನ್ಯಾಯ ನಡೆದಾಗ ಪ್ರತಿಭಟಿಸುವುದು ಸಹಜ. ಆದರೆ ಕಂಗನಾ ಹೇಳಿಕೆಗಳ ಹಿಂದೆ ದೊಡ್ಡ ರಾಜಕೀಯದ ಆಟವೇ ನಡೆಯುತ್ತಿದೆ. ನಾವು ಅದನ್ನು ನಂಬುವುದಿಲ್ಲ. ಅವರು ಆಕೆಯ ಕಚೇರಿಯನ್ನು ಕೆಡವಿ ಹಾಕುತ್ತಾರೆ. ಆಕೆ ತನ್ನ ಕಚೇರಿಯನ್ನು ರಾಮಮಂದಿರಕ್ಕೆ ಹೋಲಿಸುತ್ತಾರೆ! ಮುಂದಿನ ಚಿತ್ರವನ್ನು ರಾಮಮಂದಿರಕ್ಕೆ ಸಂಬಂಧಿಸಿದಂತೆ ಮಾಡುವುದಾಗಿ ಹೇಳುತ್ತಾರೆ. ಇವುಗಳಲ್ಲಿನ ಅಜೆಂಡಾಗಳೇನಿವೆ ಎನ್ನುವುದನ್ನು ನಾವು ಗಮನಿಸಬೇಕು. ಅದು ಬಿಟ್ಟು ನಾವು ಪ್ರಜೆಗಳು ಎರಡು ತಂಡಗಳಾಗಿ ಆವೇಶಕ್ಕೊಳಗಾಗುವುದರಲ್ಲಿ ಅರ್ಥವಿಲ್ಲ. ಇಲ್ಲಿ ಪರ ವಿರೋಧದ ಸಮರ್ಥನೆಗಿಂತ ನಡೆದಿರುವ ಘಟನೆ ಏನು ಎನ್ನುವುದನ್ನು ನಾವು ತಿಳಿದುಕೊಂಡಿರಬೇಕು. ಆಗ ನಮಗೆ ಸ್ಪಷ್ಟ ಚಿತ್ರಣ ಸಿಗುತ್ತದೆ.

ಪ್ರ: ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿದೆ ಎನ್ನುವ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?
 ಪ್ರಕಾಶ್ ರಾಜ್: ಇದು ಚಿತ್ರರಂಗಕ್ಕೆ ಸೀಮಿತವಾದ ಸಂಗತಿ ಅಲ್ಲ. ಆದರೆ ಚಿತ್ರರಂಗದಲ್ಲಿರುವವರು ಜನಪ್ರಿಯರು ಎನ್ನುವ ಕಾರಣಕ್ಕೆ ಹೆಚ್ಚು ಸುದ್ದಿಯಾಗುತ್ತಿದೆ. ಎಂಬತ್ತರ ದಶಕದಲ್ಲಿ ನಾನು ಕಾಲೇಜ್‌ಲ್ಲಿದ್ದ ದಿನಗಳಲ್ಲೇ ರಾಜ್ಯ ರಾಜಧಾನಿಯಲ್ಲಿ ಡ್ರಗ್ಸ್ ವ್ಯವಹಾರ ನಡೆಯುವ ಸುದ್ದಿ ಇತ್ತು. ಹಾಗಾಗಿ ಈಗ ಎಲ್ಲ ಕ್ಷೇತ್ರಗಳಲ್ಲಿಯೂ ಹರಡಿಕೊಂಡಿರಬಹುದು. ನಾನು ಚುನಾವಣೆಗೆ ನಿಂತ ಸಂದರ್ಭದಲ್ಲೇ ಅವುಗಳನ್ನು ಮಟ್ಟ ಹಾಕಬೇಕೆಂದು ಮಾತನಾಡಿದ್ದೆ. ಯಾವ ದಂಧೆಗಳು ಕೂಡ ಪೊಲೀಸರ ಕಣ್ಣುತಪ್ಪಿಸಿ ನಡೆಯುತ್ತವೆ ಎಂದರೆ ನಂಬಲು ಕಷ್ಟ. ಪೊಲೀಸರೊಂದಿಗೆ ರಾಜಕಾರಣಿಗಳು ಪ್ರಾಮಾಣಿಕವಾಗಿ ಸಹಕರಿಸಿದರೆ ಜಾಲವನ್ನು ಭೇದಿಸುವುದು, ತಡೆಯುವುದು ಕಷ್ಟವಲ್ಲ. ಈಗ ಯಾವುದೋ ಕಾರಣಕ್ಕಾಗಿ ತನಿಖೆ ಶುರುವಾಗಿದೆ. ಮಾಧ್ಯಮಗಳಿಗೆ ಅದೇ ಸುದ್ದಿಯಾಗಿರುವ ಕಾರಣ ಎಲ್ಲರ ಗಮನ ಸೆಳೆದಿದೆ. ಒಂದು ವೇಳೆ ಮಾಧ್ಯಮ ಬೇರೆ ವಿಚಾರದತ್ತ ಹೊರಳಿದರೆ ಡ್ರಗ್ಸ್ ದಂಧೆ ಮಟ್ಟ ಹಾಕಬೇಕೆಂಬ ಜನರ ಆಸಕ್ತಿಯೂ ಹೊರಟು ಹೋಗುತ್ತದೆ ಎನ್ನುವುದು ವಿಪರ್ಯಾಸ.

Writer - ಸಂದರ್ಶನ: ಶಶಿಕರ ಪಾತೂರು

contributor

Editor - ಸಂದರ್ಶನ: ಶಶಿಕರ ಪಾತೂರು

contributor

Similar News