ಗ್ರಾಹಕರಿಗೆ ಕಹಿ ಸುದ್ದಿ: ಸ್ಮಾರ್ಟ್ ಫೋನ್ ಬೆಲೆ ಏರಿಕೆ ಸಾಧ್ಯತೆ
ನವದೆಹಲಿ : ಸ್ಮಾರ್ಟ್ ಫೋನ್‍ಗಳ ಡಿಸ್ಪ್ಲೇ ಹಾಗೂ ಟಚ್ ಪ್ಯಾನೆಲ್‍ಗಳ ಮೇಲೆ ಕೇಂದ್ರ ಸರಕಾರ ಶೇ. 10ರಷ್ಟು ಆಮದು ಸುಂಕ ವಿಧಿಸಿರುವುದರಿಂದ ಆ್ಯಪಲ್, ಸ್ಯಾಮ್ಸಂಗ್, ಕ್ಸಿಯೋಮಿ, ಒಪ್ಪೊ ಹಾಗೂ ರಿಯಲ್ ಮಿ ಸ್ಮಾರ್ಟ್ ಫೋನ್ ಸಹಿತ ಹಲವು ಸ್ಮಾರ್ಟ್ ಫೋನ್‍ಗಳ ಬೆಲೆಗಳಲ್ಲಿ ಏರಿಕೆಯಾಗುವ ಸಾಧ್ಯತೆಗಳು ನಿಚ್ಚಳವಾಗಿವೆ.
ಪ್ರಧಾನಿ ನರೇಂದ್ರ ಮೋದಿಯ ಮಹತ್ವಾಕಾಂಕ್ಷಿ ಆತ್ಮ ನಿರ್ಭರ್ ಯೋಜನೆಯ ಅಂಗವಾಗಿ ದೇಶೀಯ ಉತ್ಪಾದಕರನ್ನು ಪ್ರೋತ್ಸಾಹಿಸುವ ಕ್ರಮವಾಗಿ ಈ ಉತ್ಪನ್ನಗಳ ಆಮದು ಮೇಲೆ ಸುಂಕ ವಿಧಿಸಲಾಗಿದೆ. ಹೆಚ್ಚುವರಿ ಶುಲ್ಕವೂ ಇರುವುದರಿಂದ ಆಮದುದಾರರ ಮೇಲೆ ಬೀಳುವ ಒಟ್ಟು ತೆರಿಗೆ ಹೊರೆ ಶೇ. 11ರಷ್ಟಾಗಲಿದೆ.
ಒಟ್ಟಾರೆಯಾಗಿ ಈ ಆಮದು ಸುಂಕದಿಂದ ಸ್ಮಾರ್ಟ್ ಫೋನ್‍ಗಳ ಬೆಲೆಗಳಲ್ಲಿ ಶೇ. 1.5ರಿಂದ ಶೇ 5ರಷ್ಟು ಏರಿಕೆಯಾಗುವ ನಿರೀಕ್ಷೆಯಿದ್ದು ಹಬ್ಬದ ಋತುವಿನಲ್ಲಿ ಸ್ಮಾರ್ಟ್ ಫೋನ್ ಬೇಡಿಕೆಯನ್ನು ಇದು ಕುಗ್ಗಿಸುವ ಸಾಧ್ಯತೆಗಳಿವೆ.
ಆಮದು ಸುಂಕ ವಿಧಿಸುವುದನ್ನು ಈ ಹಿಂದೆ ಎಪ್ರಿಲ್ 2019ರಲ್ಲಿ ಜಾರಿಗೊಳಿಸಲು ನಿರ್ಧರಿಸಲಾಗಿತ್ತಾದರೂ ಸ್ಥಳೀಯ ಉತ್ಪಾದಕರಿಗೆ ಅವುಗಳನ್ನು ಉತ್ಪಾದಿಸಲು ಸಮಯಾವಕಾಶ ನೀಡುವ ಸಲುವಾಗಿ ಎರಡು ಬಾರಿ ತೆರಿಗೆ ಹೇರಿಕೆಯನ್ನು ಮುಂದೂಡಲಾಗಿತ್ತು.
ಸದ್ಯ ಟಿಸಿಎಲ್, ಹೋಲಿಟೆಕ್ ಸಹಿತ ನಾಲ್ಕು ಕಂಪೆನಿಗಳು ಭಾರತದಲ್ಲಿ ಡಿಸ್ಪ್ಲೇ ಪ್ಯಾನೆಲ್‍ಗಳನ್ನು ತಯಾರಿಸುತ್ತಿವೆ.