ಮಸೂದೆಗಳ ಅಂಗೀಕಾರದಲ್ಲಿ ಪ್ರತಿಪಕ್ಷಗಳ ಬಹಿಷ್ಕಾರದ ಪಾಲೆಷ್ಟು?

Update: 2020-10-03 18:37 GMT

ಅತ್ಯಂತ ಕ್ಷಿಪ್ರವಾಗಿ ನಡೆದ ಈ ಮಾನ್ಸೂನ್ ಅಧಿವೇಶನದಲ್ಲಿ ಒಟ್ಟು 15 ಮಸೂದೆಗಳು ಮಂಡಿಸಲ್ಪಟ್ಟಿತ್ತು. ಅದರಲ್ಲಿ ಎಂಟು ಮಸೂದೆಗಳು ನಾಲ್ಕು ಗಂಟೆಗಳಲ್ಲಿ ಮತ್ತು ಉಳಿದ 7 ಮಸೂದೆಗಳು ಮೂರುವರೆಗಂಟೆ ಒಳಗೆ ಅಂಗೀಕಾರಗೊಂಡಿವೆ!. ಈ ಎಲ್ಲ ಕಾಯ್ದೆಗಳ ಬಗ್ಗೆ ಒಂದೇ ಒಂದು ದಿನ ಸಹ ಪಾರ್ಲಿಮೆಂಟಿನಲ್ಲಿ ಆಳವಾದ ಚರ್ಚೆ ನಡೆದಿಲ್ಲ. ದೇಶದ ಇತಿಹಾಸದಲ್ಲಿ ಕೆಲವೊಂದು ಮಸೂದೆಗಳನ್ನು ಮಂಡಿಸಿದ ಅರ್ಧಗಂಟೆಯಲ್ಲೇ ಪಾಸಾಗಿರುವ ಉದಾರಣೆಗಳಿವೆ. ಆದರೆ ಎಲ್ಲಾ ಸದಸ್ಯರಿಗೆ ಭತ್ತೆಗಳು ಮಾತ್ರ ತಪ್ಪದೆ ತಲುಪುತ್ತವೆ.

ರಾಜಕೀಯದಲ್ಲಿ ಸ್ವಲ್ಪಆಸಕ್ತಿ ಇದ್ದು, ಕಳೆದ ಹತ್ತು ಹದಿನೈದು ವರ್ಷಗಳ ಬೆಳವಣಿಗೆಯನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಾ ಹೋದರೆ ಎಲ್ಲಾ ಆಡಳಿತ ಪಕ್ಷಗಳು ಅಧಿವೇಶನದಲ್ಲಿ ಪ್ರತಿಪಕ್ಷಗಳ ಬಹಿಷ್ಕ್ಕಾರದ ಲಾಭವನ್ನು ಪಡೆದು ಎಂತೆಂತಹ ಮಸೂದೆಗಳನ್ನು ಪಾಸು ಮಾಡಿಸಿಕೊಂಡದ್ದನ್ನು ಕಾಣುತ್ತೇವೆ. ಇದಕ್ಕೆ ಯಾವ ರಾಜಕೀಯ ಪಕ್ಷಗಳು ಸಹ ಹೊರತಲ್ಲ. ಪ್ರತಿಪಕ್ಷಗಳನ್ನು ‘ಪ್ರಜಾಪ್ರಭುತ್ವದ ಕಾವಲು ನಾಯಿಗಳು’ ಎಂದು ಕರೆದು ಶತಮಾನಗಳೇ ಕಳೆದಿವೆ. ಆದರೆ ಇತ್ತೀಚಿನ ರಾಜಕೀಯ ವಿದ್ಯಮಾನಗಳಲ್ಲಿ ಒಂದು ಬಲಿಷ್ಠ ಮತ್ತು ಸೈದ್ಧಾಂತಿಕವಾದ ಪ್ರತಿಪಕ್ಷಗಳು ತೀರಾ ಅಪರೂಪವಾಗಿದೆ. ಇದು ಕೇವಲ ಭಾರತದಲ್ಲಿ ಮಾತ್ರ ಅಲ್ಲ. ವಿಶ್ವದೆಲ್ಲೆಡೆ ಸಹ ಕಂಡುಬರುತ್ತಿರುವ ಅಪಾಯಕಾರಿ ಬೆಳವಣಿಗೆ. ವರದಿಗಳ ಪ್ರಕಾರ ಭಾರತದ 14ನೇ ಲೋಕಸಭೆಯಲ್ಲಿ ಶೇ. 60ರಷ್ಟು ಮಸೂದೆಗಳು ಪಾರ್ಲಿಮೆಂಟಿನ ವಿವಿಧ ಸಮಿತಿಗಳಿಗೆ ವಹಿಸಿ ಚರ್ಚೆ ಮಾಡಿದ ನಂತರ ಅಂಗೀಕಾರಗೊಂಡಿವೆ. 15ನೇ ಲೋಕಸಭೆಯಲ್ಲಿ 71 ಮಸೂದೆಗಳನ್ನು ವಿವಿಧ ಸಮಿತಿಗಳಿಗೆ ವಹಿಸಿ ಚರ್ಚೆಯ ನಂತರ ಅಂಗೀಕಾರಗೊಂಡಿವೆ. ಆದರೆ 16ನೇ ಲೋಕಸಭೆಯಲ್ಲಿ ಕೇವಲ ಶೇ. 26 ಮಸೂದೆಗಳು ಚರ್ಚೆಗೆ ಒಳಪಟ್ಟು ಅಂಗೀಕಾರಗೊಂಡಿವೆ. ಇತ್ತೀಚಿನ ಅಧಿವೇಶನಗಳಲ್ಲಿ ಅನುಕೂಲಸಿಂಧು ರಾಜಕಾರಣವೇ ಹೆಚ್ಚಾಗಿದೆ.

ಕಳೆದ 3-5 ತಿಂಗಳ ರಾಜಕೀಯ ಬೆಳವಣಿಗೆಯಲ್ಲಿ ಭಾರತದ ಲೋಕಸಭೆಯಲ್ಲಿ ಸರಿ ಸುಮಾರು 20 ವಿವಿಧ ಮಸೂದೆಗಳು ಯಾವುದೇ ರೀತಿಯ ಚರ್ಚೆಗಳಿಲ್ಲದೆ, ಕೇವಲ ಪ್ರತಿಪಕ್ಷಗಳ ಬಹಿಷ್ಕಾರದ ಲಾಭ ಪಡೆದು ಕಣ್ಣು ಮುಚ್ಚಿಕೊಂಡು ಅಂಗೀಕಾರವಾಗಿರುವುದನ್ನು ನಾವು ಗಮನಿಸಬಹುದು. ತೀರ ಇತ್ತೀಚೆಗೆ ನಡೆದ ಅಧಿವೇಶನದಲ್ಲಿ ಕಾರ್ಮಿಕ ಕಾಯ್ದೆ, ಭೂ ಸುಧಾರಣಾ ಕಾಯ್ದೆ, ಕೀಟನಾಶಕಗಳ ನಿರ್ವಹಣೆ ಕಾಯ್ದೆ, ರಾಷ್ಟ್ರೀಯ ವೈದ್ಯಕೀಯ ನಿಯಂತ್ರಣ ಮಂಡಳಿ ಕಾಯ್ದೆ, ಸಾಮಾಜಿಕ ಭದ್ರತಾ ಕಾಯ್ದೆ, ಭಾರತೀಯ ಪಾರಂಪರಿಕ ಔಷಧ ನಿರ್ವಹಣಾ ಕಾಯ್ದೆ, ಕೈಗಾರಿಕೆ ನಿಯಂತ್ರಣ ಕಾಯ್ದೆ, ಬ್ಯಾಂಕಿಂಗ್ ಸುಧಾರಣಾ ಕಾಯ್ದೆ, ಧಾನ್ಯಗಳು, ದ್ವಿದಳ ಧಾನ್ಯಗಳು ಮತ್ತು ಈರುಳ್ಳಿಯನ್ನು ಅಗತ್ಯ ಸರಕುಗಳ ಪಟ್ಟಿಯಿಂದ ತೆಗೆದು ಹಾಕುವ ಕಾಯ್ದೆ, ಕಂಪೆನಿಗಳ ಅಪರಾಧಗಳಿಗೆ ದಂಡವನ್ನು ಹಾಕುವ ಕಾಯ್ದೆ ಇಂತಹ ಪ್ರಮುಖ ಕಾಯ್ದೆಗಳನ್ನು ಪ್ರತಿಪಕ್ಷಗಳ ಬಹಿಷ್ಕಾರದ ಲಾಭ ಪಡೆದು ಮೇಲ್ಮನೆ ಸಾರಾ ಸಗಟಾಗಿ ಅಂಗೀಕರಿಸಿದೆ. ಅತ್ಯಂತ ಕ್ಷಿಪ್ರವಾಗಿ ನಡೆದ ಈ ಮಾನ್ಸೂನ್ ಅಧಿವೇಶನದಲ್ಲಿ ಒಟ್ಟು 15 ಮಸೂದೆಗಳು ಮಂಡಿಸಲ್ಪಟ್ಟಿತ್ತು. ಅದರಲ್ಲಿ ಎಂಟು ಮಸೂದೆಗಳು ನಾಲ್ಕು ಗಂಟೆಗಳಲ್ಲಿ ಮತ್ತು ಉಳಿದ 7 ಮಸೂದೆಗಳು ಮೂರುವರೆಗಂಟೆ ಒಳಗೆ ಅಂಗೀಕಾರಗೊಂಡಿವೆ!. ಈ ಎಲ್ಲ ಕಾಯ್ದೆಗಳ ಬಗ್ಗೆ ಒಂದೇ ಒಂದು ದಿನ ಸಹ ಪಾರ್ಲಿಮೆಂಟಿನಲ್ಲಿ ಆಳವಾದ ಚರ್ಚೆ ನಡೆದಿಲ್ಲ. ದೇಶದ ಇತಿಹಾಸದಲ್ಲಿ ಕೆಲವೊಂದು ಮಸೂದೆಗಳನ್ನು ಮಂಡಿಸಿದ ಅರ್ಧಗಂಟೆಯಲ್ಲೇ ಪಾಸಾಗಿರುವ ಉದಾರಣೆಗಳಿವೆ. ಆದರೆ ಎಲ್ಲಾ ಸದಸ್ಯರಿಗೆ ಭತ್ತೆಗಳು ಮಾತ್ರ ತಪ್ಪದೆ ತಲುಪುತ್ತವೆ. ಈ ಕಾಯ್ದೆಗಳ ಬಗ್ಗೆ ಜನರಿಗೆ ಹೇಗೆ ಗೊತ್ತಾಗುತ್ತದೆ? ಅಲ್ಲೊಮ್ಮೆ ಇಲ್ಲೊಮ್ಮೆ ಪ್ರತಿಪಕ್ಷಗಳ ಸದಸ್ಯರು ಮಸೂದೆಗಳ ಬಗ್ಗೆ ವಿಪರೀತ ಗಲಾಟೆ ಮಾಡಿದಾಗ, ಮಸೂದೆಗಳ ಪ್ರತಿಯನ್ನು ಹರಿದು ಹಾಕಿದಾಗ, ಮಸೂದೆಯ ಬಗ್ಗೆ ಸದಸ್ಯರ ನಡುವೆ ಹೊಡೆದಾಟ ನಡೆದಾಗ ಇತ್ಯಾದಿ ಸಂದರ್ಭಗಳಲ್ಲಿ ಮಾತ್ರ ಭಾರತೀಯರಿಗೆ ನಮ್ಮ ಸರಕಾರ ಪಾರ್ಲಿಮೆಂಟಿನಲ್ಲಿ ಯಾವ ಮಸೂದೆ ಮಂಡಿಸಿದೆ ಎಂದು ಗೊತ್ತಾಗುತ್ತದೆ. ಮಸೂದೆ ಯಾವುದರ ಬಗ್ಗೆ ಹೇಳುತ್ತಿದೆೆ?, ಅದರ ಸಾಧಕ-ಬಾಧಕಗಳು, ಪ್ರಜೆಗಳಿಗೆ ಇದರಿಂದ ಉಂಟಾಗುವ ಸಮಸ್ಯೆಗಳೇನು? ಇದರಿಂದ ಭವಿಷ್ಯದ ಅನುಕೂಲ-ಅನನುಕೂಲ ಇದ್ಯಾವುದರ ಬಗ್ಗೆಯೂ ಯಾವುದೇ ರೀತಿಯ ಚರ್ಚೆ ಅಧಿವೇಶನಗಳಲ್ಲಿ ನಡೆಯುವುದಿಲ್ಲ. ಇತ್ತೀಚಿನ ದಿನಮಾನಗಳಲ್ಲಿ ಯಾವುದಾದರೂ ಮಸೂದೆಯ ವಿಚಾರದಲ್ಲಿ ಜಂಟಿ ಪಾರ್ಲಿಮೆಂಟ್ ಕಮಿಟಿಯನ್ನು ರಚಿಸುವುದು ತೀರಾ ಅಪರೂಪವಾಗಿದೆ. ಕೆಲವೊಮ್ಮೆ ಜಂಟಿ ಪಾರ್ಲಿಮೆಂಟರಿ ಸಮಿತಿಯೇ ಹೈಜಾಕ್ ಆಗುವ ಸಂಭವ ಇರುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಸಮಯದ ಅಭಾವದಿಂದ ಮಸೂದೆಗಳು ಕಣ್ಣು ಮುಚ್ಚಿಕೊಂಡು ಅಂಗೀಕಾರವಾಗಿರುತ್ತದೆ. ಇದಕ್ಕೆಲ್ಲಾ ಕಾರಣಗಳನ್ನು ಹುಡುಕುತ್ತಾ ಹೋದಾಗ ಕೆಲವು ವಿಷಯಗಳು ಬೆಳಕಿಗೆ ಬರುತ್ತವೆೆ. ಇದರಲ್ಲಿ ಮೊದಲನೆಯದು ಆಡಳಿತ ಪಕ್ಷಗಳಿಗೆ ಮಸೂದೆಗಳನ್ನು ಅಂಗೀಕಾರ ಮಾಡಿಸಿಕೊಳ್ಳುವ ವಿಚಾರದಲ್ಲಿ ವಿಪರೀತವಾದ ಧಾವಂತ ಮತ್ತು ಮಸೂದೆಗಳನ್ನು ಚರ್ಚೆಗೆ ಇಟ್ಟಾಗ ಮಸೂದೆಯಲ್ಲಿರುವ ಹುಳುಕುಗಳು ಹೊರಗೆ ಬರುವ ಭಯ. ಹೆಚ್ಚಿನ ಸಂದರ್ಭಗಳಲ್ಲಿ ಆಡಳಿತ ಪಕ್ಷವು ಲೋಕಸಭೆಯಲ್ಲಿ ಆ ಮಸೂದೆಗಳನ್ನು ಅಂಗೀಕಾರ ಮಾಡಿಕೊಂಡರೂ ರಾಜ್ಯಸಭೆಯಲ್ಲಿ ಅದನ್ನು ಅಂಗೀಕಾರ ಮಾಡಿಸಿಕೊಳ್ಳುವುದು ಅಷ್ಟು ಸುಲಭವಾಗಿರುವುದಿಲ್ಲ. ಏಕೆಂದರೆ ಹೆಚ್ಚಿನ ಬಾರಿ ಆಡಳಿತ ಪಕ್ಷಕ್ಕೆ ರಾಜ್ಯಸಭೆಯಲ್ಲಿ ಬಹುಮತವೇ ಇರುವುದಿಲ್ಲ. ಇನ್ನೊಂದು ಮುಖ್ಯ ಸಮಸ್ಯೆಯೆಂದರೆ ನಿರ್ದಿಷ್ಟ ಮಸೂದೆಯ ಆಳ-ಅಗಲವನ್ನು ತಿಳಿದುಕೊಂಡಿರುವವರು ಎರಡೂ ಸಭೆಗಳಲ್ಲಿ ಕೇವಲ ಬೆರಳೆಣಿಕೆಯ ಮಂದಿ ಸಿಗುತ್ತಾರೆ. ಅವರಿಗೂ ಸಹ ಚರ್ಚೆಯಲ್ಲಿ ಪಾಲ್ಗೊಳ್ಳಲು ಆಸಕ್ತಿ ಇರುವುದಿಲ್ಲ. ಹಲವಾರು ಮಂದಿಗೆ ಹಿಂದಿ ಅಥವಾ ಇಂಗ್ಲಿಷ್ ಭಾಷೆ ಸರಿಯಾಗಿ ಗೊತ್ತಿರುವುದಿಲ್ಲ. ಮಸೂದೆಯಲ್ಲಿನ ತಾಂತ್ರಿಕ ಶಬ್ದಗಳು ಮತ್ತು ವಾಕ್ಯಗಳ ಬಗ್ಗೆ ಸದಸ್ಯರು ತಿಳಿದುಕೊಳ್ಳುವುದು ಹೇಗೆ? ಒಂದು ಹಾಸ್ಯಾಸ್ಪದ ಸಂಗತಿಯೆಂದರೆ ಕೆಲವೊಮ್ಮೆ ಮಸೂದೆಗೆ ಸಂಬಂಧಪಟ್ಟ ಸಚಿವರೇ ಸಹ ಆ ವೇಳೆಯಲ್ಲಿ ಅಲ್ಲಿ ಹಾಜರಿರುವುದಿಲ್ಲ!. ಕೆಲವೊಂದು ಮಸೂದೆಗಳನ್ನು ಅಂಗೀಕಾರ ಮಾಡಿಸಿಕೊಳ್ಳುವ ಅಧಿಕಾರ ಆಡಳಿತ ಪಕ್ಷಕ್ಕೆ ಇದ್ದರೂ ಸಹ ಅದನ್ನು ಅದೇ ನಮೂನೆಯಲ್ಲಿ ಯಾವುದೇ ಬದಲಾವಣೆ ಇಲ್ಲದೆ ಅಂಗೀಕಾರ ಮಾಡಿಸಿಕೊಳ್ಳಬಹುದು ಎಂಬ ಅರ್ಥವಲ್ಲ. ಬದಲಾವಣೆೆ ಸೂಚಿಸುವ ಅಧಿಕಾರ ಪ್ರತಿಪಕ್ಷಕ್ಕೆ ಸದಾ ಇದ್ದೇ ಇರುತ್ತದೆ.

ಕೆಲವೊಮ್ಮೆ ಚುನಾವಣೆಯಲ್ಲಿ ಆಡಳಿತ ಪಕ್ಷವೇ ದೊಡ್ಡರೀತಿಯಲ್ಲಿ ಬಹುಮತವನ್ನು ಪಡೆದು ಪ್ರತಿಪಕ್ಷಗಳೇ ಇಲ್ಲದಂತಾಗುತ್ತದೆ. ಇದು ಒಂದು ರೀತಿ ಆಡಳಿತ ಪಕ್ಷಕ್ಕೆ ಮುಕ್ತ ಹಸ್ತ ನೀಡಿದಂತಾಗುತ್ತದೆ. ಅಧಿವೇಶನವನ್ನು ಬಹಿಷ್ಕರಿಸುವುದು, ಅಧಿವೇಶನದ ವೇಳೆ ಹೊರನಡೆಯುವುದು, ಇತ್ಯಾದಿಗಳನ್ನು ಆಡಳಿತ ಪಕ್ಷದವರು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಾರೆ ಎಂಬ ಅರಿವು ಇರಬೇಕು. ಅಧಿವೇಶನವನ್ನು ಬಹಿಷ್ಕರಿಸುವುದರಿಂದ ಅಥವಾ ಹೊರ ನಡೆಯುವುದರಿಂದ ಯಾರಿಗೂ ಏನೂ ಪ್ರಯೋಜನವಾಗುವುದಿಲ್ಲ. ಘೋಷಣೆಗಳನ್ನು ಕೂಗುವುದು, ಕೈಗೆ ಸಿಕ್ಕಿದ್ದನ್ನು ಸ್ಪೀಕರ್ ಕಡೆ ಎಸೆಯುವುದು ಇವುಗಳಿಂದ ಯಾವುದೇ ರೀತಿಯ ಪ್ರಯೋಜನವಾಗುವುದಿಲ್ಲ. ಹೀಗೆ ಮಾಡುವುದರಿಂದ ಸಭಾಧ್ಯಕ್ಷರಿಗೆ ವಿರೋಧ ಪಕ್ಷದ ಸದಸ್ಯರನ್ನು ಹೊರಗೆ ಹಾಕುವುದು ಅಥವಾ ಸಭೆಯನ್ನು ಮುಂದೂಡುವುದು ಇವುಗಳಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಮತ್ತು ಮಸೂದೆಗಳು ಸುಲಭವಾಗಿ ಅಂಗೀಕಾರಗೊಳ್ಳುತ್ತವೆ. ಅಲ್ಲದೆ ಸರಕಾರ ಒಂದೇ ದಿನದಲ್ಲಿ ಉದ್ದೇಶ ಪೂರ್ವಕವಾಗಿ ಹಲವಾರು ಮಸೂದೆಗಳನ್ನು ಮಂಡಿಸುತ್ತದೆ. ಇದು ಪ್ರತಿಪಕ್ಷಗಳ ದಾರಿತಪ್ಪಿಸುವ ಸುಲಭ ವಿಧಾನ.

ಭಾರತದ ರಾಜಕೀಯದಲ್ಲಿ ಇತ್ತೀಚೆಗೆ ಪ್ರತಿಪಕ್ಷಗಳು ನಿಷ್ಕ್ರಿಯಗೊಳ್ಳುತ್ತಿವೆ. ಅದಲ್ಲದೆ ಇತ್ತೀಚಿನ ದಿನಗಳಲ್ಲಿ ಅಧಿವೇಶನಗಳ ಸಂಖ್ಯೆ ನಿಧಾನವಾಗಿ ಕಡಿಮೆಯಾಗುತ್ತಿದೆ. ಈ ಬಗ್ಗೆ ಪ್ರತಿಪಕ್ಷಗಳು ಮೌನವಾಗಿರುವುದು ಪ್ರಶ್ನಾರ್ಹ. ಮಸೂದೆ ಕುರಿತು ಚರ್ಚೆಗೆ ಸಂಬಂಧಪಟ್ಟವರನ್ನು ಒತ್ತಾಯಿಸುವ ಪ್ರತಿಪಕ್ಷಗಳು ಇಂದು ಕಡಿಮೆಯಾಗಿವೆ. ಇನ್ನೊಂದು ವಿಚಾರವೆಂದರೆ ಹೆಚ್ಚಿನ ಬಾರಿ ಪ್ರತಿಪಕ್ಷಗಳು ಮಸೂದೆಗಳನ್ನು ಒಪ್ಪಿಕೊಳ್ಳುವುದರಿಂದ ಮುಂದಿನ ಚುನಾವಣೆಯಲ್ಲಿ ಯಾವ ರೀತಿಯ ಅನುಕೂಲ ಅಥವಾ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ ಎಂಬುದನ್ನು ಊಹಿಸಲು ಬಯಸುತ್ತವೆ. ಅನುಕೂಲಕ್ಕೆ ತಕ್ಕಂತೆ ಪ್ರತಿಪಕ್ಷಗಳು ಮಸೂದೆಗಳ ಪರವಾಗಿ ಅಥವಾ ವಿರುದ್ಧವಾಗಿಯೂ ಮಾತನಾಡುತ್ತವೆ ಎನ್ನುತ್ತಾರೆ ರಾಜಕೀಯ ತಜ್ಞರು. ಸಮಾಜ ವಿಕಾಸವಾದಂತೆ ಪ್ರಜೆಗಳು ತಮ್ಮನ್ನು ಆಳಲು ಮತ್ತು ಸಮಾಜವನ್ನು ಒಂದು ಸುಸ್ಥಿತಿಯಲ್ಲಿಡಲು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಂಡುಹಿಡಿದರು. ತಮ್ಮನ್ನು ನಿಯಂತ್ರಿಸಲು ಕಾನೂನುಗಳನ್ನು ಜಾರಿಗೆ ತಂದರು. ಕ್ರಮೇಣ ಚುನಾವಣೆ ಮತ್ತು ಸಂಸತ್ ಹೀಗೆ ಹಲವಾರು ಪರಿಕಲ್ಪನೆಗಳು ಜಾರಿಗೆ ಬಂದವು. ಕಾಲಾನಂತರದಲ್ಲಿ ಕಾನೂನು ಮತ್ತು ಮತ್ತಿತರ ಬದಲಾವಣೆಗಳನ್ನು ತರಲು ಶಾಸನಗಳನ್ನು ಮಾಡುವ ಅಧಿಕಾರ ಸಂಸತ್ತಿಗೆ ನೀಡಲಾಯಿತು. ಅಲ್ಲಿ ಹೊಸ ಕಾನೂನು ಕಟ್ಟಳೆಗಳ ಬಗ್ಗೆ ಬಹಳ ಗಂಭೀರವಾದ ಪರಿಶೀಲನೆ ಮತ್ತು ಚರ್ಚೆ ಒಳಪಡಬೇಕು ಎಂಬ ನಿಯಮ ಜಾರಿಗೆ ತರಲಾಯಿತು. ಸಾಧ್ಯವಾದಷ್ಟು ಮಸೂದೆಗಳ ಅಂಗೀಕಾರಕ್ಕೆ ಮುಂಚಿತವಾಗಿ ಸಾರ್ವಜನಿಕರಿಗೆ ಅರಿವು ಮೂಡಿಸಬೇಕೆಂಬ ಪರಿಕಲ್ಪನೆಯು ವಿಶ್ವದೆಲ್ಲೆಡೆ ಬರಲು ಆರಂಭವಾಯಿತು. ಆದರೆ ನಮ್ಮ ರಾಜಕೀಯ ವ್ಯವಸ್ಥೆಯ ಮುಖ್ಯ ಸಮಸ್ಯೆಯೆಂದರೆ ಅದು ಪಕ್ಷಗಳು ತಮ್ಮ ತಮ್ಮ ಸದಸ್ಯರಿಗೆ ನೀಡುವ ವಿಪ್. ಈ ವಿಪ್ ವ್ಯವಸ್ಥೆಯನ್ನು ಉಲ್ಲಂಘಿಸಿದರೆ ಸದಸ್ಯರು ತಮ್ಮ ಸದಸ್ಯತ್ವವನ್ನು ಕಳೆದುಕೊಳ್ಳುತ್ತಾರೆ. ಆದರೆ ಅಮೆರಿಕ ಸೇರಿದಂತೆ ವಿಶ್ವದ ಕೆಲವೆಡೆ ರಾಜಕೀಯ ಪಕ್ಷಗಳು ತಮ್ಮ ತಮ್ಮ ಸದಸ್ಯರ ಮೇಲೆ ಯಾವುದೇ ರೀತಿ ನಿರ್ಬಂಧ ಹೇರುವುದಿಲ್ಲ. ಅಲ್ಲಿ ಸದಸ್ಯರು ಮಸೂದೆಗಳ ಪರ ಮತ್ತು ವಿರುದ್ಧವಾಗಿ ತಮಗೆ ಇಷ್ಟ ಬಂದ ಹಾಗೆ ಮತ ಹಾಕುತ್ತಾರೆ. ವಿರೋಧ ಪಕ್ಷಗಳು ರಾಷ್ಟ್ರೀಯ ಪ್ರಜಾಪ್ರಭುತ್ವ, ಮಾನವಹಕ್ಕುಗಳು ಮತ್ತು ಉತ್ತಮ ಆಡಳಿತದ ಚಾಂಪಿಯನ್ ಆಗುವ ಮೊದಲು ತಮ್ಮಾಳಗೆ ತಾವು ಪ್ರಜಾಪ್ರಭುತ್ವವನ್ನು ತರಬೇಕಾಗುತ್ತದೆ. ಇಂದು ಹೆಚ್ಚಿನ ವಿರೋಧ ಪಕ್ಷಗಳಲ್ಲಿ ಆಂತರಿಕ ಸ್ವಾತಂತ್ರ್ಯವೇ ಇರುವುದಿಲ್ಲ.

ಭಾರತದ ರಾಜಕೀಯ ಇತಿಹಾಸದ ಬಹುಪಾಲು ಪರಿಸ್ಥಿತಿ ಹೀಗಿದೆ. ವಿರೋಧ ಪಕ್ಷಗಳನ್ನು ಪೋಷಿಸುವ ಬದಲು, ವ್ಯವಸ್ಥೆಯು ಆ ಪಕ್ಷಗಳಿಗೆ ಹಾನಿ ಮಾಡುವುದೇ ಇಲ್ಲಿ ಸರ್ವೇ ಸಾಮಾನ್ಯ. ಅಲ್ಲದೆ ಅಧಿಕಾರ ಕಳೆದುಕೊಂಡಿರುವ ಪಕ್ಷವು ಸ್ವಾಭಾವಿಕವಾಗಿ ದುರ್ಬಲವಾಗುವ ಅಪಾಯವಿರುತ್ತದೆ. ಪ್ರಜಾಪ್ರಭುತ್ವದ ಪ್ರತಿಯೊಂದು ಅಂಗದ ಮೇಲೆ ಆಡಳಿತ ಪಕ್ಷವು ಯಾಂತ್ರಿಕವಾಗಿ ಪ್ರಾಬಲ್ಯವನ್ನು ಸಾಧಿಸುವ ಅವಕಾಶ ಹೆಚ್ಚು ಇರುತ್ತದೆ. ಮುಖ್ಯವಾಗಿ ಆಡಳಿತ ಪಕ್ಷಕ್ಕೆ ಹಣಕಾಸಿನ ಸಂಪನ್ಮೂಲ ಹೆಚ್ಚಿರುತ್ತದೆ. ಕೊನೆಗೆ ಇವೆಲ್ಲವೂ ಸೇರಿ ವ್ಯವಸ್ಥಿತವಾಗಿ ವಿರೋಧ ಪಕ್ಷಗಳನ್ನು ತುಳಿಯಲಾರಂಭಿಸಲಾಗುತ್ತದೆ. ಈ ಸಂದರ್ಭದಲ್ಲಿ ಒಂದು ಅಂಶ ನೆನಪಿಗೆ ಬರುತ್ತದೆ. ಸುಮಾರು 1960ರ ದಶಕದಲ್ಲಿ ಜೆ.ಆರ್.ಡಿ. ಟಾಟಾರವರು ದೇಶಕ್ಕೆ ಒಂದು ಬಲಿಷ್ಠವಾದ ವಿರೋಧ ಪಕ್ಷದ ಅಗತ್ಯವನ್ನು ಮನಗಂಡು ಅಂದಿನ ವಿರೋಧ ಪಕ್ಷಕ್ಕೆ ಹಣ ಸಹಾಯ ಮಾಡಲು ನಿರ್ಧಾರ ಮಾಡುತ್ತಾರೆ. ತಮ್ಮ ನಿರ್ಧಾರದ ಕುರಿತು ಅವರು ಅಂದಿನ ಪ್ರಧಾನಿ ನೆಹರೂ ಅವರಿಗೆ ಸಹ ಒಂದು ಪತ್ರ ಬರೆಯುತ್ತಾರೆ. ಟಾಟಾರವರ ದೂರದೃಷ್ಟಿಯನ್ನು ನೆಹರೂ ಅಂದು ಮೆಚ್ಚಿಕೊಳ್ಳುತ್ತಾರೆ. ಇಂದು ಯಾರಾದರೂ ಉದ್ಯಮಿ ದೇಶದಲ್ಲಿ ಬಲಿಷ್ಠವಾದ ವಿರೋಧ ಪಕ್ಷದ ಅಗತ್ಯವಿದೆಯೆಂದು ಮತ್ತು ಆ ಪಕ್ಷಕ್ಕೆ ಧನ ಸಹಾಯ ಮಾಡುವುದಾಗಿ ಇಂದಿನ ಪ್ರಧಾನಿಗೆ ಪತ್ರ ಬರೆಯುವ ಧೈರ್ಯ ಮಾಡುತ್ತಾರೆಯೇ?

Writer - ಡಾ. ಡಿ. ಸಿ. ನಂಜುಂಡ

contributor

Editor - ಡಾ. ಡಿ. ಸಿ. ನಂಜುಂಡ

contributor

Similar News

ಜಗದಗಲ
ಜಗ ದಗಲ