ಸಿಡಿಆರ್ ಕ್ಲೇಮ್‌ನೊಂದಿಗೆ ನಮ್ಮ ವಿರುದ್ಧವೇ ಪಿತೂರಿ : ಹತ್ರಸ್ ಸಂತ್ರಸ್ತೆ ಸಹೋದರ

Update: 2020-10-08 03:53 GMT

ಹತ್ರಸ್ : ಅತ್ಯಾಚಾರಕ್ಕೆ ಒಳಗಾಗಿದ್ದ ದಲಿತ ಯುವತಿ ಕುಟುಂಬಕ್ಕೆ ಮತ್ತು ಅತ್ಯಾಚಾರ ಆರೋಪಿಗಳಿಗೆ ಮೊದಲೇ ಸಂಪರ್ಕ ಇತ್ತು ಎಂಬ ಆರೋಪವನ್ನು ಸಂತ್ರಸ್ತೆಯ ಕುಟುಂಬ ನಿರಾಕರಿಸಿದೆ. ಪೊಲೀಸರು ಬಿಡುಗಡೆ ಮಾಡಿರುವ ಕರೆ ವಿವರಗಳ ದಾಖಲೆ (ಸಿಡಿಆರ್)ಯ ಕ್ರಮಬದ್ಧತೆಯನ್ನು ಸಂತ್ರಸ್ತೆಯ ಸಹೋದರ ಪ್ರಶ್ನಿಸಿದ್ದಾರೆ.

ಐದು ತಿಂಗಳಲ್ಲಿ ಸಂತ್ರಸ್ತೆಯ ಕುಟುಂಬ ಹಾಗೂ ಆರೋಪಿಗಳ ನಡುವೆ 100 ಬಾರಿ ದೂರವಾಣಿ ಸಂಭಾಷಣೆ ನಡೆದಿತ್ತು ಎಂದು ಪೊಲೀಸರು ಹೇಳಿದ್ದರು. "ಇದು ನಮ್ಮ ವಿರುದ್ಧದ ಪಿತೂರಿ" ಎಂದು ಸಂತ್ರಸ್ತೆಯ ಸಹೋದರ ಹೇಳಿಕೆ ನೀಡಿದ್ದಾರೆ.

"ಹಂತಕರು ವಂಚಕರು; ತಮ್ಮನ್ನು ರಕ್ಷಿಸಿಕೊಳ್ಳಲು ಅವರು ಏನು ಬೇಕಾದರೂ ಮಾಡಬಲ್ಲರು" ಎಂದು ಅವರು ಬಣ್ಣಿಸಿದ್ದಾರೆ. ಈ ಸಿಮ್ ತಂದೆಗಾಗಿ 10 ವರ್ಷಗಳ ಹಿಂದೆ ಖರೀದಿ ಮಾಡಿದ್ದಾಗಿತ್ತು. "ಆದರೆ ಅವರ ಫೋನ್ ಕಳೆದು ಹೋಗಿತ್ತು. ಆದ್ದರಿಂದ ನಾನು ನನ್ನ ಐಡಿ ಬಳಸಿ ನನ್ನ ಹೆಸರಿನಲ್ಲಿ ಸಿಮ್ ನೋಂದಣಿ ಮಾಡಿದ್ದೆ. ಈ ಫೋನ್ ಯಾವಾಗಲೂ ಮನೆಯಲ್ಲಿ ಇರುತ್ತಿತ್ತು. ಅದೊಂದೇ ಮೊಬೈಲ್ ನಮ್ಮಲ್ಲಿದ್ದುದು" ಎಂದು ಅವರು ಪ್ರತಿಪಾದಿಸಿದ್ದಾರೆ.

ಬಹುಶಃ ತಂದೆ ಈ ಫೋನ್ ಬಳಸಿರಬೇಕು. ಆದರೆ ಸಂತ್ರಸ್ತೆಯ ಮನೆಯ ಪಕ್ಕದ ರಸ್ತೆಯಲ್ಲಿ ವಾಸವಿದ್ದ ಮುಖ್ಯ ಆರೋಪಿ ಸಂದೀಪ್‌ನನ್ನು ಪದೇ ಪದೇ ಸಂಪರ್ಕಿಸುತ್ತಿದ್ದರು ಎಂಬ ವರದಿಗಳು ನಿರಾಧಾರ ಎಂದು ಹೇಳಿದ್ದಾರೆ.

"ನಾವು ಬಡವರು ಎಂಬ ಕಾರಣಕ್ಕೆ ಉತ್ತರ ಪ್ರದೇಶ ಪೊಲೀಸರು ನಮ್ಮನ್ನೇ ಸಿಲುಕಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕಿರುಕುಳಕ್ಕೆ ಕೊನೆ ಇಲ್ಲ.. ಅವರ ಬಳಿ ದಾಖಲೆ ಇದ್ದರೆ ಪುರಾವೆಯೂ ಇರಬೇಕು. ರೆಕಾರ್ಡ್ ಮಾಡಲಾದ ಕರೆಗಳನ್ನು ನಾನು ಕೇಳಲು ಬಯಸುತ್ತೇನೆ" ಎಂದು ಗಾಝಿಯಾಬಾದ್‌ನಲ್ಲಿ ಕೆಲಸ ಮಾಡುತ್ತಿರುವ ಸಂತ್ರಸ್ತೆಯ ತಮ್ಮ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News