ವ್ಯಕ್ತಿ, ನಿರ್ದಿಷ್ಟ ಗುಂಪನ್ನು ನಿಂದಿಸಬೇಡಿ: ಖಾಸಗಿ ಚಾನೆಲ್‌ಗಳಿಗೆ ಮಾಹಿತಿ-ಪ್ರಸಾರ ಸಚಿವಾಲಯ ಸೂಚನೆ

Update: 2020-10-09 17:36 GMT

ಹೊಸದಿಲ್ಲಿ, ಅ. 9: ಕಾರ್ಯಕ್ರಮದ ಸಂಹಿತೆಗೆ ಬದ್ಧರಾಗಿರಿ ಎಂದು ಎಲ್ಲಾ ಖಾಸಗಿ ಸೆಟಲೈಟ್ ಟೆಲಿವಿಷನ್ ಚಾನೆಲ್‌ಗಳಲ್ಲಿ ಶುಕ್ರವಾರ ಮನವಿ ಮಾಡಿರುವ ಮಾಹಿತಿ ಹಾಗೂ ಪ್ರಸಾರ ಸಚಿವಾಲಯ, ಯಾವುದೇ ವ್ಯಕ್ತಿ ಅಥವಾ ನಿರ್ದಿಷ್ಟ ಗುಂಪನ್ನು ಟೀಕೆ ಅಥವಾ ನಿಂದೆ ಮಾಡಬಾರದು ಎಂದು ಒತ್ತಿ ಹೇಳಿದೆ. 

ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಮಾದಕ ದ್ರವ್ಯದ ಆಯಾಮದ ತನಿಖೆಗೆ ಸಂಬಂಧಿಸಿ ತನ್ನ ವಿರುದ್ಧ ಮಾನ ಹಾನಿಕರ ಕಾರ್ಯಕ್ರಮವನ್ನು ಪ್ರದರ್ಶಿಸಲಾಗುತ್ತಿದೆ ಎಂದು ಆರೋಪಿಸಿ ನಟಿ ರಕುಲ್ ಪ್ರೀತ್ ಸಿಂಗ್ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ದಿಲ್ಲಿ ನ್ಯಾಯಾಲಯ ಈ ಸಲಹೆ ನೀಡಿದೆ. ಕೇಬಲ್ ಟೆಲಿವಿಷನ್ ನೆಟ್‌ವರ್ಕ್ (ನಿಯಂತ್ರಣ) ಕಾಯ್ದೆ, 1995 ಹಾಗೂ ಅದರ ಅಡಿಯಲ್ಲಿ ರೂಪಿಸಲಾದ ನಿಯಮಗಳ ಅಡಿಯಲ್ಲಿ ಹೇಳಲಾದ ಕಾರ್ಯಕ್ರಮ ಹಾಗೂ ಜಾಹೀರಾತು ಸಂಹಿತೆಗೆ ಕಟ್ಟುನಿಟ್ಟಾಗಿ ಬದ್ಧರಾಗಿ ಪ್ರಸಾರ ವಿಷಯ ಇರಲಿ ಎಂದು ಈ ಹಿಂದೆ ಹಲವು ಬಾರಿ ಖಾಸಗಿ ಸೆಟಲೈಟ್ ಟಿ.ವಿ ಚಾನೆಲ್‌ಗೆ ಸಲಹೆ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಯಾವುದೇ ರೀತಿಯ ಅಶ್ಲೀಲತೆ, ಮಾನಹಾನಿ,ದುರುದ್ದೇಶ, ತಪ್ಪು, ಅರ್ಧ ಸತ್ಯದ ವಿಷಯಗಳ ಕಾರ್ಯಕ್ರಮಗಳು ಪ್ರಸಾರವಾಗದಂತೆ ಗಮನ ಹರಿಸಿ, ಸಂಹಿತೆಗೆ ಅನುಗುಣವಾಗಿ ಕಾರ್ಯಕ್ರಮ ಪ್ರಸಾರ ಮಾಡಬೇಕು ಎಂದು ಅದು ಸಚಿವಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News