ಮಾಣಿಯ ಮಾಣಿಕ್ಯದ ಕುರಿತು ಒಂದಿಷ್ಟು...
ಬೇಕಲ್ ಉಸ್ತಾದ್ ಮರಣ ಹೊಂದಿದಾಗ ಕರಾವಳಿ ಕರ್ನಾಟಕದ ಮುಸ್ಲಿಂ ಸಮುದಾಯದ ಮುಂದೆ "ಇನ್ಯಾರು...?" ಎಂಬ ಸವಾಲು ಉದ್ಭವವಾಗಿತ್ತು. ಆಗ ಹೆಚ್ಚಿನವರ ಊಹೆ ಮಾಣಿ ಉಸ್ತಾದ್ ಎಂದೇ ಆಗಿತ್ತು. ಹಾಗೆ ನೋಡ ಹೋದರೆ ಬೇಕಲ್ ಉಸ್ತಾದರಿಗೆ ಖಾಝಿ ಸ್ಥಾನ ನೀಡುವ ಸಂದರ್ಭದಲ್ಲಿ ಮಾಣಿ ಉಸ್ತಾದರೂ ಇದ್ದರು.
ಬೇಕಲ್ ಉಸ್ತಾದರ ಜೊತೆ ಜೊತೆಗೆ ಕೆಲವು ಮೊಹಲ್ಲಾಗಳನ್ನು ಹಂಚಿಕೊಳ್ಳಬೇಕೆಂಬ ಒತ್ತಡವೂ ಮಾಣಿ ಉಸ್ತಾದರ ಮೇಲಿತ್ತು. ಆದರೆ ಮಾಣಿ ಉಸ್ತಾದರ ಹಾದಿ ಬೇರೆಯೇ ಆಗಿತ್ತು. ಮಾಣಿ ಉಸ್ತಾದ್ ಮತ್ತು ಬೇಕಲ್ ಉಸ್ತಾದ್ ಬಹಳ ಆತ್ಮೀಯ ಗೆಳೆಯರಾಗಿದ್ದರು. ಇಸ್ಲಾಮಿಕ್ ಪ್ರೌಢ ಶಿಕ್ಷಣವನ್ನು ಬೇಕಲ್ ಉಸ್ತಾದ್ ಮಂಗಳೂರು ತಾಲೂಕಿನ ಕಿನ್ಯದಲ್ಲಿ ಪಡೆದರೆ, ಮಾಣಿ ಉಸ್ತಾದ್ ಕಿನ್ಯದ ಪಕ್ಕದಲ್ಲೇ ಇರುವ ಅಥವಾ ಕಿನ್ಯದ ಅವಳಿ ಗ್ರಾಮವೆಂದೇ ಹೇಳಬಹುದಾದ ಮಂಜನಾಡಿಯಲ್ಲಿ ಪಡೆದರು. ಆ ಬಳಿಕ ಇಬ್ಬರೂ ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ಬೇರೆ ಬೇರೆಡೆಗಳಿಗೆ ತೆರಳಿದರೂ ಮತ್ತೆ ಮಹಾಗುರು ಉಳ್ಳಾಲದ ಸಯ್ಯದ್ ಅಬ್ದುರ್ರಹ್ಮಾನ್ ಅಲ್-ಬುಖಾರಿಯವರ ಧಾರ್ಮಿಕ ಪಾಠ ಶಾಲೆಯಲ್ಲಿ ಮತ್ತೆ ಒಂದಾ ದರು. ಫ್ರೌಢ ಶಿಕ್ಷಣ ಪಡೆಯುವ ಕಾಲಕ್ಕೆ ಪ್ರಾರಂಭವಾದ ಇವರ ಗೆಳೆತನ ಬೇಕಲ್ ಉಸ್ತಾದರ ಬದುಕಿನ ಕೊನೆಯವರೆಗೂ ಮುಂದುವರಿದಿತ್ತು.
ವಯಸ್ಸಿನಲ್ಲಿ ಬೇಕಲ್ ಉಸ್ತಾದರಿಗಿಂತ ನಾಲ್ಕು ವರ್ಷ ಹಿರಿಯರು ಮಾಣಿ ಉಸ್ತಾದ್. ಅರಸಿಕೊಂಡು ಬಂದಿದ್ದ ಉನ್ನತ ಧಾರ್ಮಿಕ ಹುದ್ದೆಗಳನ್ನು ಸ್ವತಃ ತಾನಾಗಿಯೇ ನಿರಾಕರಿಸಿ ತನ್ನದೇ ಹಾದಿಯಲ್ಲಿ ಮಾಣಿ ಉಸ್ತಾದ್ ಎಂದೇ ಖ್ಯಾತರಾದ ಅಬ್ದುಲ್ ಹಮೀದ್ ಮುಸ್ಲಿಯಾರ್ ಮುಂದುವರಿದರು. ದಾರುಲ್ ಉಲೂಂ ದೇವ್‌ಬಂದ್‌ನಲ್ಲಿ ಖಾಸಿಮಿ ಪದವಿ ಪಡೆದ ಬಳಿಕ ವಿವಿಧೆಡೆ ಇಸ್ಲಾಮಿಕ್ ಶಿಕ್ಷಣ ನೀಡುವ ಗುರುವಾಗಿ ಕಾರ್ಯ ನಿರ್ವಹಿಸಿದ ಇವರು ಬೇಕಲ್ ಉಸ್ತಾದರ ನಂತರ ಶಾಫಿಈ ಮುಸ್ಲಿಂ ಕರ್ಮಶಾಸ್ತ್ರ ವಿಭಾಗದ ಮೊದಲ ಕನ್ನಡಿಗ ಸಂಯುಕ್ತ ಖಾಝಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಅತ್ಯಂತ ಸೌಮ್ಯ ಸ್ವಭಾವದ ಮಾಣಿ ಉಸ್ತಾದ್ ತನ್ನ ದಿನಚರಿಯ ಹೆಚ್ಚಿನ ಭಾಗವನ್ನು ಬೋಧನೆ, ಅಧ್ಯಯನ ಮತ್ತು ಆರಾಧನೆಗಾಗಿ ಮೀಸಲಿಡು ತ್ತಾರೆ. ಮಾತಿಗಿಂತ ಮೌನವನ್ನೇ ಹೆಚ್ಚು ಇಷ್ಟಪಡುವ ಉಸ್ತಾದ್ ಯಾವುದೇ ವಿಚಾರದಲ್ಲಿ ತನ್ನ ಪ್ರತಿಕ್ರಿಯೆಯ ಅಗತ್ಯವಿಲ್ಲದಾಗ ಮೌನಕ್ಕೇ ಒತ್ತು ನೀಡುತ್ತಾರೆ. ಸಂಘಟನಾತ್ಮಕ ಗುಂಪುಗಾರಿಕೆಯಿಂದ ಮಾರು ದೂರ ನಿಲ್ಲುವ ಉಸ್ತಾದ್ ಎಲ್ಲರನ್ನೂ ಸಮಾನವಾಗಿ ಕಾಣುವವರು ಮತ್ತು ಗೌರವಿಸುವವರು.
ಖಗೋಳ ಶಾಸ್ತ್ರ, ಇಸ್ಲಾಮೀ ಕರ್ಮಶಾಸ್ತ್ರ, ತಸವ್ವುಫ್ (ಸೂಫಿ ತತ್ವಜ್ಞಾನ), ತರ್ಕಶಾಸ್ತ್ರ ಇತ್ಯಾದಿ ಜ್ಞಾನ ಶಾಖೆಗಳಲ್ಲಿ ಅಪಾರ ಪಾಂಡಿತ್ಯ ವಿರುವ ಉಸ್ತಾದರ ಅಧ್ಯಾಪನಾ ವೃತ್ತಿಗೆ ಇದೀಗ ಅರ್ಧ ಶತಕ. ದಾರುಲ್ ಉಲೂಮ್ ದೇವ್‌ಬಂದ್‌ನಿಂದ ಪದವಿ ಪಡೆದು ಬಂದು ಮೊದಲೈದು ವರ್ಷಗಳಲ್ಲಿ ಎರಡು ಮೂರು ಕಡೆ ಅಧ್ಯಾಪನಾ ವೃತ್ತಿ ನಿರ್ವಹಿಸಿದರು. ಆ ಬಳಿಕ ಗಡಿನಾಡು ಕಾಸರಗೋಡು ಜಿಲ್ಲೆಯ ಮಚ್ಚಂಪಾಡಿ ಎಂಬಲ್ಲಿ ಸುದೀರ್ಘ ಇಪ್ಪತ್ತೈದು ವರ್ಷಗಳ ಕಾಲ ಅಧ್ಯಾಪನಾ ವೃತ್ತಿ ನಿರ್ವಹಿಸಿದರು. ಮುಂದೆ ಸ್ವಂತ ಊರು ಬಂಟ್ವಾಳ ತಾಲೂಕಿನ ಮಾಣಿಯಲ್ಲಿ ನೆಲೆ ನಿಂತು ಅಲ್ಲೇ ಧಾರ್ಮಿಕ ಪಾಠ ಶಾಲೆಯೊಂದನ್ನು ಸ್ಥಾಪಿಸಿದರು. ಅದೇ ದಾರುಲ್ ಇರ್ಶಾದ್ ಮಾಣಿ ಎಂದೇ ಹೆಸರುವಾಸಿಯಾಯಿತು. ಆ ಬಳಿಕ ಮಾಣಿಯಿಂದ ಐದಾರು ಕಿಲೋ ಮೀಟರ್ ಅಂತರದಲ್ಲಿರುವ ಮಿತ್ತೂರು ಎಂಬಲ್ಲಿ ಖ್ವಾಜಾ ಗರೀಬ್ ನವಾಝ್ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸಿ ದರು. ಅದು ಕರ್ನಾಟಕದ ಮೊದಲ ಮತ ಬೌತಿಕ ಸಮನ್ವಯ ಶಿಕ್ಷಣ ಸಂಸ್ಥೆಯೆಂಬ ಕೀರ್ತಿ ಪಡೆದಿದೆ.
ಅಲ್ಲಿ ಧಾರ್ಮಿಕ ಶಿಕ್ಷಣದ ಜೊತೆ ಜೊತೆಗೆ ಭೌತಿಕ ಶಿಕ್ಷಣವನ್ನೂ ನೀಡಲಾಗುತ್ತದೆ. ಸುಮಾರು ಒಂದು ಎಕರೆ ಜಮೀನಿನಲ್ಲಿ ತಲೆಯೆತ್ತಿ ನಿಂತಿರುವ ಸುಂದರವಾದ ಕಾಲೇಜು ಮತ್ತು ಮಸೀದಿ ಮಾಣಿ ಉಸ್ತಾದರ ಶ್ರಮದ ಫಲ. ಅಲ್ಲಿ ಸುಸಜ್ಜಿತ ವಿಜ್ಞಾನ ಪ್ರಯೋಗಾಲಯ , ಕಂಪ್ಯೂಟರ್ ಲ್ಯಾಬ್ ಮತ್ತು ಬೃಹತ್ತಾದ ಗ್ರಂಥಾಲಯವೂ ಇದೆ. ಅಲ್ಲಿನ ಗ್ರಂಥಾಲಯದ ವಿಶೇಷವೇನೆಂದರೆ ಅಲ್ಲಿರುವುದು ಕೇವಲ ಧಾರ್ಮಿಕ ಗ್ರಂಥಗಳು ಮಾತ್ರ ವಲ್ಲ. ಜ್ಞಾನದ ವಿವಿಧ ಶಾಖೆಗಳಿಗೆ ಸಂಬಂಧಿಸಿದ ಅಪರೂಪದ ಗ್ರಂಥಗಳ ಭಂಡಾರವೇ ಅಲ್ಲಿದೆ. ಸೂಫಿ ತತ್ವಜ್ಞಾನಕ್ಕೆ ಸಂಬಂಧಿಸಿದ ಜಗತ್ತಿನ ವಿವಿಧ ದೇಶಗಳ ಪ್ರಸಿದ್ಧ ಸೂಫಿ ತತ್ವಜ್ಞಾನಿಗಳು ರಚಿಸಿದ ಅಪರೂಪದ ಗ್ರಂಥಗಳೆಲ್ಲವೂ ಅಲ್ಲಿ ಲಭ್ಯ. ಇನ್ನು ಅರೆಬಿಕ್ ಕಾವ್ಯ ಪ್ರಪಂಚದ ಮಹತ್ವದ ಎಲ್ಲಾ ಕೃತಿಗಳೂ ಅಲ್ಲಿ ಲಭ್ಯ. ಇವಿಷ್ಟೇ ಅಲ್ಲದೇ ಕನ್ನಡ, ಇಂಗ್ಲಿಷ್ ಸಾಹಿತ್ಯದ ನೂರಾರು ಗ್ರಂಥಗಳು, ವಿಜ್ಞಾನದ ನೂರಾರು ಗ್ರಂಥ ಗಳೂ ಅಲ್ಲಿವೆ. ಸುಮಾರು ಏಳೆಂಟು ನೂರು ಚದರ ಅಡಿಯಷ್ಟು ವಿಶಾಲವಿರುವ ಗ್ರಂಥಾಲಯದಲ್ಲಿ ಗ್ರಂಥಗಳನ್ನು ಜೋಡಿಸಿಟ್ಟಿರುವ ಪರಿಯೇ ಮನಮೋಹಕ. ಓದುವ ಕೋಣೆಯೂ ವಿಶಾಲ. ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಐದು ದಿನಪತ್ರಿಕೆಗಳನ್ನು ಗ್ರಂಥಾಲಯಕ್ಕೆ ತರಿಸುತ್ತಾರೆ.
ಪ್ರತೀಯೋರ್ವ ವಿದ್ಯಾರ್ಥಿಯೂ ದಿನಪತ್ರಿಕೆಗಳು, ಸಾಹಿತ್ಯ ಕೃತಿಗಳನ್ನು ಓದುವಂತೆ ಪ್ರೋತ್ಸಾಹಿಸಲಾಗುತ್ತದೆ. ಅದರ ಪರಿಣಾಮವಾಗಿ ಕನ್ನಡದಲ್ಲಿ ಚೆನ್ನಾಗಿ ಕತೆ, ಕವನ, ಲೇಖನ, ವಿಮರ್ಶೆ, ಪ್ರಬಂಧಗಳನ್ನು ಬರೆಯುವ ವಿದ್ಯಾರ್ಥಿ ಸಾಹಿತಿಗಳ ಪಡೆಯೇ ಅಲ್ಲಿದೆ. ಉಸ್ತಾದ್ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಬೆಳೆಸಲು ಅದೆಷ್ಟು ಆಸಕ್ತಿ ತೋರುತ್ತಾರೆಂದರೆ ಅವರು ಜಗತ್ತಿನ ಯಾವುದೇ ದೇಶಕ್ಕೆ, ದೇಶದ ಯಾವುದೇ ರಾಜ್ಯಕ್ಕೆ ಭೇಟಿ ನೀಡಿದರೂ ಒಂದಷ್ಟು ಅಪರೂಪದ ಗ್ರಂಥಗಳ ಹೊರತಾಗಿ ಮರಳಲಾರರು. ಉಸ್ತಾದರ ಶ್ರಮದ ಫಲಶ್ರುತಿ ಎಂಬಂತೆ ಅಲ್ಲಿನ ವಿದ್ಯಾರ್ಥಿಗಳು ಸುಮಾರು ಏಳೆಂಟು ಗುಣಮಟ್ಟದ ಕೃತಿಗಳನ್ನು ಹೊರತಂದಿದ್ದಾರೆ. ಸ್ವತಃ ಲೇಖಕರೂ ಆಗಿರುವ ಉಸ್ತಾದ್ ಕನ್ನಡದಲ್ಲಿ ಚೆನ್ನಾಗಿ ಬರೆಯಬಲ್ಲರು. ನಾಡಿನ ವಿವಿಧ ಧಾರ್ಮಿಕ ಪತ್ರಿಕೆಗಳಲ್ಲಿ ಉಸ್ತಾದರ ಬರಹಗಳು ವಿವಿಧ ಸಂದರ್ಭಗಳಲ್ಲಿ ಪ್ರಕಟಗೊಂಡಿವೆ. ಅಲ್ಲಿನ ವಿದ್ಯಾರ್ಥಿಗಳು ಹೊರತಂದ "ಇರ್ಶಾದ್ ಕ್ಲಾಸ್ ಡೈರಿ" ತತ್ವಜ್ಞಾನದ ಒಂದು ಅದ್ಭುತ ಕೈಪಿಡಿ. ಅದರಲ್ಲಿ ನೂರಾರು ಪುಟ್ಟ ಪುಟ್ಟ ಫಿಲಾಸಫಿಕಲ್ ಬರಹಗಳಿವೆ. ಅವೆಲ್ಲವೂ ಉಸ್ತಾದರು ತರಗತಿಗಳಲ್ಲಿ ಪಾಠ ಮಾಡುವಾಗ ಹೇಳಿದ್ದನ್ನು ಅವರ ವಿದ್ಯಾರ್ಥಿಗಳು ಟಿಪ್ಪಣಿ ರೂಪದಲ್ಲಿ ಬರೆದಿಟ್ಟು, ಸಂಗ್ರಹಿಸಿ, ಸಂಕಲಿಸಿದ ಬರಹಗಳು. ಸಂಸ್ಥೆಯ ಪದವಿ ಪ್ರಧಾನ ಸಮಾರಂಭಕ್ಕೆ ವಿದ್ಯಾರ್ಥಿಗಳು ಹೊರತಂದ ಸ್ಮರಣ ಸಂಚಿಕೆ "ಇರ್ಶಾದ್" ಸಂಗ್ರಹಯೋಗ್ಯ ಗ್ರಂಥ.
ಅಲ್ಲಿನ ವಿದ್ಯಾರ್ಥಿಗಳು ಹೊರತಂದ "ವಿದ್ವತ್ ಪ್ರಪಂಚ" ಎಂಬ ಕೃತಿ ಇಸ್ಲಾಮೀ ಕರ್ಮಶಾಸ್ತ್ರದ ಇಮಾಮರುಗಳ ಬದುಕು, ಬೋಧನೆ, ಹೋರಾಟ ಇತ್ಯಾದಿಗಳ ಮೇಲೆ ಕ್ಷ ಕಿರಣ ಬೀರುತ್ತದೆ.
ವಿಶಾಲವಾದ ಕಾನ್ಫರೆನ್ಸ್ ಹಾಲ್ ಹೊಂದಿರುವ ಸಂಸ್ಥೆಗೆ ಆಗಾಗ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ವಿದ್ಯಾರ್ಥಿಗಳಿಗಾಗಿ ಸೆಮಿನಾರ್‌ಗಳನ್ನು ಏರ್ಪಡಿಸಲಾಗುತ್ತದೆ. ಕನ್ನಡದ ಕೆಲ ಬರಹಗಾರರು ಕೆ.ಜಿ.ಎನ್.ಗೆ ಭೇಟಿ ಕೊಟ್ಟು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸುತ್ತಿರುತ್ತಾರೆ.ಯಾರೇ ಅತಿಥಿಗಳು ಹೋದರೂ ಅಲ್ಲಿನ ವಿದ್ಯಾರ್ಥಿಗಳು ಸ್ವೀಕರಿಸುವ ಬಗೆಯಂತೂ ತುಂಬಾ ಖುಷಿ ಕೊಡುತ್ತದೆ. ಅಲ್ಲಿಗೆ ಹೋದ ಅತಿಥಿಗಳಿಗೆಲ್ಲಾ ಸಂಸ್ಥೆಯ ವತಿಯಿಂದ ಪ್ರಕಟಿಸಲಾದ ಗ್ರಂಥ, ಸುಗಂಧ ದ್ರವ್ಯ, ಹಲ್ಲುಜ್ಜುವ ಮಿಸ್‌ವಾಕ್ ಇತ್ಯಾದಿಗಳನ್ನು ಆಕರ್ಷಕ ಕೈ ಚೀಲದಲ್ಲಿ ತುಂಬಿಸಿ ಕೊಟ್ಟು ಬೀಳ್ಕೊಡುತ್ತಾರೆ.
ಸಂಸ್ಥೆಯ ಕ್ಯಾಂಪಸ್ ಒಳಹೊಕ್ಕರೆ ಹಿತ್ತಲಲ್ಲಿ ಹಚ್ಚ ಹಸುರು ಮರ ಗಿಡಗಳು, ಒಪ್ಪವಾಗಿ ಕತ್ತರಿಸಲ್ಪಟ್ಟ ಗ್ರೀನ್ ಗ್ರಾಸ್ ಕಣ್ಮನ ಸೆಳೆಯುತ್ತದೆ. ನಮ್ಮ ದಕ್ಷಿಣ ಕನ್ನಡದ ವಾತಾವರಣಕ್ಕೆ ಒಗ್ಗದ ಖರ್ಜೂರದ ಮರಗಳೂ ಅಲ್ಲಿವೆ. ಬಹುಶಃ ಮುಗಲ್ ಆರ್ಕಿಟೆಕ್ಟ್‌ನಲ್ಲಿ ನಿರ್ಮಿಸಲಾದ ಅಲ್ಲಿನ ಮಸೀದಿಯ ಅಂದ ನೋಡಿಯೇ ಸವಿಯಬೇಕು.
ಸಹಸ್ರಾರು ವಿದ್ಯಾರ್ಥಿಗಳಿಗೆ ಕಳೆದ ಐವತ್ತು ವರ್ಷಗಳಲ್ಲಿ ವಿದ್ಯೆ ಬೋಧಿಸಿದ ಉಸ್ತಾದ್ ಸಮುದಾಯಕ್ಕಾಗಿ ಶ್ರೇಷ್ಠ ಸಂಸ್ಥೆಯೊಂದನ್ನು ಕಟ್ಟಿ ಬೆಳೆಸಿದರೂ ಉಸ್ತಾದ್ ಇಂದಿಗೂ ವಾಸಿಸುತ್ತಿರುವುದು ಮಾಣಿಯಲ್ಲಿ ಹಳೆಯ ಸಾದಾ ಹಂಚಿನ ಮನೆಯಲ್ಲಿ. ಸಂಸ್ಥೆಯಲ್ಲಿ ಆಧುನಿಕ ವಿನ್ಯಾಸದ ಪೀಠೋಪಕರಣಗಳಿದ್ದರೂ ಉಸ್ತಾದರ ಮನೆಯಲ್ಲಿರುವುದು ಅತ್ಯಂತ ಸರಳ ಮತ್ತು ಕಡಿಮೆ ಕ್ರಯದ ಹಳೆಯ ಪೀಠೋಪಕರಣಗಳು.
ಅಲ್ಲಿಗೆ ಪ್ರವೇಶ ಬಯಸುವ ಯಾವ ವಿದ್ಯಾರ್ಥಿಯಿಂದಲೂ ನಯಾ ಪೈಸೆಯ ಶುಲ್ಕ ಪಡೆಯಲಾಗುವುದಿಲ್ಲ. ಅಲ್ಲಿಂದ ಹೊರಬರುವಾಗ ಹೆಚ್ಚಿನೆಲ್ಲಾ ವಿದ್ಯಾರ್ಥಿಗಳು ಪದವಿಯೊಂದಿಗೆ ವಿವಿಧ ಜ್ಞಾನ ಶಾಖೆಗಳ ಕುರಿತಾದ ಅಪಾರ ಪಾಂಡಿತ್ಯ, ಉತ್ತಮ ಸಂಸ್ಕಾರ, ಸಾಹಿತ್ಯ ಮತ್ತು ಸಾಹಿತ್ಯಾಸಕ್ತಿ ಯೊಂದಿಗೆ ಬರುತ್ತಾರೆ.
ಶಿಕ್ಷಣ ಪ್ರೇಮಿಯೂ, ಅಪಾರ ದೂರದೃಷ್ಟಿಯುಳ್ಳ ವಿದ್ವಾಂಸರೂ ಆಗಿರುವ ಮಾಣಿ ಉಸ್ತಾದ್ ಬೇಕಲ್ ಉಸ್ತಾದರ ಸ್ಥಾನಕ್ಕೆ ಅತ್ಯುತ್ತಮ ಉತ್ತರಾಧಿಕಾರಿಯಾಗಬಲ್ಲರು ಎಂಬ ಬಗ್ಗೆ ಸಂಶಯವೇ ಇಲ್ಲ...