ಪ್ರಾಪರ್ಟಿ ಕಾರ್ಡ್ ಬಿಡುಗಡೆಗೊಳಿಸಿದ ಪ್ರಧಾನಿ ಮೋದಿ

Update: 2020-10-11 15:05 GMT

ಹೊಸದಿಲ್ಲಿ,ಅ.11: ‘ಸ್ವಾಮಿತ್ವ’ ಯೋಜನೆಯಡಿ ಆಸ್ತಿ ಕಾರ್ಡ್‌ಗಳ ವಿತರಣೆಗೆ ಪ್ರಧಾನಿ ನರೇಂದ್ರ ಮೋದಿ ರವಿವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿದ್ದಾರೆ. ಆಸ್ತಿ ಕಾರ್ಡ್‌ಗಳ ವಿತರಣೆಯು ಗ್ರಾಮೀಣ ಭಾರತದಲ್ಲಿ ಪರಿವರ್ತನೆಯನ್ನು ತರುವಂತಹ ಐತಿಹಾಸಿಕ ನಡೆಯಾಗಿದೆಯೆಂದು ಅವರು ಬಣ್ಣಿಸಿದ್ದಾರೆ. ಗ್ರಾಮೀಣ ಜನರು ಆಸ್ತಿಯ ಒಡೆತನದ ಹಕ್ಕುಗಳನ್ನು ಹೊಂದುವಂತೆ ಮಾಡುವುದು ಸ್ವಾವಲಂಭಿ ಭಾರತದ ನಿರ್ಮಾಣದೆಡೆಗೆ ಒಂದು ದೊಡ್ಡ ಹೆಜ್ಜೆಯೆಂದು ಮೋದಿ ಅಭಿಪ್ರಾಯಿಸಿದ್ದಾರೆ.

ಗ್ರಾಮಸ್ಥರು ಸಾಲ ಮತ್ತಿತರ ಆರ್ಥಿಕ ಸೌಲಭ್ಯಗಳನ್ನು ಪಡೆಯಲು ಸ್ವಾಮಿತ್ವ ಕಾರ್ಡ್‌ಗಳು ಸುಗಮವಾದ ಹಾದಿಯನ್ನು ಕಲ್ಪಿಸಲಿದೆ ಎಂದು ಪ್ರಧಾನಿ ಹೇಳಿದರು.

ಗ್ರಾಮೀಣ ಪ್ರದೇಶಗಳಲ್ಲಿ ಸುಧಾರಿತ ತಂತ್ರಜ್ಞಾನದೊಂದಿಗೆ ಗ್ರಾಮಗಳ ಸಮೀಕ್ಷೆ ಹಾಗೂ ಮ್ಯಾಪಿಂಗ್ (ಸ್ವಾಮಿತ್ವ) ಯೋಜನೆಯ ಹಲವು ಫಲಾನುಭವಿಗಳ ಜೊತೆ ಮೋದಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂವಾದ ನಡೆಸಿದರು.

‘‘ ಒಂದು ದೇಶದ ಪ್ರಗತಿಯಲ್ಲಿ ಆಸ್ತಿಯ ಒಡೆತನದ ಹಕ್ಕುಗಳು ಪ್ರಮುಖ ಪಾತ್ರವನ್ನು ವಹಿಸಲಿವೆಯೆಂದು ಜಗತ್ತಿನಾದ್ಯಂತ ತಜ್ಞರು ಪ್ರತಿಪಾದಿಸುತ್ತಲೇ ಬಂದಿದ್ದಾರೆ’’ ಎಂದು ಹೇಳಿದ ಅವರು ಜಗತ್ತಿನ ಜನಸಂಖ್ಯೆಯ ಕೇವಲ ಮೂರನೇ ಒಂದಂಶದಷ್ಟು ಜನರು ಮಾತ್ರವೇ ತಾವು ಒಡೆತನ ಹೊಂದಿರುವ ಆಸ್ತಿಗಳ ಕಾನೂನುಬದ್ಧ ದಾಖಲೆಯನ್ನು ಹೊಂದಿದ್ದಾರೆಂದು ತಿಳಿಸಿದರು.

ಆಸ್ತಿಯ ಹಕ್ಕುಗಳು ಯುವಜನತೆಯಲ್ಲಿ ಸ್ವಾವಲಂಬನೆಯಿಂದ ಬದುಕುವ ಆತ್ಮವಿಶ್ವಾಸವನ್ನು ಮೂಡಿಸಲಿದೆ ಎಂದು ಪ್ರಧಾನಿ ಅಭಿಪ್ರಾಯಿಸಿದರು.

 ಉತ್ತರಪ್ರದೇಶದ 346, ಹರ್ಯಾಣದ 221, ಮಹಾರಾಷ್ಟ್ರದ 100, ಮಧ್ಯಪ್ರದೇಶದ 44, ಉತ್ತರಾಖಂಡದ 50 ಹಾಗೂ ಕರ್ನಾಟಕದ ಎರಡು ಗ್ರಾಮಗಳು ಸೇರಿದಂತೆ ಆರು ರಾಜ್ಯಗಳ 763 ಗ್ರಾಮಗಳ ಜನರು ಆಸ್ತಿ ಕಾರ್ಡ್ ಯೋಜನೆಯ ಆರಂಭಿಕ ಫಲಾನುಭವಿಗಳಾಗಿದ್ದಾರೆ.

ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ದೇಶಾದ್ಯಂತ ಪ್ರತಿಯೊಂದು ಕುಟುಂಬಕ್ಕೂ ಇದೇ ರೀತಿಯ ಆಸ್ತಿಯ ಕಾರ್ಡ್‌ಗಳನ್ನು ವಿತರಿಸಲು ತನ್ನ ಸರಕಾರ ಯತ್ನಿಸಲಿದೆಯೆಂದು ಮೋದಿ ಹೇಳಿದರು.

ನಗರಸಭೆಗಳು ಹಾಗೂ ನಗರಪಾಲಿಕೆಗಳ ಮಾದರಿಯಲ್ಲೇ ಗ್ರಾಮಪಂಚಾಯತ್‌ಗಳಿಗೂ ಹಳ್ಳಿಗಳ ನಿರ್ವಹಣೆಯನ್ನು ಯಶಸ್ವಿಯಾಗಿ ನಡೆಸಲು ಸ್ವಾಮಿತ್ವ ಯೋಜನೆಯು ಸಹಕಾರಿಯಾಗಲಿದೆ ಎಂದು ಪ್ರಧಾನಿ ಹೇಳಿದರು.

ದೇಶಾದ್ಯಂತದ ಹಳ್ಳಿಗಳಲ್ಲಿ ಕಳೆದ ಆರು ದಶಕಗಳಲ್ಲಿ ನಡೆದಿರದಂತಹ ಅಭೂತಪೂರ್ವ ಅಭಿವೃದ್ಧಿಯು ಕಳೆದ ಆರು ವರ್ಷಗಳಲ್ಲಿ ಆಗಿರುವುದಾಗಿ ಅವರು ಹೇಳಿದರು. ಪ್ರತಿಯೊಂದು ಗ್ರಾಮಕ್ಕೂ ಆಪ್ಟಿಕಲ್ ಫೈಬರ್ ಸಂಪರ್ಕ ಕಲ್ಪಿಸುವ ಯೋಜನೆ ಕೂಡಾ ತ್ವರಿತ ಗತಿಯಲ್ಲಿ ಸಾಗುತ್ತಿದೆಯೆಂದು ತಿಳಿಸಿದರು.

ಜನರು ಬ್ಯಾಂಕ್ ಖಾತೆ, ವಿದ್ಯುತ್ ಸಂಪರ್ಕ, ಶೌಚಾಲಯ ಸೌಲಭ್ಯ, ಅಡುಗೆ ಅನಿಲ ಸಂಪರ್ಕ, ಸ್ವಂತ ಮನೆ ಹಾಗೂ ಕುಡಿಯುವ ನೀರಿನ ಸಂಪರ್ಕ ಮತ್ತಿತರ ಪ್ರಯೋಜನಗಳನ್ನು ಪಡೆದಿದ್ದಾರೆಂದು ಹೇಳಿದರು.

ಆಸ್ತಿ ಕಾರ್ಡ್‌ಗಳ ಚಾಲನೆಯೊಂದಿಗೆ ಸುಮಾರು ಒಂದು ಲಕ್ಷಕ್ಕೂ ಅಧಿಕ ಮಂದಿ ಆಸ್ತಿ ಹೊಂದಿರುವವರು, ಅವರ ಮೊಬೈಲ್ ಫೋನ್‌ಗಳಿಗೆ ಕಳುಹಿಸಲಾದ ಎಸ್‌ಎಂಎಸ್ ಲಿಂಕ್ ಮೂಲಕ ತಮ್ಮ ಆಸ್ತಿ (ಪ್ರಾಪರ್ಟಿ) ಕಾರ್ಡ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ ಪ್ರಧಾನಿ ಕಾರ್ಯಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ. ತರುವಾಯ ಆಸ್ತಿ ಕಾರ್ಡ್‌ಗಳ ಭೌತಿಕ ವಿತರಣೆಯನ್ನು ಆಯಾ ರಾಜ್ಯ ಸರಕಾರಗಳು ನಡೆಸಲಿವೆ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News