ಕಾವ್ಯ ಸಂತ ಚೊಕ್ಕಾಡಿ ಬದುಕಿನ ಚಿತ್ರಗಳು

Update: 2020-10-12 06:59 GMT

ಸುಬ್ರಾಯ ಚೊಕ್ಕಾಡಿ ಕನ್ನಡ ಸಾಹಿತ್ಯ ಲೋಕದ ಅತ್ಯಂತ ಮಹತ್ವದ ಕವಿಗಳಲ್ಲೊಬ್ಬರು. ಚೊಕ್ಕಾಡಿ ಯಾವತ್ತೂ ಯಾವುದೇ ಪಂಥದೊಳಗೆ ಬಂಧಿಯಾದವರಲ್ಲ. ಅವರ ಪಂಥವೇನಿದ್ದರೂ ಕಾವ್ಯ, ಕಾವ್ಯ ಮತ್ತು ಕಾವ್ಯ ಮಾತ್ರ... ಆ ಕಾರಣಕ್ಕಾಗಿ ಚೊಕ್ಕಾಡಿಯವರನ್ನು ಯಾವುದೇ ಪಂಥೀಯನೂ ದ್ವೇಷಿಸುವಂತೆಯೋ, ಅಸಹ್ಯ ಪಡುವಂತೆಯೋ ಇಲ್ಲ.

ಇಂತಹ ಮಹಾಕವಿಯ ಬಗ್ಗೆ ಇತ್ತೀಚೆಗೆ ಸುಮಾರು ಐವತ್ತಾರು ನಿಮಿಷಗಳ ಒಂದು ಅತ್ಯುತ್ತಮ ಸಾಕ್ಷ್ಯ ಚಿತ್ರವನ್ನು ಕೆ.ಎಸ್.ಪರಮೇಶ್ವರ್ ಅವರ ನಿರ್ದೇಶಕತ್ವದಲ್ಲಿ ಜ್ಯೋತಿ.ಎಸ್.ಡಿ ಮತ್ತು ಡಾ.ಶಕುಂತಲಾ ನಿರ್ಮಿಸಿದ್ದಾರೆ. ನಿಸ್ಸಂಶಯವಾಗಿಯೂ ಕನ್ನಡ ಕಾವ್ಯ ಪ್ರೀತಿಯಿರುವ ಪ್ರತಿಯೊಬ್ಬರೂ ನೋಡಲೇಬೇಕಾದ ಸಾಕ್ಷ್ಯಚಿತ್ರವಿದು.

ಮೂಲತಃ ಓರ್ವ ಪ್ರಾಥಮಿಕ ಶಾಲಾ ಶಿಕ್ಷಕನಾಗಿದ್ದ ಚೊಕ್ಕಾಡಿಯವರು ಓರ್ವ ಕೃಷಿಕರೂ ಹೌದು. ಬಹುಶಃ ಅವರು ಹುಟ್ಟಿ ಬೆಳೆದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಚೊಕ್ಕಾಡಿ ಎಂಬ ಪುಟ್ಟ ಹಳ್ಳಿಯ ಹಚ್ಚ ಹಸುರಿನ ಪರಿಸರವೇ ಸುಬ್ರಾಯ ಚೊಕ್ಕಾಡಿಯೆಂಬ ಶ್ರೇಷ್ಠ ಕವಿಯೊಬ್ಬರನ್ನು ಕವಿಯನ್ನು ಕನ್ನಡಕ್ಕೆ ನೀಡಿತೇನೋ ಎಂಬಷ್ಟು ಕಾವ್ಯಾತ್ಮಕವಾಗಿದೆ ಅವರ ಪರಿಸರ. ಅವರು ತನ್ನ ಪರಿಸರದ ಬಗ್ಗೆ ಒಂದೆಡೆ ಹೀಗನ್ನುತ್ತಾರೆ " ನನಗೆ ಜನ ಜಂಗುಳಿಯಿರುವ ಪೇಟೆ, ಪಟ್ಟಣಗಳಿಗೆ ಹೋದರೆ ಒಂಥರಾ ಅನಾಥ ಪ್ರಜ್ಞೆ , ಒಂಟಿ ಭಾವ ಕಾಡುತ್ತದೆ. ನನ್ನ ಮನಸ್ಸು ನನ್ನ ಮನೆಯತ್ತ ಹೋಗಲು ಚಡಪಡಿಸುತ್ತದೆ. ಯಾಕೆಂದರೆ ಇಲ್ಲಿ ನನಗೆಲ್ಲರೂ ಇದ್ದಾರೆ.. ನನ್ನ ಮರ-ಗಿಡ, ಬೆಟ್ಟ, ನಾಯಿ,ಬೆಕ್ಕುಗಳು, ಹಸುಗಳು ಎಲ್ಲರೂ ಇದ್ದಾರೆ. ಇವರೆಲ್ಲಾ ನನ್ನ ಉತ್ತಮ ಗೆಳೆಯರು.."

ಸಾಕ್ಷ್ಯಚಿತ್ರದಲ್ಲಿ ಚೊಕ್ಕಾಡಿಯವರ ಪ್ರವೇಶವಾಗುವ ಮುನ್ನ ಕೆಲ ಹೊತ್ತು ಚೊಕ್ಕಾಡಿಯ ಬೆಟ್ಟ, ಗುಡ್ಡ, ಕಾಡು, ತೊರೆ, ಗ್ರಾಮೀಣ ಕಾಲುದಾರಿ ಹೀಗೆ ಕಣ್ಣೆಟಕುವಷ್ಟಿರುವ ಹಚ್ಚ ಹಸಿರು ಪರಿಸರವನ್ನು ಸುಂದರವಾಗಿ ಚಿತೀಕರಿಸಲಾಗಿದೆ. ಕ್ಯಾಮೆರಾ‌ಮ್ಯಾನ್‌ನ ಪ್ರತಿಭೆಯೂ ಅಸಾಧಾರಣವಾದುದು.

ಆ ಬಳಿಕ ಕೃಷಿಕರ ಬದುಕಿನ ಅವಿಭಾಜ್ಯ ಅಂಗಗಳಾದ ಕೆಲ ಸಾಮಾಗ್ರಿಗಳತ್ತ ಕ್ಯಾಮೆರಾ ಕಣ್ಣು ಹಾಯುತ್ತದೆ. ದಕ್ಷಿಣ ಕನ್ನಡ ಸುಪ್ರಸಿದ್ಧ ಖಾದ್ಯಗಳಲ್ಲೊಂದಾದ ಉಪ್ಪಡ್‌ಪಚ್ಚಿಲ್‌ಗೆ ಹಲಸಿನ ತೊಳೆಗಳನ್ನು ತುಂಡರಿಸುವಾಗ ತುಳುನಾಡಿಗರಿಗೆ ಬಾಯಲ್ಲಿ ನೀರೂರದಿರದು.  ಸಾಕ್ಷ್ಯಚಿತ್ರದಲ್ಲಿ ಚೊಕ್ಕಾಡಿಯವರ ನಾಯಿ, ಬೆಕ್ಕು, ದನಗಳೂ ಬರುತ್ತವೆ.

ಕನ್ನಡದಲ್ಲಿ ತಾವು ನಿಂತ ಗ್ರಾಮೀಣ ಪ್ರದೇಶವನ್ನೇ ಸಾಹಿತ್ಯದ ಕೇಂದ್ರವಾಗಿಸಿದವರು ಸುಬ್ಬಣ್ಣ ಮತ್ತು ತೇಜಸ್ವಿ. ಅದೇ ಸಾಲಿನಲ್ಲಿ ಹೆಸರಿಸಬಹುದಾದವರು ಚೊಕ್ಕಾಡಿ. ಸುಬ್ಬಣ್ಣರಿಗೆ ಹೆಗ್ಗೋಡು, ತೇಜಸ್ವಿಗೆ ಮೂಡಿಗೆರಯಾದರೆ ಸುಬ್ರಾಯ ಚೊಕ್ಕಾಡಿಯವರಿಗೆ ಚೊಕ್ಕಾಡಿ. ಇವರೆಲ್ಲರ ಅದ್ಭುತ ಸೃಜನಶೀಲ ಸೃಷ್ಟಿ ಕ್ರಿಯೆಗಳು ಅರಳಿದ್ದೇ ಅವರವರ ಗ್ರಾಮೀಣ ಪರಿಸರದಿಂದ ಎಂಬಷ್ಟು ಅವರ ಸಾಹಿತ್ಯಗಳಲ್ಲಿ ಆಯಾ ಪರಿಸರದ ಪ್ರಭಾವ ಕಾಣಸಿಗುತ್ತದೆ.

ಚೊಕ್ಕಾಡಿಯವರು ತನ್ನ ಕುಟುಂಬದ ಮೂಲವನ್ನು ಹೇಳುವ ಮೂಲಕ ಸಾಕ್ಷ್ಯ ಚಿತ್ರದ ಕತೆಗೆ ಅಧಿಕೃತವಾಗಿ ಪ್ರವೇಶಿಸುತ್ತಾರೆ. ಅವರು ವಿದ್ಯೆ ಕಲಿತ ಬಗೆ, ಅವರಪ್ಪ ಕಿರಿಯ ಪ್ರಾಥಮಿಕ ವಿದ್ಯಾಭ್ಯಾಸದ ಬಳಿಕ ಇನ್ನು ಕಲಿತದ್ದು ಸಾಕು ಎನ್ನುವುದು, ಕಲಿಯಬೇಕೆಂಬ ಹಂಬಲದಿಂದ ಕಲಿತು ಶಿಕ್ಷಕರಾದದ್ದು.. ಆ ಕಾಲದ ಶಿಕ್ಷಣ ವ್ಯವಸ್ಥೆ, ಗ್ರಾಮೀಣ ಪ್ರದೇಶದ ಶಿಕ್ಷಕರ ಪಡಿಪಾಟಲು ಇವೆಲ್ಲವನ್ನೂ ಸಂಕ್ಷಿಪ್ತವಾಗಿ ಚೊಕ್ಕಾಡಿಯವರೇ ಕಟ್ಟಿ ಕೊಡುತ್ತಾರೆ. ಅವರು ಸುಮಾರು ಅರುವತ್ತು ವರ್ಷಗಳ ಹಿಂದಿನ ವರ್ಗಾವಣೆ ಕತೆಯನ್ನು ಸುದರ್ಶನ ಚಕ್ರದ ಕತೆಯ ಮೂಲಕ ವಿವರಿಸುವ ಅತ್ಯಂತ ಸರಳ ಪರಿ ಆಲಿಸಲೇ ಒಂಥರಾ ಖುಷಿ.

"ಸುದರ್ಶನ ಚಕ್ರ ಒಬ್ಬನ ತಲೆಯ ಮೇಲೆಯೇ ತಿರುಗುತ್ತಿರುತ್ತದೆ. ಅದರಿಂದಾಗಿ ಆತನ ತಲೆಯಲ್ಲಿ ನೆತ್ತರು ಒಸರುವುದನ್ನು ನೋಡಿದವನೊಬ್ಬ  ಇದೆಂತ ಮಾರಾಯ ಎಂದು ಕೇಳಿದಾಗ ಅದು ಪ್ರಶ್ನಿಸಿದವನ ತಲೆ ಮೇಲೆ ಹಾರಿ ಅಲ್ಲಿ ತಿರುಗುತ್ತದೆ.. ಹಾಗೆಯೇ ಎಷ್ಟೇ ಕಷ್ಟವಾದರೂ ಸಿಕ್ಕ ನೌಕರಿಯಲ್ಲಿ ನಿಲ್ಲಲೇಬೇಕು. ಇನ್ನೊಬ್ಬ ತನ್ನ ಸ್ಥಾನಕ್ಕೆ ಬರುವವರೆಗೆ ಕಾಯಲೇಬೇಕಿತ್ತು.. ಎನ್ನುತ್ತಾರೆ ಚೊಕ್ಕಾಡಿ.

ಅವರು ಸಾಹಿತ್ಯ ಕೃಷಿಯತ್ತ ಹೊರಳಿದ ಬಗೆಯ ಕುರಿತಂತೆ ಅವರು ನೀಡುವ ಉಪಮೆಯೂ ನಮ್ಮ ನಿಮ್ಮ ಬದುಕಿನ ವಿವರಗಳಂತಿವೆ.
"ನನಗೆ ನನ್ನ ಅಭಿವ್ಯಕ್ತಿಯನ್ನು ಹೊರಗೆಡಹಲು ಯಾವುದಾದರೂ ಒಂದು  ನಿರ್ದಿಷ್ಟ ಮಾಧ್ಯಮ ಬೇಕಿತ್ತು. ಅದೊಂದು ನಾಲ್ಕು ರಸ್ತೆಗಳು ಸೇರುವ ಪ್ರದೇಶ. ಅಲ್ಲಿ ನಿಂತು ನಾನು ಹೋಗಬೇಕಾದ ದಾರಿ ಯಾವುದೆಂದು ಯೋಚಿಸುತ್ತಿದ್ದೆ. ನಾವು ನೀವೆಲ್ಲಾ ಇದೇ ಇರಬಹುದೇನೋ ಎಂದು ಅಂದಾಜಿಸಿ ಹೋಗುವಂತೆ ಒಂದು ರಸ್ತೆಯಲ್ಲಿ ಹೊರಟೆ.. ಅದು ನನ್ನ ಆಸಕ್ತಿಯತ್ತ ತೆರಳುವ ರಸ್ತೆಯಾಗಿತ್ತು. ಹಾಗೆ ಹೋದವನಿಗೆ ಕಾವ್ಯ ನನ್ನ ಅಭಿವ್ಯಕ್ತಿಯ ಮಾಧ್ಯಮವೆಂದು ಮನವರಿಕೆಯಾಯಿತು.ಮುಂದೆ ಅಲ್ಲೇ ಗಟ್ಟಿಯಾಗಿ ನೆಲೆನಿಂತೆ."

ಚೊಕ್ಕಾಡಿಯವರೇ ಸ್ವತಃ ತಾನು ನಡೆಸಿದ ಪ್ರಕಾಶನ ಸಂಸ್ಥೆಯ ಕುರಿತಂತೆ ಒಂದೆಡೆ ಹೇಳುತ್ತಾರೆ. ಅವರು ತನ್ನ ಪ್ರಕಾಶನ ಸಂಸ್ಥೆಯ ಮೂಲಕ ಹೊರತಂದ ಮೊದಲ ಕೃತಿ ಕನ್ನಡ ಪ್ರಸಿದ್ಧ ಸಾಹಿತಿ ಮತ್ತು ಪತ್ರಕರ್ತರಾಗಿದ್ದ ಪಿ.ಲಂಕೇಶರ " ನನ್ನ ತಂಗಿಗೊಂದು ಗಂಡು ಕೊಡಿ."

ವೀಳ್ಯದ ರಸವನ್ನು ಬಾಯೊಳಗಿಟ್ಟು ಬೊಚ್ಚು ಬಾಯಿಯಲ್ಲಿ ಅವರದನ್ನು ವಿವರಿಸುವಾಗಿನ ಸಂಭ್ರಮ ನೋಡಿಯೇ ಅನುಭವಿಸಬೇಕು. ಸುಮಾರು ಇಪ್ಪತ್ತೈದು ಕೃತಿಗಳನ್ನು ಹೊರತಂದು ಕೈ ಸುಟ್ಟ ಬಳಿಕ ಬಡ ಶಾಲಾಮೇಷ್ಟ್ರಾಗಿದ್ದ ಚೊಕ್ಕಾಡಿ ತಾನನುಭವಿಸಿದ ನಷ್ಟವನ್ನು ಮುಜುಗರವಿಲ್ಲದೇ ಹೇಳುತ್ತಾರೆ. "ಇನ್ನು ಇದು ನನ್ನಿಂದಾಗದು ಎಂದು ನಿಲ್ಲಿಸಿಬಿಟ್ಟೆ.."

ಇಲ್ಲಿ ಚೊಕ್ಕಾಡಿಯವರ ಶಿಷ್ಯ ಖ್ಯಾತ ವ್ಯಂಗ್ಯಚಿತ್ರಕಾರ ದಿನೇಶ್ ಕುಕ್ಕುಜಡ್ಕ ಉತ್ತಮ ಶಿಕ್ಷಕ ಚೊಕ್ಕಾಡಿಯವರನ್ನು ಕಟ್ಟಿ ಕೊಡುತ್ತಾರೆ.
ಕನ್ನಡದ ಪ್ರಸಿದ್ಧ ವಿಮರ್ಶಕ ವಿಜಯಶಂಕರ್ ಚೊಕ್ಕಾಡಿಯವರ ಕಾವ್ಯವನ್ನು ವಿಮರ್ಶಾತ್ಮಕ ಹಿನ್ನೆಲೆಯಲ್ಲಿ ಚರ್ಚೆಗೆ ತರುತ್ತಾರೆ. 
ಕನ್ನಡದ ಪ್ರಸಿದ್ಧ ಕವಿಗಳಾದ ಎಚ್.ಎಸ್.ವೆಂಕಟೇಶಮೂರ್ತಿ, ಎಚ್.ಎಸ್.ರಾಘವೇಂದ್ರ ರಾವ್, ಬಿ.ಆರ್.ಲಕ್ಷಣ ರಾವ್, ಡುಂಢಿರಾಜ್ ಮತ್ತು ಕನ್ನಡದ ಪ್ರಸಿದ್ಧ ಸಾಹಿತಿಗಳಾದ ಜೋಗಿ, ನಾ.ದಾ.ಶೆಟ್ಟಿ, ಮುಂತಾದವರು ಚೊಕ್ಕಾಡಿಯವರ ಬದುಕು ಮತ್ತು ಬರಹದ ಕುರಿತಂತೆ ಚರ್ಚಿಸುತ್ತಾರೆ.

ಜೋಗಿಯವರು ಚೊಕ್ಕಾಡಿಯವರನ್ನು "ದಕ್ಷಿಣ ಕನ್ನಡದ ಧ್ಯಾನ ಮತ್ತು ಮೌನ" ಎಂದು ವಿಶ್ಲೇಷಿಸುತ್ತಾರೆ. ಹೌದು ಚೊಕ್ಕಾಡಿ ಸಾಹಿತ್ಯವನ್ನು ಅದರಲ್ಲೂ ಕಾವ್ಯವನ್ನು ಮೌನವಾಗಿ ಧ್ಯಾನಿಸುತ್ತಾರೆಯೇ ಹೊರತು ಅದರಾಚೆಗಿನ ವಿಷಯಗಳತ್ತ ತಲೆ ಹರಿಸಿದ್ದು ನನಗಂತೂ ತಿಳಿದಿಲ್ಲ.
ಚೊಕ್ಕಾಡಿ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಾದ ವಿಮರ್ಶೆ, ನಾಟಕ, ಸಣ್ಣ ಕತೆ, ಕಾವ್ಯ ಹೀಗೆ ಎಲ್ಲದರಲ್ಲೂ ವಿಹರಿಸಿದ್ದಾರೆ. ಆದರೆ ಚೊಕ್ಕಾಡಿಯವರು ಮೊದಲನೆಯದಾಗಿಯೂ ಕವಿ, ಕಟ್ಟ ಕಡೆಯದಾಗಿಯೂ ಕವಿ ಎಂಬ ಹೆಸರನ್ನೇ ಉಳಿಸಿಕೊಂಡಿದ್ದಾರೆ.

ಸರಳತೆ ಚೊಕ್ಕಾಡಿಯವರ ಮಹಾಗುಣ..‌ಅಂತೆಯೇ ನಿಗರ್ವಿ ಎನ್ನುವುದು ಚೊಕ್ಕಾಡಿಯವರ ವ್ಯಕ್ತಿತ್ವಕ್ಕೆ ಅತ್ಯಂತ ಸೂಕ್ತ ಪದ. ಎಷ್ಟೇ ಚಿಕ್ಕ ಲೇಖಕ, ಕವಿ ಬರೆದುದನ್ನು ಕಳುಹಿಸಿದರೂ ತಪ್ಪದೇ ಪ್ರತಿಕ್ರಿಯಿಸುವ ಗುಣ ಚೊಕ್ಕಾಡಿ ಇಂದಿಗೂ ಬಿಟ್ಟಿಲ್ಲ. ಅವರ ಬರೆದ ಮುನ್ನುಡಿಗಳು ನೂರು, ಇನ್ನೂರು , ಮುನ್ನೂರು ಅಲ್ಲ... ಅವರಿಗೇ ನೆನಪಲ್ಲುಳಿಯದಷ್ಟು..

ಇದೀಗ ಎಂಬತ್ತೆರಡರ ಹರೆಯದ ಚೊಕ್ಕಾಡಿ ಇನ್ನೂ‌ ಕವನಿಸುತ್ತಲೇ ಇದ್ದಾರೆ. ಬಹುಶಃ ಕನ್ನಡ ಸಾರಸ್ವತ ಲೋಕದ ಸಾಧಕರ ಕುರಿತಂತೆ ಇತ್ತೀಚಿನ ವರ್ಷಗಳಲ್ಲಿ ಬಂದ ಶ್ರೇಷ್ಠ ಸಾಕ್ಷ್ಯಚಿತ್ರಗಳಲ್ಲೊಂದಾಗಿದೆ ಇದು. ಮೊದಲಿಂದ ಕೊನೆಯವರೆಗೆ ಎಲ್ಲಿಯೂ ಬೋರ್ ಎನಿಸುವುದೇ ಇಲ್ಲ ಎನ್ನುವಷ್ಟು ಜೀವಂತಿಕೆ ಈ ಸಾಕ್ಷ್ಯಚಿತ್ರದಲ್ಲಿದೆ. ಕನ್ನಡ ಕಾವ್ಯವನ್ನು ಪ್ರೇಮಿಸುವ ಪ್ರತಿಯೊಬ್ಬರೂ ನೋಡಲೇಬೇಕಾದ ಸಾಕ್ಷ್ಯಚಿತ್ರವಿದು.

ಯೂ ಟ್ಯೂಬ್‌ನಲ್ಲಿ "Documentary on Poet Subraya chokkadi" ಎಂದು ಹುಡುಕಿದರೆ ಸುಲಭವಾಗಿ ಇದು ಲಭ್ಯ...

Full View

Writer - ಇಸ್ಮತ್ ಪಜೀರ್

contributor

Editor - ಇಸ್ಮತ್ ಪಜೀರ್

contributor

Similar News