ಚಿರಾಗ್ ಪಾಸ್ವಾನ್ ಎನ್‌ಡಿಎ ಕೂಟದಲ್ಲಿಲ್ಲ: ಬಿಜೆಪಿ ಸ್ಪಷ್ಟನೆ- ಭಿನ್ನರ ಉಚ್ಚಾಟನೆ

Update: 2020-10-13 03:52 GMT

ಪಾಟ್ನಾ, ಅ.13: ಬಿಹಾರ ವಿಧಾನಸಭಾ ಚುನಾವಣೆಗೆ 20 ದಿನಗಳು ಮಾತ್ರ ಬಾಕಿ ಉಳಿದಿರುವಂತೆ ಎನ್‌ಡಿಎ ಮೈತ್ರಿಕೂಟದಲ್ಲಿ ಬಿರುಕು ಹೆಚ್ಚುತ್ತಿದ್ದು, ಚಿರಾಗ್ ಪಾಸ್ವಾನ್ ನೇತೃತ್ವದ ಎಲ್‌ಜೆಪಿ ಸೇರುವ ಸಲುವಾಗಿ ಬಿಜೆಪಿ ತೊರೆದ ಎಂಟು ಮಂದಿ ಬಂಡುಕೋರ ಶಾಸಕರನ್ನು ಉಚ್ಚಾಟಿಸಲಾಗಿದೆ.

"ಮತ್ತೆ ಬಿಜೆಪಿ ತೆಕ್ಕೆಗೆ ಬನ್ನಿ; ಇಲ್ಲದಿದ್ದರೆ ಶಿಸ್ತುಕ್ರಮ ಎದುರಿಸಲು ಸಜ್ಜಾಗಿ" ಎಂದು ಕಳೆದ ವಾರ ಭಿನ್ನಮತೀಯ ಶಾಸಕರಿಗೆ ಗಡುವು ನೀಡಿದ್ದ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ, "ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎಲ್‌ಜೆಪಿ, ಎನ್‌ಡಿಎ ಕೂಟದ ಭಾಗವಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

ಚಿರಾಗ್ ಮತ್ತು ನಿತೀಶ್ ನಡುವಿನ ಸಂಬಂಧ ಹದಗೆಡುತ್ತಿದ್ದರೂ, ಇದುವರೆಗೆ ತುಟಿ ಬಿಚ್ಚದ ಸುಶೀಲ್ ಮೋದಿ, "ಕೇವಲ ಬಿಜೆಪಿ, ಜೆಡಿಯು, ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಜಿಯವರ ಎಚ್‌ಎಎಂ ಹಾಗೂ ಮುಖೇಶ್ ಸಹಾನಿಯವರ ವಿಐಪಿ ಮಾತ್ರ ಎನ್‌ಡಿಎ ಭಾಗವಾಗಿದ್ದು, ಎನ್‌ಡಿಎ ಕೂಟದಿಂದ ಕಣಕ್ಕೆ ಇಳಿಯಲಿವೆ" ಎಂದು ಘೋಷಿಸಿದರು.

"ನಮಗೆ ಬಹುಮತ ದೊರಕಿದಲ್ಲಿ ನಿತೀಶ್ ಅವರೇ ಮುಖ್ಯಮಂತ್ರಿ. ಈ ನಿಲುವಿನಲ್ಲಿ ಯಾವ ಗೊಂದಲವೂ ಇಲ್ಲ" ಎಂದು ಮೋದಿ ಪುನರುಚ್ಚರಿಸಿದರು. ಆರನೇ ಬಾರಿ ನಿತೀಶ್ ಸಿಎಂ ಆಗುವ ನಿಟ್ಟಿನಲ್ಲಿ ಬಿಜೆಪಿಯ ಬೆಂಬಲ ಅಚಲ ಎಂದು ಸ್ಪಷ್ಟಪಡಿಸಿದರು.

ಜೆಡಿಯು ಜತೆಗೆ ಮೈತ್ರಿ ಮಾಡಿಕೊಂಡು ಎಲ್‌ಜೆಪಿ ಸ್ಪರ್ಧಿಸುವುದಿಲ್ಲ. ಆದರೆ ಬಿಜೆಪಿಯ ಪ್ರಮುಖ ಪಾಲುದಾರನಾಗಿ ಎಲ್‌ಜೆಪಿ ಮುಂದುವರಿಯಲಿದೆ ಎಂದು ಚಿರಾಗ್ ಪಾಸ್ವಾನ್ ಘೋಷಿಸಿದ್ದರು. ಈ ಬಗ್ಗೆ ಬಿಜೆಪಿ ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಸಮಾಧಾನಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಸ್ಪಷ್ಟ ಸಂದೇಶ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News