ಚಿನ್ಮಯಾನಂದ ಅತ್ಯಾಚಾರ ಪ್ರಕರಣ: ಸಂತ್ರಸ್ತೆಯಿಂದಲೇ ವ್ಯತಿರಿಕ್ತ ಸಾಕ್ಷಿ!

Update: 2020-10-14 04:35 GMT

ಲಕ್ನೋ, ಅ.14: ಬಿಜೆಪಿ ಸಂಸದ ಚಿನ್ಮಯಾನಂದ ವಿರುದ್ಧ ಕಳೆದ ವರ್ಷ ಲೈಂಗಿಕ ಶೋಷಣೆ ಆರೋಪ ಮಾಡಿದ್ದ 23 ವರ್ಷ ವಯಸ್ಸಿನ ಸ್ನಾತಕೋತ್ತರ ಕಾನೂನು ಪದವಿ ವಿದ್ಯಾರ್ಥಿನಿ ಲಕ್ನೋದ ವಿಶೇಷ ಎಂಪಿ-ಎಂಎಲ್‌ಎ ನ್ಯಾಯಾಲಯದ ಮುಂದೆ ವ್ಯತಿರಿಕ್ತ ಸಾಕ್ಷಿ ನುಡಿಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಅಲಹಾಬಾದ್ ಹೈಕೋರ್ಟ್ ಸೂಚನೆಯಂತೆ ಈ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಮಂಗಳವಾರ ನ್ಯಾಯಾಲಯದ ಮುಂದೆ ಹಾಜರಾದ ವಿದ್ಯಾರ್ಥಿನಿ, ಅಭಿಯೋಜಕರು ಆಪಾದಿಸಿದಂತೆ ಮಾಜಿ ಸಚಿವರ ವಿರುದ್ಧ ಯಾವುದೇ ಆರೋಪಗಳನ್ನು ಮಾಡಿಲ್ಲ ಎಂದು ಸ್ಪಷ್ಟಪಡಿಸಿದರೆನ್ನಲಾಗಿದೆ.

ಈ ದಿಢೀರ್ ಬೆಳವಣಿಗೆಯಿಂದ ನಿಬ್ಬೆರಗಾದ ಅಭಿಯೋಜಕರ ತಂಡ ತಕ್ಷಣ ಅಪರಾಧ ದಂಡ ಸಂಹಿತೆಯ ಸೆಕ್ಷನ್ 340ರ ಅನ್ವಯ ಸುಳ್ಳುಸಾಕ್ಷಿಗಾಗಿ ಆಕೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಅರ್ಜಿ ಸಲ್ಲಿಸಿದರು. ಈ ಅರ್ಜಿಯನ್ನು ದಾಖಲಿಸಿಕೊಳ್ಳುವಂತೆ ನ್ಯಾಯಾಧೀಶ ಪಿ.ಕೆ.ರಾಯ್ ತಮ್ಮ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂಬಂಧ ಅರ್ಜಿಯ ಪ್ರತಿಯನ್ನು ಮಹಿಳೆಗೆ ನೀಡುವಂತೆಯೂ ಆದೇಶಿಸಿದರು. ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 15ರಂದು ನಡೆಯಲಿದೆ.

ಶಹಜಹಾನ್‌ಪುರದಲ್ಲಿ ಚಿನ್ಮಯಾನಂದ ಅವರ ಆಶ್ರಯ ನಡೆಸುತ್ತಿದ್ದ ಕಾನೂನು ಕಾಲೇಜಿನ ವಿದ್ಯಾರ್ಥಿಯಾಗಿದ್ದ ಮಹಿಳೆ, ಚಿನ್ಮಯಾನಂದ ವಿರುದ್ಧ ಲೈಂಗಿಕ ಶೋಷಣೆ ಆರೋಪ ಹೊರಿಸಿದ್ದರು. ಈ ಬಗ್ಗೆ ತನಿಖೆ ನಡೆಸಲು ಉತ್ತರ ಪ್ರದೇಶ ಸರಕಾರ ವಿಶೇಷ ತನಿಖಾ ತಂಡ ರಚಿಸಿತ್ತು. ಬಳಿಕ ಚಿನ್ಮಯಾನಂದ ಪ್ರತಿ ದೂರು ಸಲ್ಲಿಸಿ, ಮಹಿಳೆ ತಮ್ಮಿಂದ ಹಣ ವಸೂಲಿಗೆ ಪ್ರಯತ್ನಿಸುತ್ತಿದ್ದಾಳೆ ಎಂದು ಆಪಾದಿಸಿದ್ದರು. ಇಬ್ಬರನ್ನೂ ಬಂಧಿಸಲಾಗಿದ್ದು, ಇಬ್ಬರೂ ಇದೀಗ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದಾರೆ.

ಚಿನ್ಮಯಾನಂದನನ್ನು 2019ರ ಸೆಪ್ಟೆಂಬರ್ 20ರಂದು ಬಂಧಿಸಲಾಗಿತ್ತು. ತನಿಖಾಧಿಕಾರಿ ಭಾರತೀಯ ದಂಡಸಂಹಿತೆಯ ಸೆಕ್ಷನ್ 376 (ಸಿ), 354(ಡಿ), 342 ಮತ್ತು 506ರ ಅನ್ವಯ ಆರೋಪಪಟ್ಟಿ ಸಲ್ಲಿಸಿದ್ದರು. ತನಿಖಾಧಿಕಾರಿ 33 ಸಾಕ್ಷಿಗಳು ಹಾಗೂ 29 ಪುರಾವೆಗಳನ್ನು 13 ಪುಟಗಳ ಆರೋಪಪಟ್ಟಿಯಲ್ಲಿ ಒದಗಿಸಿದ್ದರು. ಮಾಜಿ ಸಚಿವರನ್ನು ಫೆಬ್ರವರಿಯಲ್ಲಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News