ಇಸ್ಲಾಮಿನ ಆಹಾರ ನೀತಿ
ಪ್ರವಾದಿ ಮುಹಮ್ಮದ್ (ಸ) ಚಿಕಿತ್ಸಾ ಪದ್ದತಿಗೆ ತಿಬ್ಬುನ್ನಬವಿ ಎನ್ನಲಾಗುತ್ತದೆ. ಅದರಲ್ಲಿರುವ ವಿಶೇಷವೇನೆಂದರೆ ಅಲ್ಲಿನ ಹೆಚ್ಚಿನೆಲ್ಲಾ ಚಿಕಿತ್ಸೆಯೂ ನಮ್ಮ ದಿನನಿತ್ಯದ ಆಹಾರ ಪದ್ಧತಿಯನುಸಾರವೇ ಇದೆ.
ಅದರಲ್ಲಿನ ಡಯೆಟ್ ಸಿಸ್ಟಮ್ ಇಂದಿನ ಆಧುನಿಕ ಡಯಟಿಂಗ್ ಸಿಸ್ಟಮ್‌ಗಿಂತಲೂ ಉನ್ನತ ಮಟ್ಟದ್ದಾಗಿದೆ.
ಪ್ರವಾದಿವರ್ಯರ ಒಂದು ವಚನ ಹೀಗಿದೆ "ಮನುಷ್ಯನಿಗೆ ಆತನ ಹೊಟ್ಟೆಗಿಂತ ಕೆಟ್ಟ ಪಾತ್ರೆ ಇನ್ನೊಂದಿಲ್ಲ." ಜೀರ್ಣಾಂಗಕ್ಕೆ ಸಂಬಂಧಿಸಿದ ಖಾಯಿಲೆ, ಮಧುಮೇಹ, ಅತಿಕೊಬ್ಬು ಇವೆಲ್ಲವೂ ನಮ್ಮ ಚಯಾಪಚಯ ಕ್ರಿಯೆಯನ್ನವಲಂಬಿಸಿಯೇ ಏರುಪೇರಾಗುವ ಖಾಯಿಲೆಗಳು ಎನ್ನುವುದು ಆಧುನಿಕ ವೈದ್ಯ ವಿಜ್ಞಾನದ ಸಂಶೋಧನೆಗಳಿಂದ ದೃಡಪಟ್ಟಿವೆ.
ಇಂದು ನಮ್ಮನ್ನು ಬಾಧಿಸುತ್ತಿರುವ ಬಹುತೇಕ ಖಾಯಿಲೆಗಳಿಗೆ ನಮ್ಮ ಆಹಾರ ಪದ್ದತಿಯೇ ಕಾರಣ. ನಾವಿಂದು ಹಸಿವು ನೀಗಿಸಲು ತಿನ್ನುವುದಕ್ಕಿಂತ ಹೆಚ್ಚಾಗಿ ಹೊಟ್ಟೆ ತುಂಬಿಸಲು ತಿನ್ನುತ್ತಿದ್ದೇವೆ. ನಮ್ಮ ಹಸಿವು ನೀಗಿದ ಬಳಿಕ ತಿನ್ನುವ ಒಂದೊಂದು ಅಗುಳೂ ದುಂದುವೆಚ್ಚ ಎಂದು ಇಸ್ಲಾಮ್ ಕಲಿಸಿದೆ. ಅದೊಂದು ವಿಧದಲ್ಲಿ ನಮಗೆ ನಿಧಾನ ವಿಷವೂ ಹೌದು. ಹೇಗೆಂದರೆ ನಮ್ಮ ಜೀರ್ಣಾಂಗದ ಶಕ್ತಿಗಿಂತ ಮೀರಿದ ಆಹಾರವೆಲ್ಲವೂ ನಮ್ಮ ದೇಹದಲ್ಲಿ ಕೊಬ್ಬಾಗಿ ಶೇಖರಿಸಲ್ಪಡುತ್ತದೆ.
ಪ್ರವಾದಿ ಚಿಕಿತ್ಸಾ ಪದ್ಧತಿಯಲ್ಲಿ "ಕೊಬ್ಬನ್ನು ವರ್ಜಿಸಿ, ನಿಮ್ಮ ಪಾಲಿಗೆ ವಿಷ" ಎಂದೇ ಬೋಧಿಸಲಾಗಿದೆ. ಇದಕ್ಕೆ ಇನ್ನೊಂದು ಆಯಾಮವೂ ಇದೆ. ಮಾಂಸಾಹಾರವನ್ನು ತಯಾರಿಸುವಾಗ ಅದರಲ್ಲಿರುವ ಕೊಬ್ಬನ್ನು ಪ್ರತ್ಯೇಕಿಸಿ ತೆಗೆಯಬೇಕು. ನಮ್ಮಲ್ಲನೇಕರು ಕೊಬ್ಬು ಹಾಕದ ಪದಾರ್ಥಕ್ಕೆ ರುಚಿಯಿಲ್ಲ ಎಂದು ಉದ್ದೇಶಪೂರ್ವಕವಾಗಿ ಕೊಬ್ಬನ್ನು ಹಾಕಿಯೇ ಮಾಂಸ ಬೇಯಿಸುತ್ತಾರೆ. ಇನ್ನು ಕೆಲವರು ಕೊಬ್ಬನ್ನು ತೆಗೆದರೆ ಅದರಲ್ಲಿ ಇನ್ನೇನು ಉಳಿಯುತ್ತದೆಂದೂ ಕೊಬ್ಬು ಹಾಕಿ ಮಾಂಸ ಬೇಯಿಸುತ್ತಾರೆ. ಮಾಂಸದ ಕೊಬ್ಬನ್ನು ನಮ್ಮ ಜೀರ್ಣಾಂಗವು ಅಷ್ಟು ಸುಲಭವಾಗಿ ಜೀರ್ಣ ಮಾಡುವುದಿಲ್ಲ ಎನ್ನುವುದನ್ನು ನಾವು ನೆನಪಿಟ್ಟುಕೊಳ್ಳಬೇಕು. ಹಾಗಾದರೆ ನಮಗೆ ತೀರಾ ಕೊಬ್ಬಿನ ಅಗತ್ಯವಿಲ್ಲವೇ ಎಂಬ ಸವಾಲು ಉದ್ಭವಿಸಬಹುದು. ಅಗತ್ಯದ ಕೊಬ್ಬನ್ನು ನಮ್ಮ ನಿಯಮಿತವಾದ ಆಹಾರವೇ ಶರೀರಕ್ಕೆ ಒದಗಿಸುತ್ತದೆ.
ಪ್ರವಾದಿವರ್ಯರು ನಮ್ಮ ಹೊಟ್ಟೆ ತುಂಬಿಸಬೇಕಾದ ಸರಿಯಾದ ವಿಧಾನವನ್ನೂ ನಮಗೆ ಕಲಿಸಿದ್ದಾರೆ. ನಿಮ್ಮ ಹೊಟ್ಟೆಯನ್ನು ಮೂರು ಭಾಗಗಳನ್ನಾಗಿ ವಿಂಗಡಿಸಬೇಕು. ಅದರಲ್ಲೊಂದು ಭಾಗ ಆಹಾರಕ್ಕೆ, ಇನ್ನೊಂದು ಭಾಗ ನೀರಿಗೆ ಮತ್ತೊಂದು ಭಾಗ ವಾಯುವಿಗೆ ಮೀಸಲಿಡಬೇಕು.ನಾವಿಂದು ವಾಯುವಿಗೆ ಬಿಡಿ ನೀರಿಗೂ ಸ್ಥಳ ಕೊಡದೇ ಸಂಪೂರ್ಣ ಹೊಟ್ಟೆಯನ್ನು ಆಹಾರ ತುಂಬಿಸಲು ಬಳಸುತ್ತೇವೆ.
ನಮ್ಮ ಉದರ (Abdomine) ಒಂದು ರಬ್ಬರ್ ಚೀಲವಿದ್ದಂತೆ. ಅದಕ್ಕೆ ನಾವು ತುಂಬಿಸಿದಷ್ಟು ಅದು ವಿಸ್ತಾರವಾಗುತ್ತಾ (Expand) ಹೋಗುತ್ತದೆ. ಡೊಳ್ಳು ಹೊಟ್ಟೆಯಾಗುವುದೂ ಅತಿಯಾಗಿ ಉದರ ತುಂಬಿಸುವುದರಿಂದ. ಕೆಲ ಕಾಲ ಅತಿಯಾಗಿ ಬಲವಂತದಿಂದ ತುಂಬಿಸಲ್ಪಟ್ಟ ಉದರವನ್ನು ಮತ್ತೆ ಅದರ ಮೂಲ ಸ್ಥಿತಿಗೆ ತರಲು ಸ್ವಲ್ಪ ಸಮಯ ತಗಲುತ್ತದೆ ಮತ್ತು ಸ್ವಲ್ಪ ಕಷ್ಟವೂ ಆಗುತ್ತದೆ. ಒಮ್ಮೆ ನಮ್ಮ ಅತಿಯಾದ ಆಹಾರ ಸೇವನೆಯಿಂದ ವಿಸ್ತರಿಸಲ್ಪಟ್ಟ ಉದರಕ್ಕೆ ಏಕಾ ಏಕಿ ಕಡಿಮೆ ಆಹಾರ ಹಾಕಿದಾಗ ಅದಕ್ಕೆ ಅದು ಸಾಲದೇ ಇನ್ನಷ್ಟು ಬಯಸುತ್ತದೆ. ನೀವು ಒಂದು ತಿಂಗಳ ಕಾಲ ಕಷ್ಟಪಟ್ಟು ನಿಮ್ಮ ಆಹಾರ ಸೇವನೆಯನ್ನು ತಗ್ಗಿಸಿದರೆ ವಿಸ್ತರಿಸಲ್ಪಟ್ಟ ಉದರವು ಗಾಳಿ ತೆಗೆದ ಬಲೂನಿನ ರೂಪಕ್ಕೆ ನಿಧಾನವಾಗಿ ಮತ್ತೆ ಬರುತ್ತದೆ. ಆಗ ನಿಮ್ಮ ಉದರ ಬಯಸುವ ಆಹಾರದ ಮಿತಿಯೂ ಕಡಿಮೆಯಾಗುತ್ತದೆ. ಆದರೆ ಸಾಮಾನ್ಯವಾಗಿ ನಾವ್ಯಾರೂ ಇಂತಹ ತುಸು ಕಠಿಣ ಪರೀಕ್ಷೆಗೆ ನಮ್ಮ ದೇಹವನ್ನು ಒಡ್ಡುವುದಿಲ್ಲ.
ನಿಮಗೆ ಹಸಿವಾಗದ ಹೊರತು ಉನ್ನಬೇಡಿರಿ ಎಂದು ಪ್ರವಾದಿವರ್ಯರು ಬೋಧಿಸಿದ್ದಾರೆ. ನಾವಾದರೋ ಹಸಿವಾಯಿತೆಂದು ಉನ್ನುವುದಕ್ಕಿಂತ ಊಟದ ಸಮಯವಾಯಿತೆಂದೇ ಉನ್ನುವುದು ಅಧಿಕ. ನಿಯಮಿತವಾಗಿ ನಿರ್ದಿಷ್ಟ ಅವಧಿಗೆ ಮಾತ್ರ ಉಣ್ಣುವವರಿಗೆ ಸಹಜವಾಗಿಯೇ ಸಮಯ ವಾಗುವಾಗ ಹಸಿವಾಗುತ್ತದೆ. ಇಡೀ ದಿನ ಏನಾದರೂ ಜಗಿಯುತ್ತಿರುವವರಿಗೆ ಹಸಿವಾಗುವುದಿಲ್ಲ. ಆದರೆ ಅವರೆಲ್ಲಾ ಊಟದ ಸಮಯವಾಯಿತೆಂದು ಉಣ್ಣುತ್ತಾರೆ.
ನಾವು ಹೇಗೆ ಆಹಾರ ಸೇವಿಸಬೇಕೆಂದು ಮಾತ್ರ ಪ್ರವಾದಿವರ್ಯರು ಬೋಧಿಸಿದ್ದಲ್ಲ. ಹೇಗೆ ಹಸಿದವರ ಹಸಿವು ತಣಿಸುವುದು ನಮಗೆ ಕಡ್ಡಾಯ ಎಂದೂ ಕಲಿಸಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಪ್ರಸಿದ್ಧ ವಚನವೇ ಇದೆ. "ನೆರೆಮನೆಯವನು ಹಸಿದಿರುವಾಗ ಹೊಟ್ಟೆ ತುಂಬಾ ಉಣ್ಣುವವನು ನನ್ನ ಅನುಯಾಯಿಯಲ್ಲ.."
ನಮ್ಮಲ್ಲಿ ಇಂದು ಅತೀ ಹೆಚ್ಚು ಆಹಾರವು ವ್ಯರ್ಥಗೊಳಿಸುವುದು ಔತಣ ಕೂಟಗಳಲ್ಲಿ. ಪ್ರವಾದಿವರ್ಯರು ಆಹಾರವನ್ನು ವ್ಯರ್ಥಗೊಳಿಸಿ ಎಸೆಯುವುದನ್ನೂ ಕಟುವಾಗಿ ವಿರೋಧಿಸಿದ್ದಾರೆ. ಅತ್ಯಂತ ಕೆಟ್ಟ ಔತಣ ಕೂಟ ಬಡವರನ್ನು ಆಹ್ವಾನಿಸದ ಔತಣ ಕೂಟ ಎಂದು ಪ್ರವಾದಿವರ್ಯರು ಸ್ಪಷ್ಟವಾಗಿ ಎಚ್ಚರಿಸಿದ್ದಾರೆ. ಹಸಿವಿನ ಮೌಲ್ಯ ಅರಿಯದವರು ಹೆಚ್ಚಿನ ಔತಣ ಕೂಟಗಳಲ್ಲಿ ತಟ್ಟೆ ತುಂಬಾ ಖಾದ್ಯಗಳನ್ನು ಹಾಕಿಸಿ ಅರ್ಧಂಬರ್ಧ ತಿಂದು ತೊಟ್ಟಿಗೆಸೆಯುತ್ತಾರೆ. ನಾವು ತೊಟ್ಟಿಗೆಸೆಯುವ ಆಹಾರ ಇನ್ನೊಬ್ಬರ ಪಾಲಿನದೆಂದು ಕನಿಷ್ಠ ಪರಿಜ್ಞಾನವೂ ನಮಗಿರುವುದಿಲ್ಲ. ಇದು ಒಂದು ರೀತಿಯಲ್ಲಿ ಬಡವರ ಹಸಿವಿನ ಅಣಕವೂ ಹೌದು.
ಇಸ್ಲಾಮಿನಲ್ಲಿ ಅನ್ನ ದೇವರು ಎಂಬ ಪರಿಕಲ್ಪನೆಯಿಲ್ಲ. ಆದರೆ ಅನ್ನದ ಒಂದು ಅಗುಳನ್ನೂ ವ್ಯರ್ಥಗೊಳಿಸಬಾರದೆಂದು ಸ್ಪಷ್ಟವಾಗಿ ಬೋಧಿಸಲಾಗಿದೆ. ವಿಶ್ವ ಆಹಾರ ದಿನವೆಂದರೆ ಕೇವಲ ಆಹಾರ ಸೇವಿಸುವ ಬಗೆಗಿನ ಜಾಗೃತಿ ಮಾತ್ರವಲ್ಲ.. ಹಸಿದವನ ಹಸಿವು ತಣಿಸುವ ಕುರಿತ ಜಾಗೃತಿಯೂ ಆಗಬೇಕಿದೆ.