ವಿಶ್ವವಿಖ್ಯಾತ ಮೈಸೂರು ದಸರಾ: ಅರಮನೆ ಆವರಣದಲ್ಲಿ ಸ್ವಚ್ಛಂದವಾಗಿ ವಿರಮಿಸುತ್ತಿವೆ ಗಜಪಡೆ

Update: 2020-10-20 05:06 GMT

ಮೈಸೂರು, ಅ.20: ಸರಳವೋ ಅದ್ದೂರಿಯೊ ನಮ್ಮ ಕೆಲಸ ನಾವು ಮಾಡಲೇಬೇಕಲ್ಲವೇ ಎಂದುಕೊಂಡು ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಆಗಮಿಸಿರುವ ಗಜಪಡೆ ಅರಮನೆ ಆವರಣದಲ್ಲಿ ಸ್ವಚ್ಛಂದವಾಗಿ ವಿರಮಿಸುತ್ತಿವೆ.

ನಗರದ ಅರಮನೆ ಆವರಣದಲ್ಲಿ ಬೀಡುಬಿಟ್ಟಿರುವ ಗಜಪಡೆಗಳಾದ ಅಭಿಮನ್ಯು, ವಿಕ್ರಮ, ಗೋಪಿ, ವಿಜಯ ಮತ್ತು ಕಾವೇರಿ ಆನೆಗಳು ವಿಶಿಷ್ಟ ಆಹಾರ ಪದಾರ್ಥಗಳನ್ನು ತೆಗೆದುಕೊಳ್ಳುವ ಮೂಲಕ ದಸರಾ ಜಂಬೂಸವಾರಿಯಲ್ಲಿ ಭಾಗವಹಿಸಲು ತಯಾರಾಗುತ್ತಿವೆ. ಗಜಪಡೆಗಳ ತಯಾರಿಗೆ ದಿನನಿತ್ಯ ವಿಶಿಷ್ಟ ಆಹಾರಗಳನ್ನು ನೀಡಲಾಗುತ್ತಿದೆ.

ಕೋವಿಡ್ ಕಾರಣ ಜಂಬೂಸವಾರಿಯನ್ನು ಮೊಟಕುಗೊಳಿಸಿರುವ ರಾಜ್ಯ ಸರ್ಕಾರ ಸಂಪ್ರದಾಯದಂತೆ ಅರಮನೆ ಆವರಣದಲ್ಲಿ ಆಚರಿಸಲು ನಿರ್ಧರಿಸಿದೆ. ಅದರಂತೆ ಅರಮನೆಗೆ ಆಗಮಿಸಿರುವ ಗಜಪಡೆಗಳಿಗೆ ವಿಶೇಷ ಆತಿಥ್ಯ ನೀಡುವ ಮೂಲಕ ತಾಲೀಮು ನಡೆಸಲಾಗುತ್ತಿದ್ದು, ಎಲ್ಲಾ ವಾತಾವರಣಕ್ಕೂ ಹೊಂದಿಕೊಳ್ಳುವಂತೆ ಮಾವುತರು ಮತ್ತು ಕಾವಾಡಿಗಳು ಶ್ರಮಿಸುತ್ತಿದ್ದಾರೆ.

ಇದೇ ಮೊದಲ ಬಾರಿಗೆ ಶ್ರೀಚಾಮುಂಡೇಶ್ವರಿ ದೇವಿಯನ್ನು ಹೊತ್ತ ಚಿನ್ನದ ಅಂಬಾರಿಯನ್ನು ಹೊರಲಿರುವ ಅಭಿಮನ್ಯು ಆನೆಗೆ ಜಿಲ್ಲಾಡಳಿತ, ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪಶುವೈದ್ಯ ಡಾ.ನಾಗರಾಜು ಹೆಚ್ಚು ಗಮನ ಹರಿಸಿ ಆನೆಗೆ ಬೇಕಾದ ಉತ್ಸಾಹವನ್ನು ಇತರೆ ಆನೆಗಳೊಂದಿಗೆ ತುಂಬುತ್ತಿದ್ದಾರೆ.

ಮೈಸೂರು ದಸರಾ ಎಂದರೆ ಜಂಬೂಸವಾರಿ. ಆದರೆ ಅದು ಈ ಬಾರಿ ಇಲ್ಲ ಎಂಬುದನ್ನು ಮನಗಂಡ ಸಾರ್ವಜನಿಕರು ಅರಮನೆಯೊಳಗೆ ಆಗಮಸಿ ಆನೆಗಳನ್ನು ಕಂಡು ಪುಳಕಿತರಾಗುತ್ತಿದ್ದಾರೆ. ಆನೆಗಳನ್ನು ಕಟ್ಟಿಹಾಕಿರುವ ಜಾಗಕ್ಕೆ ತೆರಳಿ ಆನೆಗಳನ್ನು ಕಂಡು ಸಂತೋಷ ಪಡುತ್ತಿದ್ದಾರೆ. ಆದರೆ ಆನೆಗಳೊಂದಿಗೆ ಇರುವ ಮಾವುತರ ಬಳಿ ಆನೆಗಳ ಬಗ್ಗೆ ಕೇಳಿದರೆ ಅವರ್ಯಾರು ಪ್ರತಿಕ್ರೆಯ ನೀಡುವುದಿಲ್ಲ.

ಅಭಿಮನ್ಯ ಆನೆಯನ್ನು ಒಂದು ಸ್ಥಳದಲ್ಲಿ ಕಟ್ಟಿದರೆ ಮತ್ತೊಂದು ಸ್ಥಳದಲ್ಲಿ ಇನ್ನುಳಿದ ನಾಲ್ಕು ಆನೆಗಳನ್ನು ಕಟ್ಟಲಾಗುತ್ತಿದೆ. ಆನೆಗಳನ್ನು ಜಂಬೂ ಸವಾರಿಗೆ ತಯಾರು ಮಾಡಲು ದಿನ ನಿತ್ಯ ತಾಲೀಮು ನಡೆಲಾಗುತ್ತಿದೆ. ಪ್ರತಿ ದಿನ ಆನೆಗಳಿಗೆ ಮರಳು ಮೂಟೆಗಳನ್ನು ಕಟ್ಟಿ ತಾಲೀಮು ನಡೆಸಲಾಗುತ್ತಿದೆ. ಜೊತೆಗೆ ಮರದ ಅಂಬಾರಿ ಕಟ್ಟಿ ಮರಳು ಮೂಟೆಗಳನ್ನು ಹಾಕಿ ಜಂಬೂ ಸವಾರಿಗೆ ಹೊಂದುಕೊಳ್ಳುವಂತೆ ತಾಲೀಮು ನಡೆಸಲಾಗುತ್ತಿದೆ.

ಆನೆಗಳಿಗೆ ಪ್ರತಿ ನಿತ್ಯ ಕಬ್ಬು, ಬೆಲ್ಲ ಸೇರಿದಂತೆ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ನೀಡಲಾಗುತ್ತಿದೆ. ಆನೆಗಳ ರಕ್ಷಣೆಗೆ ಪೊಲೀಸರನ್ನು ನಿಯೋಜಿಸಲಾಗಿದ್ದು, ಆನೆಗಳು ಬೀಡು ಬಿಟ್ಟಿರುವ ಜಾಗದ ಮುಂದೆ ಪೊಲೀಸರು ಕಾವಲು ಕಾಯುತ್ತಿದ್ದಾರೆ. 

ಮಾವುತರು ಮತ್ತು ಕಾವಾಡಿಗಳಿಗೆ ಪ್ರತ್ಯೇಕ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಅವರ ಸಂಪೂರ್ಣ ಜವಾಬ್ದಾರಿಯನ್ನು ಜಿಲ್ಲಾಡಳಿತ ನೋಡಿಕೊಳ್ಳುತ್ತಿದೆ.
ಪ್ರತಿ ದಸರಾಗೆ ಸುಮಾರು 12 ರಿಂದ 15 ಆನೆಗಳು ಬರುತ್ತಿದ್ದವು. ಕೊರೋನ ಕಾರಣದಿಂದ ಈ ಬಾರಿ ಕೇವಲ 5 ಆನೆಗಳು ಮಾತ್ರ ಆಗಮಿಸಿವೆ. ಅಂಬಾರಿ ಹೊರಲು ಸಿದ್ಧವಾಗಿರುವ ಅಭಿಮನ್ಯು ಆನೆ ಈ ಹಿಂದೆ ಪೊಲೀಸ್ ವಾದ್ಯಗೋಷ್ಠಿಯಲ್ಲಿ ಪಾಲ್ಗೊಂಡು ಸಾಗುತ್ತಿತ್ತು. ಇದೇ ಮೊದಲ ಬಾರಿಗೆ ಅಂಬಾರಿ ಹೊರುವ ಅವಕಾಶ ಸಿಕ್ಕಿದ್ದು ಜವಾಬ್ದಾರಿಯನ್ನು ಹೇಗೆ ನಿಭಾಯಿಸುತ್ತದೆ ಕಾದು ನೋಡಬೇಕು.

Writer - ನೇರಳೆ ಸತೀಶ್ ಕುಮಾರ್

contributor

Editor - ನೇರಳೆ ಸತೀಶ್ ಕುಮಾರ್

contributor

Similar News