ಭಾರತದಲ್ಲಿ ದಲಿತ ಮಹಿಳೆಯ ಅಸ್ತಿತ್ವ ಮತ್ತು ಸ್ಥಾನಮಾನ

Update: 2020-10-23 19:30 GMT

ಇಲ್ಲಿ ನ್ಯಾಯಾಂಗವು ದಲಿತ ಮಹಿಳೆಯರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಸೋತಿದೆ. ಪ್ರಭುತ್ವದ ಸರ್ವಾಧಿಕಾರ ಮತ್ತು ದಮನಕಾರಿ ಪೊಲೀಸ್ ವ್ಯವಸ್ಥೆ ಮತ್ತು ಬ್ರಾಹ್ಮಣ್ಯ-ಫ್ಯೂಡಲಿಸಂ ಸಮಾಜದ ನಡುವಿನ ಪರಸ್ಪರ ಹೊಂದಾಣಿಕೆಯ ಅಡಿಯಲ್ಲಿ ನಡೆಯುವ ಈ ಲೈಂಗಿಕ ಹಿಂಸೆಗಳಿಂದ ದಲಿತ ಮಹಿಳೆಗೆ ವಿಮೋಚನೆ ಯಾವಾಗ ಎನ್ನುವ ಪ್ರಶ್ನೆಗೆ ಪ್ರಗತಿಪರ ಸಂಘಟನೆಗಳು ಉತ್ತರಿಸಬೇಕು. ಸಾಮಾಜಿಕ ಹೋರಾಟಗಳ ಮೇಲೆ ಮಹತ್ತರವಾದ ಜವಾಬ್ದಾರಿ ಇದೆ. ಬೀದಿ ಹೋರಾಟಗಳ ಜೊತೆ ಜೊತೆಗೆ ಸಾಂವಿಧಾನಿಕ ಸಂಸ್ಥೆಗಳಿಗೆ ಮರಳಿ ಘನತೆ, ಸ್ವಾಯತ್ತತೆ ಮತ್ತು ಸ್ವಾತಂತ್ರ್ಯ ಗಳಿಸಿಕೊಡುವುದರ ಕುರಿತು ರಚನಾತ್ಮಕವಾದ ಕಾರ್ಯಯೋಜನೆಗಳ ಅಗತ್ಯವಿದೆ.


ಭಾರತದಂತಹ ಅಸಮಾನ ಜಾತಿ ಪದ್ಧತಿಯ ಸಮಾಜದಲ್ಲಿ ವಂಚಿತ ಸಮುದಾಯಗಳ, ದಲಿತರ ಸ್ಥಾನಮಾನವೇನು ಎನ್ನುವ ಪ್ರಶ್ನೆಗೆ ಇಂದಿಗೂ ಉತ್ತರ ದೊರಕಿಲ್ಲ. ಸಾಮಾಜಿಕವಾಗಿ ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ತಳ ಸಮುದಾಯಗಳಿಗೆ ಒಂದು ಘನತೆಯ, ಆತ್ಮಭಿಮಾನದ ಬದುಕನ್ನು ಕಲ್ಪಿಸಲು ಸಹ ಭಾರತದ ಪ್ರಜಾಪ್ರಭುತ್ವ ಸೋತಿದೆ. ಇಲ್ಲಿ ದಲಿತರು ತಾರತಮ್ಯವನ್ನು ಉಂಡು ಬೆಳೆದಿದ್ದಾರೆ. ಅನುಭವಿಸಿದ್ದಾರೆ. ಅವಮಾನಕ್ಕೆ ಒಳಗಾಗಿದ್ದಾರೆ. ಜಾತಿ ಪ್ರತ್ಯೇಕತೆ, ತಾರತಮ್ಯದ ವಿಷವರ್ತುಲದಿಂದ ಹೊರಬರಲು ಹೆಣಗಾಡುತ್ತಿದ್ದಾರೆ. ಫುಲೆ, ಅಂಬೇಡ್ಕರ್‌ರಂತಹ ವಿಮೋಚಕರು ಶೋಷಿತರ ಗುಲಾಮಗಿರಿಯಿಂದ ವಿಮುಕ್ತಿಗಾಗಿ ಪ್ರಾತಿನಿಧ್ಯ-ಸಬಲೀಕರಣ-ವಿಮೋಚನೆ ಕುರಿತಾಗಿ ಚಿಂತನೆಗಳನ್ನು ಬಿತ್ತಿದ್ದರು, ಅಧ್ಯಯನ ನಡೆಸಿದರು, ಹೋರಾಟಗಳನ್ನು ಕಟ್ಟಿದರು.

ಆದರೆ ಇಲ್ಲಿನ ಪ್ರಜ್ಞಾವಂತರು ಅಂಬೇಡ್ಕರ್ ರೂಪಿಸಿದ ಈ ವೈಚಾರಿಕ ಬೌದ್ಧ್ದಿಕತೆ, ಜಾತಿ ವಿನಾಶದ ಪ್ರಜ್ಞೆ ಮತ್ತು ಸಮಾನತೆಯ ಸಂವೇದನೆಯನ್ನು ವ್ಯವಸ್ಥೆಗೆ ಅಳವಡಿಸಿಕೊಳ್ಳುವಲ್ಲಿ ದಯನೀಯವಾಗಿ ಸೋತಿರುವುದು ಒಂದು ದುರಂತ. ಅಂಬೇಡ್ಕರ್ ಅವರ ಬಹುರೂಪಕತ್ವವನ್ನು ಸಮಾಜದಲ್ಲಿ ಬಿತ್ತುವುದರಲ್ಲಿಯೇ ಅನೇಕ ದೋಷಗಳಿವೆ. ಇದರ ಫಲವಾಗಿ ಅಂಬೇಡ್ಕರ್ ಅವರನ್ನು ಸಮಕಾಲಿನಗೊಳಿಸಲು ಪದೇ ಪದೇ ಸೋಲುತ್ತಿದ್ದೇವೆ. ಬಾಬಾ ಸಾಹೇಬರ ಶಿಕ್ಷಣ-ಸಂಘಟನೆ-ಹೋರಾಟ ಎನ್ನುವ ಬೀಜಮಂತ್ರವನ್ನು ಅದರ ಕ್ರಿಯಾರೂಪದಲ್ಲಿ ಗ್ರಹಿಸಿ ಅಳವಡಿಸಿಕೊಳ್ಳದೆ ಕೇವಲ ನಾಮಪದಕ್ಕೆ ಸೀಮಿತಗೊಳಿಸಿರುವುದು ಇಲ್ಲಿನ ಬೌದ್ಧ್ದಿಕ ವಲಯದ ತಗಲೂಫಿತನವನ್ನು ತೋರಿಸುತ್ತದೆ. ಇದರ ಫಲವಾಗಿ ಭಾರತದ ಶ್ರೇಣೀಕೃತ, ಪಿರಮಿಡ್ ಸ್ವರೂಪದ ಜಾತಿ ವ್ಯವಸ್ಥೆಯನ್ನು ಒಡೆದು ಹಾಕುವಲ್ಲಿ ವಿಫಲವಾಗಿರುವ ಇಲ್ಲಿನ ಸಾಮಾಜಿಕ ಹೋರಾಟಗಳು ಮತ್ತು ಬೌದ್ಧಿಕ ಚಿಂತನೆಗಳು ಕನಿಷ್ಠ ಮೇಲ್ಮುಖ ಚಲನೆಯನ್ನು ನಿರಂತರವಾಗಿ ಕಾಪಾಡಿಕೊಳ್ಳಲು ಸಹ ಸೋತಿವೆ. ಇದಕ್ಕೆ ಪ್ರಭುತ್ವದ ವಂಚನೆ, ಸರ್ವಾಧಿಕಾರ ಮತ್ತು ಅಧಿಕಾರದ ದರ್ಪ ಹಾಗೂ ವ್ಯವಸ್ಥೆಯಲ್ಲಿ ಆಳವಾಗಿ ಬೇರೂರಿರುವ ಬ್ರಾಹ್ಮಣ್ಯ-ಫ್ಯೂಡಲಿಸಂ ಯಜಮಾನಕೀಯವೂ ಸಹ ಮುಖ್ಯ ಕಾರಣ.

ಇದರ ಹಿಂಸೆಗೆ ನೇರವಾಗಿ ಗುರಿಯಾದವರು ದಲಿತ ಮಹಿಳೆ. ಭಾರತದಲ್ಲಿ ದಲಿತ ಮಹಿಳೆಯ ಸ್ಥಾನಮಾನವೇನು? ಆಕೆಯ ಅಸ್ತಿತ್ವವೇನು? ಎನ್ನುವ ಪ್ರಶ್ನೆಗೆ ಇಂದಿಗೂ ಉತ್ತರ ದೊರಕಿಲ್ಲ. ಆದರೆ ದಲಿತ ಮಹಿಳೆಯ ಮೇಲೆ ಜಾತಿ ದೌರ್ಜನ್ಯ, ಕೊಲೆಗಳು ದಿನದಿನಕ್ಕೂ ಹೆಚ್ಚುತ್ತಲೇ ಇದೆ. 2019ರಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮಹಿಳೆಯರ ಮೇಲಿನ ದೌರ್ಜನ್ಯವು ಶೇ. 7 ಮತ್ತು ಶೇ.26ರಷ್ಟು ಏರಿಕೆಯಾಗಿದೆ. 2019ರಲ್ಲಿ ಪರಿಶಿಷ್ಟ ಜಾತಿ ಮಹಿಳೆಯರ ಮೇಲೆ 45,935 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಉತ್ತರ ಪ್ರದೇಶ ರಾಜ್ಯದಲ್ಲಿ 11,829, ರಾಜಸ್ಥಾನದಲ್ಲಿ 6,794, ಬಿಹಾರದಲ್ಲಿ 6,544 ಪ್ರಕರಣಗಳು ದಾಖಲಾಗಿವೆ. ಮಾನವ ಹಕ್ಕುಗಳ ಸಮೀಕ್ಷೆಯ ಅನುಸಾರ ಪ್ರತಿದಿನ ಸರಾಸರಿ 4 ದಲಿತ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿವೆ. ಪೊಲೀಸ್ ಠಾಣೆಯ ಮೆಟ್ಟಲೇರದೆ ಮುಚ್ಚಿ ಹೋದ ಲಕ್ಷಾಂತರ ಅತ್ಯಾಚಾರ ಪ್ರಕರಣಗಳಿವೆ. ಅಲ್ಲದೆ ದೂರು ದಾಖಲಾದರೂ ಸಹ ಮೇಲ್ಜಾತಿ ಆರೋಪಿಗಳ ವಿರುದ್ಧ ದೋಷಾರೋಪಣೆಯನ್ನು ಸಹ ಸಲ್ಲಿಸದಿರುವ ಅನೇಕ ಪ್ರಕರಣಗಳಿವೆ. 2013ರಲ್ಲಿ ಶೇ. 95ರಷ್ಟು ಪ್ರಕರಣಗಳಲ್ಲಿ ದೋಷಾರೋಪ ದಾಖಲಾದರೆ 2017ರಲ್ಲಿ ಅದರ ಪ್ರಮಾಣ ಶೇ. 85ಕ್ಕೆ ಇಳಿದಿದೆ. ಇನ್ನು ಅತ್ಯಾಚಾರ ಸಂಬಂಧಿತ ವಿಚಾರಣೆಯಲ್ಲಿ ಶೇ.32ರಷ್ಟು ಪ್ರಕರಣಗಳಲ್ಲಿ ಮಾತ್ರ ಆರೋಪಿಗಳಿಗೆ ಶಿಕ್ಷೆಯಾಗುತ್ತಿದೆ. 2017ರಲ್ಲಿ ದೇಶಾದ್ಯಂತ ಒಟ್ಟು 1,46,201 ಅತ್ಯಾಚಾರ ಪ್ರಕರಣಗಳು ವಿಚಾರಣೆ ಹಂತದಲ್ಲಿದ್ದವು. ಈ ಪೈಕಿ 18,333 ಪ್ರಕರಣಗಳು ಮಾತ್ರ ಇತ್ಯರ್ಥಗೊಂಡಿವೆ. ಇದರಲ್ಲಿ 5,822 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆ ಪ್ರಕಟವಾಗಿದೆ. 1,14,453 ಆರೋಪಿಗಳು ನಿರ್ದೋಷಿಗಳೆಂದು ಖುಲಾಸೆಯಾಗಿದ್ದಾರೆ.

ಇದಕ್ಕೆ ಇತ್ತೀಚಿನ ಉದಾಹರಣೆ ಉತ್ತರ ಪ್ರದೇಶದ ಹಾಥರಸ್‌ನಲ್ಲಿ ದಲಿತ ಹೆಣ್ಣುಮಗಳ ಮೇಲೆ ನಡೆದ ಅತ್ಯಾಚಾರ, ಕೊಲೆ ಪ್ರಕರಣ. ಸೆಪ್ಟಂಬರ್, 14, 2020ರಂದು ಹಾಥರಸ್ ಗ್ರಾಮದಲ್ಲಿ (ಇದು ದಿಲ್ಲಿಯಿಂದ 200 ಕಿ.ಮೀ. ದೂರದಲ್ಲಿದೆ) ದಲಿತ ಸಮುದಾಯದ ಸೋದರಿಯ ಮೇಲೆ ಮೇಲ್ಜಾತಿಯ ಠಾಕೂರ್ ಯುವಕರು ಸಾಮೂಹಿಕ ಅತ್ಯಾಚಾರ ನಡೆಸಿದರು. ಆಕೆಯ ನಾಲಿಗೆಗೆ ಪೆಟ್ಟಾಗಿತ್ತು, ಗೋಣು, ಬೆನ್ನು ಹುರಿ ಮುರಿದಿತ್ತು. ದಿಲ್ಲಿಯ ಸರಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಾದ ಸಂತ್ರಸ್ತೆ ಎರಡು ವಾರಗಳ ನಂತರ ತೀರಿಕೊಂಡರು. ಇದು ನೇರವಾಗಿ ಮೇಲ್ಜಾತಿಗಳು ದಲಿತ ಸಮುದಾಯದ ಮಹಿಳೆಯ ಮೇಲೆ ನಡೆಸಿದ ಲೈಂಗಿಕ ಹಿಂಸಾಚಾರ ಮತ್ತು ಕೊಲೆ. ಇಲ್ಲಿ ಪುರುಷನ ಲೈಂಗಿಕ ತೃಷೆಯ ಜೊತೆಗೆ ಜಾತಿ ದೌರ್ಜನ್ಯದ ಮುಖ್ಯ ಪಾತ್ರವಿದೆ. ಉತ್ತರ ಪ್ರದೇಶದ ಪೊಲೀಸರು ಸಂತ್ರಸ್ತೆಯ ಪೋಷಕರಿಗೆ ಮಾಹಿತಿಯನ್ನು ಕೊಡದೆ ಅವರನ್ನು ಮನೆಯಲ್ಲಿ ಬಂಧಿಸಿಟ್ಟು ಮಧ್ಯರಾತ್ರಿಯ ಹೊತ್ತು 2 ಗಂಟೆಗೆ ಮೃತ ದಲಿತ ಸೋದರಿಯ ಶವವನ್ನು ಸುಟ್ಟು ಹಾಕಿದರು. ಒಂದೊಮ್ಮೆ ಆ ಯುವತಿ ಮೇಲ್ಜಾತಿಯವರಾಗಿದ್ದರೆ ಇದೇ ಬಗೆಯಲ್ಲಿ ಅಕ್ರಮವಾಗಿ ಹೆಣವನ್ನು ಸುಡುತ್ತಿದ್ದರೇ ಎನ್ನುವ ಪ್ರಶ್ನೆಗೆ ಇಲ್ಲವೆಂದೇ ಉತ್ತರ ದೊರಕುತ್ತದೆ. ಇದು ಇಲ್ಲಿನ ಜಾತಿ ದೌರ್ಜನ್ಯಕ್ಕೆ ಜ್ವಲಂತ ನಿದರ್ಶನ. ಪ್ರೊ. ರಮೇಶ್ ದೀಕ್ಷಿತ್ ‘‘ದಲಿತ ಪುರುಷ ಬ್ರಾಹ್ಮಣ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ ಒಂದು ಉದಾಹರಣೆ ಕೊಡಿ’’ ಎಂದು ಕೇಳುತ್ತಾರೆ. ಈ ಒಂದು ಪ್ರಶ್ನೆ ಇನ್ನಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ.

ಆದರೆ ಹಾಥರಸ್ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಆರೋಪಿಗಳ, ಸಂತ್ರಸ್ತೆಯ ಜಾತಿ ಪ್ರಸ್ತಾಪಿಸುವುದನ್ನು, ಜಾತಿ ಕಾರಣಕ್ಕೆ ನಡೆದ ಅತ್ಯಾಚಾರ ಎನ್ನುವ ಸತ್ಯವನ್ನು ಅನೇಕರು ಪ್ರಶ್ನಿಸಿದ್ದಾರೆ. ಈ ರೀತಿ ಪ್ರಶ್ನಿಸುವವರು ಇಲ್ಲಿನ ಅಸಮಾನ ಜಾತಿ ವ್ಯವಸ್ಥೆಯ ಕ್ರೌರ್ಯದ ಅರಿವಿಲ್ಲದಂತೆ ವರ್ತಿಸುವುದು ಸೋಜಿಗವೆನಿಸುತ್ತದೆ. ಏಕೆಂದರೆ ಇದೇ ಸಂದರ್ಭದಲ್ಲಿ ಮೇಲ್ಜಾತಿ ಠಾಕೂರ್ ಮುಖಂಡರು ಹಾಥರಸ್ ಗ್ರಾಮದ ಬಳಿ ಸಭೆ ನಡೆಸಿ ಅತ್ಯಾಚಾರಿಗಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ‘ಸವರ್ಣ ಪರಿಷತ್’ ಆರೋಪಿಗಳು ಅಮಾಯಕರು ಎಂದು ಹೇಳಿಕೆ ನೀಡಿತ್ತು. ಇಲ್ಲಿ ಜಾತಿ ಪ್ರಮುಖ ಪಾತ್ರ ವಹಿಸಿರುವುದಕ್ಕೆ ಸ್ಪಷ್ಟ ನಿದರ್ಶನ. ಮತ್ತೊಂದೆಡೆ ಮೇಲ್ಜಾತಿ ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರದಲ್ಲಿ ಜಾತಿ ಮುಖ್ಯ ಪಾತ್ರ ವಹಿಸುವುದಿಲ್ಲ. ಅಲ್ಲಿ ಗಂಡಸರ ಲೈಂಗಿಕ ವಿಕೃತಿಗೆ ಮಹಿಳೆ ಬಲಿಯಾಗುತ್ತಾಳೆ. ಸಂತ್ರಸ್ತಳಾಗುತ್ತಾಳೆ. ಆದರೆ ಅಂಚಿನಲ್ಲಿರುವ ಸಮುದಾಯಗಳ ವಿಷಯದಲ್ಲಿ ಬಲಿಷ್ಠ ಜಾತಿಯವರು ದಲಿತ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ನಡೆಸುವುದನ್ನು ತಮ್ಮ ಹಕ್ಕು ಎಂದೇ ಅಧಿಕಾರ ಚಲಾಯಿಸುತ್ತಾರೆ. ಈ ಮೇಲ್ಜಾತಿಗಳ ವಿರುದ್ಧ ದಲಿತರು ನ್ಯಾಯ ಕೇಳಲು, ಪ್ರಶ್ನಿಸಲು ಪ್ರಾರಂಭಿಸಿದ ಕ್ಷಣ ಅವರ ಮನೆಯ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಸುತ್ತಾರೆ.

ಭಾರತದ ಫ್ಯೂಡಲ್ ವ್ಯವಸ್ಥೆಯ ಗ್ರಾಮಗಳಲ್ಲಿ ಈ ಬಲಿಷ್ಠ ಜಾತಿಗಳಿಗೆ, ಮೇಲ್ಜಾತಿಗಳಿಗೆ ಯಾವುದೇ ನಿಯಂತ್ರಣವಿಲ್ಲ. ಇವರಿಗೆ ಸಂವಿಧಾನದ ನೀತಿಸಂಹಿತೆಗಳೂ ಅನ್ವಯಿಸುವುದಿಲ್ಲ. ಪ್ರಭುತ್ವ-ವ್ಯವಸ್ಥೆಯ ಈ ಸಮ್ಮಿಶ್ರ ಪಾಳೇಗಾರಿಕೆಗೆ ನೇರವಾಗಿ ಬಲಿಪಶುಗಳಾಗುವವರು ದಲಿತರು. ಭಾರತದ ದಲಿತ ಮಹಿಳೆಯರಿಗೆ ಅವರ ಜಾತಿಯ ಜೊತೆಗೆ ಹಿಂಸೆ ಸದಾ ತಳುಕು ಹಾಕಿಕೊಂಡಿರುತ್ತದೆ. ಇಂತಹ ಜಾತಿ-ಹಿಂಸೆಯ ವಿಷವರ್ತುಲದಲ್ಲಿ ದಲಿತ ಮಹಿಳೆಯ ಪ್ರತಿರೋಧವು ಇನ್ನಷ್ಟು ಹಿಂಸೆಯನ್ನು, ದೌರ್ಜನ್ಯವನ್ನು ಉತ್ಪಾದಿಸುತ್ತದೆ. ಉದಾಹರಣೆಗೆ 2014ರಲ್ಲಿ ಉತ್ತರ ಪ್ರದೇಶದ ಬುಡಾನ್ ಜಿಲ್ಲೆಯ ಕತ್ರ ಗ್ರಾಮದ ಇಬ್ಬರು ದಲಿತ ಯುವತಿಯರು ತಮ್ಮ ದುಡಿಮೆಯ ವೇತನದಲ್ಲಿ 3ರೂ.ಗಳ ಹೆಚ್ಚಳ ಕೇಳಿದ್ದಕ್ಕೆ ಮೇಲ್ಜಾತಿಗಳ ದುಷ್ಟರು ಅವರಿಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆ ಮಾಡಿದರು. ಇಲ್ಲಿ ಹಿಂಸೆ ಮತ್ತು ಕೊಲೆಯ ಮೂಲಕ ದಲಿತರನ್ನು ಸದಾ ಭಯದಲ್ಲಿರಿಸುವುದರ ಜೊತೆಗೆ ಬ್ರಾಹ್ಮಣ್ಯ-ಫ್ಯೂಡಲಿಸಂನ್ನು ಮತ್ತಷ್ಟು ಗಟ್ಟಿಗೊಳಿಸಲು ಸಹ ಬಳಸಿಕೊಳ್ಳಲಾಗುತ್ತದೆ. 2016ರಲ್ಲಿ ಹರ್ಯಾಣದಲ್ಲಿ ಬಲಿಷ್ಠ ಜಾಟ್ ಜಾತಿಯವರು ಮೀಸಲಾತಿಗಾಗಿ ಬೀದಿ ಹೋರಾಟ ನಡೆಸುತ್ತಿದ್ದರು. ಈ ಹೋರಾಟದ ಮಧ್ಯೆ 9 ದಲಿತ ಮಹಿಳೆಯರನ್ನು ಅವರ ಮನೆಯಿಂದ ಅಪಹರಿಸಿಕೊಂಡು ಅತ್ಯಾಚಾರ ನಡೆಸಿದರು. 2018ರ ಹೈದರಾಬಾದ್‌ನ ಅಪರಾಧ ಬ್ಯೂರೋ ಮಾಹಿತಿಯ ಅನುಸಾರ ಕಳೆದ ಮೂರು ವರ್ಷಗಳಲ್ಲಿ ಮೇಲ್ಜಾತಿಯ ಗಂಡಸರು 37 ಆದಿವಾಸಿ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಇಲ್ಲಿನ ಜಾತಿ-ವರ್ಗ ಸಂಘರ್ಷದಲ್ಲಿ ಅತ್ಯಾಚಾರವು ಒಂದು ಹತಾರವಾಗಿ ಬಳಕೆಯಾಗುತ್ತದೆ. ದಲಿತ ಮಹಿಳೆ ಇದರ ಬಲಿಪಶು. ಸಮಾಜ ವಿಜ್ಞಾನಿ ಸಂಜಯ್ ಅವರು ‘‘ತಳ ಸಮುದಾಯದ ಮಹಿಳೆಯರ ಮೇಲೆ ಲೈಂಗಿಕ ಹಿಂಸೆ ನಡೆಸುವುದರ ಮೂಲಕ ಮೇಲ್ಜಾತಿಯವರು ಕೆಳಜಾತಿಯ ಪುರುಷರಿಗೆ ನಿಮಗೆ ನಿಮ್ಮ ಮಹಿಳೆಯರನ್ನು ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಎಚ್ಚರಿಕೆ ಮತ್ತು ಭೀತಿಯನ್ನು ರವಾನಿಸುತ್ತಾರೆ’’ ಎಂದು ಹೇಳುತ್ತಾರೆ.

ಇಂತಹ ವಿಷಮ ಜಾತಿ ವ್ಯವಸ್ಥೆಯಲ್ಲಿ ದಲಿತ ಮಹಿಳೆಯು ಇತರ ಜಾತಿಯ ಮಹಿಳೆಗಿಂತ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಆರ್ಥಿಕವಾಗಿ ಹೆಚ್ಚು vulnerable ಆಗಿರುತ್ತಾಳೆ. ಆಕೆಯ ದೌರ್ಬಲ್ಯ, ಅಸಹಾಯಕತೆಯನ್ನು ಬಳಸಿಕೊಳ್ಳುವ ಈ ಮೇಲ್ಜಾತಿಗಳು ಹಿಂಸೆಯ ಮೂಲಕ ಅವರ ಆಸ್ತಿತ್ವವನ್ನೇ ಅಂಚಿಗೆ ತಳ್ಳುತ್ತಾರೆ.

ಉಪ ಸಂಹಾರ

ಅರ್ವೆಲ್ ಒಂದು ಕಡೆ ‘‘ಸಾರ್ವತ್ರಿಕ ವಂಚನೆಯು ಸಕ್ರಿಯವಾಗಿರುವ ಸಂದರ್ಭದಲ್ಲಿ ಸತ್ಯವನ್ನು ಹೇಳುವುದು ಒಂದು ಕ್ರಾಂತಿಕಾರಿ ನಡೆ ಎನಿಸಿಕೊಳ್ಳುತ್ತದೆ’’ ಎಂದು ಹೇಳುತ್ತಾನೆ. ಇದು ಸರ್ವಕಾಲಕ್ಕೂ ದಿಟವಾದ ಮಾತು. ಇಂದು ಭಾರತದಲ್ಲಿ ನಿರ್ದಿಷ್ಟ ಬಗೆಯ ನಿರಂಕುಶ ಆಡಳಿತ ಜಾರಿಯಲ್ಲಿದ್ದು, ಸುಳ್ಳುಗಳು ವಿಜೃಂಭಿಸುತ್ತಿರುವ ಕಾಲದಲ್ಲಿ ಸತ್ಯವನ್ನು ನುಡಿಯುವುದು ಕ್ರಾಂತಿಯೇ ಸೈ. ಸರ್ವಾಧಿಕಾರವು ಅಧಿಕಾರಕ್ಕೆ ಬರುವಾಗ ಅದು ಜನರ ಅರಿವಿಗೆ, ಗ್ರಹಿಕೆಗೆ ಬಂದಿರುವುದಿಲ್ಲ. ಹೀಗಾಗಿ ಪ್ರಜೆಗಳು ಪ್ರಭುತ್ವದ ಈ ಫ್ಯಾಶಿಸಂಗೆ ಬೌದ್ಧ್ದಿಕವಾಗಿ ಮತ್ತು ಪ್ರಾಯೋಗಿಕವಾಗಿ ಯಾವುದೇ ಪೂರ್ವ ತಯಾರಿ ಮಾಡಿಕೊಂಡಿರುವುದಿಲ್ಲ. ಮುಖ್ಯವಾಗಿ ಭಾರತದಲ್ಲಿ ಬಹುಸಂಖ್ಯಾತರ ಸಂಪೂರ್ಣ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂದ ನಿರಂಕುಶ ಪ್ರಭುತ್ವವು ತನ್ನ ಕೇಡಿತನವನ್ನು, ಅಧಿಕಾರದ ಮದವನ್ನು ಪ್ರದರ್ಶಿಸುತ್ತಿರುವಾಗಲೂ ಸಹ ಜನತೆಗೆ ಅದು ಅಸಹನೀಯ ಅನಿಸುವುದಿಲ್ಲ. ಕೆಲವರಿಗೆ ಈ ಫ್ಯಾಶಿಸಂನ ಅಪಾಯದ ಅರಿವಾಗಿ ಅದರ ಕುರಿತು ತಮ್ಮ ಚಿಂತನೆಗಳ ಮೂಲಕ ಜನತೆಯೊಂದಿಗೆ ಹಂಚಿಕೊಳ್ಳಲು ಬಯಸಿದರೂ ಸಹ ‘ಆರ್ಗ್ಯಾನಿಕ್ ಬೌದ್ಧಿಕತೆ’ಯ ಕೊರತೆಯಿಂದಾಗಿ ವಿಶ್ವಾಸಾರ್ಹತೆ ಗಳಿಸುತ್ತಿಲ್ಲ. ಚಾರಿತ್ರಿಕ-ರಾಜಕೀಯ ಅಂಶಗಳನ್ನು ವೈಚಾರಿಕವಾಗಿ, ಮಾನವೀಯವಾಗಿ ಬೆಸೆಯುವ ಹೊಸ ಒಳನೋಟಗಳ ಅವಶ್ಯಕತೆ ಇರುವ ಇಂದಿನ ಬಿಕ್ಕಟ್ಟಿನ ದಿನಗಳಲ್ಲಿ ಜ್ಞಾನದ ಗ್ರಹಿಕೆ, ಪ್ರಜ್ಞೆ ಮತ್ತು ಸಂವೇದನೆಯು ಮನುಷ್ಯನ ಅನುಭವದ ಮೂಸೆಯಲ್ಲಿ ರೂಪುಗೊಳ್ಳುವ ಪ್ರಕ್ರಿಯೆ ಕುರಿತು ನಮಗೆಲ್ಲ ಅವಜ್ಞೆಯಿದೆ. ಅಧಿಕಾರ-ಜ್ಞಾನದ ತರ್ಕದಲ್ಲಿ ಪ್ರಜ್ಞಾಪೂರ್ವಕವಾಗಿ ಸುಳ್ಳು, ವಂಚನೆಗಳ ಮೂಲಕ ಕಬ್ಜಾ ಮಾಡಿಕೊಂಡ ಅಧಿಕಾರವನ್ನು ಗಟ್ಟಿಗೊಳಿಸಿ ಕೊಳ್ಳಲು ಸಮಾಜದಲ್ಲಿ ಮತ್ತಷ್ಟು ಕ್ರೌರ್ಯ, ಹಿಂಸೆಯನ್ನು ಹುಟ್ಟು ಹಾಕಲಾಗುತ್ತದೆ. ಇದನ್ನು ತಡೆಗಟ್ಟುವುದಿರಲಿ ಜನತೆಗೆ ವಿವರಿಸುವುದೂ ಸಹ ಕ್ಲಿಷ್ಟಕರವಾಗಿಸಿಕೊಂಡಿದ್ದೇವೆ.

ಇಲ್ಲಿ ನ್ಯಾಯಾಂಗವು ದಲಿತ ಮಹಿಳೆಯರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಸೋತಿದೆ. ಪ್ರಭುತ್ವದ ಸರ್ವಾಧಿಕಾರ ಮತ್ತು ದಮನಕಾರಿ ಪೊಲೀಸ್ ವ್ಯವಸ್ಥೆ ಮತ್ತು ಬ್ರಾಹ್ಮಣ್ಯ-ಫ್ಯೂಡಲಿಸಂ ಸಮಾಜದ ನಡುವಿನ ಪರಸ್ಪರ ಹೊಂದಾಣಿಕೆಯ ಅಡಿಯಲ್ಲಿ ನಡೆಯುವ ಈ ಲೈಂಗಿಕ ಹಿಂಸೆಗಳಿಂದ ದಲಿತ ಮಹಿಳೆಗೆ ವಿಮೋಚನೆ ಯಾವಾಗ ಎನ್ನುವ ಪ್ರಶ್ನೆಗೆ ಪ್ರಗತಿಪರ ಸಂಘಟನೆಗಳು ಉತ್ತರಿಸಬೇಕು. ಸಾಮಾಜಿಕ ಹೋರಾಟಗಳ ಮೇಲೆ ಮಹತ್ತರವಾದ ಜವಾಬ್ದಾರಿ ಇದೆ. ಬೀದಿ ಹೋರಾಟಗಳ ಜೊತೆ ಜೊತೆಗೆ ಸಾಂವಿಧಾನಿಕ ಸಂಸ್ಥೆಗಳಿಗೆ ಮರಳಿ ಘನತೆ, ಸ್ವಾಯತ್ತತೆ ಮತ್ತು ಸ್ವಾತಂತ್ರ್ಯ ಗಳಿಸಿಕೊಡುವುದರ ಕುರಿತು ರಚನಾತ್ಮಕವಾದ ಕಾರ್ಯಯೋಜನೆಗಳ ಅಗತ್ಯವಿದೆ.

Writer - ಬಿ. ಶ್ರೀಪಾದ ಭಟ್

contributor

Editor - ಬಿ. ಶ್ರೀಪಾದ ಭಟ್

contributor

Similar News